ಮಂಜೇಶ್ವರ: ಕೇರಳ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಇಂದು ಪಕ್ಷದ ನಾಯಕರ ಸಹಿತ ಕಾರ್ಯಕರ್ತರ ಜೊತೆ ಬಂದು ಮಂಜೇಶ್ವರ ಬ್ಲಾಕ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಕುಂಬಳೆ ಕಣಿಪುರ ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸುರೇಂದ್ರನ್, ನಂತರ ಮಂಜೇಶ್ವರಕ್ಕೆ ತಲುಪಿ ನಾಮಪತ್ರ ಸಲ್ಲಿಸಿದರು. ಸ್ಥಳೀಯ ನಾಯಕರು ಮತ್ತು ಬಿಜೆಪಿ ಪದಾಧಿಕಾರಿಗಳು ಸುರೇಂದ್ರನ್ ಜೊತೆ ಇದ್ದರು. ಉದ್ಯಾವರ ಮಾಡ, ಅನಂತೇಶ್ವರ ಮತ್ತು ಕೀರ್ತೇಶ್ವರ ಕ್ಷೇತ್ರಗಳಿಗೆ ಭೇಟಿ ನೀಡಿ ನಂತರ ಪಕ್ಷ ಕಾರ್ಯಕರ್ತರ ಜಯಘೋಷಗಳೊಂದಿಗೆ ನಾಮಪತ್ರಿಕೆ ಸಲ್ಲಿಕೆಗೆ ತೆರಳಿದರು. ಸುರೇಂದ್ರನ್ ಜೊತೆಯಲ್ಲಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ, ಮಾಜಿ ಮಂಡಲ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ, ಹಿರಿಯ ನೇತಾರ ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್, ಅಡ್ವ. ನವೀನ್ರಾಜ್ ಇದ್ದರು.
ಈ ಸಂದರ್ಭ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಗಿಳಿವಿಂಡುವಿಗೂ ತೆರಳಿದ ಸುರೇಂದ್ರನ್, ಗೋವಿಂದ ಪೈ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಿಸಿದರು. ಕವಿನಿವಾಸ, ಗ್ರಂಥಾಲಯ, ಯಕ್ಷಗಾನ ಮಂದಿರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಮಾರಕ ಸಂದರ್ಶಕರ ಮಾಹಿತಿ ಪುಸ್ತಕದಲ್ಲಿ ತಮ್ಮ ಸವಿನೆನಪನ್ನು ಬರೆದರು. ಹರಿಶ್ಚಂದ್ರ ಮಂಜೇಶ್ವರ ಶಾಲು ಹೊದಿಸುವ ಮೂಲಕ ಸುರೇಂದ್ರನ್ ಅವರನ್ನು ಬರಮಾಡಿಕೊಂಡರು.
ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರವು ವೇಗವನ್ನು ಪಡೆದಿದ್ದು, ಮನೆ ಮನೆ ಸಂಪರ್ಕ, ಮತ ಯಾಚನೆಯೂ ಭರದಿಂದ ಸಾಗಿದೆ. ಎರಡು ದಿನಗಳ ಕಾಲ ಕ್ಷೇತ್ರದಲ್ಲಿರಲಿರುವ ಸುರೇಂದ್ರನ್ ನಿನ್ನೆ ಕೊನಿ ಕ್ಷೇತ್ರದಿಂದ ಆಗಮಿಸಿದ್ದರು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಕೆ. ಸುರೇಂದ್ರನ್ ಅವರಿಗೆ ಪ್ರಚಾರ ಕಾರ್ಯಕ್ಕೆ ಅನುಕೂಲವಾಗುವಂತೆ ಹೆಲಿಕಾಪ್ಟರ್ ಸೌಲಭ್ಯವನ್ನು ನೀಡಲಾಗಿದೆ. ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ವಿಜಯ ಸಾಧ್ಯತೆಯಿದೆ. ಕಳೆದ ಬಾರಿ ಕೇವಲ 89 ಮತಗಳಿಂದ ಪರಾಭವಗೊಂಡ ಸುರೇಂದ್ರನ್ ಅವರಿಗೆ ಈ ಬಾರಿ ಹೆಚ್ಚಿನ ಮತಗಳು ಬೀಳುವ ಸಾಧ್ಯತೆಗಳಿವೆ.
ಫ್ಯಾಶನ್ ಗೋಲ್ಡ್ ಅವ್ಯವಹಾರದಲ್ಲಿ ಆರೋಪಕ್ಕೊಳಪಟ್ಟ ಶಾಸಕ ಎಂ. ಸಿ. ಕಮರುದ್ದೀನ್ ಈ ಬಾರಿ ಸ್ಪರ್ಧಿಸುತ್ತಿಲ್ಲ. ಐಕ್ಯರಂಗ ಮತ್ತು ಎಡರಂಗದಿಂದ ಈ ಬಾರಿ ಹೊಸ ಮುಖಗಳು ಸ್ಪರ್ಧಿಗಿಳಿದಿವೆ. ಸಿಪಿಎಂ ಪಕ್ಷದ ವಿ.ವಿ. ರಮೇಶನ್ ಎಡರಂಗ ಅಭ್ಯರ್ಥಿಯಾಗಿದ್ದಾರೆ. ಮಾಜಿ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಆಶ್ರಫ್ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿದ್ದು, ಐಕ್ಯರಂಗದ ಸ್ಪರ್ಧಿಯಾಗಿದ್ದಾರೆ. ಎಂದಿನಂತೆ ಈ ಬಾರಿಯು ಪಿ.ಡಿ.ಪಿ ಪಕ್ಷವೂ ಚುನಾವಣೆಗಿಳಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.