ಮಂಗಳೂರು: ಮಂಗಳೂರು ಲಿಟ್ ಫೆಸ್ಟ್ನ ನಾಲ್ಕನೇ ಗೋಷ್ಠಿಯಲ್ಲಿ Exploring the Indian Identity through Cinema ಎಂಬ ವಿಚಾರದ ಬಗ್ಗೆ ವಿಚಾರ ಮಂಡನೆ ನಡೆಯಿತು. ಸಮನ್ವಯಕಾರರಾಗಿ ಸಮರ್ಥ್ ರಾವ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ಮಾತನಾಡಿ, ಭಾರತೀಯತೆ ಮತ್ತು ರಾಷ್ಟ್ರೀಯತೆ ಹತ್ತಿರದ ಪದಗಳು. ಹಿಂದಿನ ಸಿನೆಮಾಗಳಲ್ಲಿ ದೇವರ ಚಿತ್ರಗಳನ್ನು ತೋರಿಸಿ ಸಿನೆಮಾ ಮುಂದುವರೆಯುತ್ತಿತ್ತು. ಈಗ ಅದಿಲ್ಲ. ಕಳೆದ 6-7 ವರ್ಷಗಳಿಂದ ಭಾರತೀಯತೆ, ರಾಷ್ಟ್ರೀಯತೆ ಪ್ರವರ್ಧಮಾನಕ್ಕೆ ಬರುತ್ತಿದೆ. ಇಂದು ದೇಶದ ಅಸ್ಮಿತೆಯ ಕುರಿತು ಬರುತ್ತಿರುವ ಚಿತ್ರಗಳು ಯಶಸ್ವಿಯಾಗುತ್ತಿವೆ ಎಂಬುದು ಖುಷಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಹಲವು ವೈವಿಧ್ಯಮಯ ವಿಚಾರಗಳನ್ನು ಒಳಗೊಂಡ ದೇಶ. ಕಳೆದ 70 ವರ್ಷಗಳಿಗಿಂತ ಭಿನ್ನವಾಗಿ ಕಳೆದ ಕೆಲ ವರ್ಷಗಳಲ್ಲಿ ಭಾರತೀಯ ಸಿನೆಮಾಗಳು ರಾಷ್ಟ್ರೀಯತೆಯನ್ನು ಬಿಂಬಿಸುತ್ತಿರುವುದು ಸಂತಸದ ವಿಚಾರ ಎಂದು ಪುರಾಣಿಕ್ ತಿಳಿಸಿದರು. ವಸ್ತುನಿಷ್ಠೆ ಪ್ರಾಮುಖ್ಯತೆ ಪಡೆಯಬೇಕಿದೆ ಎಂದು ಹೇಳಿದರು. ಒಟಿಟಿ ಯಲ್ಲಿ ಭಾರತೀಯ ಸಿದ್ಧಾಂತಗಳಿಗೆ ಪೂರಕವಾಗಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದರು. ಇತಿಹಾಸ ಪೂರಕ ಚಿತ್ರಗಳನ್ನು ಮಾಡಲು ಪ್ರೊಡ್ಯೂಸರ್ಗಳು ಮುಂದೆ ಬಂದಾಗ ಬದಲಾವಣೆ ಸಾಧ್ಯ ಎಂದು ಅವರು ಹೇಳಿದರು.
ನಟ ಸುಚೇಂದ್ರ ಪ್ರಸಾದ್ ಮಾತನಾಡಿ, ಭಾರತೀಯತೆ, ಅಸ್ಮಿತೆಗೆ ಸಂಬಂಧಿಸಿದಂತೆ ಚಿತ್ರರಂಗ ಸಹ ತನ್ನದೇ ಆದ ಕೊಡುಗೆ ನೀಡುತ್ತಿದೆ. ಭಾರತೀಯತೆ ಎಂಬುದು ವಾಸ್ತವಿಕತೆ. ಅದನ್ನು ಕಲ್ಪನೆ ಅಥವಾ ಮರುಕಲ್ಪನೆ ಎಂಬುದು ತಪ್ಪಾಗುತ್ತದೆ. ಅಂತಹ ಅಖಂಡತೆ ಭಾರತೀಯತೆಗೆ ಇದೆ. ಕಲಿತ ವಿಚಾರಗಳ ಜೊತೆಗೆ ಕಲಿಯದುದರೆಡೆಗೆ ಚಿತ್ರರಂಗದಲ್ಲಿ ತುಡಿತ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಯಂ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಇತಿಹಾಸ ಅರಿಯದವರು ಇತಿಹಾಸ ಬರೆಯಲಾರರು. ಹೀಗಾಗಿ ವಿಕಾಸಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪರಂಪರೆ ಎಂದರೆ ಪರಮವಾದದ್ದನ್ನು ರಕ್ಷಿಸುವುದು ಎಂದರ್ಥ. ಸಿನೆಮಾವೂ ಈ ಪೊರೆಯುವ ಕೆಲಸವನ್ನು ಸಿನೆಮಾ ಮಾಡಬೇಕಿದೆ. ಈಗ ಉತ್ತಮ ಮಾಧ್ಯಮ ಉದ್ಯಮವಾಗಿರುವುದು ದುರಂತ. ಕೆಲ ಸಂದರ್ಭದಲ್ಲಿ ಇಲ್ಲಿ ಆದರ್ಶಗಳು ಅಸಡ್ಡೆಗೆ ಒಳಗಾಗುತ್ತಿದೆ. ಪ್ರಶಸ್ತಿ ಎಂದರೆ ತಕ್ಕ ಶಾಸ್ತಿ ಎಂದುಕೊಳ್ಳುತ್ತಾರೆ ಎಂಬುದು ವಾಸ್ತವ ಎಂದು ಅವರು ಹೇಳಿದರು. ಸಿನೆಮಾ ಎಂಬುದು ಒಂದು ಸಾಂಘಿಕ ಕೈಂಕರ್ಯ ಎಂದವರು ತಿಳಿಸಿದರು. ವಿಕಾರತೆ ಬಿಟ್ಟು ವಿಕಾಸದತ್ತ ಸಾಗಬೇಕಿದೆ ಎಂದು ತಿಳಿಸಿದರು.
ನಿರ್ದೇಶಕ, ಸ್ಕ್ರೀನ್ ರೈಟರ್ ಅಭಿಷೇಕ್ ಅಯ್ಯಂಗಾರ್ ಮಾತನಾಡಿ, ಸಿನೆಮಾ ರಂಗಭೂಮಿಯ ಮುಂದುವರಿದ ಭಾಗವಾಗಿದೆ. ಸಾಹಿತ್ಯವನ್ನು ಸೃಷ್ಟಿಸುವ ರೀತಿ ಬದಲಾಗಿ ಸಿನೆಮಾ ಅಥವಾ ಯಾವುದೇ ವಿಶುವಲ್ ಮಾಧ್ಯಮ ಕೆಲವು ಬಾರಿ ತಪ್ಪು ಸಂದೇಶಗಳನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಬಗೆಗಿನ ಚಿತ್ರಗಳ ನಿರ್ಮಾಣ ಸಂದರ್ಭದಲ್ಲಿ ಈ ಬಗ್ಗೆ ಎಚ್ಚರ ಅತ್ಯಗತ್ಯ. ರಾಷ್ಟ್ರೀಯತೆಯನ್ನು ಸಿನೆಮಾಗಳಲ್ಲಿ ಹೇಗೆ ತೋರಿಸುತ್ತವೆ ಎಂಬುದರ ಮೇಲೆ ಸಿನಿಮಾ ರಾಷ್ಟ್ರೀಯತೆ ನಿಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿನೆಮಾ ಎಂಬುದು ಹಲವರನ್ನು ಸೆಳೆಯುತ್ತದೆ. ಆದ್ದರಿಂದ ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿ ಉತ್ತಮ ಸಂದೇಶಗಳನ್ನು ತಲುಪಿಸುವ ಕೆಲಸವಾಗಬೇಕಿದೆ. ಸಿನೆಮಾ ತಂಡ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದಾಗ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ರಂಗಭೂಮಿ ಮತ್ತು ಸಿನಿಮಾ ನಡುವಿನ ಗೆರೆ, ಅಂತರ ಮಾಯವಾಗಬೇಕು ಎಂದು ಅಭಿಷೇಕ್ ತಿಳಿಸಿದರು.
ಸಮನ್ವಯಕಾರ ಸಮರ್ಥ ರಾವ್ ಮಾತನಾಡಿ, ಸಿನೆಮಾ ಭಾರತದಲ್ಲಿ ಬಹಭ ಶಕ್ತಿಯುತ ಮಾಧ್ಯಮ. ಇದರಲ್ಲಿ ಭಾರತೀಯತೆ ಕಾಣಿಸುವ ಪ್ರಮಾಣ ಎಷ್ಟು ಎಂಬುದನ್ನು ಅರಿಯಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.