ಮಂಗಳೂರು : ತುಳು ಸಿನಿಮಾಲೋಕಕ್ಕೆ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾದ ಪ್ರವೇಶವಾಗಲು ದಿನಗಣನೆ ಆರಂಭವಾಗಿದೆ. ೨೦೧೪ರಲ್ಲಿ ಬಿಡುಗಡೆಯಾಗಿ, ಈಗಲೂ ಪ್ರದರ್ಶನ ಕಾಣುತ್ತಿರುವ ಚಾಲಿಪೋಲಿಲು ಸಿನಿಮಾದ ಬಳಿಕ ಭಾರೀ ನಿರೀಕ್ಷೆ ಮೂಡಿಸಿರುವ ಬೊಳ್ಳಿ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಂಡಿಕೋರಿ ಸಿನಿಮಾ ಸೆಪ್ಟಂಬರ್ನಲ್ಲಿ ಕರಾವಳಿ ಜಿಲ್ಲೆಯಾದ್ಯಂತ ಎಲ್ಲಾ ಟಾಕೀಸ್ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಇದರ ಹಾಡಿನ ಸಿಡಿ ಬಿಡುಗಡೆ ಕಾರ್ಯಕ್ರಮವು ಆಗೋಸ್ಟ್. ೨೦ರಂದು ಮಂಗಳೂರಿನ ಓಶಿಯನ್ ಪರ್ಲ್ನಲ್ಲಿ ಜರಗಲಿದೆ.
ಬೊಳ್ಳಿ ಮೂವೀಸ್ ಲಾಂಛನದಡಿಯಲ್ಲಿ ಶರ್ಮಿಳಾ ಡಿ. ಕಾಪಿಕಾಡ್ ಮತ್ತು ಸಚಿನ್ ಎ.ಎಸ್.ಉಪ್ಪಿನಂಗಡಿ ಅವರು ನಿರ್ಮಿಸಿರುವ ಚಂಡಿಕೋರಿ ಸಿನಿಮಾವು ಒಂದು ಭಿನ್ನ ಕಥೆ, ಉತ್ತಮ ಸಂದೇಶ ಮತ್ತು ಮೌಲ್ಯಗಳನ್ನು ಹೊತ್ತು ಬರಲಿದೆ. ಪ್ರಥಮ ಬಾರಿಗೆ ದೇವದಾಸ್ ಕಾಪಿಕಾಡ್ ನಿರ್ದೇಶನದ ಜತೆಗೆ ಸಿನಿಮಾಕ್ಕೆ ಸಂಗೀತವನ್ನು ಸಂಯೋಜಿಸಿದ್ದಾರೆ. ಕದ್ರಿ ಮಣಿಕಾಂತ್ ಹಿನ್ನೆಲೆ ಸಂಗೀತದಲ್ಲಿ ಸಹಕರಿಸಿದ್ದಾರೆ. ಸಿನಿಮಾದಲ್ಲಿ ನವಿರಾದ ಪ್ರೇಮ ಕಥೆ, ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹಾಸ್ಯವೂ ಇರಲಿದೆ. ಸುಮಾರು ೨ ತಾಸು ೨೦ ನಿಮಿಷಗಳ ಈ ಸಿನಿಮಾವು ಪ್ರೇಕ್ಷಕರು ತಲೆದೂಗುವಷ್ಟು ಮನೋರಂಜನೆಯೊಂದಿಗೆ ತುಳುವಿನ ಮತ್ತೊಂದು ಸೂಪರ್ ಹಿಟ್ ಮತ್ತು ಶ್ರೇಷ್ಠ ಸಿನಿಮಾದ ಸಾಲಿಗೆ ಸೇರಲಿದೆ.
ಮಂಗಳೂರು ಸುತ್ತಮುತ್ತ ೩೧ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಿರುವ ಚಂಡಿಕೋರಿಯಲ್ಲಿ ೪ ಉತ್ತಮ ಹಾಡುಗಳಿವೆ. ಅತ್ಯಂತ ವಿಶೇಷವೆಂದರೆ ಈ ಸಿನಿಮಾದಲ್ಲಿ ತಂದೆ – ಮಗ ಹಾಡಿದ್ದಾರೆ. ಅಂದರೆ, ಸಿನಿಮಾದ ನಾಯಕನೂ ಆಗಿರುವ ಅರ್ಜುನ್ ಕಾಪಿಕಾಡ್ ಮತ್ತು ದೇವದಾಸ್ ಕಾಪಿಕಾಡ್ ಅವರು ಹಾಡಿರುವ ಹಾಡುಗಳಿವೆ. ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿರುವ ಈ ಸಿನಿಮಾದಲ್ಲಿ ಅವರೂ ಒಂದು ಹಾಡು ಹಾಡಿದ್ದಾರೆ.ಮತ್ತೊಂದು ಹಾಡನ್ನು ಮಧುಬಾಲಕೃಷ್ಣನ್ ಮತ್ತು ಅಪೂರ್ವ ಶ್ರೀಧರ್ ಹಾಡಿದ್ದಾರೆ.
ಅರ್ಜುನ್ ಕಾಪಿಕಾಡ್ ಚಿತ್ರದ ನಾಯಕರಾಗಿದ್ದು, ಕರಿಷ್ಮಾ ಅಮೀನ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸತೀಶ್ ಬಂದಲೆ ಮುಂತಾದ ತುಳು ರಂಗಭೂಮಿ ಮತ್ತು ಸಿನಿಮಾ ರಂಗದ ಪ್ರಮುಖ ಕಲಾವಿದರು ನಟಿಸಿರುವುದು ಒಂದು ಪ್ಲಸ್ ಪಾಯಿಂಟ್.
ಕಣ್ಣಿಗೆ ಕಾಣುವ ದೇವರೆಂದರೆ ಹೆತ್ತವರು. ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂಬ ಸಂದೇಶ ಹೊಂದಿರುವ ಚಂಡಿಕೋರಿಯಲ್ಲಿ ತಾಳ್ಮೆಯ ಮಹತ್ವವನ್ನೂ ತಿಳಿಸಲಾಗಿದೆ. ಉತ್ತಮ ಸಂದೇಶ ಮತ್ತು ಯಥೇಚ್ಛ ಮನೋರಂಜನೆ ನೀಡುವಲ್ಲಿ ಎತ್ತಿದ ಕೈಯಾಗಿರುವ ದೇವದಾಸ್ ಕಾಪಿಕಾಡ್ ಅವರ ತಂಡದಿಂದ ಸಿದ್ಧವಾಗಿರುವ ಚಂಡಿಕೋರಿ ಕೂಡ ಚಿತ್ರಪ್ರೇಮಿಗಳ ಮನ ಗೆದ್ದು ಯಶಸ್ಸು ಸಾಧಿಸುವ ನಿರೀಕ್ಷೆ ಇದೆ. ಈ ಸಿನಿಮಾ ಬಿಡುಗಡೆಗಾಗಿ ಚಿತ್ರಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದು, ಬಿಡುಗಡೆ ದಿನ ನಿಗದಿಯಾಗಿರುವುದು ಅವರಿಗೆ ಖುಷಿ ತರಲಿದೆ.
ತಾರಾಗಣದಲ್ಲಿ ಗೋಪಿನಾಥ ಭಟ್, ಚೇತನ್ ರೈ ಮಾಣಿ, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಉಮೇಶ್ ಮಿಜಾರ್, ಪಾಂಡುರಂಗ, ರಿಚರ್ಡ್ ಪಿಂಟೋ, ರಾಘವೇಂದ್ರ ಕಾರಂತ, ಮಾಸ್ಟರ್ ಕೃತಿನ್, ಶರ್ಮಿಳಾ ಕಾಪಿಕಾಡ್, ಮನೀಷಾ, ಸರೋಜಿನಿ ಶೆಟ್ಟಿ, ಸುಜಾತ ಶಕ್ತಿನಗರ, ಸುಮಿತ್ರಾ ರೈ, ಲಾವಣ್ಯ ಬಂಗೇರ ನರೇಶ್ ಸಸಿಹಿತ್ಲು, ಶಶಿಧರ ಬೆಳ್ಳಾಯರು, ಸುನೀಲ್ ಕೃಷ್ಣಾಪುರ ಮೊದಲಾದವರಿದ್ದಾರೆ. ಛಾಯಾಗ್ರಹಣ ಪಿ.ಎಲ್.ರವಿ, ಸಂಕಲನ: ಸುಜೀತ್ ನಾಯಕ್. ನೃತ್ಯ:ಅಕುಲ್, ಸಾಹಸ:ಮಾಸ್ಮಾಧ. ನಿರ್ಮಾಣ ನಿರ್ವಹಣೆ: ರಾಜೇಶ್ ಕುಡ್ಲ, ಹಿನ್ನಲೆ ಸಂಗೀತ ಕದ್ರಿ ಮಣಿಕಾಂತ್. ಕಥೆ, ಚಿತ್ರಕಥೆ: ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ದೇವದಾಸ್ ಕಾಪಿಕಾಡ್, ನಿರ್ಮಾಪಕರು ಶರ್ಮಿಳಾ ಡಿ. ಕಾಪಿಕಾಡ್ ಮತ್ತು ಸಚಿನ್ ಎ.ಎಸ್.ಉಪ್ಪಿನಂಗಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.