ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಮಹಾ ಸಂಘಟನೆ ಸೇವೆ ಎಂಬ ಪದಕ್ಕೆ ಅನ್ವರ್ಥಕನಾಮವಾಗಿ ಕಳೆದ 95 ವರ್ಷಗಳಿಂದ ದೇಶದ ಯಾವುದೇ ಮೂಲೆಯಾಗಿರಲಿ ಅದು ಪ್ರವಾಹ, ಸುನಾಮಿ, ಭೂಕಂಪ, ಅತಿವೃಷ್ಠಿಯಂತಹ ಯಾವುದೇ ನೈಸರ್ಗಿಕ ವಿಕೋಪಗಳಿರಲಿ ಅಲ್ಲಿ ಪ್ರತಿಫಲಾಪೇಕ್ಷೆ ಬಯಸಿದೆ ಸರ್ಕಾರದ ಪ್ರತಿನಿಧಿಗಳಿಗಿಂತ ಮೊದಲು ಹಾಜರಾಗುವ ಮೂಲಕ ನಿಸ್ವಾರ್ಥ ಕೆಲಸ ಮಾಡುವ ಹಲವಾರು ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಸ್ವಯಂ ಸೇವೆ ಸಲ್ಲಿಸಿದ ಅಗ್ರಗಣ್ಯ ಸಂಘಟನೆ, ಈ ಸಂಘವು ನೂರಾರು ಕ್ಷೇತ್ರಗಳಲ್ಲಿ ಸಾವಿರಾರು ನಿಸ್ವಾರ್ಥ ಸ್ವಯಂಸೇವಕರನ್ನು ಸಮಾಜಕ್ಕೆ ಧಾರೆ ಎರೆದಿದೆ. ಎಲೆಮರೆಯ ಕಾಯಿ ಯಂತಿರುವ ಸಂಘದ ವಿಶೇಷ ಸ್ವಯಂಸೇವಕೊಬ್ಬರ ಬಗೆಗೆ ತಿಳಿದುಕೊಳ್ಳೊಣ, ದೇಹಕ್ಕೆ ವಯಸ್ಸಾದರೂ, ಚಿರ ಯುವಕನಂತಹ ಹುಮ್ಮಸ್ಸು, ಮಗುವಿನಂತಹ ಮನಸ್ಸು, ಸಂಘ ಕಾರ್ಯದ ಬಗೆಗೆಗಿರುವ ಬದ್ದತೆ, ಮಾದರಿಯಾಗಬಲ್ಲ ಜೀವನ ಶೈಲಿ, ಎಲ್ಲರೂ ನಮ್ಮವರೆಂಬ ವಿಶಾಲ ಮನೋಭಾವನೆ, ಸದಾ ಹಸನ್ಮುಖಿಯಾಗಿರುವ, 5 ಆಡಿಯ ಚೋಟುದ್ದ ದೇಹದ ಅವರೇ ಶ್ರೀ ದಿನಕರ ಕರ್ಕರೆ.
ಮಧ್ಯ ಪ್ರದೇಶದ ಖಾಂಡವಾದಲ್ಲಿ ಶ್ರೀ ಬಾಜಿರಾವ್ ಕರ್ಕರೆ ಮತ್ತು ಸುನಂದಾಬಾಯಿ ರವರ ೪ನೇ ಸುಪುತ್ರರಾಗಿ ಮದ್ಯಮ ವರ್ಗದ ಕುಟುಂಬದಲ್ಲಿ 1936ರ ಅಕ್ಟೋಬರ್ 27 ರಂದು ಜನಿಸಿದರು, ಖಂಡವಾದಲ್ಲಿಯೇ ಶಿಕ್ಷಣ ಮುಗಿಸಿ, ಮುಂದೆ ನೌಕರಿಗಾಗಿ ದಕ್ಷೀಣ ಭಾರತದ ಮದ್ರಾಸಿಗೆ ಪ್ರಯಾಣ ಬೆಳೆಸಿದರು.
ಸಂಘದ ಶಿಕ್ಷಣ
1956ರಲ್ಲಿ ಮಧ್ಯ ಪ್ರದೇಶದಲ್ಲಿ ಪ್ರಾಥಮೀಕ ಶಿಕ್ಷಾ ವರ್ಗವನ್ನು ಮತ್ತು 1957ರಲ್ಲಿ ಸಂಘದ ಮುಖ್ಯ ಕಾರ್ಯಾಲಯ ನಾಗಪುರದ ರಿಷಮ್ ಭಾಗ್ ನಲ್ಲಿ ಅಂದಿನ ಪರಮ ಪೂಜ್ಯ ಸರಸಂಘಚಾಲಕರಾದ ಗುರೂಜಿ ಗೋಲ್ವಾಲ್ಕರ್ ಜೀ, ಏಕನಾಥ ರಾನಡೆ ಜೀ, ದೀನ್ ದಯಾಳ್ ಉಪಾಧ್ಯಾಯ್ ಜೀ, ಯಾದವರಾವ್ ಜೋಶಿ ಜೀ ರವರ ಬೌದ್ಧಿಕಗಳನ್ನೊಳಗೊಂಡ ಮೂವತ್ತು ದಿನಗಳ ಪ್ರಥಮ ವರ್ಷ ಶಿಕ್ಷಾ ವರ್ಗದ ಸಂಘಶಿಕ್ಷಣ ಪಡೆದಿದ್ದಾರೆ, ಕರ್ಕರೆಯವರು ಎಷ್ಟು ಅದೃಷ್ಟವಂತರೆಂದರೆ, 1957ನೇ ವರ್ಷವೇ ನಾಗಪುರದಲ್ಲಿ ಪ್ರಥಮ ವರ್ಷದ ಶಿಕ್ಷಣ ವರ್ಗಗಳು ನಡೆದ ಕೊನೆಯ ವರ್ಷ, ಮುಂದೆ 1958 ರಿಂದ ನಾಗಪುರದ ಕಾರ್ಯಲಯವು ಕೇವಲ ತೃತಿಯ ವರ್ಷದ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸಲಾಯಿತು.
1956ರಲ್ಲಿ ಮುಖ್ಯ ಶಿಕ್ಷಕರಾಗಿ ನಿಯುಕ್ತಿಗೊಂಡಾಗ ಸಂಘದ ಕೆಲಸಗಳಿಗಾಗಿ ಖರಿದಿಸಿದ ದಿನಚರಿಯನ್ನು ಇಂದಿಗೂ ತಮ್ಮ ಬಳಿ ಇಟ್ಟುಕೊಂದಿದ್ದಾರೆ, ಅದು ಅವರ ಮನೆಗೆ ಬರುವ ಸ್ವಯಂಸೇವಕರಿಗೆ ಒಂದು ಮಾರ್ಗದರ್ಶಿಯಾದ ಮಾದರಿ.
65 ವರ್ಷ ಮುಖ್ಯ ಶಿಕ್ಷಕ – ಅಲಿಖಿತ ದಾಖಲೆ
1946 ರಲ್ಲಿ ತಮ್ಮ 10ನೇಯ ವಯಸ್ಸಿನಲ್ಲಿ ಬಾಲ ಸ್ವಯಂಸೇವಕನಾಗಿ ಸಂಘದ ಶಾಖೆಗೆ ಹೆಜ್ಜೆ ಹಾಕಿದ ಬಾಲಕ, ನಂತರ ತರುಣನಾಗಿ 1956ರಲ್ಲಿ ಸಂಘದ ಪ್ರಾಥಮೀಕ ಶಿಕ್ಷಾ ವರ್ಗವನ್ನು ಖಾಂಡವಾದಲ್ಲಿ ಮುಗಿಸಿ ಗುರು ಗೋವಿಂದ್ ಸಿಂಗ್ ಸಾಯಂ ಶಾಖೆಯ ಮುಖ್ಯ ಶಿಕ್ಷಕರಾಗಿ ನೀಡಲಾದ ಜವಾಬ್ದಾರಿಯನ್ನು ಮುಂದುವರಿಸುತ್ತಾ ನಂತರ ಮದ್ರಾಸಿನಲ್ಲಿ ಉದ್ಯೋಗಿಯಾಗಿ, ಸಂಸಾರಿಯಾಗಿ ತುಂಬು ಕುಟುಂಬದ ನಿರ್ವಹಣೆಗಳನ್ನು ಸಂಬಾಳಿಸಿ, ಹಲವು ಪ್ರದೇಶಗಳನ್ನು ಸುತ್ತಿ, 1994 ರಲ್ಲಿ ನಿವೃತ್ತಿ ನಂತರ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಹತ್ತಾರು ಶಾಖೆಗಳನ್ನು ನಡೆಸಿದ ಇವರು, ಪ್ರಸ್ತುತ ಕೋರಮಂಗಲದ ಏಕಲವ್ಯ ಶಾಖೆಯ ಮುಖ್ಯ ಶಿಕ್ಷಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ 1925 ರಲ್ಲಿ ಪ್ರಾರಂಭವಾದ ಆರ್.ಎಸ್.ಎಸ್ ನ 96 ವರ್ಷಗಳ ಇತಿಹಾಸದಲ್ಲಿ, 65 ವರ್ಷಗಳಷ್ಟು ಸುದಿರ್ಘ ಕಾಲ ಅಂದರೆ (1956 ರಿಂದ 2021 ರವರೆಗೂ) ಶಾಖೆಯ “ಮುಖ್ಯ ಶಿಕ್ಷಕ” ಜವಾಬ್ದಾರಿಯನ್ನು ನಿರ್ವಹಿಸಿದ್ದು ಬಹುಷಃ ಅಲಿಖಿತ ಮತ್ತು ಅತಿ ವಿರಳವಾದ ದಾಖಲೆಯೆಂದರೆ ಅತಿಶಯೋಕ್ತಿ ಎನಿಸಲಾರದು.
1956 ರಲ್ಲಿ ಮುಖ್ಯ ಶಿಕ್ಷಕರಾಗಿ ನಿಯುಕ್ತಿಗೊಂಡಾಗ ಸಂಘದ ಕೆಲಸಗಳಿಗಾಗಿ ಖರಿದಿಸಿದ ದಿನಚರಿಯನ್ನು ಇಂದಿಗೂ ತಮ್ಮ ಬಳಿ ಇಟ್ಟುಕೊಂಡಿದ್ದಾರೆ, ಅದು ಅವರ ಮನೆಗೆ ಬರುವ ಸ್ವಯಂಸೇವಕರಿಗೆ ಒಂದು ಮಾರ್ಗದರ್ಶಿಯಾದ ಮಾದರಿ.
ನಿಷಿದ್ದ ಜಾಗದಲ್ಲಿ ಸಂಘದ ಕೆಲಸ
ಮದ್ರಾಸಿನ ಅವಡಿಯಲ್ಲಿ ಮಿಲಿಟರಿ ಟ್ಯಾಂಕರ್ಗಳನ್ನು ನಿರ್ಮಿಸುವ ಭಾರತೀಯ ಕೇಂದ್ರ ಸರ್ಕಾರದ ಸಂಸ್ಥೆಯಾದ “ಹೇವಿ ವೆಹಿಕಲ್ ಪ್ಯಾಕ್ಟರಿ”ಯಲ್ಲಿ ಕ್ವಾಲಿಟಿ ಕಂಟ್ರೋಲ್ ಡಿಪಾರ್ಟ್ಮೆಂಟ್ನಲ್ಲಿ ಸೇವೆ ಸಲ್ಲಿಸಿರುವ ಇವರು, ಅಲ್ಲಿರುವ ಸರ್ಕಾರಿ ನಿವೇಷನ (ಗವರ್ನಮೆಂಟ್ ಕ್ವಾಟರ್ಸ್) ಗಳಲ್ಲಿ ವಾಸಿಸುವಾಗ ಅಲ್ಲಿ ಸಂಘದ ಕೆಲಸಮಾಡುವದು ನಿಷಿದ್ದವೆನಿಸಿದ್ದ ಆ ಕಾಲದಲ್ಲಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಉತ್ತರ ಮತ್ತು ದಕ್ಷೀಣ ಭಾರತೀಯರ ಮಧ್ಯ ದೊಡ್ಡ ಕಂದಕವನ್ನೇ ನಿರ್ಮೀಸಿ ಒಬ್ಬರನ್ನೊಬ್ಬರು ವಿರೋಧಿಸುವಂತೆ ಮಾಡಿದ್ದ ಹಿಂದಿ ವಿರೋಧಿ ದ್ರಾವಿಡ ಪಕ್ಷಗಳ ಬೆಂಬಲಿಗರ ವಿರೋಧದ ನಡುವೆ ಅದೂ ತಮಿಳು ಭಾಷೆ ಬಾರದ ಒಬ್ಬ ಉತ್ತರ ಭಾರತೀಯನಾಗಿ ಅಲ್ಲಿ ಶಾಖೆ ನಡೆಸುವದೆಂದರೇ ಅದು ಬಗೀರಥ ಗಂಗೆಯನ್ನು ಭೂಲೋಕಕ್ಕೆ ತಂದಂತಹ ಹರಸಾಹಸವೇ ಸರಿ. ಇಂತಹ ಕಠೀಣ ಪರಿಸ್ಥಿತಿಯಲ್ಲಿ ಶಾಖೆ ಪ್ರಾರಂಭಿಸಿ ಎಲ್ಲರೊಂದಿಗೆ ಉತ್ತಮ ಸಂಬಂದ ಹೊಂದಿ ಭೂಗತವಾಗಿ ಸಂಘದ ಕಾರ್ಯಗಳನ್ನು ವಿಸ್ತರಿಸುದ್ದು ಅವರ ಹೆಗ್ಗಳಿಕೆಗೆ ಸಾಕ್ಷಿ. ಇದೆಲ್ಲದರ ನಡುವೆ, ಇಂದಿನ ರೀತಿಯಲ್ಲಿ ಸಾರ್ವಜನಿಕ ವಾಹನ ವ್ಯವಸ್ಥೆಗಳಿಲ್ಲದ ಆ ಕಾಲದಲ್ಲಿ ಕಾಲುನಡಿಗೆಯಲ್ಲಿ ಸಂಚರಿಸಿ ಕಾರ್ಯಕರ್ತರನ್ನು ಹುಡುಕಿ ಸಂಪರ್ಕಿಸುತ್ತಾ ಒಬ್ಬರಿಂದ ಪ್ರಾರಂಭವಾದ ಶಾಖೆ, 5 ವರ್ಷಗಳಲ್ಲಿ 24 ಜನರ ತಂಡವಾಗಿ ಮಾರ್ಪಟ್ಟು, ಪ್ರಾಂತ ಪ್ರಚಾರಕ ಕೃ. ಸೂರ್ಯನಾರಾಯಣ್ ಜೀ ಮತ್ತು ಮದ್ರಾಸಿನ ಪ್ರಚಾರಕ ದಿನಕರ್ ಜೀ ಬುಚೆ ಅವರ ಸಲಹೆಯಂತೆ ತಮ್ಮ ಶಾಖೆಯನ್ನು ಸ್ವಾವಲಂಬಿ ಶಾಖೆಯಾಗಿ ಮಾರ್ಪಡಿಸಿದ್ದು ಕೂಡಾ ಅದ್ಬುತವಾದ ಸಾಧನೆಯೇ ಸರಿ.
ಟ್ಯಾಂಕರ್ಗೆ ನಾಮಸೂಚನಾ ಬಹುಮಾನ
1971-72 ರಲ್ಲಿ ರಶ್ಯಾದಲ್ಲಿ ವಿನ್ಯಾಸಗೊಂಡ “ಟಿ-72” ಹೆಸರಿನ ಮಿಲಿಟರಿ ಯುದ್ದ ಟ್ಯಾಂಕರ್ ಮುಂದೆ ತಯಾರಿಕೆಗಾಗಿ ಹಲವು ದೇಶಗಳಿಗೆ ರವಾನೆಗೊಂಡು, 1986 ರಲ್ಲಿ ಭಾರತದಲ್ಲಿ ತಯಾರಿಸಲು ಅನುಮತಿ ದೊರೆತಿತು, ಆ ಸಂದರ್ಭದಲ್ಲಿ ಟಿ-72 ಗೆ ಪರ್ಯಾಯವಾದ ಭಾರತೀಯ ಹೆಸರನ್ನು ಸೂಚಿಸಲು ರಕ್ಷಣಾ ಸಚಿವಾಲಯವು ಅಧಿಸೂಚನೆ ಹೊರಡಿಸಿದಾಗ ದೇಶದಾದ್ಯಂತ ಅಭೂತ ಪೂರ್ವವಾದ ಪ್ರತಿಕ್ರೀಯೆ ದೊರೆತು ಸಾವಿರಾರು ಹೆಸರುಗಳು ಸಂಗ್ರಹವಾದರೂ, ಅದರಲ್ಲಿ ಕರ್ಕರೆಯವರು ಸೂಚಿಸಿದ “ಅಜೇಯ-ಟಿ72” ಎಂಬ ಹೆಸರು ಅಂತಿಮವಾಗಿ ಆಯ್ಕೆ ಆಗಿ ಇವರಿಗೆ 500 ರೂಪಾಯಿಗಳ ಬಹುಮಾನ ನೀಡಲಾಗಿತ್ತು.
ವಿವೇಕಾನಂದ ಸ್ಮಾರಕದ ನಿಧಿ ಸಂಗ್ರಹ
ಅಯೊಧ್ಯೇಯಲ್ಲಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ ಇತ್ತೀಚೆಗೆ ದೇಶವ್ಯಾಪಿ ನಡೆದ “ನಿಧಿ ಸಮರ್ಪಣಾ ಅಭಿಯಾನದ” ಮಾದರಿಯಂತೆಯೇ, 1968-69 ರಲ್ಲಿಯೂ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕಾಗಿ ದೇಶವ್ಯಾಪಿ ನಿಧಿ ಸಂಗ್ರಹ ಅಭಿಯಾನ ನಡೆದಿತ್ತು. ಕನ್ಯಾಕುಮಾರಿಯಲ್ಲಿ ಅನ್ಯ ಧರ್ಮಿಯರ ಉಪಟಳ ಹೆಚ್ಚಾಗಿ ಅಲ್ಲಿರುವ ಕಲ್ಲಿನ ದ್ವೀಪಗಳನ್ನು ತಮ್ಮ ಧಾರ್ಮೀಕ ಕೇಂದ್ರಗಳನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಸಂಘದ ಸತತ ಪ್ರಯತ್ನ ಮತ್ತು ಹೋರಾಟದಿಂದ ಆ ದ್ವೀಪದಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕಾಗಿ ನಡೆದ ಆ ಅಭಿಯಾನದಲ್ಲಿ ತಮೀಳು ಭಾಷೆ ಗೊತ್ತಿಲ್ಲದಿದ್ದರೂ, ತಾವಿದ್ದ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿಯೇ ಸಂಚರಿಸಿ ನಿಧಿ ಸಂಗ್ರಹ ಅಭಿಯಾನದಲ್ಲಿ ಹಿರಿಯ ಪ್ರಚಾರಕರಾದ ಶ್ರೀ.ಏಕನಾಥ ರಾನಡೆ ಯವರೊಂದಿಗೆ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಎಮರ್ಜೇನ್ಸಿ ಸಂದರ್ಭದಲ್ಲಿ ಕರಪತ್ರ ವಿತರಣೆ
ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎನಿಸಬಲ್ಲ ಘಟನೆಯೊಂದನ್ನು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಸೃಷ್ಟಿಸಿದ್ದಳು, ತನ್ನ ದುರಾಡಳಿತದ ಪರಮಾವದಿಯನ್ನು ಮೀರಿ ದೇಶದ ಮೇಲೆ 1975-77 ರ ವರೆಗೆ ತುರ್ತು ಪರಿಸ್ಥಿತಿ ಹೇರಿದ್ದರು, ಇದರ ಪರಿಣಾಮವಾಗಿ ನೈಜ ಸುದ್ದಿಗಳನ್ನು ಮರೆಮಾಚಿ, ಕೇವಲ ಸರ್ಕಾರದ ಅನೂಸೂಚನೆಯಂತೆ ಇಂದಿರಾನ ಆಸ್ಥಾನ ಪಂಡಿತರು ನೀಡುವ ಹೇಳಿಕೆಗಳಷ್ಟೇ ಪ್ರಕಟನೆಗೊಳ್ಳುತ್ತಿದ್ದವು, ಆಗ ಜನರಲ್ಲಿ ಜಾಗೃತಿ ಮೂಡಿಸುವ ಹೋರಾಟದ ನೈಜ ಸುದ್ದಿಗಳನ್ನು ಬಿತ್ತರಿಸುವ ಬೆರಳೆಣಿಕೆಯಷ್ಟು ಕೆಲ ಪತ್ರಿಕೆಗಳು/ ಕರಪತ್ರಗಳು ಮಾತ್ರ ಭೂಗತವಾಗಿ ಪ್ರಕಟನೆಗೊಳ್ಳುತ್ತಿದ್ದವು, ಈ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ಸ್ವಯಂ ಸೇವಕರಾಗಿ ಕರ್ಕರೆಯವರು ಎಲ್ಲೋ ಭೂಗತವಾಗಿ ಪ್ರಕಟಣೆಗೊಳ್ಳುವ ಕರಪತ್ರಗಳನ್ನು ತಂದು ತಾವಿದ್ದ ಪ್ರದೇಶಗಳಲ್ಲಿ ಹಂಚುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಅವರ ಅಸಮಾನ್ಯ ಕಾರ್ಯ ಕೇಳುಗರ ಮೈ ರೋಮಾಂಚನಗೊಳಿಸುತ್ತದೆ. ಇದರ ವಿರುದ್ದ ಪಕ್ಷಾತೀತವಾಗಿ ದೇಶದ್ಯಂತ ಎಲ್ಲಾ ನಾಯಕರು ಹೋರಾಟ ಮಾಡಿದ್ದರು.
ದೇವಸ್ಥಾನದ ಜೀರ್ಣೊದ್ದಾರದ ಮುಂದಾಳತ್ವ
ಕರ್ಕರೇಯವರ ಮೂಲ ತಮ್ಮ ಕುಲದೇವರು ಶ್ರೀ ಕೃಷ್ಣನ ದೇವಾಲಯವಿರುವ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಚಿಕ್ಕ ಗ್ರಾಮ ದೆವಡೆ. ಗ್ರಾಮದಲ್ಲಿರುವ ಪುರಾತನ ದೇವಾಲಯ ಸುಣ್ಣ-ಬಣ್ಣವಿಲ್ಲದೆ, ಗೋಪುರ, ಮಾಳಿಗೆಗಳು ಪಾಳು ಬಿದ್ದುದ್ದನ್ನು ಗಮನಿಸಿದ ಇವರು ಜೀರ್ಣೊದ್ದಾರಕ್ಕೆ ಮುಂದಾಗುತ್ತಾರೆ, ಆದರೇ ತಮಗೆ ಬರುವ ಸಂಬಳದಲ್ಲಿ ಕುಟುಂಬ ಸರಿದೂಗಿಸಿ, ಜೀರ್ಣೊದ್ದಾರ ಕಾರ್ಯ ಮಾಡುವದು ಕಷ್ಟವೆನಿಸಿದಾಗ, ತಮ್ಮ ವಂಶದವರ ದಾಖಲೆ ಸಂಗ್ರಹಿಸಿ, ಎಲ್ಲರಿಗೂ ಅಂಚೆ ಪತ್ರಗಳ ಮೂಲಕ ಸಹಾಯ ಕೋರಿ, ಹಣ ಸಂಗ್ರಹಿಸಿ ದೇವಸ್ಥಾನವನ್ನು ಸುವ್ಯಸ್ಥಿತವಾಗಿ ಮಾರ್ಪಡಿಸಿದ್ದಾರೆ, ಈಗ ಆ ಗ್ರಾಮದಲ್ಲಿ ಪ್ರತಿ ವರ್ಷವೂ ಜನ್ಮಾಷ್ಟಮಿ ಸಮಯದಲ್ಲಿ ೩ ದಿನಗಳ ಉತ್ಸವ ಜರುಗುತ್ತದೆ.
ಕರ್ಕರೆಯವರ ಮನೆಯೇ ಸಂಘದ ಕಾರ್ಯಾಲಯ
1994 ರಲ್ಲಿ ನೌಕರಿಯಿಂದ ನಿವೃತ್ತಿಯಾದಾಗ ಸಂಘದ ಸೇವಾ ಕಾರ್ಯ ಮಾಡಲು ಪೂರ್ಣ ಪ್ರಮಾಣದ ಕಾರ್ಯಕರ್ತರಾಗಿ ಕೆಲಸ ಮಾಡುವ ಮನಸ್ಸು ಮಾಡಿದ್ದರಾದರೂ, ಕೌಟುಂಬಿಕ ಸಮಸ್ಯೆಗಳಿಂದಾಗಿ ಅವರ ಕನಸ್ಸು ಕನಸಾಗಿಯೇ ಉಳಿಯಿತು, ಆದರೆ ಸಂಘದ ಕೆಲಸ ಮಾಡುವ ಅವರ ಅಚಲ ಮನಸ್ಸು, ನಿಸ್ವಾರ್ಥ ಸೇವಾ ಮನೋಭಾವನೆ ಕುಗ್ಗಲಿಲ್ಲ, ಕೋರಮಂಗಲ ನಗರದಲ್ಲಿ ಸಂಘಕ್ಕೆ ಅಧಿಕೃತವಾಗಿ ಯಾವೂದೇ ಕಾರ್ಯಾಲಯ ಇಲ್ಲದಿದ್ದರೂ, ಬೈಠಕ್, ಪ್ರವಾಸಿ ಪ್ರಚಾರಕರ ವಾಸ, ನಗರದ ವಸ್ತು ಭಂಡಾರ, ಅಲ್ಪೋಪಹಾರ, ಪಾನೀಯ ಹೀಗೆ ಕೆಲಸಗಳಿಗೂ ಕಾರ್ಯಕತರೆಲ್ಲ ಕರ್ಕರೇಯವರ ಮನೆಯೇ ಸಂಘದ ಕಾರ್ಯಾಲಯವೆಂದು ಭಾವಿಸಿದ್ದಾರೆ ಎಂದರೆ ಸಂಘದ ಕಾರ್ಯಗಳ ಬಗೆಗೆ ಅವರಿಗಿರುವ ಉತ್ಸಾಹ, ಕಾಳಜಿ ಮತ್ತು ಬದ್ದತೆಯನ್ನು ತೋರಿಸುತ್ತದೆ.
ಆದರ್ಶಮಯ ಜೀವನ
ಕರ್ಕರೆಯವರ ಜೀವನ ಪದ್ದತಿ ಈ ಪೀಳಿಗೆಯವರಿಗೆಲ್ಲ ಮಾದರಿಯಾಗಬಲ್ಲ ಜೀವನ, ತಮ್ಮ 85ರ ಇಳಿ ವಯಸ್ಸಿನಲ್ಲಿಯೂ ಅವರ ದೈನಂದಿನ ಚಟುವಟಿಕೆಗಳು ಪ್ರಾರಂಭವಾಗುವದು ಬೆಳಗಿನ ಬ್ರಾಹ್ಮಿ ಮಹೂರ್ತದಲ್ಲಿ ಮಳೆಗಾಲವಿರಲಿ, ಚಳೀಗಾಲವಿರಲಿ ಇಲ್ಲ ಬೇಸಿಗೆ ಕಾಲವೇ ಇರಲಿ ಅವರು ಏಳುವದು ಬೆಳಿಗ್ಗೆ 4:30 ನಂತರ ತಣ್ಣಿರು ಸ್ನಾನ, ಸಂದ್ಯಾವಂದನೆ, ಪೂಜೆ ಪುನಸ್ಕಾರ ಮುಗಿಸಿ, ಪ್ರಾಣಾಯಾಮ-ಯೋಗಾಬ್ಯಾಸ ನಂತರ ಪ್ರತಿದಿನ 2 ಕೀಲೊಮೀಟರ್ ದೂರದಲ್ಲಿರುವ ಸಂಘಸ್ಥಾನಕ್ಕೆ ಕಾಲ್ನಡಿಗೆಯಲ್ಲಿಯೇ ಹೋಗಿ ಶಾಖೆ ನಡೆಸಿ ಬರುತ್ತಾರೆ. ಅದಲ್ಲದೇ ವಾರಕ್ಕೊಂದು ದಿನ ಉಪವಾಸ, ಪ್ರತಿ ಸಂಕಷ್ಟಿ, ಹಬ್ಬ ಹರಿದಿನಗಳ ಆಚರಣೆ, ಪುರಾಣ ಪಾರಾಯಣ ದಂತಹ ಧಾರ್ಮೀಕ ಆಚರಣೆಗಳನ್ನು ಅತಿ ವ್ಯವಸ್ಥಿತವಾಗಿ ನಿರ್ವಹಿಸುತ್ತಾರೆ, ಇನ್ನೂ ವಿಶೇಷವೆಂದರೇ ಮೋಬೈಲ್, ಇಂಟರ್ನೇಟ್ ಮೂಲಕ ಬೆರಳ ತುದಿಯಲ್ಲಿಯೇ ಜಗತ್ತನ್ನು ಆಡಿಸುವ ಇಂದಿನ ಕಾಲದಲ್ಲಿಯೂ ತಮ್ಮ ಸ್ನೇಹಿತರೊಂದಿಗೆ ಇಂದಿಗೂ ಅಂಚೆ ಪತ್ರ ಮೂಲಕ ಕುಶಲೋಪರಿ ಮಾತನಾಡುತ್ತಾರೆ. ಇಂತಹ ಹಿರಿಯ ಜೀವ ನಮ್ಮೊಂದಿಗಿರುವದು ನಮ್ಮ ಹೆಮ್ಮೆ, ಇವರ ನಿಸ್ವಾರ್ಥ ಜೀವನ ಪದ್ದತಿಯನ್ನು ನಾವು ಅನುಸರಿಸುವ ಮೂಲಕ ಅವರಿಗೊಂದು ನಮನ ಸಲ್ಲಿಸೋಣ.
✍️ ಪರಪ್ಪ ಶಾನವಾಡ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.