ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆಗೆ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಋತುವಿನ ಬದಲಾವಣೆಯ ಸಂದರ್ಭದಲ್ಲೂ ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಮತ್ತು ಪರಂಪರೆ ನಮ್ಮಲ್ಲಿದೆ. ಅದೇ ರೀತಿ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂದೆ ಜೋಡಿಸುವ ವಿಶೇಷ ಕಲಾಕೃತಿಯ ಆಕಾಶ ಬುಟ್ಟಿಗಳು ಹಾಗೂ ಮನೆಯಲ್ಲಿ ನೆಲೆಸುವ ಸಂಭ್ರಮದ ವಾತಾವರಣವು ಹೋಳಿಹಬ್ಬದ ವಿಶೇಷತೆ. ಈ ಹಬ್ಬವನ್ನು ಅಜ್ಞಾನ, ಕೆಟ್ಟ ಸಂಗತಿ ಹಾಗೂ ಸುಳ್ಳಿನ ವಿರುದ್ಧವಾಗಿ ಸತ್ಯ, ಧರ್ಮವು ಸಾಧಿಸಿದ ವಿಜಯದ ಪ್ರತೀಕವಾಗಿಯೂ ಆಚರಿಸಲಾಗುತ್ತದೆ. ಹೋಳಿ ಹಬ್ಬದ ಕುರಿತಾಗಿ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಅನೇಕ ಕಥೆಗಳಿವೆ.
ಭಾರತೀಯ ಗ್ರಂಥಗಳ ಪ್ರಕಾರ ಹಿರಣ್ಯಕಶಿಪು ರಾಜನಿಗೆ ವಿಷ್ಣು ಭಕ್ತನಾದ ಪ್ರಹ್ಲಾದ ಎನ್ನುವ ಪುತ್ರನಿದ್ದನು. ತಂದೆಯ ಮಾತನ್ನು ಧಿಕ್ಕರಿಸಿ ಬಾಲಕ ಪ್ರಹ್ಲಾದನು ಸದಾ ಕಾಲ ವಿಷ್ಣುವಿನ ಧ್ಯಾನ ಹಾಗೂ ಆರಾಧನೆಯಲ್ಲೇ ತೊಡಗಿರುತ್ತಿದ್ದನು. ವಿಷ್ಣುವನ್ನು ಆರಾಧಿಸದಂತೆ ತಾನು ನೀಡಿದ ಆಜ್ಞೆಯನ್ನೂ ಧಿಕ್ಕರಿಸಿದ ಪ್ರಹ್ಲಾದನನ್ನು ಹಿರಣ್ಯಕಶಿಪು ಅನೇಕ ರೀತಿಯಲ್ಲಿ ಶಿಕ್ಷಸುತ್ತಿದ್ದನು. ಆದರೂ ಸಹ ಯಾವುದೇ ಶಿಕ್ಷೆಗಳೂ ಫಲಕಾರಿಯಾಗಲಿಲ್ಲ. ಇದೇ ರೀತಿಯ ಪ್ರಯತ್ನದ ಸಂದರ್ಭದಲ್ಲಿ ಹಿರಣ್ಯಕಶಿಪು ತನ್ನ ತಂಗಿ ಹೋಲಿಕಾಳ ಬಳಿ ಸಹಾಯವನ್ನು ಯಾಚಿಸಿದನು .
ತನ್ನ ತೊಡೆಯ ಮೇಲೆ ಯಾರು ಕುಳಿತುಕೊಳ್ಳುತ್ತಾರೋ ಅವರನ್ನು ಸುಡುವ ಶಕ್ತಿಯು ಹೋಲಿಕಾಳಿಗೆ ಸಿದ್ದಿಸಿತ್ತು. ಹೋಲಿಕಾಳು, ಕಶಿಪುವಿನ ಮಾತಿನ ಹಾಗೆಯೇ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳಲು ಹೇಳಿದನು. ಅಣ್ಣನ ಮಾತಿನಂತೆ ಹೋಲಿಕಾ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಳು. ಆದರೆ ಪ್ರಹ್ಲಾದ ಹರಿಯ ಸ್ಮರಣೆಯನ್ನು ಮಾಡುತ್ತಲೇ ಇದ್ದುದರಿಂದ ಹೋಲಿಕಾ ಸುಟ್ಟು ಭಸ್ಮವಾದಳು. ಪ್ರಹ್ಲಾದನು ಯಾವುದೇ ತೊಂದರೆಯಿಲ್ಲದೆ ಬೆಂಕಿಯಿಂದ ಹೊರಗೆ ಬಂದನು . ಹೋಲಿಕಾಳ ದಹನದ ಹಿನ್ನೆಲೆಯಲ್ಲಿಯೇ ಹೋಳಿ ಹಬ್ಬವನ್ನು ಹೋಲಿಕಾ ದಹನವನ್ನು ಆಚರಿಸುವ ಮೂಲಕ ಆಚರಿಸಲಾಗುತ್ತದೆ.
ಹೋಲಿಕಾ ದಹನದ ಕುರಿತಾದ ಕಥೆ ಒಂದಾದರೆ ಕಾಮನ ಹಬ್ಬದ ಹಿನ್ನಲೆಯಲ್ಲಿ ಕೂಡಾ ಹಬ್ಬವನ್ನು ಆಚರಿಸಲಾಗುತ್ತದೆ. ತಾರಕಾಸುರನೆಂಬ ರಾಕ್ಷಸನು ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿ, ತನಗೆ ಸಾವು ಬಾರದಂತೆ ಅನುಗ್ರಹಿಸು ಎಂದು ವರ ಬೇಡುತ್ತಾನೆ. ಅದಕ್ಕೆ ಬ್ರಹ್ಮ ಸಾವು ಎಲ್ಲರಿಗೂ ನಿಶ್ಚಿತ. ಸಾವು ಬಾರದಂತೆ ತಡೆಯಲು ಸಾಧ್ಯವಿಲ್ಲ ಎಂದು ಉತ್ತರಿಸುತ್ತಾನೆ. ಆಗ ತಾರಕಾಸುರನು ಶಿವನಿಗೆ ಏಳು ದಿನದಲ್ಲಿ ಜನಿಸಿದ ಮಗನಿಂದಲೇ ನನಗೆ ಸಾವು ಬರುವಂತೆ ಮಾಡು ಎಂದು ವರ ಬೇಡುತ್ತಾನೆ. ತಾರಕಾಸುರನ ವಧೆಗಾಗಿ ಶಿವನನ್ನು ಬೇಡಲು ಹೋದಾಗ ಶಿವನು ಭೋಗ ಸಮಾಧಿಯಲ್ಲಿರುತ್ತಾನೆ. ಶಿವನನ್ನು ಎಚ್ಚರಿಸುವ ಈ ಪುಣ್ಯಕಾರ್ಯ ಮಾಡಲು ರತಿ ಮನ್ಮಥರು ಒಪ್ಪುತ್ತಾರೆ. ಅದರಂತೆ ರತಿ -ಮನ್ಮಥರು ಧ್ಯಾನಸ್ಥ ಸ್ಥಿತಿಯಲ್ಲಿದ್ದ ಮಹಾದೇವನ ಎದುರು ನೃತ್ಯ ಮಾಡಿ, ಹೂವಿನ ಬಾಣ ಬಿಟ್ಟು ಶಿವನ ಧ್ಯಾನಕ್ಕೆ ಭಂಗ ತರುತ್ತಾರೆ. ಇದರಿಂದ ಕುಪಿತಗೊಂಡ ಶಿವ, ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟುಬಿಡುತ್ತಾನೆ. ನಂತರ ರತಿ ಪತಿ ಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥ ಕಾಣುವಂತೆ ವರ ನೀಡುತ್ತಾನೆ. ಈ ಮನ್ಮಥನಿಗೆ ಕಾಮ ಎಂಬ ಹೆಸರೂ ಕೂಡ ಇದೆ. ಹೀಗಾಗಿ ಕಾಮ ಶಿವನ ಕೆಂಗಣ್ಣಿಗೆ ಗುರಿಯಾಗಿ ಸುಟ್ಟು ಹೋದ ದಿನವನ್ನು ಕಾಮನ ಹಬ್ಬವಾಗಿ ಆಚರಿಸುತ್ತಾರೆ
ಈ ರೀತಿಯ ಹಿನ್ನೆಲೆಗಳನ್ನು ಹೊಂದಿರುವ ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಪ್ರತಿಯೊಂದು ಬಾರಿಯೂ, ಹಬ್ಬದ ಆಚರಣೆಯ ವಿರುದ್ಧ, ತಥಾ ಕಥಿತ ಪ್ರಾಣಿ ಪ್ರಿಯರು ಮತ್ತು ಪರಿಸರ ಪ್ರೇಮಿಗಳು ಹಬ್ಬವನ್ನು ಆಚರಿಸದಂತೆ ಅನೇಕ ವಿಚಾರಗಳನ್ನು ಹರಿಯಬಿಡುತ್ತಾರೆ. ಸಮಾಜದ ಮೇಲು ಕೀಳುಗಳನ್ನು ಹೋಗಲಾಡಿಸಿ ತಾರತಮ್ಯವಿಲ್ಲದೆ ಎಲ್ಲರೊಂದಿಗೆ ಬೆರೆಯುವ ಹಬ್ಬವನ್ನು ಆಚರಿಸದಂತೆ ವಿವಿಧ ರೀತಿಯಲ್ಲಿ ಹೇಳಲಾಗುತ್ತದೆ.
ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಹೋಳಿಯನ್ನು ಆಚರಿಸಲಾಗುವುದು. ಈ ಹಬ್ಬದ ಉತ್ಸವವು ವಸಂತ ಕಾಲದ ಆರಂಭವನ್ನು ಹಾಗೂ ದೀರ್ಘ ಕಾಲದ ಚಳಿಯ ಅಂತ್ಯವನ್ನು ಸೂಚಿಸುವ ಈ ಹಬ್ಬವನ್ನು ಪರಸ್ಪರ ರಂಗೆರಚುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ.
ಸಾಮಾನ್ಯವಾಗಿ ಬಳಸಲಾಗುವ ರಾಸಾಯನಿಕಯುಕ್ತ ಬಣ್ಣಗಳಿಂದ ನಾಯಿ(ಪ್ರಾಣಿ)ಗಳಿಗೆ ತೊಂದರೆಯಾಗುತ್ತದೆ, ನೀರು ಮಲಿನವಾಗುತ್ತದೆ ಎಂಬ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಲಿತವಾಗಿದೆ. ಇದರಿಂದ ಹಬ್ಬದ ಆಚರಣೆಯನ್ನು ನಿಲ್ಲಿಸಬೇಕಿಲ್ಲ. ರಾಸಾಯನಿಕ ಬಣ್ಣಗಳಿಂದ ಪ್ರಾಣಿಗಳಿಗೆ ಮಾತ್ರವಲ್ಲ ನಮಗೂ ತೊಂದರೆಗಳು ಉಂಟಾಗುತ್ತದೆ. ಆದ್ದರಿಂದಲೇ ಈ ಬಾರಿ ಹಬ್ಬದಲ್ಲಿ ವಿದೇಶದಿಂದ ಆಮದಾಗುವ ಬಣ್ಣಗಳ ಬದಲಾಗಿ ನೈಸರ್ಗಿಕ ಬಣ್ಣಗಳನ್ನೇ ಬಳಸೋಣ. ಹೋಲಿಕಾ ದಹನಕ್ಕಾಗಿ ಹಳೆಯ ಮರದ ತುಂಡುಗಳನ್ನು ಬಳಸುವುದು ಮಾತ್ರವಲ್ಲದೆ, ಗಿಡಗಳನ್ನು ನೆಟ್ಟು ಬೆಳೆಸೋಣ. ಹಬ್ಬಗಳ ಆಚರಣೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರಮುಖ ಬೇರು ಎಂಬುದನ್ನು ಮರೆಯದಿರೋಣ.
✍️ ದೀಪಶ್ರೀ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.