ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಗೆ ಪ್ರಮುಖ ಆಧಾರವೇ ಸನಾತನ ಹಿಂದೂ ಧರ್ಮ. ಸನಾತನ ಧರ್ಮವು ಅತ್ಯಂತ ಸಹಿಷ್ಟು ಧರ್ಮ. ನಮ್ಮ ಆಚಾರ ವಿಚಾರಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ ಮತ್ತು ಯಾವುದೇ ಕಠಿಣ ನಿಯಮಗಳಿಲ್ಲ. ಇಲ್ಲಿ ವಿಮರ್ಶಿಸಲು, ಹೊಸತನವನ್ನು ಆವಿಷ್ಕರಿಸಲು ಮತ್ತು ಉತ್ತಮವಾದ ವಿಚಾರಗಳನ್ನು ಅಳವಡಿಸಿಕೊಳ್ಳಲು ಸದಾ ಅವಕಾಶವಿದೆ. ನಮ್ಮ ಧರ್ಮವು ಅನೇಕ ಪಂಥಗಳನ್ನು ಮತ್ತು ಕವಲುಗಳನ್ನು ಹೊಂದಿದ್ದು ಭಕ್ತರು ದೇವರನ್ನು ಯಾವ ರೂಪದಲ್ಲಾದರೂ, ಯಾವ ವಿಧಾನದಲ್ಲೂ ಪೂಜಿಸಬಹುದಾಗಿದೆ. ಸನಾತನ ಧರ್ಮದಲ್ಲಿ ಅಂಧಾನುಕರಣೆಗೆ ಆಸ್ಪದವಿಲ್ಲ. ಇಲ್ಲಿ ಪ್ರತಿಯೊಂದನ್ನೂ ವಿಶ್ಲೇಷಣೆಗೆ, ವಿಚಾರಕ್ಕೆ ಒಳಪಡಿಸಲಾಗುತ್ತದೆ. ನಾವು ಆಚರಿಸುವ ಪ್ರತಿಯೊಂದು ಆಚರಣೆಗಳಿಗೂ ಅದರದ್ದೇ ಆದ ಹಿನ್ನಲೆಗಳು ಮತ್ತು ವೈಜ್ಞಾನಿಕ ಕಾರಣಗಳು ಇರುತ್ತವೆ. ಸನಾತನ ಧರ್ಮದ ಅನುಸರಣೆ ಮಾಡುವ ಜನರು ವಿವಿಧ ಪ್ರದೇಶಗಳಲ್ಲಿ ಒಂದೇ ಹಬ್ಬವನ್ನು ವಿಭಿನ್ನವಾಗಿ ಆಚರಿಸುವ ರೀತಿಯನ್ನು ನಾವು ನೋಡುತ್ತೇವೆ. ಸಂಸ್ಕೃತಿ, ಸಂಸ್ಕಾರಗಳಿಗೂ ಮತ್ತು ಆಚರಣೆಗಳಿಗೂ ಇರುವ ಸಂಬಂಧ ಅವಿನಾಭಾವವಾದದ್ದು.
ಹೀಗೆ ಪ್ರಕೃತಿಯೊಂದಿಗೆ ಬೆರೆಯುವ ಮತ್ತು ಭಾರತೀಯರ ಸಂಸ್ಕೃತಿಯಲ್ಲೇ ಅತ್ಯಂತ ಪ್ರಮುಖವಾದ ಹಬ್ಬವೇ ದೀಪಾವಳಿ. ಕೆಲವು ತಿಂಗಳುಗಳ ಹಿಂದಷ್ಟೇ ನಾವು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದೆವು. ವಿಕ್ರಮ ಶಕೆಯ ಕೊನೆಯಲ್ಲಿ ಆಚಾರಿಸಲಾಗುವ ದೀಪಾವಳಿಯನ್ನು ಭಾರತದ ಅನೇಕ ಭಾಗಗಳಲ್ಲಿ ಹೊಸ ವರ್ಷವನ್ನಾಗಿಯೂ ಆಚರಿಸಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ, ವಿಭಿನ್ನ ಕಾರಣಗಳಿಗೋಸ್ಕರ ದೀಪಾವಳಿಯನ್ನು ಆಚರಿಸಲಾಗುವುದಾದರೂ ದೀಪಾವಳಿಯನ್ನು ಹಬ್ಬಗಳ ರಾಜ ಎಂಬಂತೆ ಆಚರಿಸಲಾಗುವುದು ಸುಳ್ಳಲ್ಲ. ಪ್ರಭು ಶ್ರೀರಾಮನು ವನವಾಸವನ್ನು ಮುಗಿಸಿ ರಾವಣನ ಮೇಲೆ ವಿಜಯವನ್ನು ಸಾಧಿಸಿ ಲಂಕೆಗೆ ಹಿಂದಿರುಗುವ ಸಂಭ್ರಮದ ಆಚರಣೆಯನ್ನಾಗಿ ಮತ್ತು ರಾಮನ ಸ್ವಾಗತದ ಸಂಭ್ರಮದ ಪ್ರತೀಕವಾಗಿ ಅಯೋಧ್ಯೆಯನ್ನು ಸಿಂಗರಿಸಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಲಕ್ಷ್ಮೀದೇವಿಯು ತನ್ನ ಕೃಪೆಯನ್ನು ಸದಾ ನೀಡಿ ಹರಸಲಿ ಎಂದು ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮೀ ಪೂಜೆಯನ್ನೂ ನಡೆಸುವ ಸಂಪ್ರದಾಯವಿದೆ. ದೀಪಾವಳಿಯ ಸಂದರ್ಭದಲ್ಲೇ ಬಳಿ ಚಕ್ರವರ್ತಿಯು ತನ್ನ ಪ್ರಜೆಗಳನ್ನು ನೋಡಲು ಭುವಿಗೆ ಆಗಮಿಸುತ್ತಾನೆ ಎನ್ನುವ ನಂಬಿಕೆಯೂ ದಕ್ಷಿಣ ಭಾರತದಲ್ಲಿದ್ದು, ಆಗಮಿಸುವ ಬಲಿ ಚಕ್ರವರ್ತಿಯ ಸ್ಮರಣೆಯಲ್ಲಿ ಬಳಿ ಪೂಜೆಯನ್ನೂ ನಡೆಸಲಾಗುತ್ತದೆ. ಹೀಗೆ ದೀಪಾವಳಿಯು ವಿಭಿನ್ನ ಆಚರಣಾ ಹಿನ್ನೆಲೆಯನ್ನು ಹೊಂದಿದ್ದರೂ ಎಲ್ಲೆಡೆಯಲ್ಲಿಯೂ ಆಚರಿಸಲ್ಪಡುತ್ತದೆ.
ಆದರೆ ಪ್ರತೀ ಬಾರಿ ದೀಪಾವಳಿ ಹಬ್ಬವು ಸಮೀಪಿಸುವ ಸಂದರ್ಭದಲ್ಲಿ ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯಜಿಸಲಾ ಕುರಿತು ಅತೀ ಹೆಚ್ಚಿನ ಕಾಳಜಿಯು ವ್ಯಕ್ತವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೆಂದೂ ಕಾಣದಷ್ಟು ಪರಿಸರ ಪ್ರೇಮಿಗಳು ಪರಿಸರ ಸಂರಕ್ಷಣೆಯ ಕುರಿತಾಗಿ ಜ್ಞಾನವನ್ನು ಹಂಚಲು ಪ್ರಾರಂಭಿಸುತ್ತಾರೆ. ಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ಮಾತ್ರವಲ್ಲದೆ ರಸ್ತೆ ಬದಿಯ ಫಲಕಗಳಲ್ಲೂ ಪರಿಸರ ಸಂರಕ್ಷೆಯ ಕುರಿತಾದ ಪಾಠಗಳು ಕಾಣಿಸಲು ಪ್ರಾರಂಭವಾಯಿತು ಎಂದರೆ ದೀಪಾವಳಿ ಹಬ್ಬವು ಸಮೀಪಿಸುತ್ತಿದೆ ಎಂದು ಸಾಮಾನ್ಯ ಜನರೂ ಅರ್ಥಮಾಡಿಕೊಳ್ಳಬಹುದು. ಸ್ವತಃ ಧೂಮಪಾನ ಮಾಡುವ ಪ್ರಸಿದ್ಧ ವ್ಯಕ್ತಿಗಳು ಪಟಾಕಿ ಸಿಡಿಸುವುದರಿಂದ ಉಂಟಾಗುವ ಮಾಲಿನ್ಯ ಹಾಗೂ ಅದು ತರುವ ಉಸಿರಾಟದ ತೊಂದರೆಗಳ ಕುರಿತಾಗಿ ಲೇಖನಗಳನ್ನೂ ವಿಡಿಯೋಗಳನ್ನೂ ಹರಿಯಬಿಡುತ್ತಾರೆ.
ನಿಮಗೆ ಗೊತ್ತೇ?? ದೀಪಾವಳಿ ಹಬ್ಬದಲ್ಲಿ ಬಳಸಲ್ಪಡುವುದಕ್ಕೂ 5 ಪಟ್ಟು ಹೆಚ್ಚು ಸುಡುಮದ್ದನ್ನು ನ್ಯೂಯೋರ್ಕ್ ಪಟ್ಟಣವೊಂದರಲ್ಲೇ ಹೊಸವರ್ಷದ ಸಂಭ್ರಮಕ್ಕಾಗಿ ಸಿಡಿಸಲಾಗುತ್ತದೆ. ಕೆಲವು ಸಮಯದ ಹಿಂದೆ “ಭಾರತದಲ್ಲಿ 38 ದಶಲಕ್ಷ ರೂಪಾಯಿ ಬೆಲೆಯ ಸಿಡಿಮದ್ದನ್ನು ದೀಪಾವಳಿಯ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ. ಇದರಿಂದ ಎಷ್ಟೋ ಮಕ್ಕಳು ಮತ್ತು ಪ್ರಾಣಿಗಳಿಗೆ ಅಹಿತಕರ ವಾತಾವರಣ ಉಂಟಾಗುತ್ತದೆ” ಎಂದು ಲೇಖನವೊಂದು ಪ್ರಕಟಗೊಂಡಿತ್ತು. ಆದರೆ ಲೇಖನವನ್ನು ರಚಿಸಿದ ಸಂಸ್ಥೆಯು ನ್ಯೂ ಯಾರ್ಕ್ ನಗರದಲ್ಲಿ ಹೊಸವರ್ಷದಂದು 100 ರಿಂದ 200 ದಶಲಕ್ಷ ಡಾಲರ್ಗಳ ಸಿಡಿಮದ್ದನ್ನು ಬಳಸಲಾಗುತ್ತದೆ ಎಂಬುದನ್ನು ಎಲ್ಲೂ ಹೇಳಲಿಲ್ಲ. ಸಂಪೂರ್ಣ ಭಾರತದಲ್ಲಿ ದೀಪಾವಳಿಯ ಸಂದರ್ಭದಲ್ಲಿ ಸಿಡಿಮದ್ದುಗಳನ್ನು ಬಳಸಲಾಗುತ್ತದೋ ಅದಕ್ಕೂ ಹೆಚ್ಚಿನ ಸಿಡಿಮದ್ದುಗಳನ್ನು ಕೇವಲ ನ್ಯೂಯೋರ್ಕ್ ನಗರ ಬಳಸುತ್ತದೆ. 2016 ರಲ್ಲಿ ನ್ಯೂಯೋರ್ಕ್ ನಗರದಲ್ಲಿ 5000 ಟನ್ ನತ್ತು ಸಿಡಿಮದ್ದಿನ ತ್ಯಾಜ್ಯ ದೊರಕಿತ್ತು.
ಈ ರೀತಿಯಾಗಿ ಪರಿಸರ ಮಾಲಿನ್ಯದ ಕುರಿತಾಗಿ ಅದೆಷ್ಟು ಹೇಳಲಾಗುತ್ತದೆ ಎಂದರೆ, ಸಂಪೂರ್ಣ ಪರಿಸರವು ದೀಪಾವಳಿಯ ಆಚರಣೆಯಿಂದಲೇ ಮಲಿನಗೊಂಡಿದೆಯೇನೋ ಎಂಬ ಭಾವನೆ ನಮ್ಮ ಮನದಲ್ಲಿ ಮೂಡಿ ನಾವು ತಪ್ಪಿತಸ್ಥ ಭಾವನೆಯನ್ನು ಅನುಭವಿಸಬೇಕು. ಮಾತ್ರವಲ್ಲದೆ ಮಕ್ಕಳೂ ಇದೆ ವಿಚಾರಗಳನ್ನು ಅಳವಡಿಸಿಕೊಂಡು ಹಬ್ಬದ ಆಚರಣೆಯ ಸಂಪ್ರದಾಯವನ್ನೇ ಕಡಿತಗೊಳಿಸಿ, ಮುಂದಿನ ಜನಾಂಗ ಹಬ್ಬದ ಆಚರಣೆಯನ್ನೇ ಮರೆಯಬಹುದು. ನಮ್ಮ ಹಿರಿಯರು ಆಚರಿಸುವ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನಲೆ ಇರುತ್ತದೆ ಎಂಬ ವಿಚಾರವನ್ನು ನಾವು ಬಹುತೇಕ ಮರೆತಿದ್ದೇವೆ, ಅಥವಾ ಅವಗಣಿಸಿದ್ದೇವೆ. ಚಳಿಗಾಲದಲ್ಲಿ ದೇಹದ ಮತ್ತು ಚರ್ಮದ ರಕ್ಷಣೆಗಾಗಿ ತುಪ್ಪ, ಎಣ್ಣೆಗಳ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಅದಕ್ಕಾಗಿಯೇ ದೀಪಾವಳಿಯಲ್ಲಿ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ತುಪ್ಪದಿಂದ ತಯಾರಿಸಲ್ಪಟ್ಟ ತಿಂಡಿಗಳನ್ನೂ ಯಥೇಚ್ಛವಾಗಿ ಬಳಸಲಾಗುತ್ತದೆ. ಆದರೆ, “ಈ ದೀಪಾವಳಿಯಲ್ಲಿ ಹೆಚ್ಚಿನ ಸಿಹಿತಿಂಡಿಗಳನ್ನು ತಿಂದು ಆರೋಗ್ಯವನ್ನು ಹದಗೆಡಿಸಿಕೊಳ್ಳದಿರಿ” ಎಂಬ ಜಾಹೀರಾತುಗಳೂ, ವಿಶೇಷ ಟಿಪ್ಪಣಿಗಳೂ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲೇ ರಾರಾಜಿಸುತ್ತವೆ. ಇತರ ಯಾವುದೇ ಹಬ್ಬಗಳ ಸಂದರ್ಭದಲ್ಲಿಯೂ ಕಾಣಿಸದ ಜನಸಾಮಾನ್ಯರ ಕುರಿತಾದ ಆರೋಗ್ಯ ಕಾಳಜಿಯು ದೀಪಾವಳಿಯ ಸಂದರ್ಭದಲ್ಲಿ ಪ್ರಕಟಗೊಳ್ಳಲು ಕಾರಣವೇನೇನು ನಾವು ಆಲೋಚಿಸಬೇಕಲ್ಲವೇ? ಪರಿಸರ ಸಂರಕ್ಷಣೆಗಾಗಿ ಪಟಾಕಿಗಳ ಬಳಕೆಯನ್ನು ನಿಲ್ಲಿಸಿದ ಬಳಿಕ, ನಮ್ಮ ಆರೋಗ್ಯದ ರಕ್ಷಣೆಗಾಗಿ ಸಿಹಿ ತಿಂಡಿಯನ್ನೂ ಬದಿಗಿರಿಸುತ್ತೇವೆ. ಮತ್ತೆ ಹಬ್ಬದ ಆಚರಣೆಯಲ್ಲಿ ಇನ್ನೇನು ಉಳಿದಿದೆ?
ಕೆಲವು ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಮರಗಳ ಮಾರಣ ಹೋಮ ನಡೆಯುತ್ತದೆ. ಆದರೆ ದೀಪಾವಳಿ ಹಬ್ಬದಲ್ಲಿ ನಾವು ಪ್ರಕೃತಿಯೊಂದಿಗೆ ಒಂದಾಗಿ ಬದುಕುವುದನ್ನು ಕಲಿಯುತ್ತೇವೆ. ದೀಪಾವಳಿಯ ಸಮಯದಲ್ಲಿ ತುಳಸೀ ಪೂಜೆಯನ್ನು ಮಾಡುವುದು ಕೂಡ ಹಬ್ಬದ ಆಚರಣೆಯ ಒಂದು ಭಾಗವಾಗಿದೆ. ಪ್ರಕೃತಿ, ಗಿಡ ಮರಗಳ ಹೊರತಾಗಿ ಮಾನವನ ಬದುಕು ಶೂನ್ಯ ಎಂಬುದನ್ನು ಅರಿತುಕೊಳ್ಳುವ ಉದ್ದೇಶದಿಂದಲೇ ತುಳಸಿಯನ್ನು ಮಾತೆ ಎಂದು ಪೂಜಿಸಲಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಮೂಕ ಪ್ರಾಣಿಗಳಿಗೆ ಸಂಕಟ ಉಂಟಾಗುತ್ತದೆ ಎಂದು ಅನೇಕ ಪ್ರಾಣಿ ಪ್ರಿಯರು ರೋಧಿಸುತ್ತಾರೆ. ಆದರೆ ಇದೆ ದೀಪಾವಳಿಯಲ್ಲಿ ಗೋ ಪೂಜೆಯೂ ಪ್ರಮುಖ ಭಾಗ ಎಂಬುದನ್ನು ಮರೆತುಬಿಡುತ್ತಾರೆ. ಗೋವು ಮನುಷ್ಯನ ತಾಯಿ ಎನ್ನುವ ನಂಬಿಕೆ ನಮ್ಮದು. ಮಾತು ಬಾರದ ಪ್ರಾಣಿಗಳನ್ನೂ ಸಮಾನವಾಗಿ ಕಾಣುತ್ತಾ ಆದರದಿಂದ ಗೌರವಿಸಬೇಕೆಂಬ ಪಾಠವನ್ನು ಗೋಪೂಜೆಯು ಕಲಿಸುತ್ತದೆ. ಆದರೆ ಅನೇಕ ಪ್ರಾಣಿ ಪ್ರೇಮಿಗಳು ಈ ವಿಚಾರವನ್ನು ಬೇಕೆಂದೇ ನಿರ್ಲಕ್ಷಿಸಿ ಹಬ್ಬದ ಆಚರಣೆಯಿಂದ ಪ್ರಾಣಿಗಳಿಗಾಗುವ ತೊಂದರೆಗಳನ್ನೇ ವೈಭವೀಕರಿಸುತ್ತಾರೆ.
ಇಂತಹಾ ತಪ್ಪು ಮತ್ತು ಸುಳ್ಳು ಪ್ರಚಾರಗಳು ನಿನ್ನೆಯೂ ಇತ್ತು, ಇಂದೂ ಇದೆ ಬಹುಶಃ ನಾಳೆಯೂ ಇರಬಹುದು. ನಮ್ಮ ಆಚರಣೆಗಳ ಪ್ರಾಮುಖ್ಯತೆ, ಹಿನ್ನಲೆ ಮತ್ತು ವೈಜ್ಞಾನಿಕ ಕಾರಣಗಳನ್ನು ನಾವು ಅರಿಯದೆ ಹೋದಲ್ಲಿ ಅವರು ಹರಡುವ ಮೋಸದ ಬಲೆಯಲ್ಲಿ ನಾವು ಸುಲಭವಾಗಿ ಬೀಳಬಹುದು. ನಮ್ಮ ಜ್ಞಾನವನ್ನು ನಾವು ಹೆಚ್ಚಿಸಿಕೊಳ್ಳುವುದು ಮತ್ತು ಅದನ್ನು ಸಂಪೂರ್ಣವಾಗಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದೇ ನಾವು ನಿರ್ವಹಿಸಬೇಕಾದ ಬಹು ಮುಖ್ಯ ಕರ್ತವ್ಯ. ಪರಿಸರ ಸಂರಕ್ಷಣೆಯೂ ಖಂಡಿತವಾಗಿಯೂ ನಮ್ಮೆಲ್ಲರ ಹೊಣೆ, ನಮ್ಮ ಹೊಣೆಗಾರಿಕೆಯಿಂದ ನಾವು ನುಣುಚಿಕೊಳ್ಳುವ ಅವಶ್ಯಕತೆಯಿಲ್ಲ. ಪರಿಸರ ಸ್ನೇಹಿಯಾಗಿಯೇ, ಸಂಪ್ರದಾಯಬದ್ಧವಾಗಿ ಹಬ್ಬಗಳನ್ನು ಆಚರಿಸೋಣ. ಇದರಿಂದ ನಮ್ಮಲ್ಲಿ ಅಪರಾಧೀ ಮನೋಭಾವನೆಯನ್ನು ಮೂಡಿಸುವ ಯಾರ ಪ್ರಯತ್ನವೂ ಫಲಪ್ರದವಾಗದು. ನಮ್ಮ ಸಂಸ್ಕೃತಿ, ನಮ್ಮ ಸಂಸ್ಕಾರಗಳು ನಮ್ಮ ಹೆಗ್ಗುರುತು. ಅವುಗಳನ್ನು ಮುಂದಿನ ಪೀಳಿಗೆಗೆ ಅಳಿಯದಂತೆ ಜತನವಾಗಿ ನೀಡುವುದು ನಮ್ಮ ಕರ್ತವ್ಯ. ಅಲ್ಲವೇ?
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.