ಭಾರತದ ರಾಷ್ಟ್ರೀಯ ನೌಕಾದಿನವನ್ನು ಡಿಸೆಂಬರ್ 4 ರಂದು ಆಚರಿಸಲಾಗುತ್ತದೆ, ವಿಶ್ವ ಸಾಗರಯಾನ ದಿನವನ್ನಾಗಿ ಪ್ರತಿ ವರ್ಷ ಸೆಪ್ಟೆಂಬರ್ ಕೊನೆ ಗುರುವಾರದಂದು ನಡೆಸಲಾಗುತ್ತದೆ, ಹಾಗೆಯೇ ರಾಷ್ಟ್ರೀಯ ಸಾಗರಯಾನ ದಿನವನ್ನು ಎಪ್ರಿಲ್ 5 ರಂದು ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ವರ್ಷ ವಿನೂತನ ಧ್ಯೇಯ ವಾಕ್ಯದೊಂದಿಗೆ ಸಾಗರಯಾನವನ್ನು ನೆನಪಿಸುವ ಕಾರ್ಯವಾಗುತ್ತದೆ. ನಾಗರಿಕ ಸಾಗರ ಪಯಣದ ಸೌಂದರ್ಯ ಮತ್ತು ಅಭಿವೃದ್ಧಿಯನ್ನು ಸ್ಮರಿಸಲಾಗುತ್ತದೆ. ಪರಿಸರ ಸ್ನೇಹಿ ಸಮುದ್ರಯಾನದ ಬಗ್ಗೆ ಅರಿವು ಮೂಡಿಸುವುದು ಮಾತ್ರವಲ್ಲದೆ ಖಂಡಾಂತರವಾಗಿ ನಡೆಯುವ ವ್ಯಾಪಾರ ಮತ್ತು ಜಾಗತಿಕ ಹಣಕಾಸು ವ್ಯವಹಾರದ ಬಗ್ಗೆ ಗಮನ ಸೆಳೆಯುವುದು ರಾಷ್ಟ್ರೀಯ ಸಾಗರಯಾನದ ಸದುದ್ದೇಶ. ದೇಶದ ಅಭಿವೃದ್ಧಿಯಲ್ಲಿ ಪ್ರಧಾನ ಭೂಮಿಕೆ ವಹಿಸುವ ಸಾಗರ ವಲಯಗಳ ರಕ್ಷಣೆಯೂ ಇದರ ಮಹತ್ವವಾಗಿದೆ.
ಭಾರತದ ಸಮುದ್ರಯಾನ ಚರಿತ್ರೆ ಗಮನಿಸಿದಾಗ ಇದರ ಬೃಹತ್ ಚಿತ್ರಣ ಅನಾವರಣವಾಗುತ್ತದೆ. ಸಮುದ್ರದ ನಂಟು ಭಾರತಕ್ಕೆ ಹೊಸತೇನಲ್ಲ, ಹಿಂದೂ ಮಹಾಸಾಗರ ಸಹಿತ ಅರಬ್ಬಿಯನ್ ಸಮುದ್ರದಲ್ಲಿ ಹೆಚ್ಚಾಗಿ ಪ್ರಾಚೀನ ಭಾರತೀಯರೇ ಹಲವು ಶತಮಾನಗಳವರೆಗೆ ತಮ್ಮ ಪಾರಮ್ಯ ಘನತೆಯನ್ನು ಸ್ಥಾಪಿಸಿಕೊಂಡಿದ್ದರು. ಹಲವು ಮಂದಿ ರಾಜರು ನೌಕಾಪಡೆಗಳನ್ನು ಹೊಂದಿದ್ದರು ಮಾತ್ರವಲ್ಲದೆ ನೌಕಾಯುದ್ಧದಲ್ಲೂ ತಮ್ಮ ಪರಾಕ್ರಮವನ್ನು ಮೆರೆದ ಉದಾಹರಣೆಯಿದೆ. ಛತ್ರಪತಿ ಶಿವಾಜಿ ಮಹಾರಾಜರ ನೌಕಾಪಡೆಗಳಿಂದ ಜಂಜಿಬಾರ್ ಮೇಲಿನ ಹತೋಟಿ ಕೆಲ ಶತಮಾನಗಳ ಹಿಂದಿನದ್ದು ಎಂದು ಹೇಳುವುದಾದರೆ ಅದಕ್ಕೂ ಮೊದಲೇ ಹಲವು ಮಂದಿ ರಾಜರು ನೌಕಾಪಡೆಯ ಮೂಲಕ ಸಮುದ್ರದ ಮೇಲಿನ ಹತೋಟಿಯನ್ನು ಸಾಧಿಸಿದ್ದರು. ಚೋಳ, ಪಾಂಡ್ಯರು ಕೂಡಾ ಸಮುದ್ರಯಾನಕ್ಕೆ ಹೆಸರುವಾಸಿಯಾಗಿದ್ದರು. ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಿದ್ದು ಮಾತ್ರವಲ್ಲ ಅಲ್ಲಿಯೂ ತಮ್ಮ ವ್ಯಾಪಾರ ಕೇಂದ್ರಗಳನ್ನು ನಿರ್ಮಿಸಿದ್ದರು.
ಶತಮಾನಗಳ ಹಿಂದೆ ಪ್ರಾಚೀನ ಭಾರತದಿಂದ ಆನೆ, ಕುದುರೆಗಳನ್ನು ನೌಕೆಗಳ ಮೂಲಕ ಶ್ರೀಲಂಕಾಕ್ಕೆ ಕಳುಹಿಸಿದ ಚರಿತ್ರೆ ರೋಮಾಂಚನಕಾರಿ. ಮೌರ್ಯರ ನಂತರ ದೇಶವನ್ನು ಆಳಿದ್ದ ಗುಪ್ತರು ಸಮುದ್ರಯಾನದಲ್ಲಿ ಪಳಗಿದ್ದರು ಎಂಬುದು ಇಂದಿಗೆ ಚರಿತ್ರೆ. ಅದಕ್ಕೂ ಹಿಂದೆ ಅಂದರೆ ಕ್ರಿ.ಪೂ 3 ನೇ ಶತಮಾನದಲ್ಲಿ ಭಾರತೀಯರು ಸಮುದ್ರದ ಮೇಲಿನ ಹತೋಟಿಯನ್ನು ಹೊಂದಿದ್ದರು. ಸಿಂಧೂ ಕಣಿವೆಯ ಜನರು ಅಂದಿನ ಕಾಲದಲ್ಲಿಯೇ ದೂರದ ಮೆಸಪಟೊಮಿಯಾ (ಇಂದಿನ ಇರಾಕ್ ಪ್ರದೇಶ) ಜೊತೆ ಸಮುದ್ರ ವ್ಯಾಪಾರವನ್ನು ನಡೆಸುತ್ತಿದ್ದರು. ಭಾರತದಲ್ಲಿ ನಿರ್ಮಾಣವಾದ ಬೆಲೆಬಾಳುವ ವಸ್ತುಗಳು, ಆಹಾರ ಪದಾರ್ಥಗಳು, ಮಣ್ಣಿನ ಪಾತ್ರೆಗಳು ಸಹಸ್ರ ಮೈಲು ದೂರದ ಪ್ರದೇಶಕ್ಕೆ ರಫ್ತಾಗುತ್ತಿತ್ತು. ಸಿಂಧೂ ಪುತ್ರರೇ ಅಲ್ಲಿಗೆ ತೆರಳಿ ವ್ಯಾಪಾರವನ್ನು ನಡೆಸುತ್ತಿದ್ದರು ಎಂಬುದು ಕುತೂಹಲಕಾರಿ ವಿಚಾರ. ಸಿಂಧೂ ನಾಗರಿಕತೆಯ ಬಗ್ಗೆ ಬೆಳಕು ಚೆಲ್ಲುವ ಉತ್ಖನನ ವರದಿಗಳಲ್ಲೂ ಈ ಮಾಹಿತಿ ಅಡಕವಾಗಿದೆ. ರೋಮನ್ನರು ಈಜಿಪ್ಟ್ ಅನ್ನು ವಶಪಡಿಸಿಕೊಂಡ ಮೇಲೆ ರೋಮನ್ನರ ಜೊತೆಗೂ ಭಾರತೀಯರ ಸಮುದ್ರ ವ್ಯಾಪಾರ ಸಂಬಂಧಗಳು ಆರಂಭವಾದವು. ಪ್ರಾಚೀನ ಭಾರತದಿಂದ ತೆರಳುತ್ತಿದ್ದ ನೌಕೆಗಳಲ್ಲಿ ಸಾಂಬಾರ ಉತ್ಪನ್ನಗಳು, ಸುಗಂಧ ದ್ರವ್ಯ ಮತ್ತು ಹತ್ತಿ ಬಟ್ಟೆಗಳು ಪ್ರಮುಖವಾಗಿದ್ದವು. ನೌಕಾಯಾನಕ್ಕಾಗಿ ಭೂಪಟ, ನಕಾಶೆಗಳಿದ್ದವು, ಪ್ರಾಕೃತಿಕ ಅರಿವಿನ ಜೊತೆಯಲ್ಲಿ ಉತ್ತರ ಧ್ರುವ ನಕ್ಷತ್ರ ಪುಂಜಗಳು ಕೂಡಾ ಪ್ರಮುಖ ದಿಕ್ಸೂಚಿಯಾಗಿದ್ದವು. ವ್ಯಾಪಾರಿ ನೌಕೆಗಳ ರಕ್ಷಣೆಗಾಗಿ ಅಂದಿನ ರಾಜರು ನೌಕಪಡೆಗಳನ್ನು ರಚಿಸಿದ್ದರು ಎಂಬ ಅಂಶವು ಪ್ರಮುಖವಾಗಿದೆ. ದೊಡ್ಡ ವ್ಯಾಪಾರಿ ನೌಕೆಗಳ ರಕ್ಷಣೆಯ ಹೊಣೆ ಸಣ್ಣ ನೌಕೆಗಳ ಮೇಲಿತ್ತು. ಮಧ್ಯಯುಗದಲ್ಲಿ ಇಂತಹ ರಕ್ಷಕ ನೌಕೆಗಳ ಅಗತ್ಯತೆ ಹೆಚ್ಚಾಗಿತ್ತು, ಕಡಲುಗಳ್ಳರನ್ನು ಹಿಮ್ಮೆಟ್ಟಿಸಲು ಮತ್ತವರ ಹಾವಳಿ ನಿಯಂತ್ರಣಕ್ಕೆ ನೌಕಾಪಡೆ ಸಹಾಯಕವಾಗಿತ್ತು, ಅಂದು ಯುರೋಪಿಯನ್ ನೌಕಾಯಾನಿಗಳು ಭಾರತಕ್ಕೆ ಆಗಮಿಸಲಾರಂಭಿಸಿದ್ದರು. ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಲ್ಲೂ ಭಾರತೀಯ ಹಡಗು ನಿರ್ಮಾತೃಗಳು ಸ್ವದೇಶಿ ನೌಕೆಗಳ ತಯಾರಿಯಲ್ಲಿ ತೊಡಗಿದ್ದರು. ಬ್ರಿಟಿಷರ ರಾಯಲ್ ನೇವಿಗಾಗಿ ಎಚ್.ಎಂ.ಎಸ್.ಹಿಂಧೂಸ್ಥಾನ್, ಎಂ.ಎಂ.ಎಸ್.ಸಿಲೋನ್, ಎಚ್.ಎಂ.ಎಸ್.ಏಷ್ಯಾ ಮೊದಲಾದ ಹೆಸರಿನ ಹಡಗು ನಿರ್ಮಾಣದ ಜವಾಬ್ದಾರಿ ಭಾರತೀಯರದಾಗಿತ್ತು. ಮಾಹಿತಿಯ ಪ್ರಕಾರ 1736 ರಿಂದ 1821 ರವರೆಗೆ ಸುಮಾರು 159 ಹಡಗುಗಳನ್ನು ನಿರ್ಮಿಸಲಾಗಿತ್ತು.
100 ಟನ್ ಭಾರದ ಮತ್ತು 1000 ಟನ್ ತೂಕದ ಬೃಹತ್ ಹಡಗುಗಳ ನಿರ್ಮಾಣ ಬಾಂಬೆ ಬಂದರಿನಲ್ಲಿ ನಡೆದಿತ್ತು ಎಂಬುದು ಕುತೂಹಲಕಾರಿ ಅಂಶ. ಪ್ರಥಮ ರಾಷ್ಟ್ರೀಯ ನೌಕಾಯಾನ ದಿನವನ್ನು 1964, ಎಪ್ರಿಲ್ 5 ರಂದು ಆಚರಿಸಲಾಗಿತ್ತು. 1919 ರಲ್ಲಿ ಭಾರತೀಯ ಉದ್ಯಮಿಗಳನ್ನು ಹೊತ್ತ ಪ್ರಥಮ ನಾಗರಿಕ ಹಡಗು ಮುಂಬೈಯಿಂದ ಹೊರಟಿತ್ತು. ಸಿಂಧಿಯಾ ಸ್ಟೀಮ್ ನೇವಿಗೇಶನ್ ಕಂಪೆನಿಯ ದೊಡ್ಡ ಹಡಗಿನಲ್ಲಿ ಹಲವು ಮಂದಿ ಉದ್ಯಮಿಗಳು ಲಂಡನ್ ನಗರಕ್ಕೆ ತೆರಳಿದ್ದರು. ಈ ಬಾರಿ ೫೮ ನೇ ವರ್ಷದ ರಾಷ್ಟ್ರೀಯ ಸಮುದ್ರಯಾನ ದಿನವನ್ನು ಆಚರಿಸಲಾಗುತ್ತಿದ್ದು, ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಮಂದಿಗೆ ವರುಣಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೇಂದ್ರೀಯ ನೌಕಾಯಾನ ಸಚಿವಾಲಯ ಭಾರತೀಯ ಸಮುದ್ರ ವ್ಯಾಪಾರ ಮತ್ತು ಸಾಗರಯಾನದ ನೀತಿಗೆ ಕಾರಣವಾಗಿದ್ದು, ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ರಾಷ್ಟ್ರೀಯ ಜಲಮಾರ್ಗ, ನದೀ ಮತ್ತು ಹಿನ್ನೀರ ಸರಕು ಸಾಗಾಣೆ, ಬಂದರು ಮತ್ತು ನೌಕಾನೆಲೆಯ ಕಾರ್ಯವ್ಯಾಪ್ತಿ ಮಿನಿಸ್ಟ್ರಿ ಆಫ್ ಶಿಪ್ಪಿಂಗ್ ಅಧೀನದಲ್ಲಿದೆ. 2018 ರ ಡಿಸೆಂಬರ್ ವರದಿ ಆಧಾರದಲ್ಲಿ, ಭಾರತೀಯ ನೌಕಾ ನಿರ್ದೇಶನಾಲಯದ ಆಧಾರದಲ್ಲಿ ಒಟ್ಟು 43 ಶಿಪ್ಪಿಂಗ್ ಕಂಪೆನಿಗಳು ಭಾರತದಲ್ಲಿವೆ ಒಟ್ಟಾರೆ 1401 ನಾಗರಿಕ ಹಡಗುಗಳು ಭಾರತದಲ್ಲಿವೆ. ಈ ವರ್ಷದ ಸಾಗರಯಾನದ ಧ್ಯೇಯ ಹಡಗು ಯಾತ್ರಿಕರು ಮತ್ತು ರಕ್ಷಕರ ಬಗ್ಗೆಗಿದೆ, ಹಡಗು ಯಾ ಸಮುದ್ರಯಾನದಲ್ಲಿ ಪ್ರಧಾನ ಭೂಮಿಕೆ ವಹಿಸುವ ಇವರು ಈ ಕ್ಷೇತ್ರದ ಏಳಿಗೆಗೆ ಕಾರಣೀಭೂತರು.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.