ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದರೂ, ಕೊರೋನಾ ಸೋಂಕಿನ ಗುಣಲಕ್ಷಣಗಳನ್ನು ಹೊಂದಿರದೇ, ಸೌಮ್ಯ ಲಕ್ಷಣ ಹೊಂದಿರುವವರು ಹೋಂ ಐಸೋಲೇಷನ್ ಮೂಲಕ ಚಿಕಿತ್ಸೆ ಪಡೆಯಬಹುದು. ವೈದ್ಯರನ್ನು, ಆರೋಗ್ಯ ಸಿಬ್ಬಂದಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚಿಕಿತ್ಸೆ ಪಡೆಯುವುದಕ್ಕೆ ರಾಜ್ಯ ಆರೋಗ್ಯ ಇಲಾಖೆ ಶರತ್ತುಬದ್ಧ ಅವಕಾಶವನ್ನು ಕಲ್ಪಿಸಿದೆ.
ರಾಜ್ಯದ ಆಸ್ಪತ್ರೆಗಳು ಕೊರೋನಾ ಸೋಂಕಿತ ರೋಗಿಗಳಿಂದ ತುಂಬಿ ಹೋಗಿದ್ದು, ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಕೊರತೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಇರದೇ ಇರುವ ಸೋಂಕಿತರಿಗೆ ಹೋಂ ಐಸೋಲೇಷನ್ ಪ್ರಕ್ರಿಯೆಗೆ ಒಳಗಾಗುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಗಂಭೀರ ಸಮಸ್ಯೆಗಳಿಲ್ಲದ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗುವುದರಿಂದ ತೀರಾ ಅನಿವಾರ್ಯ ಎಂಬ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಎದುರಾಗುವಂತಾಗಿದೆ. ಜೊತೆಗೆ ಚಿಕಿತ್ಸೆ ದೊರಕದೆ ಸಾವನ್ನಪ್ಪುವ ಸಂದರ್ಭಗಳೂ ಸೃಷ್ಟಿಯಾಗುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಪ್ರಕಟಿಸಿರುವುದಾಗಿ ಇಲಾಖೆ ತಿಳಿಸಿದೆ.
38 ಡಿಗ್ರಿ ಸೆ. ಗಿಂತ ಕಡಿಮೆ ಉಷ್ಣತೆಯ ಜ್ವರ, ಆಕ್ಸಿಜನ್ ಮಟ್ಟ 95 ಗಿಂತ ಹೆಚ್ಚಿದ್ದವರಿಗೆ ಹೋಂ ಐಸೋಲೇಷನ್ಗೆ ಅವಕಾಶ ಸಿಗಲಿದೆ. ಮನೆಯಲ್ಲಿ ಪ್ರತ್ಯೇಕವಾಗಿರಲು ವ್ಯವಸ್ಥೆ, ಪ್ರತ್ಯೇಕ ಕೊಠಡಿ, ಈ ಸಂದರ್ಭದಲ್ಲಿ ರೋಗಿಯ ಮೇಲೆ ನಿಗಾ ವಹಿಸಲು ಒಬ್ಬ ವ್ಯಕ್ತಿ, ಆಸ್ಪತ್ರೆಯ ಜೊತೆಗೆ ನಿರಂತರ ಸಂಪರ್ಕ ಹೊಂದಲು ಸಾಧ್ಯವಾದವರು ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
60 ವರ್ಷ ಮೇಲ್ಪಟ್ಟವರು, ಹೈಪರ್ ಟೆನ್ಷನ್, ಮುಧುಮೇಹ, ಹೃದ್ರೋಗ, ಶ್ವಾಸಕೋಶ, ಕಿಡ್ನಿ, ಲಿವರ್ ಸಮಸ್ಯೆ ಇರುವವರು ವೈದ್ಯರ ಸಲಹೆಯನ್ನು ಪಡೆದು ಹೋಂ ಐಸೋಲೇಷನ್ ಪ್ರಕ್ರಿಯೆಗೆ ಒಳಪಡಬಹುದಾಗಿದೆ. ವೈದ್ಯರ ಅನುಮತಿಯ ಮೇರೆಗೆ ಬಾಣಂತಿಯರು ಹೋಂ ಐಸೋಲೇಷನ್ ಪ್ರಕ್ರಿಯೆಗೆ ಒಳಪಡಬಹುದಾಗಿದೆ ಎಂದು ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ಪ್ರಕಟಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.