ದೇವರ ಕಾಡು ಪ್ರಾಚೀನ ಸಂಸ್ಕೃತಿಯ ಪ್ರತೀಕ. ದೇಶದ ಹಲವೆಡೆ ಇಂತಹ ಪ್ರಕೃತಿ ಸಂಸ್ಕೃತಿಯ ಪ್ರಾಚೀನ ದ್ಯೋತಕಗಳನ್ನು ಇಂದಿಗೂ ಕಾಣಬಹುದು. ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ, ಕೇರಳದಲ್ಲಿ ಇಂತಹ ಬನ ಸಂಸ್ಕೃತಿಯ ಕುರುಹುಗಳಾದ ದೇವರಕಾಡುಗಳು ಹೇರಳವಾಗಿವೆ. ವನ, ಬನ, ಕಾವು ಎಂಬ ಹಲವು ಹೆಸರುಗಳಿಂದ ಕರೆಯಲ್ಪಡುವ ದೇವರಕಾಡುಗಳು ಕರಾವಳಿ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಸಹಿತ ಕಲ್ಯಾಣ ಕರ್ನಾಟಕದ ಕೆಲ ಭಾಗಗಳಲ್ಲೂ ಇವೆ. ಆಧುನಿಕತೆಯೊಂದಿಗೆ ಹೆಚ್ಚಿದ ಜನಸಾಂದ್ರತೆ, ನಗರೀಕರಣದಿಂದ ಇಂತಹ ದೇವರಕಾಡುಗಳು ಅತಿಕ್ರಮಣವಾಗಿ ಅವುಗಳ ಸಂಖ್ಯೆ ಇಳಿಮುಖವಾಗಿ, ವನಗಳ ವಿಸ್ತೀರ್ಣವೂ ಕಡಿಮೆಯಾಗಿದೆ. ರಾಜ್ಯದ ಪ್ರಮುಖ ಸಮುದಾಯಗಳು ಇಂತಹ ದೇವರಕಾಡುಗಳನ್ನು ತಮ್ಮ ಆಚರಣೆ, ಸಂಸ್ಕೃತಿಯ ಕುರುಹುಗಳಾಗಿ ಧಾರ್ಮಿಕ ಆಚರಣೆಗಳ ಭಾಗವಾಗಿ ಇವುಗಳನ್ನು ಉಳಿಸಿಕೊಂಡು ಬಂದಿವೆ. ಆಧುನಿಕ ಕಾಲಘಟ್ಟದಲ್ಲಿ ಸಾಮಾಜಿಕ ಅರಣ್ಯೀಕರಣದ ಮೂಲ ಮಾದರಿಯಂತೆ ಕಾಣುವ ಈ ದೇವರಕಾಡುಗಳ ಸಂರಕ್ಷಣೆಗೆ ಸರಕಾರ, ಸಂಬಂಧಪಟ್ಟ ಇಲಾಖೆ ಹೆಚ್ಚಿನ ಗಮನ ಹರಿಸಿ, ಇವುಗಳನ್ನು ಉಳಿಸಿ ಬೆಳೆಸಬೇಕಾಗಿರುವುದು ಇಂದಿನ ಅಗತ್ಯತೆಯೂ ಹೌದು.
ಸಿರಿ ಚಂದನವನ ಎಂದೇ ಖ್ಯಾತಿವೆತ್ತ ಕರುನಾಡಿನಲ್ಲಿ ಕಾನ ಮತ್ತು ದೇವರಕಾಡುಗಳಿಗೆ ಹೆಚ್ಚಿನ ಮಹತ್ವ ಮತ್ತು ಪ್ರಾಶಸ್ತ್ಯವಿದೆ. ಸ್ಥಳೀಯ ದೈವಿಕತೆ, ಆರಾಧನೆಗೆ ಸ್ಪೂರ್ತಿಯಾಗಿರುವ ಈ ಕಾನನಗಳು ಭೂತಪ್ಪ, ಚೌಡಮ್ಮ, ಮೈಲಾರ, ಭೈರವ ಮತ್ತು ಗೋವರ್ಧನ ಮೊದಲಾದ ದೈವಿಕ ಆಚರಣೆಗಳಿಗೂ ಮೂಲವಾಗಿವೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 1476 ರಷ್ಟು ಇಂತಹ ದೇವರಕಾಡುಗಳಿವೆ ಎಂದು ಸಂಶೋಧನಾ ವರದಿಯೊಂದು ಬೆಳಕು ಚೆಲ್ಲಿದೆ. ಬೇವು, ಹೆಬ್ಬಲಸು, ಸಾಗುವನಿ, ಮಹೋಗನಿ ಮೊದಲಾದ ಮರಗಳನ್ನು ಹೊಂದಿರುವ ಕಾವುಗಳು ಪರಿಶುದ್ಧ ಗಾಳಿಯೊಂದಿಗೆ, ಪರಿಸರ ಸಮತೋಲನದಲ್ಲೂ ಪ್ರಮುಖ ಪಾತ್ರ ವಹಿಸುತ್ತಿವೆ. ವಿವಿಧ ಪ್ರಬೇಧದ ಪಕ್ಷಿ ಸಂಕುಲಗಳಿಗೂ ಆಶ್ರಯವಾಗಿರುವ ಕಾವು ಅಥವಾ ಸೆಕ್ರೇಡ್ಗ್ರೋವ್ಸ್ಸಣ್ಣ ಪ್ರಬೇಧದ ಪ್ರಾಣಿಗಳಿಗೂ ಆಶ್ರಯತಾಣ.
ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ, ಉಡುಪಿ ಮೊದಲಾದೆಡೆ ನಾಗಬನಗಳು ವಿಶೇಷವಾಗಿದ್ದರೆ, ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಬನಗಳಿದ್ದು ಶಾಸ್ತಾರ ಅಯ್ಯಪ್ಪ ಸ್ವಾಮಿಯ ಆರಾಧನೆಯ ಮೂಲಗಳಾಗಿವೆ. ಮಧ್ಯ ಕರ್ನಾಟಕ ಶಿವಮೊಗ್ಗ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಕಾನನಗಳು ಚೌಡಮ್ಮ, ಭೈರವನ ಮೂಲವೆಂದು ಗ್ರಾಮಸ್ಥರ ನಂಬಿಕೆ. ಹಲವು ಜೌಷಧಿ ಸಸ್ಯಗಳ ಸಂಗ್ರಹವಾಗಿಯೂ ದೇವರಕಾಡುಗಳು ಕಾರ್ಯನಿರ್ವಹಿಸುತ್ತಿದ್ದು ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಸಹಾಯಿಸುತ್ತವೆ. ಅಮೂಲ್ಯ ಬನ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಕಾರ್ಯವೂ ಆಗಬೇಕಿದೆ. ನಗರೀಕರಣ, ಹೆಚ್ಚುತ್ತಿರುವ ಜನಸಾಂದ್ರತೆಯಿಂದ ನಶಿಸುತ್ತಿರುವ ದೇವರಕಾಡುಗಳ ರಕ್ಷಣೆಯ ಹೊಣೆಯೂ ಗ್ರಾಮೀಣ ಸಂಘ ಸಂಸ್ಥೆಗಳು, ಸ್ಥಳೀಯಾಡಳಿತ ಸಹಿತ ಸರ್ಕಾರಕ್ಕಿದೆ.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇಂತಹ ಅಮೂಲ್ಯ ವನಗಳ ಸಂರಕ್ಷಣೆ, ಅದರ ಬಗ್ಗೆ ಕಾಳಜಿ ಮತ್ತು ಪ್ರೀತಿಯನ್ನು ಎಲ್ಲರೂ ಬೆಳೆಸಿಕೊಳ್ಳುವಂತಾಗಬೇಕು. ಪರಿಸರ ಸಮತೋಲನವನ್ನು ಕಾಪಾಡುವ ದೇವರಕಾಡುಗಳು ಸಂಸ್ಕೃತಿ-ಪ್ರಕೃತಿ ಸಮದೃಷ್ಠಿಯ ದ್ಯೋತಕಗಳು. ರಾಮಾಯಣ ಮಹಾಭಾರತದಲ್ಲಿ ಉಲ್ಲೇಖವಾಗಿರುವ ಅಶೋಕವನ, ಮಹಾವನ, ಜೇತವನ, ಸಾರಂಗವನದಂತೆ ದೇವರಕಾಡುಗಳ ಧರ್ಮ ಸಂಸ್ಕೃತಿಯ ಪ್ರೇರಕಶಕ್ತಿಯೂ ಹೌದು.
ದೇಶದಲ್ಲಿ ದೇವರಕಾಡುಗಳು ಬೇರೆ ಬೇರೆ ವಿಸ್ತೀರ್ಣದಲ್ಲಿವೆ. ಹಲವೆಡೆ ಇರುವ ಇಂತಹ ದೇವರಕಾಡು ವನಗಳು ಸ್ಥಳೀಯ ಗ್ರಾಮ ಮತ್ತು ಸಮುದಾಯಗಳಿಂದ ಸಂರಕ್ಷಣೆಯಲ್ಲಿದೆ. ಇಂತಹ ಸಂರಕ್ಷಿತ ವನಮಾಲಿ ಸಂಸ್ಕೃತಿಯಲ್ಲಿ ಯಾವುದೇ ಬೇಟೆ, ಮರ ಕಡಿಯುವುದು, ಕಟ್ಟಿಗೆ ಸಂಗ್ರಹಕ್ಕೆ ಹಿಂದಿನಿಂದಲೂ ಆಸ್ಪದವಿಲ್ಲ. ಇದರ ಹೊರತಾಗಿ ಜೇನು ಸಂಗ್ರಹ ಮತ್ತು ಮುರಿದ ಬಿದ್ದ ಮರಗಳ ಸಂಗ್ರಹ ಉಪಯೋಗವನ್ನು ಕೆಲವೆಡೆ ಮಾಡಲಾಗುತ್ತದೆ. 2002 ರಲ್ಲಿ ಸಂಸತ್ತಿನಲ್ಲಿ ಜ್ಯಾರಿಗೆ ಬಂದಿದ್ದ ವನ್ಯಜೀವಿ ಸಂರಕ್ಷಣಾ ಕಾನೂನಿನಡಿ – ದೇವರಕಾಡು ಸಂರಕ್ಷಣೆಯ ಬಗ್ಗೆಯೂ ವಿವರಿಸಲ್ಪಟ್ಟಿದ್ದು, ದೇವರಕಾಡುಗಳನ್ನು ಸಂರಕ್ಷಿಸುತ್ತಿರುವ ಸಮುದಾಯ ಗ್ರಾಮೀಣರನ್ನು ಗೌರವದಿಂದ ಕಂಡು ಅವರ ಕಾರ್ಯಕ್ಕೂ ರಕ್ಷಣೆ ಒದಗಿಸಬೇಕು ಎಂದು ಹೇಳಲ್ಪಟ್ಟಿದೆ. ಹಿಂದೂ, ಬೌದ್ಧ, ಜೈನ ಆಚರಣೆಯಗಳಲ್ಲೂ ದೇವರಕಾಡು, ವನಗಳಿಗೆ ಹೆಚ್ಚಿನ ಮಹತ್ವವಿದೆ. ಸಾರನಾಥದ ಸಾರಂಗವನ ಪ್ರಾಚೀನ ಬೌದ್ಧರ ವನ ರಕ್ಷಣೆಯ ಪ್ರತೀಕ. ವೃಕ್ಷಾಯುರ್ವೇದ ಸೈದ್ಧಾಂತಿಕೆಯಲ್ಲೂ ಪವಿತ್ರ ವನಗಳ ಬಗ್ಗೆ ಮಾಹಿತಿಯಿದ್ದು, ಗಿಡಮೂಲಿಕೆಗಳ ಆಗರ ಎಂದು ಬಿಂಬಿಸಲ್ಪಟ್ಟಿದೆ. ಪ್ರಾಚೀನಕಾವ್ಯಗಳಲ್ಲೂ ದೇವರ ಬನಗಳ ಬಗ್ಗೆ ಉಲ್ಲೇಖಗಳಿವೆ. ಕಾಳಿದಾಸನ ವಿಕ್ರಮೋರ್ವಶೀಯದಲ್ಲಿ ಇಂತಹ ಹಲವು ಪವಿತ್ರ ಬನಗಳ ಬಗ್ಗೆ ಹೇಳಲ್ಪಟ್ಟಿದೆ. ನಕ್ಷತ್ರವನ, ತಪೋವನ, ಶ್ರೀವನ, ಮಹಾವನಗಳು ಇಂತಹ ಬನ ಸಂಸ್ಕೃತಿ ಪ್ರತೀಕಗಳೇ. ಕರ್ನಾಟಕದಲ್ಲಿ ಇಂತಹ ಪವಿತ್ರ ದೇವರಕಾಡುಗಳ ಸಂಖ್ಯೆ ೧೪೨೪ ಇದ್ದರೆ, ಕೇರಳದಲ್ಲಿ ೨೦೦೦ ದಷ್ಟಿದೆ. ಮಹರಾಷ್ಟದಲ್ಲಿ 1600 ರಷ್ಟಿದೆ. ತಮಿಳುನಾಡಿನಲ್ಲಿ ಕೋವಿಲ್ಕಾಡ್ಎಂದು ಕರೆಯಲ್ಪಡುವ ಇವುಗಳ ಸಂಖ್ಯೆ 500 ಇದೆ. ಈಶಾನ್ಯ ಭಾರತದಲ್ಲೂ ದೇವರಕಾಡುಗಳಿದ್ದು ಗುಂಪಾರಣ್ಯ ಎಂದು ಕರೆಯಲ್ಪಡುತ್ತವೆ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.