ಬೆಳ್ತಂಗಡಿ : ದೇಶದ ಆರ್ಥಿಕತೆ ಉನ್ನತಿಯಾಗಬೇಕಾದರೆ ಗ್ರಾಮೀಣ ಜನರ ಬದುಕು ಹಸನಾಗಬೇಕು. ಇದಕ್ಕಾಗಿ ಬ್ಯಾಂಕುಗಳು ಹಳ್ಳಿ ಜನರ ಬೆನ್ನೆಲುಬಾಗಬೇಕು ಎಂದು ಕೆನರಾ ಬ್ಯಾಂಕ್ನ ಆಡಳಿತ ನಿರ್ದೇಶಕ ಪಿ.ಎಸ್. ರಾವತ್ ಹೇಳಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ರುಡ್ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ದಕ್ಷ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ರುಡ್ಸೆಟ್ ಸಂಸ್ಥೆಗಳ) ಸೇವೆ ಮತ್ತು ಸಾಧನೆ ಶ್ಲಾಘನೀಯವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಬ್ಯಾಂಕಿಂಗ್ ಸೇವೆ ನೀಡುವುದಕ್ಕಾಗಿ 1969ರಲ್ಲಿ ಬ್ಯಾಂಕ್ಗಳ ರಾಷ್ಟ್ರೀಕರಣವಾದಾಗ ಅನೇಕ ಸುಧಾರಣೆಗಳನ್ನು ಜಾರಿಗೆ ತರಲಾಯಿತು. ಬೇಗನೆ ಸಾಲ ವಿತರಣೆ, ಜನರಲ್ಲಿ ಉಳಿತಾಯ ಪ್ರವೃತ್ತಿ ಹೆಚ್ಚಿಸಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡುವುದು, ಕೃಷಿ, ಉದ್ಯಮ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಲ ಸೌಲಭ್ಯ ನೀಡುವುದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಾಲ ಯೋಜನೆ ರೂಪಿಸಲಾಯಿತು. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಮತ್ತು ಲೀಡ್ ಬ್ಯಾಂಕ್ಗಳ ಮೂಲಕ ಗ್ರಾಮೀಣ ಆರ್ಥಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಲಾಯಿತು. ಆದರೂ ಕೇವಲ ಶೇ. 40 ರಷ್ಟು ಜನರು ಮಾತ್ರ ಬ್ಯಾಂಕಿಂಗ್ ಸೌಲಭ್ಯ ಬಳಸಿಕೊಂಡರು ಎಂದರು.
ಇದೀಗ ಪ್ರ್ರಧಾನ ಮಂತ್ರಿ ಜನಧನ ಯೋಜನೆಯಲ್ಲಿ ಪ್ರತಿ ಮನೆಯವರೂ ಬ್ಯಾಂಕ್ ಖಾತೆ ತೆರೆದರೂ ಶೇ. 50 ರಷ್ಟು ಖಾತೆಗಳಲ್ಲಿ ಶೂನ್ಯ ಬಾಕಿ ಇದೆ. ಯುವಜನತೆ ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಅವರ ವಾಸ್ತವ್ಯದ ಗ್ರಾಮೀಣ ಪ್ರದೇಶದಲ್ಲಿಯೇ ಕಿರು ಉದ್ಯಮ ಪ್ರಾರಂಭಿಸಲು ಬ್ಯಾಂಕ್ಗಳ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಆರ್ಥಿಕ ಪ್ರಗತಿಯೊಂದಿಗೆ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಫಲಾನುಭವಿಗಳೂ ಆರ್ಥಿಕವಾಗಿ ಸಬಲರಾಗುತ್ತಾರೆ. ಈ ದಿಸೆಯಲ್ಲಿ ರುಡ್ಸೆಟ್ ಸಂಸ್ಥೆಗಳ ಸೇವೆ, ಸಾಧನೆ ಶ್ಲಾಘನೀಯವಾಗಿದೆ. ದೇಶದ 17 ರಾಜ್ಯಗಳಲ್ಲಿರುವ 27 ರುಡ್ಸೆಟ್ ಸಂಸ್ಥೆಗಳಲ್ಲಿ25 ಸಂಸ್ಥೆಗಳು ‘ಎ’ ಶ್ರೇಣಿಯಲ್ಲಿರುವುದು ಉಲ್ಲೇಖನೀಯವಾಗಿದೆ. ಇವುಗಳ ಮೂಲಕ 2.7 ಲಕ್ಷ ನಿರುದ್ಯೋಗಿಗಳು ತರಬೇತಿ ಪಡೆದಿದ್ದು ಶೇ. 73 ರಷ್ಟು ಯಶಸ್ವೀ ಸ್ವ-ಉದ್ಯೋಗಗಳಾಗಿದ್ದಾರೆ ಎಂದು ಸಂಸ್ಥೆಯನ್ನು ಅಭಿನಂದಿಸಿದರು.
ರುಡ್ಸೆಟ್ ಸಂಸ್ಥೆಗಳ ನಿರ್ದೇಶಕರುಗಳು ತಮ್ಮ ಕರ್ತವ್ಯವನ್ನಷ್ಟೆ ಮಾಡಿದರೆ ಸಾಲದು. ಪ್ರಾಮಾಣಿಕವಾಗಿ, ಬದ್ಧತೆಯಿಂದ ದೂರದೃಷ್ಟಿಯೊಂದಿಗೆ ಉತ್ತಮ ಸೇವೆ ನೀಡಿ ಗ್ರಾಮೀಣ ಪ್ರದೇಶದ ಪ್ರಗತಿಗೆ ಸಾಮಾಜಿಕ ಬದ್ದತೆಯಿಂದ ಕೆಲಸ ನಿರ್ವಹಿಸಬೇಕು ಮತ್ತು ಉತ್ತರದಾಯಿತ್ವವಿರಬೇಕು ಎಂದರು.
ರುಡ್ಸೆಟ್ ಸಂಸ್ಥೆಗಳ ಸೇವೆ, ಸಾಧನೆ ಮತ್ತು ಯಶೋಗಾಥೆಯ ಸಮಗ್ರ ಮಾಹಿತಿ ಇರುವ ಪುಸ್ತಕವೊಂದನ್ನು ಪ್ರಕಟಿಸಬೇಕು ಎಂದು ರಾವತ್ ಸಲಹೆ ನೀಡಿದರು. ನಿರ್ಧಿಷ್ಟ ಗುರಿಯೊಂದಿಗೆ ಯೋಜನೆ ರೂಪಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಲಭ್ಯ ಇರುವ ಸವಲತ್ತು, ಸೌಲಭ್ಯ ಮತ್ತು ಪ್ರಾಕೃತಿಕ ಸಂಪನ್ಮೂಲ ಬಳಸಿ ಆರ್ಥಿಕ ಪ್ರಗತಿಗೆ ಶ್ರಮಿಸಬೇಕು. ತರಬೇತಿ ಹೊಂದಿದ ಉದ್ಯಮಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಮಾರ್ಗದರ್ಶನ ನೀಡಬೇಕು ಎಂದರು. ರುಡ್ಸೆಟ್ ಸಂಸ್ಥೆಗಳಿಂದಾಗಿ ಗ್ರಾಮೀಣ ಪ್ರದೇಶದ ಆರ್ಥಿಕ ಮಟ್ಟ ಸುಧಾರಣೆಯಾಗಿದ್ದು ಜನರಲ್ಲಿ ಆರ್ಥಿಕ ಸಾಕ್ಷರತೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ರುಡ್ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಇಂದು ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದ್ದು ರೈತರು ಮೀಟರ್ ಬಡ್ಡಿಯ ಶೂಲದಿಂದ ನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದು ವಿಷಾದನೀಯ. ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ ಇದ್ದು ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಬ್ಯಾಂಕಿಂಗ್ ಸೇವಾ ಸೌಲಭ್ಯ ಪಡೆದು ಆಯಾ ಪ್ರದೇಶದ ಬೇಡಿಕೆ, ಉತ್ಪಾದನೆ ಮತ್ತು ಪ್ರಾಕೃತಿಕ ಸಂಪನ್ಮೂಲವನ್ನು ಗಮನಿಸಿ ಸೂಕ್ತವಾಗಿ ಬಳಸಿಕೊಂಡು ಯಶಸ್ವೀ ಸ್ವ-ಉದ್ಯೋಗಿಗಳಾಗಿ ಪ್ರಗತಿ ಸಾಧಿಸಬಹುದು. ಲಭ್ಯ ಇರುವ ಅವಕಾಶದ ಸದುಪಯೋಗ ಪಡೆದು ಕೌಶಲ ವೃದ್ಧಿ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸುವುದೇ ರುಡ್ಸೆಟ್ ಸಂಸ್ಥೆಗಳ ಗುರಿಯಾಗಿದೆ ಎಂದು ಡಾ|ಹೆಗ್ಗಡೆ ಹೇಳಿದರು.
ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್, ಕೆನರಾ ಬ್ಯಾಂಕ್ನ ಮುಖ್ಯ ಮಹಾ ಪ್ರಬಂಧಕ ಎಸ್.ಎಸ್. ಭಟ್, ರುಡ್ಸೆಟ್ ಸಂಸ್ಥೆಗಳ ರಾಷ್ಟ್ರೀಯ ಅಕಾಡೆಮಿ ಮುಖ್ಯ ಕಾರ್ಯ ಸಂಯೋಜಕ ಕೆ.ಎನ್. ಜನಾರ್ದನ್ ಮತ್ತು ಉಪ ಮಹಾ ಪ್ರಬಂಧಕ ಎನ್. ಮಂಜುನಾಥ ಭಟ್ ಇದ್ದರು.
ರುಡ್ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಟಿ. ಪಿ. ಜಗದೀಶ ಮೂರ್ತಿ ಸ್ವಾಗತಿಸಿದರು. ಗಜಿಯಾಬಾದ್ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಕೆ.ಸಿ. ಪಂತ್ ಧನ್ಯವಾದವಿತ್ತರು. ಅನಂತಪುರ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಜನಾರ್ದನ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.