ಮಂಜೇಶ್ವರ ಗೋವಿಂದ ಪೈ ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರದವರು. ಶ್ರೀಮಂತ ಮನೆತನದಲ್ಲಿ ಜನಿಸಿದ ಇವರು ಆಯ್ದುಕೊಂಡದ್ದು ಸಾಹಿತ್ಯ ಕ್ಷೇತ್ರವನ್ನು. ಸಾಹಿತ್ಯ ಕ್ಷೇತ್ರದಲ್ಲಿ ಸತತ ಐದು ದಶಕಗಳ ಕಾಲ ತಪಸ್ಸಾಧನೆಗೈದ ಇವರು ಖಂಡಕಾವ್ಯಗಳು, ಸಂಶೋಧನಾ ಗ್ರಂಥಗಳು, ವಿವಿಧ ಪೌರಾಣಿಕ, ಐತಿಹಾಸಿಕ ನಾಟಕಗಳು ಸಹಿತ ಮಕ್ಕಳ ಸಾಹಿತ್ಯವನ್ನು ಬರೆದು ಕನ್ನಡ ಸಾಹಿತ್ಯಲೋಕವನ್ನು ಬಹು ಶ್ರೀಮಂತಗೊಳಿಸಿದ್ದರು. ಇವರ ರಚಿಸಿದ ಸಾಹಿತ್ಯ ಕೃತಿಗಳು ಯುವ ಪೀಳಿಗೆಗೆ ಆಕರ ಗ್ರಂಥಗಳಾಗಿವೆ. ಕನ್ನಡ ಸಾಹಿತ್ಯ ಮತ್ತು ಚರಿತ್ರೆ ಸಂಶೋಧನಾ ಕ್ಷೇತ್ರಕ್ಕೂ ಇವರ ಕೃತಿಗಳು ಮಾದರಿಯಾಗಿದ್ದು, ಸ್ಪೂರ್ತಿ ನೀಡುತ್ತವೆ.
ಕನ್ನಡ ಸಾಹಿತ್ಯಲೋಕವನ್ನು ಪ್ರೀತಿಸುವ ಎಲ್ಲರಿಗೂ ಗೋವಿಂದ ಪೈಗಳ ಕವಿ ಕಾವ್ಯ ಪರಿಚಯವಿರುತ್ತದೆ. ಆದರೆ ಧಾವಂತದ ಯುಗದಲ್ಲಿ ಇಂತಹ ವ್ಯಕ್ತಿತ್ವವನ್ನು ಸ್ಮರಿಸಿ, ಅವರ ಸಾಹಿತ್ಯ ವಿಸ್ತಾರತೆಯನ್ನು ಕಂಡು ಪ್ರೇರಣೆ ಪಡೆದುಕೊಳ್ಳುವುದು ಮಾತ್ರವಲ್ಲ ಇತರರಿಗೂ ತಿಳಿಸುವುದು ಹೆಚ್ಚು ಜೌಚಿತ್ಯಪೂರ್ಣವೆನಿಸುತ್ತದೆ. ಮಂಗಳೂರು ನಗರದಿಂದ ಸುಮಾರು 35 ಕಿ.ಮೀ ದಕ್ಷಿಣಕ್ಕೆ ಕ್ರಮಿಸಿದರೆ ಮಂಜೇಶ್ವರ ಎಂಬ ಪೇಟೆ ಪ್ರದೇಶ ತಲುಪುತ್ತದೆ. ಪ್ರಸ್ತುತ ಕೇರಳ ರಾಜ್ಯದ ಭಾಗವಾಗಿರುವ ಇಲ್ಲಿ ನವೀಕೃತಗೊಂಡ ಕವಿಮನೆ, ಭವನಿಕಾ ರಂಗ ಮಂದಿರ ಸಹಿತ ಕವಿ ಮಂಜೇಶ್ವರರು ಸಾಹಿತ್ಯ ಕೃಷಿಯಲ್ಲಿ ತೊಡಗಿದ ಮನೆಯ ಮೇಲ್ಮಾಳಿಗೆ ನೋಡಬಹುದಾಗಿದೆ.
ಕವಿ ನಿವಾಸವು ಪ್ರಸ್ತುತ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧೀನದಲ್ಲಿದ್ದು, ಸಮುಚ್ಚಯವನ್ನು ಗಿಳಿವಿಂಡು ಎಂದು ಕರೆಯಲಾಗುತ್ತಿದೆ. ಗೋವಿಂದ ಪೈಗಳ ಬಗ್ಗೆ ಹಲವು ಸ್ವಾರಸ್ಯಕರ ಮತ್ತು ಕೌತುಕಪೂರ್ಣ ನೈಜಕತೆಗಳು ಕೇಳುವುದು ಒಂದು ಖುಷಿಯ ವಿಚಾರ. 19 ಶತಮಾನದಲ್ಲಿ ಜನಿಸಿ ಇಪ್ಪತ್ತನೆ ಶತಮಾನದ ಕೈಗಾರಿಕಾ ಕ್ರಾಂತಿ, ಬ್ರಿಟಿಷ್ಆಡಳಿತೆ ಮತ್ತದರ ವಸಾಹತುಶಾಹಿ ಧೋರಣೆ, ಭಾರತ ದೇಶದಲ್ಲಾಗುತ್ತಿದ್ದ ಸಾಮಾಜಿಕ ಕ್ರಾಂತಿ ಸಹಿತ ಸ್ವಾತಂತ್ರ್ಯ ಹೋರಾಟಗಳ ಮಧ್ಯೆ ಮಂಜೇಶ್ವರ ಗೋವಿಂದ ಪೈಯವರು ಸಾಹಿತ್ಯದ ಮೂಲಕ ಸಾಹಿತಿಕ ಸ್ವಾತಂತ್ರ್ಯವನ್ನು ಆಸ್ವಾದಿಸಿ, ಎಲ್ಲರಿಗೂ ಉಣಬಡಿಸಿದರು. ದೇಶದ ಉದಾತ್ತ ಚರಿತ್ರೆಯ ಅಂಶಗಳತ್ತ ಬೆಳಕು ಚೆಲ್ಲುವ ಹತ್ತು ಹಲವು ಸಂಶೋಧನಾತ್ಮಕ ಪ್ರಬಂಧಗಳನ್ನು ರಚಿಸಿದ ಇವರು ಬುದ್ಧ, ಮಹಾವೀರ, ಅಶೋಕ ಚಕ್ರವರ್ತಿ, ಹಲವು ರಾಜ ಮಹಾರಾಜರ ಜೀವನ ದರ್ಶನ ಮತ್ತು ಕಾಲನಿರ್ಣಯದ ಬಗ್ಗೆ ಶೋಧನೆಯಲ್ಲಿ ತೊಡಗಿದವರು. ಗ್ರೀಕ್, ಪಾಲಿ, ಸಂಸ್ಕೃತ, ಲ್ಯಾಟಿನ್ ಭಾಷೆಯ ಹಲವು ಕೃತಿಗಳತ್ತ ದೃಷ್ಟಿ ನೆಟ್ಟ ಇವರು ಆ ಭಾಷೆಗಳಲ್ಲಿ ಸ್ಥಳೀಯ ಭಾಷೆಯ ಪ್ರಭಾವದ ಬಗ್ಗೆಯೂ ಸಂಶೋಧನೆಯನ್ನು ಮಾಡಿದ್ದರು.
ವಿಚಾರಗಳ ಬಗ್ಗೆ ಗಹನ ಓದು, ವಿಮರ್ಶೆ, ಟಿಪ್ಪಣಿ ಮಾಡಿಕೊಳ್ಳುವ ಕಾರ್ಯ ಇವರಲ್ಲಿ ನಿರಂತರವಾಗಿ ಅಡಕವಾಗಿತ್ತು. ʼಇಂಡಿಯಾನʼ ಕೃತಿ ಇಂತಹ ಸಂಶೋಧನಾತ್ಮಕ ಪ್ರಬಂಧಗಳ ಗುಚ್ಛವಾಗಿದ್ದು ಹತ್ತು ಹಲವು ವಿಚಾರಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಬುದ್ಧನ ಕಡೆಗಾಲದ ಬಗ್ಗೆ ಬೆಳಕು ಚೆಲ್ಲುವ ಖಂಡ ಕಾವ್ಯ ವೈಶಾಖಿ, ಯೇಸು ಕ್ರಿಸ್ತನ ಬದುಕಿನ ಬಗ್ಗೆಗಿನ ಗೊಲ್ಗೊಥಾ, ಮಹಾತ್ಮಾ ಗಾಂಧಿಯ ಕೊನೆ ಗಳಿಗೆಯ ಬಗ್ಗೆ ರಚನೆಯಾಗಿರುವ ಭಾವನಾತ್ಮಕ ಖಂಡಕಾವ್ಯ ದೆಹಲಿ ಇವರ ಕಾವ್ಯ ರಚನೆಯ ಸೂಕ್ಷ್ಮ, ಆಳ ಮತ್ತು ವಿಸ್ತಾರತೆಗೆ ಸಾಕ್ಷಿಯಾಗಿದೆ.
ವೈಶಾಖಿ ಖಂಡಕಾವ್ಯ ರಚನೆಯ ಸಂದರ್ಭ ಶ್ರೀಲಂಕಾದ ಭಿಕ್ಷು ಓರ್ವರೊಂದಿಗೆ ಪಾಲಿ ಭಾಷೆಯಲ್ಲಿ ಪತ್ರ ವ್ಯವಹಾರದಲ್ಲಿ ತೊಡಗಿದ್ದ ಪೈಗಳು ಸಾಕಷ್ಟು ಮಾಹಿತಿಯನ್ನು ಪತ್ರಗಳ ಮೂಲಕವೇ ಪಡೆದರು ಎಂದು ಹೇಳಲಾಗುತ್ತದೆ. ಇವರು ಉಪಯೋಗಿಸುತ್ತಿದ್ದ ಊರುಗೋಲೊಂದು ಮಹಾತ್ಮಾ ಗಾಂಧಿಯ ಕೈ ತಲುಪಿದ್ದು ಮಾತ್ರವಲ್ಲದೆ ಅದೇ ಕೋಲನ್ನು ಮಹಾತ್ಮ ತಮ್ಮ ದಂಡಿಯಾತ್ರೆಯಲ್ಲಿ ಬಳಸಿದ್ದರು ಎನ್ನುವಂತಹ ಕೌತುಕಮಯ ವಿಚಾರಗಳು ಮಂಜೇಶ್ವರ ಪೈಯವರ ಜೀವನಚರಿತ್ರೆಯಿಂದ ತಿಳಿದುಕೊಳ್ಳಬಹುದಾಗಿದೆ.
ಮಂಜೇಶ್ವರ ಗೋವಿಂದ ಪೈ ಮಾರ್ಚ್ 23, 1883 ರಲ್ಲಿ ಮಂಜೇಶ್ವರದ ಕೊಂಕಣಿ ಗೌಡ ಸಾರಸ್ವತ ಬ್ರಾಹ್ಮಣ ಮನೆತನದಲ್ಲಿ ಜನಿಸಿದರು. ಮಂಗಳೂರಿನ ಸಾಹುಕಾರ ತಿಮ್ಮಪ್ಪ ಪೈ ಮತ್ತು ದೇವಕಿ ಅಮ್ಮ ಅವರ ಪ್ರಥಮ ಪುತ್ರನಾಗಿ ಜನಿಸಿದ ಗೋವಿಂದ ಪೈ, ತಮ್ಮ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಪೂರೈಸಿದರು. ತಮ್ಮ ಕಾಲೇಜು ಶಿಕ್ಷಣಕ್ಕೆ ಅಂದಿನ ಮದ್ರಾಸಿಗೆ ಶಹರಕ್ಕೆ ತೆರಳಿದ್ದ ಪೈ ತಮ್ಮ ತಂದೆಯ ಅಕಾಲಿಕ ನಿಧನದ ಕಾರಣ ಮರಳಬೇಕಾಯಿತು. 1909 ರಲ್ಲಿ ಶ್ರೀಕೃಷ್ಣ ಚರಿತ ಕೃತಿಯನ್ನು ರಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಪೈ, ನಂತರ ಹಲವು ಗದ್ಯ ಪದ್ಯ ರಚನೆಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಹಲವು ಖಂಡಕಾವ್ಯಗಳಲ್ಲಿ ಇವರ ಪ್ರಭಾಸ- ಶ್ರೀಕೃಷ್ಣ ಪರಮಾತ್ಮನ ಕಡೆಯ ಕಾಲದ ವರ್ಣನೆಯನ್ನು ತಿಳಿಸುವ ಕೃತಿಯೂ ಪ್ರಮುಖವಾಗಿದೆ. ಗೊಮ್ಮಟ ಜಿನಸ್ತುತಿ, ಹೆಬ್ಬೆರಳು ಮೊದಲಾದ ನಾಟಕ ಕಥೆಗಳನ್ನು ರಚಿಸಿರುವ ಪೈ ಬಹುಮುಖಿ ಸಾಹಿತ್ಯ ರಚನೆಗೆ ಉತ್ತಮ ಉದಾಹರಣೆಯಾಗಿದ್ದಾರೆ.
ಬಹುಭಾಷಾ ಪಂಡಿತ ಪೈ
ಮಂಜೇಶ್ವರ ಗೋವಿಂದ ಪೈಗಳು ತಮ್ಮ ಸಾಹಿತಿಕ ಕೃಷಿಯ ಜೊತೆಯಲ್ಲಿ ಹೆಚ್ಚಾಗಿ ಗುರುತಿಸಲ್ಪಡುವುದು ಅವರ ಬಹುಭಾಷಾ ಪಾಂಡಿತ್ಯಕ್ಕೆ. ಭಾರತೀಯ ಮತ್ತು ವಿದೇಶಿ ಭಾಷೆಗಳನ್ನು ಸೇರಿದಂತೆ ಒಟ್ಟು 25 ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡಿ ಪತ್ರ ವ್ಯವಹಾರ ಮಾಡುತ್ತಿದ್ದ ಇವರು ಮಲಯಾಳಂ, ಬಂಗಾಳಿ, ತೆಲುಗು, ತಮಿಳು ಭಾಷೆಯಲ್ಲೂ ಪ್ರಾವೀಣ್ಯ ಹೊಂದಿದ್ದರು. ಜಪಾನಿ ಭಾಷೆಯ ಹಲವು ಸಣ್ಣ ಕಥೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿರುವುದು ಇವರ ಭಾಷಾ ಪ್ರಾವೀಣ್ಯಕ್ಕೆ ಹಿಡಿದ ಕೈಕನ್ನಡಿ.
ಹೀಗೆ ಹಲವು ಭಾಷಾ ಸಾಹಿತ್ಯದಲ್ಲಿ ಕೈಯಾಡಿಸಿದ್ದ ಮಂಜೇಶ್ವರ ಗೋವಿಂದ ಪೈಯವರಿಗೆ ಪಂಡಿತವಕ್ಕಿ ಎಂಬ ಬಿರುದೂ ಇದೆ. ಇವರ ಸಾಹಿತಿಕ ಕೊಡುಗೆಗಳನ್ನು ಗುರುತಿಸಿ 1949 ರಲ್ಲಿ ಮದ್ರಾಸು ಸರ್ಕಾರ ಇವರಿಗೆ ರಾಷ್ಟ್ರಕವಿ ಬಿರುದು ನೀಡಿತ್ತು. 1951 ರಲ್ಲಿ ಗೋವಿಂದ ಪೈ ಬಾಂಬೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಾಹಿತ್ಯಾಸಕ್ತರನ್ನು, ಕನ್ನಡಾಭಿಮಾನಿಗಳನ್ನು ಕೈ ಬೀಸಿ ಕರೆಯುವ ಗಿಳಿವಿಂಡು ಸ್ಮಾರಕ
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ಅಧೀನದಲ್ಲಿರುವ ಗಿಳಿವಿಂಡು ಸ್ಮಾರಕವು ಕೇರಳ – ಕರ್ನಾಟಕ ರಾಜ್ಯಗಳ ಸಹಭಾಗಿತ್ವ ಮತ್ತು ಐ.ಒ.ಸಿ. ಸಹಾಯಧನದ ಮೂಲಕ ನವೀಕೃತಗೊಂಡಿದೆ. ಸಾಹಿತ್ಯಸಕ್ತರು, ಸಂಶೋಧನಾ ವಿದ್ಯಾರ್ಥಿಗಳು, ಕಲಾವಿದರ ಸಹಿತ ಜನಸಾಮಾನ್ಯರನ್ನು ಕೈ ಬೀಸಿ ಕರೆಯುವ ಗೋವಿಂದ ಪೈ ಅವರ ಕವಿ ಮನೆಯೂ ತನ್ನ ಕೆಲ ವಿಶೇಷತೆಗಳಿಂದ ಎಲ್ಲರನ್ನು ಆಕರ್ಷಿಸುತ್ತದೆ.
ಗಿಳಿವಿಂಡು ಪರಿಸರವು ತೆಂಗು, ಹಲಸು, ಮಾವು ಸಹಿತ ವಿವಿಧ ಪ್ರಬೇಧದ ಮರಗಳಿಂದ ಹಸುರು ಹೊದ್ದು ಕಂಗೊಳಿಸುತ್ತದೆ, ಕವಿ ಮನೆ ಸಮೀಪಿಸುತ್ತಿದ್ದಂತೆ ಕಾಣುವ ಕವಿ ಪ್ರತಿಮೆ ಭಾವನೆ ಮತ್ತು ಕಲಾ ವಿಸ್ಮಯ ಲೋಕಕ್ಕೆ ಕೊಂಡೊಯ್ಯುತ್ತದೆ. ಕವಿ ಮನೆ ಒಳಕ್ಕೆ ಹೊಕ್ಕಾಗ ಕೊಂಚ ವಿಶಾಲವಾದ ಕೊಠಡಿಯನ್ನು ಕಾಣಬಹುದಾಗಿದೆ. ಇಲ್ಲಿ ಕವಿ ಉಪಯೋಗಿಸುತ್ತಿದ್ದ ಕುರ್ಚಿ, ಮೇಜು, ಸಹಿತ ಊರು ಗೋಲನ್ನು ನೋಡಬಹುದು. ರಾಷ್ಟ್ರಕವಿ ಪುರಸ್ಕೃತರಾದ ಸಂದರ್ಭ ಸಿಕ್ಕ ಅಭಿನಂದನಾ ಕಾಣಿಕೆಯನ್ನು ಇಲ್ಲಿ ನೋಡಬಹುದಾಗಿದೆ. ಮನೆ ಮೇಲ್ಮಾಳಿಗೆಯು ಪೈ ಗಳು ಹೆಚ್ಚು ಪ್ರೀತಿಸಿ, ಸಂಶೋಧನಾ ಕಾರ್ಯದಲ್ಲಿ ಹೆಚ್ಚಾಗಿ ತೊಡಗುತ್ತಿದ್ದ ಸ್ಥಳ, ದೂರದ ಅರಬ್ಬಿ ಕಡಲನ್ನು ದಿಟ್ಟಿಸಿ, ಜ್ಞಾನದ ಹೆದ್ದರೆಗಳಲ್ಲಿ ತೇಲಿ ಸಾಗುತ್ತಿದ್ದ ಪೈ ಬದುಕಿನ ಹಲವು ಆಯಾಮಗಳನ್ನು ನಾವಿಲ್ಲಿ ತಿಳಿದುಕೊಳ್ಳಬಹುದು. ಇದರ ಹೊರತಾಗಿ ಪಾರ್ತಿಸುಬ್ಬ ಯಕ್ಷಗಾನ ಕೇಂದ್ರವೂ ಇಲ್ಲಿನ ವಿಶೇಷತೆಗಳಲ್ಲೊಂದು, ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆ, ಹಲವು ವೇಷ, ಯಕ್ಷ ಕಲಾವಿದರ ಪರಿಚಯ ನೀಡುವ ಕೇಂದ್ರವಾಗಿದೆ ಇದು. ಸಭಾ ವೇದಿಕೆಯು ಇಲ್ಲಿನ ವಿಶೇಷತೆಗಳಲ್ಲೊಂದು. ಕವಿಮನೆಯ ಗೋಡೆಗಳೆಲ್ಲವೂ ವರ್ಲಿ ಕಲಾಚಿತ್ತರದಿಂದ ಕೂಡಿದ್ದು, ಸಾಹಿತಿಕ ಕೇಂದ್ರಕ್ಕೆ ಮೆರಗು ನೀಡುತ್ತವೆ. ಇದೇ ಕೇಂದ್ರದಲ್ಲಿ ಮಂಜೇಶ್ವರ ಪೈಗಳ ಹಲವು ಕೃತಿಗಳು, ಸಾಹಿತಿಕ ಪುಸ್ತಕ ಪ್ರಪಂಚವೇ ಇದೆ. ಗ್ರಂಥಾಲಯದಲ್ಲಿ ಡಿಜಿಟಲೀಕರಣಗೊಂಡ ಪುಸ್ತಕಗಳನ್ನು ಇರಿಸಲಾಗಿದೆ. ಪೈ ಅವರ ಮೂಲಕೃತಿಗಳು ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿದ್ದು ಸಂಶೋಧನಾ ಕೇಂದ್ರವನ್ನು ಮಣಿಪಾಲ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ತೆರೆಯಲಾಗಿದೆ.
ಎರಡು ಅತಿಥಿ ಗೃಹಗಳಿದ್ದು, ದೂರದಿಂದ ಆಗಮಿಸುವ ಅತಿಥಿ ಅಭ್ಯಾಗತರಿಗೆ ಉಳಕೊಳ್ಳುವ ವ್ಯವಸ್ಥೆ ಇದೆ. ಭವನಿಕಾ ರಂಗಮಂದಿರ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಸಾಹಿತಿಕ ಸಂಜೆ, ಜಾನಪದ ಕಾಲಪ್ರಕಾರಗಳ ವೇದಿಕೆಯಾಗಿರುವ ಭವನಿಕಾ ವಾರಾಂತ್ಯದ ಸುಂದರ ಕಲಾ ತಾಣವೂ ಹೌದು. ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು ಮಂಜೇಶ್ವರದ ಜ್ಞಾನ ದೇಗುಲಕ್ಕೆ ಆಗಮಿಸಿ, ಮಂಜೇಶ್ವರರ ಸಾಹಿತಿಕ ಸಾಧನೆಯನ್ನು ಕಂಡು ಅಭಿಮಾನ ಪಡಬೇಕಿದೆ. ಗಿಳಿವಿಂಡು ಕೇಂದ್ರವು ಭಾವಿ ಕನ್ನಡ ಮನಸುಗಳನ್ನು ಸಾಹಿತಿಕ ಸಾಂಸ್ಕೃತಿಕವಾಗಿ ಪ್ರೋತ್ಸಾಹಿಸಲಿ, ಆ ಮೂಲಕ ಕನ್ನಡ ಭಾಷಾ ಗೌರವ ಪ್ರೀತಿ ಹೆಚ್ಚಲಿ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.