ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಲು ಎರಡು ಮಕ್ಕಳ ನೀತಿಯನ್ನು ಜಾರಿಗೆ ತರುವ ಯಾವುದೇ ಪ್ರಸ್ತಾಪ ಪರಿಗಣನೆಯಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿಂದು ಸ್ಪಷ್ಟಪಡಿಸಿದೆ.
ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು ಕೆಳಮನೆಯಲ್ಲಿಂದು ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ದತ್ತಾಂಶದ ರೀತ್ಯ ದೇಶದಲ್ಲಿ 2005-06 ರಲ್ಲಿದ್ದ 2.7% ಗಳಷ್ಟು ಸಂತಾನೋತ್ಪತ್ತಿಯ ಪ್ರಮಾಣ ದರ 2015-16 ರ ಸಂದರ್ಭಕ್ಕೆ 2.2% ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.
28 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು 2.1% ಅಥವಾ ಅದಕ್ಕಿಂತ ಕಡಿಮೆ ಸಂತಾನೋತ್ಪತ್ತಿ ಮಟ್ಟವನ್ನು ತಲುಪುವ ಸಾಧನೆ ಮಾಡಿವೆ ಎಂದೂ ಸಚಿವರು ತಿಳಿಸಿದ್ದಾರೆ.
ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರುಲೋಕಸಭೆಯಲ್ಲಿ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ 2021 ನ್ನು ಮಂಡಿಸಿದರು. ಬಳಿಕ ಮಾತನಾಡಿದ ಅವರು, ಗಣಿ ಅತ್ಯಂತ ಮಹತ್ವದ ವಲಯವಾಗಿದೆ. ಭಾರತ 95% ಖನಿಜಗಳನ್ನು ಉತ್ಪಾದಿಸುತ್ತದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿರುವಂತೆಯೇ ಖನಿಜ ನಿಕ್ಷೇಪ ಸಂಪತ್ತನ್ನು ಭಾರತವೂ ಹೊಂದಿದೆ. ಆದಾಗ್ಯೂ ಆ ವಲಯದಲ್ಲಿ ಭಾರತದ ಪ್ರದರ್ಶನ ಗಣನೀಯವಾಗಿ ಕಡಿಮೆ ಇದೆ. ಭಾರತ 1.20 ಲಕ್ಷ ಕೋಟಿ ರೂಪಾಯಿ ಮೌಲ್ಯದ ಖನಿಜ ಉತ್ಪಾದಿಸಿದರೆ, 2.50 ಲಕ್ಷ ಕೋಟಿ ರೂಪಾಯಿ ಮೌಲ್ಯದ ಖನಿಜ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ವಿವರ ನೀಡಿದರು.
ಭಾರತದ ಬಳಿ ಅಂದಾಜು 501 ದಶಲಕ್ಷ ಟನ್ ಚಿನ್ನದ ನಿಕ್ಷೇಪವೂ ಇದೆ. ಪ್ರತಿ ವರ್ಷ 229 ಲಕ್ಷ ಕೋಟಿ ರೂಪಾಯಿ ಮೌಲ್ಯದ 983 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದಕ್ಕಿಂತ ದುಃಖದ ಸಂಗತಿ ಎಂದರೆ, ನಮ್ಮ ದೇಶದಲ್ಲಿ ವಿಶ್ವದ ನಾಲ್ಕನೇ ಅತಿ ದೊಡ್ಡ ಕಲ್ಲಿದ್ದಲು ನಿಕ್ಷೇಪ ಇದೆ. ಸಮೀಕ್ಷಾ ಅಂದಾಜಿನ ರೀತ್ಯ 326 ಶತಕೋಟಿ ಟನ್ ಕಲ್ಲಿದ್ದಲು ದೇಶದಲ್ಲಿದೆ. ಆದರೂ 2020 ರಲ್ಲಿ, 1.5 ಲಕ್ಷ ಕೋಟಿ ರೂಪಾಯಿ 248 ದಶಲಕ್ಷ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಕೃಷಿಯ ಬಳಿಕ ಅತಿ ಹೆಚ್ಚು ಉದ್ಯೋಗ ಕಲ್ಪಿಸುವ ಕ್ಷೇತ್ರ ಗಣಿಗಾರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಆತ್ಮನಿರ್ಭರತೆ ಸಾಧಿಸಲು ಈ ತಿದ್ದುಪಡಿ ಮಸೂದೆ ಮಂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸದನದಲ್ಲಿ ಮಸೂದೆಯ ಮೇಲೆ ಚರ್ಚೆ ನಡೆದ ಬಳಿಕ ಉತ್ತರ ನೀಡಿದ ಪ್ರಲ್ಹಾದ್ ಜೋಶಿ, ನಮ್ಮಲ್ಲೇ ಅಪಾರ ಪ್ರಮಾಣದ ನಿಕ್ಷೇಪ ಇರುವಾಗ ರಫ್ತು ಮಾಡಿಕೊಳ್ಳುವುದರಲ್ಲಿ ಅರ್ಥ ಇದೆಯೇ ಎಂದು ಪ್ರಶ್ನಿಸಿದ ಅವರು, ಇದರ ಸಂಪೂರ್ಣ ಆದಾಯ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು. ಬಳಿಕ ಮಸೂದೆಗೆ ಧ್ವನಿಮತದ ಅನುಮೋದನೆ ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.