ಸಾಂಕ್ರಾಮಿಕ ರೋಗ ಕೊರೋನಾವೈರಸ್ ಭಾರತವನ್ನು ಅಪ್ಪಳಿಸಿದ ಸಂದರ್ಭದಲ್ಲಿ ನಾಗರಿಕರನ್ನು ಕಾಪಾಡುವ ಸಲುವಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಅಖಾಡಕ್ಕೆ ಧುಮುಕಿ ಜನಸೇವೆಯಲ್ಲಿ ನಿರತರಾದವರು ಆರೋಗ್ಯ ಕಾರ್ಯಕರ್ತರು. ಕಳೆದ ಒಂದು ವರ್ಷಗಳಿಂದ ಆರೋಗ್ಯ ಕಾರ್ಯಕರ್ತರ ಮೇಲಿನ ನಮ್ಮ ಗೌರವ ಇಮ್ಮಡಿಗೊಂಡಿರುವುದಕ್ಕೆ ಅವರ ನಿಸ್ವಾರ್ಥ ಸೇವೆಯೇ ಕಾರಣ, ನಾವಿಂದು ಮಹಾಮಾರಿಯಿಂದ ತಪ್ಪಿಸಿಕೊಂಡು ಸುರಕ್ಷಿತರಾಗಿದ್ದೇವೆ ಎಂದರೆ ಅದರಲ್ಲಿ ಅವರ ಪಾತ್ರ ಸಾಕಷ್ಟಿದೆ. ಪ್ರಸ್ತುತ ನಡೆಯುತ್ತಿರುವ ಲಸಿಕೆ ಅಭಿಯಾನವನ್ನೂ ಯಶಸ್ವಿಗೊಳಿಸುವಲ್ಲಿ ಆರೋಗ್ಯ ಕಾರ್ಯಕರ್ತರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಅಂತಹ ಆರೋಗ್ಯ ಕಾರ್ಯಕರ್ತರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಅಂತಹುದೇ ಒರ್ವ ನಿಸ್ವಾರ್ಥ ಆರೋಗ್ಯ ಸೇವಕಿಯ ಸೇವೆಯ ಬಗ್ಗೆ ನಾವಿಂದು ತಿಳಿದುಕೊಳ್ಳಲೇ ಬೇಕು.
ಆಗ್ರಾ ಮೂಲದ ಮಾಧುರಿ ಮಿಶ್ರಾ ಅವರು 1983 ರಲ್ಲಿ ಆರೋಗ್ಯ ಕಾರ್ಯಕರ್ತರಾಗುವ ಸಲುವಾಗಿ ತಮ್ಮ ಕುಟುಂಬ ಮತ್ತು ಸಮಾಜವನ್ನು ಧಿಕ್ಕರಿಸಿದ್ದರು. ಆ ಸಮಯದಲ್ಲಿ ಸಿಡುಬು ಮುಕ್ತ ದೇಶಕ್ಕಾಗಿ ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಕೇವಲ ಐದು ವರ್ಷಗಳಾಗಿತ್ತು. ಅಂದಿನಿಂದ ಇಂದಿನವರೆಗೆ ಅಂದರೆ ಬರೋಬ್ಬರಿ 30 ವರ್ಷಗಳ ಕಾಲ ಈಗ 60 ರ ಹರೆಯದ ಮಾಧುರಿ ಪ್ರತಿದಿನ 8 ಕಿ.ಮೀ ದೂರ ನಡೆದು ದೂರದ ಹಳ್ಳಿಗಳನ್ನು ತಲುಪಿ, ಹೆಚ್ಚು ದುರ್ಬಲರಿಗೆ ರೋಗ ನಿರೋಧಕ ಶಕ್ತಿ ಮತ್ತು ಆರೋಗ್ಯ ಸೇವೆಯ ಕನಿಷ್ಠ ಪ್ರವೇಶವನ್ನು ಖಾತ್ರಿಪಡಿಸುತ್ತಾ ಬರುತ್ತಿದ್ದಾರೆ. ಆಕೆಯ ಪ್ರವೇಶವನ್ನು ನಿಷೇಧಿಸಲ್ಪಟ್ಟ ಸಂದರ್ಭದಲ್ಲೂ ಎದೆಗುಂದದೆ ಆಕೆ ಜನರಿಗೆ ಸೇವೆ ನೀಡುವುದನ್ನು ಮುಂದುವರೆಸಿದ್ದಾರೆ.
“ಮೊದಲ ಕೆಲವು ವರ್ಷಗಳು ತುಂಬಾ ಕಠಿಣವಾಗಿದ್ದವು. ಜನರು ರೋಗನಿರೋಧಕ ಶಕ್ತಿಯನ್ನು ಪಡೆಯಲು ಬಯಸುತ್ತಿರಲಿಲ್ಲ. ಲಸಿಕೆಗಳ ಬಗ್ಗೆ ತಪ್ಪು ಕಲ್ಪನೆ ಮತ್ತು ವದಂತಿಗಳು ಗ್ರಾಮಗಳನ್ನು ವೇಗವಾಗಿ ತಲುಪುತ್ತಿದ್ದವು. ಲಸಿಕೆಗಳು ಬಂಜೆತನ, ಜ್ವರಕ್ಕೆ ಕಾರಣವಾಗುತ್ತದೆ ಅಥವಾ ಜನರನ್ನು ರೋಗಿಗಳನ್ನಾಗಿ ಮಾಡುತ್ತದೆ ಎಂದು ಜನರು ಆತಂಕಗೊಳ್ಳುತ್ತಿದ್ದರು. ಆದರೆ ನಾನು ನಡೆಯುತ್ತಲೇ ಇದ್ದೆ, ಹಳ್ಳಿಗಳಲ್ಲಿ ನಿಲ್ಲುತ್ತಿದ್ದೆ ಮತ್ತು ಮಕ್ಕಳಿಗೆ ಲಸಿಕೆ ಹಾಕುತ್ತಿದ್ದೆ. ಅದನ್ನು ನಾನು ಮಾಡಲೇ ಬೇಕಾಗಿತ್ತು. ಕೆಲವೊಮ್ಮೆ, ಜನರು ಕೆಟ್ಟದಾಗಿ ವರ್ತಿಸುತ್ತಿದ್ದರು. ಕೆಲವರು ನನ್ನನ್ನು ಪ್ರವೇಶಿಸಲು ಬಿಡುತ್ತಿರಲಿಲ್ಲ. ನಾನು ಅವರಿಗೆ ಮನವರಿಕೆ ಮಾಡುವವರೆಗೂ ಬಿಡುತ್ತಿರಲಿಲ್ಲ” ಎಂದು ಮಾಧುರಿ ಹೇಳುತ್ತಾರೆ.
ಸಹಾಯಕ ಶುಶ್ರೂಷಕಿಯಾಗಲು ಆಕೆ ಸಾಕಷ್ಟು ಕಷ್ಟಪಟ್ಟಿದ್ದರು. 1978 ರಲ್ಲಿ, ಅವರಳ ತಂದೆ ನಿಧನರಾದ ಬಳಿಕ ಕುಟುಂಬದಲ್ಲಿ ಬೇರೆ ಯಾರೂ ಅವರು ಅಧ್ಯಯನ ಮಾಡುವುದನ್ನು ಬಯಸಲಿಲ್ಲ. ಹೀಗಾಗಿ ತನ್ನ ವಿದ್ಯಾಭ್ಯಾಸಕ್ಕೆ ಮತ್ತು ಕುಟುಂಬವನ್ನು ಫೋಷಿಸಲು ಆಕೆ ಟೈಲರಿಂಗ್ ವೃತ್ತಿ ಮಾಡಬೇಕಾಯಿತು.
“ಅಧ್ಯಯನ ಪ್ರವೇಶಿಸಿದ ನಂತರ, ನಾನು 10 ವರ್ಷಗಳ ಕಾಲ ಬಹ್ ಬ್ಲಾಕ್ನಲ್ಲಿ ಸೇವೆ ಸಲ್ಲಿಸಿದೆ. ನನ್ನ ಸಮಯದಲ್ಲಿ ರೋಗನಿರೋಧಕ ವ್ಯಾಪ್ತಿ 90% ವರೆಗೆ ಏರಿತು. ನಂತರ, ನಾನು ಫತೇಹಾಬಾದ್ ಬ್ಲಾಕ್ನಲ್ಲಿ 20 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅಲ್ಲಿ, ನಾನು 90% ಅನ್ನು ಮೀರಿ ರೋಗನಿರೋಧಕ ವ್ಯಾಪ್ತಿಯನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಒಂದು ದಿನವೂ ನಾನು ಕಚೇರಿಯಲ್ಲಿ ಕುಳಿತುಕೊಳ್ಳಲಿಲ್ಲ” ಎಂದು ಅವರು ಹೇಳುತ್ತಾರೆ
ಅವರು ಮಾಡಿದ ಕೆಲಸಕ್ಕೆ ಫಲ ಸಿಗುವ ಕಾಲ ಬಂದಿತು. “ಅವರು ಸ್ಟಾರ್ ಇಮ್ಯುನೈಸೇಶನ್ ಪ್ರಚಾರಕರಾಗಿ ಹೊರಹೊಮ್ಮಿದರು. ಅವರು ಕೆಲಸ ಮಾಡಿದಲ್ಲೆಲ್ಲಾ ರೋಗನಿರೋಧಕ ಶಕ್ತಿಯಲ್ಲಿ ಭಾರಿ ಏರಿಕೆ ಕಂಡಿತು. ಅವರು ಕೇವಲ ಒಂದೇ ದಿನ ಕೂಡ ರಜೆ ತೆಗೆದುಕೊಂಡಿಲ್ಲ” ಎಂದು ಆಗ್ರಾ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಆರ್.ಸಿ.ಪಾಂಡೆ ಹೇಳುತ್ತಾರೆ.
ನಂತರ ಅವರನ್ನು ಆರೋಗ್ಯ ಸಂದರ್ಶಕರನ್ನಾಗಿ ಮಾಡಲಾಯಿತು (ಸಮುದಾಯ ಸಾರ್ವಜನಿಕ ಆರೋಗ್ಯ ಶುಶ್ರೂಷೆಯಲ್ಲಿ ಹೆಚ್ಚುವರಿ ತರಬೇತಿಯೊಂದಿಗೆ ನೋಂದಾಯಿತ ನರ್ಸ್ ಅಥವಾ ಸೂಲಗಿತ್ತಿ). ಅವರು ಸಾವಿರಾರು ಮಕ್ಕಳಿಗೆ ಲಸಿಕೆ ಹಾಕಿದರು. ತಮ್ಮ ಕಾರ್ಯಕ್ಷೇತ್ರದಲ್ಲಿ ಅವರೊಬ್ಬ ಯೋಧೆಯಂತೆ ದುಡಿದರು, ಎಂದಿಗೂ ಹಿಂದೆ ಹೆಜ್ಜೆ ಇಡಲಿಲ್ಲ. ಕೋವಿಡ್ ದೇಶವನ್ನು ಅಪ್ಪಳಿಸುವ ವೇಳೆಯೂ ಅವರು ಯೋಧೆಯಂತೆಯೇ ದುಡಿದರು.
“ಪ್ರಸ್ತುತ ಅವರು ನಿವೃತ್ತಿಯ ಸನಿಹದಲ್ಲಿದ್ದರೂ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲವೊಮ್ಮೆ 12 ಗಂಟೆಗಳ ಕಾಲ ಸೇವೆ ಸಲ್ಲಿಸುವುದನ್ನು ಇಂದಿಗೂ ಮುಂದುವರೆಸಿದ್ದರು” ಎಂದು ಅಧಿಕಾರಿ ಡಾ.ಸಂಜೀವ್ ಬರ್ಮನ್ ಹೇಳುತ್ತಾರೆ. ಕೆಲವು ದಿನಗಳಲ್ಲಿ ಅವರು ಹಲವಾರು ಮುಂಚೂಣಿ ಕಾರ್ಮಿಕರಿಗೆ ಕೋವಿಡ್ -19 ಲಸಿಕೆಗಳನ್ನು ನೀಡಿದ್ದಾರೆ. ಅವರೊಂದಿಗೆ ಕೆಲಸ ಮಾಡುವುದೇ ಒಂದು ಸಂತೋಷ ಎಂಬುದು ಅವರ ಅನಿಸಿಕೆ
ಮಾಧುರಿ ಕಳೆದ ವಾರ ನಿವೃತ್ತರಾದರು. ಪತಿ ಅನೇಕ ಕಾಯಿಲೆಗಳಿಂದ ಬಳಲಿ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅವರ ಇಬ್ಬರು ಗಂಡು ಮಕ್ಕಳು ಈಗ ಕೆಲಸ ಮಾಡುತ್ತಿದ್ದಾರೆ. ಆದರೂ ಆಕೆಗೆ ಕೆಲಸ ಮಾಡದಿರಲು ಮನಸ್ಸು ಒಪ್ಪುತ್ತಿಲ್ಲ. “ನಾನು ಕೆಲಸಕ್ಕೆ ಹೋಗುವುದನ್ನು ಮಿಸ್ ಮಾಡಿಕೊಳ್ಳುತ್ತೇವೆ. ನನ್ನ ಸೇವೆ ಬೇಕಾದಾಗಲೆಲ್ಲಾ ನನ್ನನ್ನು ಕರೆಯಿರಿ ಎಂದು ಅವರು ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ. ಸೇವೆಯಲ್ಲಿ ಮುಂದುವರಿಯಲು ನಾನು ಸಿದ್ಧ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.