“ಇಸ್ರೋ ಬೇಹುಗಾರಿಕಾ ಪ್ರಕರಣದ ಆರೋಪಿಗಳಾದ ಮರಿಯುಮ್ ರಶೀದಾ, ಫವಿಜಿಯ ಹಾಸನ್, ಡಿ.ಚಂದ್ರಶೇಖರ್, ಡಿ.ಸಸಿಕುಮಾರ್, ಎಸ್. ನಂಬಿ ನಾರಾಯಣನ್ ಮತ್ತು ಎಸ್.ಕೆ. ಶರ್ಮಾ ಅವರು ಗುಂಪಾಗಿ ಕೆಲಸ ಮಾಡಿ ರಾಕೆಟ್ ತಯಾರಿಕೆಯ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ವರ್ಗಾಯಿಸಿದರು. 1994 ಜನವರಿ 24 ರಂದು ಹೋಟೆಲ್ ಮದ್ರಾಸ್ ಇಂಟರ್ನ್ಯಾಷನಲ್ ನಲ್ಲಿ ಭೇಟಿಯಾದ ಗ್ಯಾಂಗ್ ನ ನಾಯಕ ರಾಮನ್ ಶ್ರೀವಾಸ್ತವ ಮತ್ತು ಶ್ರೀಲಂಕಾದ ಮಹಿಳೆ ಜುಹೈರಾ ಅವರೊಂದಿಗೆ ಒಪ್ಪಂದ ಮಾಡಿಕೊಂಡರು. ಮರಿಯುಮ್ ಮತ್ತು ಫವಿಜಿಯ ಗೆ ಮಾಲ್ಡೀವಿಯನ್ ಬ್ಯಾಂಕರ್ ಒಬ್ಬರು ಹಣ ನೀಡಿದ್ದರು. 24 ಸೆಪ್ಟೆಂಬರ್ 1994 ರಂದು ತಿರುವನಂತಪುರದ ಹೋಟೆಲ್ ಲೂಸಿಯಾದಲ್ಲಿ ಹಣ ಬದಲಾಯಿತು. ನಂಬಿ ನಾರಾಯಣ್ ಅವರ ಪುತ್ರ ಶಂಕರ ಕುಮಾರ್ ಹಣವನ್ನು ಸ್ವೀಕರಿಸಿ ತಮ್ಮ ಮನೆಯಲ್ಲೇ ಶಶಿಕುಮಾರ್ ಅವರಿಗೆ ಹಸ್ತಾಂತರಿಸಿದರು. ಈ ಹಣವನ್ನು ಶ್ರೀವಾಸ್ತವ ಬುಲೆಟ್ ಪ್ರೂಫ್ ವಸ್ತುಗಳನ್ನು ತಯಾರಿಸುವ ಕಂಪೆನಿಯ ಮೂಲಕ ಹಸ್ತಾಂತರಿಸುವ ಉದ್ದೇಶವಿತ್ತು. ಕೊಚ್ಚಿನ್ ಮೂಲದ ಕೈಗಾರಿಕೋದ್ಯಮಿ ಥಾಮಸ್ ಕೂರಿಸಿಂಗಲ್ ಅವರು ಈ ಕಾರ್ಯಾಚರಣೆಗಳಿಗೆ ಹಣವನ್ನು ಒದಗಿಸುತ್ತಿದ್ದರು. ರಷ್ಯಾದ ಬಾಹ್ಯಾಕಾಶ ಸಂಸ್ಥೆ ಗ್ಲವ್ಸ್ಕೋಸ್ಮೋಸ್ ನ ಅಧಿಕಾರಿ ಅಲೆಕ್ಸ್ ವಾಸಿಂ ತಂತ್ರಜ್ಞಾನದ ವರ್ಗಾವಣೆಯಲ್ಲಿ ಭಾಗಿಯಾಗಿದ್ದರು. ರಷ್ಯಾದ ವಿಜ್ಞಾನಿಗಳ ಸಹಾಯದಿಂದ ಉತ್ತರ ಕೊರಿಯಾದಲ್ಲಿ ವೈಕಿಂಗ್ ಎಂಜಿನ್ ಉತ್ಪಾದಿಸುವುದು ಯೋಜನೆಯ ಭಾಗವಾಗಿತ್ತು ಮತ್ತು ಉತ್ಪಾದಿಸಿದ ರಾಕೆಟ್ ಅನ್ನು ಪಾಕಿಸ್ತಾನಕ್ಕೆ ಕೊಂಡೊಯ್ಯುವುದು ಯೋಜನೆಯಾಗಿದ್ದು ಬ್ರೆಜಿಲ್ ಮತ್ತು ಇಂಡೋನೇಷ್ಯಾ ಕೂಡ ಈ ಒಪ್ಪಂದದಲ್ಲಿ ಭಾಗಿಯಾಗಿದ್ದವು – ಈ ರೀತಿಯ ಚಾರ್ಜ್ ಶೀಟ್ ಅನ್ನು ಅಧಿಕಾರಿಯು ನನ್ನ ಮುಂದೆ ಓದಿದಾಗ ನನಗೆ ನಗಬೇಕೋ ಅಳಬೇಕೊ ತಿಳಿಯದಾಗಿತ್ತು… ‘ʼ ಇದು ಯಾವುದೋ ಸಿನೆಮಾದ ಡೈಲಾಗ್ ಎಂದು ಭಾವಿಸಿದ್ದಲ್ಲಿ ಖಂಡಿತಾ ನೀವು ತಪ್ಪು ಮಾಡುತ್ತಿದ್ದೀರಿ. ಈ ಮಾತುಗಳನ್ನು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಸ್ವತಃ ನಂಬಿ ನಾರಾಯಣ್ ಅವರು ವಿಷಾದದಿಂದ ಹೇಳಿದ್ದರು.
ವಿಕ್ರಂ ಸಾರಾಭಾಯ್, ಸತೀಶ್ ಧವನ್, ಯು.ಆರ್ ರಾವ್ ಅವರಂಥ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲಬಹುದಾದಂತ ವಿಜ್ಞಾನಿಯಾದ ನಂಬಿ ನಾರಾಯಣ್ ಅವರ ದೇಶಪ್ರೇಮ ಮತ್ತು ಪ್ರತಿಭೆಗೆ ನಮ್ಮನ್ನಾಳುವವರು ಅತ್ಯಂತ ದುಬಾಯಾರಿ ಉಡುಗೊರೆಯನ್ನೇ ನೀಡಿದ್ದರು . ಇಂತಹ ಪ್ರತಿಭಾನ್ವಿತ ವಿಜ್ಞಾನಿಗೆ ನಮ್ಮ ದೇಶದ ರಾಜಕಾರಣಿಗಳು, ಪೊಲೀಸ್ ಮತ್ತು ಪ್ರೆಸ್ಟಿಟ್ಯೂಟ್ ಎಂದು ಕರೆಯಬಹುದಾದ ಮಾಧ್ಯಮಗಳು ಸೇರಿ ಅವಮಾನದ ಸುರಿಮಳೆಗೈದದ್ದೂ ಅಲ್ಲದೆ ದೇಶದ್ರೋಹಿ ಎಂಬ ಪಟ್ಟವನ್ನೂ ಕಟ್ಟಿದ್ದರು. ಪ್ರಯೋಗಾಲಯದಲ್ಲಿ ಕಳೆಯಬೇಕಾದ ಶ್ರೇಷ್ಠವಾದ ಜೀವನವನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದು ನಮ್ಮ ದೇಶದ ವ್ಯವಸ್ಥೆ ಮತ್ತು ದುರವಸ್ಥೆ.
ಮಂಗಳ ಗ್ರಹಕ್ಕೆ ನೆಗೆದ ರಾಕೆಟ್ ನ ತಂತ್ರಜ್ಞಾನವು ಸಂಪೂರ್ಣವಾಗಿ ಸ್ವದೇಶಿಯಾಗಿತ್ತು. ಈ ಸ್ವದೇಶೀ ತಂತ್ರಜ್ಞಾನದ ಭಾಗವಾದ ಕ್ರಯೋಜಿನ್ ತಂತ್ರಜ್ಜಾನವನ್ನು ಅಭಿವೃದ್ಧಿ ಪಡಿಸುವಲ್ಲಿ ನಂಬಿ ನಾರಾಯಣನ್ ಅವರ ಸುದೀರ್ಘ ಪರಿಶ್ರಮ ಮತ್ತು ಕಠೋರ ತಪಸ್ಸು ಇತ್ತು. ರಾಕೆಟ್ಗಳಲ್ಲಿ ದ್ರವ ಇಂಧನ ಮತ್ತು ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಳವಡಿಸುವುದರ ಲಾಭವನ್ನು ಇವರು 70 ರ ದಶಕದಲ್ಲೇ ಅರಿತಿದ್ದರು. ರಾಕೆಟ್ GSLV 13 ವರ್ಷಗಳ ಹಿಂದೆಯೇ ನಭಕ್ಕೆ ಜಿಗಿದು ದಾಖಲೆ ಬರೆಯಬೇಕಾಗಿತ್ತು. ಈ ಕ್ರಜೋಜನಿಕ್ ಎಂಬ ತಂತ್ರಜ್ಞಾನವು ಬಹಳ ಸಂಕೀರ್ಣ ತಂತ್ರಜ್ಞಾನವಾಗಿತ್ತು. ಭಾರತವು ಈ ತಂತ್ರಜ್ಞಾವನನ್ನು ಕೊಳ್ಳುವುದಕ್ಕೆ ರಷ್ಯಾದೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ಈ ತಂತ್ರಜ್ಞಾನವು ಭಾರತಕ್ಕೆ ದಕ್ಕದಂತೆ ಮಾಡಲು ಅಮೇರಿಕ ರಷ್ಯಾದ ಮೇಲೆ ವಿಪರೀತ ಒತ್ತಡವನ್ನು ಹೇರಿತ್ತು. ಆದರೆ ಅದಕ್ಕಾಗಿ ಕೊರಗುತ್ತಾ ಕೂರದ ನಂಬಿ ನಾರಾಯಣ್ ಅವರು ಕಡಿಮೆ ವೆಚ್ಚದಲ್ಲಿ ಕ್ರಯೋಜನಿಕ್ ತಂತ್ರಜ್ಞಾನವನ್ನು ಭಾರತದಲ್ಲಿ ತಯಾರಿಸಲು ಹೊರಟರು. ಇಸ್ರೋದ ಈ ಪ್ರಯತ್ನ ಫಲಿಸಬಾರದೆಂದು ನಂಬಿ ನಾರಾಯಣ್ ಅವರನ್ನು ಇಸ್ರೋದಿಂದ ಹೊರ ಹಾಕಲು ಮತ್ತು ಅವರ ವೃತ್ತಿ ಜೀವನವನ್ನೇ ಕೊನೆಗೊಳಿಸಲು ಹೂಡಿದ ತಂತ್ರವೇ, ನಂಬಿ ನಾರಾಯಣ್ ಮತ್ತು ಅವರ ಸಹಚರರಾದ ಸಸಿಕುಮಾರ್ ರ ಮೇಲೆ ಹೂಡಿದ ಗೂಢಚಾರಿಕೆಯ ಆರೋಪ. ಯಾಕೆಂದರೆ ಇಸ್ರೋ ದಲ್ಲಿ ತಂತ್ರಜ್ಜಾನ ರೂಪಿಸಲು ಹೊರಟ ವಿಜ್ಞಾನಿಗಳ ಹಿಂದೆ ನಿಗೂಢ ಘಟನೆಗಳು ನಡೆಯುವುದು ಸಾಮಾನ್ಯವಾಗಿದ್ದ ಕಾಲವದು. ಇವರ ಮೇಲೆ ಆರೋಪ ಬರುವ ಕೆಲವೇ ಸಮಯ ಮೊದಲು ಅಣು ಬಾಂಬ್ ತಂತ್ರಜ್ಞಾನ ರೂಪಿಸಿದ ಇಬ್ಬರು ಇಸ್ರೋ ವಿಜ್ಞಾನಿಗಳು ನಿಗೂಢವಾಗಿ ಸಾವನ್ನಪ್ಪಿದ್ದರು.
ಇನ್ನೇನು ಸ್ವದೇಶೀ ನಿರ್ಮಿತ ಕ್ರೆಯೋಜನ್ ಇಂಜಿನ್ ನಿರ್ಮಾಣವಾಯಿತು ಎನ್ನುವಷ್ಟರಲ್ಲಿ 1994 ರಲ್ಲಿ ಈ ತಂತ್ರಜ್ಞಾನ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದ 52 ವರ್ಷದ ಹಿರಿಯ ವಿಜ್ಞಾನಿ ನಂಬಿ ನಾರಾಯಣ್ ಆ ತಂತ್ರಜ್ಞಾನವನ್ನು ಶತ್ರುಗಳಿಗೆ ಮಾರಾಟ ಮಾಡುವ ಷಡ್ಯಂತ್ರ ರೂಪಿಸಿದ್ದಾರೆ ಎಂಬ ಬಲವಾದ ಆರೋಪ ಕೇಳಿ ಬಂತು. ಕೇರಳದ ಪೊಲೀಸರು ನಂಬಿ ನಾರಾಯಣ್ ಮತ್ತು ವಿಜ್ಞಾನಿ ಸಸಿ ಕುಮಾರ್ ಅವರನ್ನು ಮತ್ತು ಇನ್ನಿಬ್ಬರು ಸಿಬ್ಬಂದಿಗಳನ್ನು ಜೈಲಿಗೆ ತಳ್ಳಿದರು. 50 ದಿನಗಳ ಕಾಲ ಸತತ 3 ನೇ ಹಂತದ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನೂ ನೀಡಲಾಗಿತ್ತು. ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಇದ್ದ ಮಾಲ್ಡೀವ್ ನ ಮರಿಯಾ ರಶೀದಾ ಮತ್ತು ಫ್ಯಾಉಜಿಯಾ ಹಾಸನ್ ರನ್ನು ಬಂಧಿಸಿದಾಗ ಅವರ ಡೈರಿಯಲ್ಲಿ ನಂಬಿಯವರ ದೂರವಾಣಿ ಸಂಖ್ಯೆ ಇತ್ತು ಎಂಬ ಏಕೈಕ ಕಾರಣಕ್ಕೆ ‘ಅವರ ಬಳಿ ಇಸ್ರೋದ ರಹಸ್ಯ ಮಾಹಿತಿಗಳು ಹಾಗು ಕ್ರಯೋಜಿನ್ ತಂತ್ರಜ್ಞಾನದ ಮಾಹಿತಿಗಳು ಕೂಡ ಇತ್ತು’ ಎಂದು ಪೊಲೀಸರು ಆರೋಪಿಸಿದರು. ಮಾತ್ರವಲ್ಲದೆ ವರದಿಗಳ ಪ್ರಕಾರ ಆಕೆಯ ಮೇಲಿನ ಆರೋಪಗಳೂ ಸುಳ್ಳೆಂದು ತಿಳಿದು ಬಂದಿದೆ. ನೈಜ ವಿಚಾರ ಆಕೆಯ ಬಳಿ ಇದ್ದದ್ದು ನಂಬಿ ನಾರಾಯಣ್ ರ ದೂರವಾಣಿ ಸಂಖ್ಯೆಯಲ್ಲ ಬದಲಾಗಿ ವೈದ್ಯೆಯಾದ ಸಸಿ ಕುಮಾರ್ ಅವರ ಪತ್ನಿಯ ದೂರವಾಣಿ ಸಂಖ್ಯೆ.
ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿಯ ಮೇಲೆರಗಿದ ಈ ಆರೋಪವನ್ನು ಬೇಹುಗಾರಿಕಾ ದಳ ಮಾತ್ರವಾಗಿ ಬಗೆಹರಿಸದು ಎಂದು ಅರಿತ ಬಳಿಕ ಪ್ರಕರಣವನ್ನು ಸಿಬಿಐ ಗೆ ಹಸ್ತಾಂತರಿಸಲಾಯಿತು. ಈ ತನಿಖೆಯಲ್ಲಿ ನಂಬಿಯವರ ಮೇಲಿನ ಆರೋಪ ಸಂಪೂರ್ಣವಾಗಿ ಕಪೋಲಕಲ್ಪಿತ ಎಂದು ತಿಳಿದು ಬಂತು, ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಳಿಕ ಕೋರ್ಟ್ ಈ ಪ್ರಕರಣವನ್ನೇ ವಜಾಗೊಳಿಸಿತು. ಬಳಿಕ ಮಾನವ ಹಕ್ಕು ಆಯೋಗ ವಿಜ್ಞಾನಿಯ ವೃತ್ತಿ ಜೀವನಕ್ಕೆ ಅನ್ಯಾಯವಾಗಿ ಕಲ್ಲು ಹಾಕಿದ್ದಕ್ಕಾಗಿ ನಂಬಿಯವರಿಗೆ 10 ಲಕ್ಷ ಪರಿಹಾರ ಧನವನ್ನು ನೀಡುವಂತೆ ಆದೇಶಿಸಿತು ಮತ್ತು ಐಬಿ ಮತ್ತು ಕೇರಳದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆಯೂ ಆದೇಶ ನೀಡಿತು. ಇದರಿಂದ ನಂಬಿ ಮತ್ತು ಅವರ ಸಹೋದ್ಯೋಗಿಗಳು ಸಂಪೂರ್ಣವಾಗಿ ನಿರಪರಾಧಿಗಳು ಎಂಬುದಾಗಿ ಸಾಬೀತಾಯಿತು. ಆದರೆ ನಂಬಿ ನಾರಾಯಣ್ ರ 13 ವರ್ಷಗಳ ಅಮೂಲ್ಯ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವು ನಷ್ಟ ಹೊಂದಿದ್ದವು..(ಚಿಂತೆ ಮತ್ತು ದೇಶದ್ರೋಹದ ಆರೋಪಗಳಿಂದ ನೊಂದು ನಂಬಿ ಅವರ ಧರ್ಮಪತ್ನಿ ನಿಧನರಾಗಿದ್ದರು)
ನಂಬಿ ನಾರಾಯಣ್ ಅವರ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಬ್ಬರ ಮೇಲೆ ಮೇಲೆ ಕ್ರಮ ಜರಗಿಸಬೇಕೆಂಬ ವರದಿಯನ್ನೂ ಸಿಬಿಐ ಸಲ್ಲಿಸಿದೆ. ಈ ಘಟನೆಯಿಂದ ಕ್ರಯೋಜನಿಕ್ ಯೋಜನೆ, GSLV ,ಪಿ ಸ್ ಲ್ ವಿ ರಾಕೆಟ್ ಅಭಿವೃದ್ಧಿ ಸೇರಿದಂತೆ ಇಸ್ರೋದ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದವು ಮತ್ತು ಇಸ್ರೋ ವಿಜ್ಞಾನಿಗಳ ನೈತಿಕ ಸ್ಥೈರ್ಯವೇ ಉಡುಗಿ ಹೋಗಿತ್ತು. ಪರಿಣಾಮವಾಗಿ ಇಸ್ರೋದ ಸಾಧನೆಯು 10 ವರ್ಷಗಳಷ್ಟು ಹಿಂದಕ್ಕೆ ಹೋಯಿತು. ಆದರೂ ಇಷ್ಟೆಲ್ಲ ಸಂಚುಗಳ ನಡುವೆಯೂ ಭಾರತ ಸ್ವದೇಶೀ ಕ್ರಯೋಜನಿಕ್ ತಂತ್ರಜ್ಞಾನವನ್ನು ತಯಾರಿಸಿತು.
2001 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ನಂಬಿ ನಾರಾಯಣ್ ಅವರಿಗೆ ಪರಿಹಾರಧನವನ್ನು ನೀಡಿದ್ದರು ಮತ್ತು ಇಸ್ರೋದಲ್ಲಿ ಕೆಲಸ ಮಾಡಲು ಅವಕಾಶವನ್ನೂ ನೀಡಲಾಯಿತು. ನಂಬಿ ನಾರಾಯಣ್ ಅವರ ಒಂದೇ ವಿಷಾದವೆಂದರೆ ಅವರ ಅಗ್ನಿ ಪರೀಕ್ಷೆಯ ಸಂದರ್ಭದಲ್ಲಿ ಅವರು ಅಷ್ಟು ನಿಷ್ಠೆ ಮತ್ತು ಸಮರ್ಪಣೆಯೊಂದಿಗೆ ಕಾರ್ಯ ನಿರ್ವಹಿಸಿದ ಸಂಸ್ಥೆ ಮತ್ತು ಅದರ ಅಂದಿನ ಅಧ್ಯಕ್ಷರಾದ ಕೃಷ್ಣಸ್ವಾಮಿ ಕಸ್ತೂರಿರಂಗನ್ ರವರು ಹೆಚ್ಚು ಅಗತ್ಯವಿದ್ದಾಗ ಅವರೊಂದಿಗೆ ಏಕೆ ನಿಲ್ಲಲಿಲ್ಲ ಎಂಬುದು. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಬಳಿಕ ನರೇಂದ್ರ ಮೋದಿಯವರ ಸರ್ಕಾರವು ಅವರಿಗೆ ಪದ್ಮ ಪ್ರಶಸಿಯನ್ನು ನೀಡಿ ಗೌರವಿಸಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಡಾ ನಂಬಿ ನಾರಾಯಣ್ ರವರು ‘ಬೇಹುಗಾರಿಕೆಯ ಆರೋಪದ ಮೇಲೆ ನನ್ನ ಹೆಸರು ಪ್ರಸಿದ್ಧವಾಗಿತ್ತು.ಈಗ ವಿಜ್ಞಾನ ಕ್ಷೇತ್ರಕ್ಕೆ ನನ್ನ ಕೊಡುಗೆಯನ್ನು ಸರ್ಕಾರವು ಗುರುತಿಸಿದೆ ಎಂದು ನನಗೆ ಖುಷಿಯಾಗಿದೆ’ ಎಂದು ಹೇಳುವಾಗ 77 ವರ್ಷದ ನಂಬಿ ನಾರಾಯಣ್ ಅವರ ಕಣ್ಣು ತೇವವಾಗಿತ್ತು.
ಮಿಷನ್ ಮಂಗಲ್, ಚಂದ್ರಯಾನ್ 2 ಹೀಗೆ ಇಸ್ರೋದ ಕಾರ್ಯಗಳ ಬಗ್ಗೆ ಹೆಮ್ಮೆಪಡುವ ನಮಗೆ, ಅದರ ಹಿಂದೆ ಶ್ರಮವಹಿಸಿದ ವಿಜ್ಞಾನಿಗಳ ಬಗ್ಗೆ ಕೃತಜ್ಞತೆ ಇರಬೇಕು ಮಾತ್ರವಲ್ಲದೆ ರಾಜಕೀಯ ಕುತಂತ್ರಗಳಿಗೆ ಬಲಿಪಶುಗಳಾದ ವಿಜ್ಞಾನಿಗಳ ಬಗ್ಗೆ ಅವರ ಆದರ್ಶಗಳ ಬಗ್ಗೆ ಗೌರವವೂ ಇರಬೇಕು. ಅಷ್ಟು ಹಿಂಸೆ ಮತ್ತು ಅವಮಾನಗಳನ್ನು ಸಹಿಸಿಯೂ ದೇಶಕ್ಕಾಗಿ ತುಡಿಯುವ ನಂಬಿ ನಾರಾಯಣ್ ಅವರು ನಮಗೆ ಆದರ್ಶವಾಗಬೇಕು. ಇದೀಗ ನಂಬಿ ನಾರಾಯಣ್ ಅವರ ವಿರುದ್ಧ ರೂಪಿಸಲಾದ ಷಡ್ಯಂತ್ರದ ಹಿಂದಿನ ವ್ಯಕ್ತಿಗಳನ್ನು ಗುರುತಿಸುವಂತೆಯೂ ತನಿಖೆಯನ್ನು ನಡೆಸುವಂತೆಯೂ ನ್ಯಾಯಾಲಯವು ಆದೇಶಿಸಿದೆ. ಭಾರತದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ನಂಬಿ ನಾರಾಯಣ್ ಅವರಿಗೆ ಈ ಮೂಲಕ ಸಂಪೂರ್ಣ ನ್ಯಾಯವು ಲಭಿಸಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.