ಫೆಬ್ರವರಿ 26, 2019 ರ ಮುಂಜಾನೆ 3.30 ರ ಸುಮಾರಿಗೆ 12 ಮಿರಾಜ್ 2000 ಫೈಟರ್ ಜೆಟ್ಗಳು ನಿಯಂತ್ರಣ ರೇಖೆ (ಎಲ್ಒಸಿ) ದಾಟಿ ಶತ್ರುರಾಷ್ಟ್ರ ಪಾಕಿಸ್ಥಾನದ ಒಳಗೆ ನುಸುಳಿದವು, ಅಲ್ಲಿನ ಬಾಲಕೋಟ್ನಲ್ಲಿದ್ದ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿ ಪರಾಕ್ರಮ ಮೆರೆದು ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿದವು. ಶತ್ರು ಯಾವ ಮೂಲೆಯಲ್ಲಿ ಅಡಗಿ ಕುಳಿತಿದ್ದರೂ ಭಾರತೀಯ ಸೈನಿಕರು ಅವರನ್ನು ಅಟ್ಟಾಡಿಸಿ ಸದೆ ಬಡಿಯುತ್ತಾರೆ ಎಂಬ ಸಂದೇಶವನ್ನು ಪಾಕ್ಗೆ ಕಟುವಾಗಿಯೇ ರವಾನಿಸಿದವು.
ಭಾರತ ನಡೆಸಿದ ಈ ದಾಳಿಯನ್ನು ನಂತರ ‘ಬಾಲಕೋಟ್ ವೈಮಾನಿಕ ದಾಳಿʼ ಎಂದೇ ಕರೆಯಲಾಯಿತು. 1971 ರ ಇಂಡೋ-ಪಾಕ್ ಯುದ್ಧದ ನಂತರ ಪಾಕಿಸ್ಥಾನದಲ್ಲಿ ಭಾರತ ನಡೆಸಿದ ಮೊದಲ ವೈಮಾನಿಕ ದಾಳಿ ಇದಾಗಿದೆ. ಪಾಕಿಸ್ಥಾನ ಪ್ರಾಯೋಜಿತ ಉಗ್ರರು ನಡೆಸಿದ ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಈ ದಾಳಿಯನ್ನು ನಡೆಸಲಾಗಿತ್ತು. ಈ ದಾಳಿಯ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡಲಾಗಿತ್ತು.
40 ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಗಳು ಪ್ರಾಣ ಕಳೆದುಕೊಂಡ ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ದಾಳಿ ವಿಶ್ವದ ಎದುರು ಪಾಕಿಸ್ಥಾನದ ಮಾನ ಹರಾಜು ಆಗುವಂತೆ ಮಾಡಿತ್ತು. ಈ ವಾಯುದಾಳಿಯು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರ ಬ್ರೈನ್ ಚೈಲ್ಡ್ ಆಗಿತ್ತು ಮತ್ತು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅನುಮತಿ ಸುಲಭವಾಗಿಯೇ ಸಿಕ್ಕಿತ್ತು. ಭಾರತೀಯ ಯೋಧರಿಗೆ ಕಿಂಚಿತ್ತೂ ಹಾನಿಯಾಗದಂತೆ ಈ ದಾಳಿಯನ್ನು ಅಚ್ಚುಕಟ್ಟಾಗಿ ಅನುಷ್ಠಾನಕ್ಕೆ ತರಲಾಗಿತ್ತು.
‘ಆಪರೇಷನ್ ಬಂದರ್’ ಎಂಬ ಸಾಂಕೇತಿಕ ಹೆಸರನ್ನು ಹೊಂದಿರುವ ಬಾಲಕೋಟ್ ವಾಯುದಾಳಿಯನ್ನು ಭಾರತೀಯ ವಾಯುಪಡೆಯ ಏಳನೇ ಮತ್ತು ಒಂಬತ್ತನೇ ಸ್ಕ್ವಾಡ್ರನ್ಗಳು ಮುನ್ನಡೆಸಿದರು. ಪಾಕಿಸ್ಥಾನದ ಭೂಪ್ರದೇಶದೊಳಗೆ ದಾಳಿ ನಡೆಸಲು ಐಎಎಫ್ ನವೀಕರಿಸಿದ ಮಿರಾಜ್ 2000 ಮತ್ತು ಸುಖೊಯ್ ಸು -30 ಎಂಕೆಐಗಳನ್ನು ಬಳಸಿತ್ತು.
ಬಾಲಕೋಟ್ ವಾಯುದಾಳಿಯನ್ನು ಮುಖ್ಯವಾಗಿ 12 ಮಿರಾಜ್ 2000 ಯುದ್ಧವಿಮಾನ ಮೂಲಕ ನಡೆಸಲಾಯಿತು. ಅದು ಗ್ವಾಲಿಯರ್ ವಾಯುಪಡೆಯ ನೆಲೆಯಿಂದ ಹಾರುವ ಮೂಲಕ ಪಾಕಿಸ್ಥಾನಿಗಳಿಗೆ ಕಿಂಚಿತ್ತೂ ಸುಳಿವು ಸಿಗದಂತೆ ಕಾರ್ಯಾಚರಣೆ ನಡೆಸಿತ್ತು. ಮಿರಾಜ್ 2000 ಗಳು ಮೂರು ಪ್ರತ್ಯೇಕ ರಚನೆಗಳನ್ನು ರಚಿಸಿ ಪಾಕಿಸ್ಥಾನಕ್ಕೆ ಪ್ರವೇಶಿಸುವ ಮೊದಲು ಉತ್ತರ ಮತ್ತು ಮಧ್ಯ ಭಾರತ ಆಗಸದ ಮೇಲೆ ಗಂಟೆಗಳ ಕಾಲ ಹಾರಾಟ ನಡೆಸಿದ್ದವು.
ಪಾಕಿಸ್ಥಾನಕ್ಕೆ ಪ್ರವೇಶಿಸುವ ಮುನ್ನ, ಮಿರಾಜ್ 2000 ಗಳು, ಸು -30 ಎಂಕೆಐಗಳೊಂದಿಗೆ ಮೂರು ಪ್ರತ್ಯೇಕ ರಚನೆಗಳನ್ನು ರಚಿಸಿದವು. ಪಾಕಿಸ್ಥಾನದ ರಾಡಾರ್ಗಳ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಸು -30 ಗಳು ಇಲ್ಲಿ ಪ್ರಮುಖ ಪಾತ್ರವಹಿಸಿವೆ. ಭಾರತೀಯ ಸು -30 ವಿಮಾನಗಳ ರಚನೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ಥಾನಿ ಎಫ್ -16 ಫೈಟರ್ ಜೆಟ್ಗಳ ಗುಂಪನ್ನು ತ್ವರಿತವಾಗಿ ನಿಯೋಜನೆ ಮಾಡಿತು. ಅದೇ ಸಮಯದಲ್ಲಿ, ಮಿರಾಜ್ 2000 ಯುದ್ಧವಿಮಾನಗಳು ಬಾಲಕೋಟ್ ಕಡೆಗೆ ಹೊರಟವು ಮತ್ತು ಇಸ್ರೇಲಿ ನಿರ್ಮಿತ ಸ್ಪೈಸ್ 2000 ಬಾಂಬುಗಳನ್ನು ಬಾಲಕೋಟ್ನ ಭಯೋತ್ಪಾದಕ ಶಿಬಿರಗಳ ಮೇಲೆ ಹಾಕಿ ಹಿಂದಿರುಗಿದವು. ಪಾಕಿಗಳು ಏನಾಯಿತು ಎಂದು ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತು.
“ಇಲ್ಲಿ ಗುರಿ ಮತ್ತು ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸುವ ಆಯ್ಕೆಯು ಸಾಕಷ್ಟು ಯೋಜನೆ ಮತ್ತು ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಿಂತಿತ್ತು. ಪುಲ್ವಾಮಾದಂತಹ ಯಾವುದೇ ದಾಳಿಯನ್ನು ಭಾರತ ಸಹಿಸುವುದಿಲ್ಲ ಎಂದು ಪಾಕಿಸ್ಥಾನಕ್ಕೆ ಸಂದೇಶ ಕಳುಹಿಸುವುದು ಮುಖ್ಯವಾಗಿತ್ತು” ಎಂದು ಏರ್ ಮಾರ್ಷಲ್ ಹರಿ ಕುಮಾರ್ ಹೇಳುತ್ತಾರೆ.
ಬಾಲಕೋಟ್ ವಾಯುದಾಳಿಯ ನಂತರ ಪಾಕಿಸ್ಥಾನ ವಿಚಲಿತಗೊಂಡಿತ್ತು. ಅದಕ್ಕೆ ವಿಶ್ವಮಟ್ಟದಲ್ಲಿ ದೊಡ್ಡ ಮುಖಭಂಗವಾಗಿತ್ತು. ಹೀಗಾಗಿ ಭಾರತದ ವಿರುದ್ಧ ಸೇಡು ತೀರಿಸಿ ಮುಖ ಉಳಿಸಿಕೊಳ್ಳಲು ಮುಂದಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಲು ಪಾಕಿಸ್ಥಾನ ಪ್ರಯತ್ನಿಸಿತು. ಆದರೆ, ಐಎಎಫ್ ಈ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ತನ್ನ ಮಿಗ್ -21 ವಿಮಾನದ ಮೂಲಕ ಪಾಕಿಸ್ಥಾನದ ಎಫ್ -16 ಅನ್ನು ಹೊಡೆದುರುಳಿಸಿದರು. ಈ ವೇಳೆ ಪಾಕ್ ಭೂಪ್ರದೇಶದೊಳಗೆ ಬಿದ್ದು ಪಾಕಿಸ್ಥಾನದ ಖೈದಿಯಾದರು.
ಆದರೆ, ವಿಂಗ್ ಕಮಾಂಡರ್ ವರ್ಥಮಾನ್ ಅವರನ್ನು ಭಾರತದ ದಾಳಿಗೆ ಭಯಪಟ್ಟು ಎರಡು ದಿನಗಳ ನಂತರ ಪಾಕಿಸ್ಥಾನ ಬಿಡುಗಡೆ ಮಾಡಿತು. ಭಾರತಕ್ಕೆ ಮರಳಿದ ನಂತರ, ವಿಂಗ್ ಕಮಾಂಡರ್ ವರ್ಥಮಾನ್ ಅವರಿಗೆ ವೀರ ಸ್ವಾಗತ ದೊರೆಯಿತು.
ಬಾಲಕೋಟ್ ವಾಯುದಾಳಿ ಭಾರತಕ್ಕೆ ಕಾಶ್ಮೀರ ಕಣಿವೆಯೊಳಗಿನ ಭಯೋತ್ಪಾದನೆಯನ್ನು ತಟಸ್ಥಗೊಳಿಸಲು ಸಹಾಯ ಮಾಡಿತು ಮತ್ತು ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ವಿಶ್ವಕ್ಕೆ ತೋರಿಸಲು ಸಹಾಯ ಮಾಡಿತು. ವಾಯುಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್.ಧನೋವಾ ಅವರು ಹೇಳಿದಂತೆ, ಬಾಲಕೋಟ್ ವಾಯುದಾಳಿಯು ಪಾಕಿಸ್ಥಾನಕ್ಕೆ ಭಾರತವು “ಗುಸ್ ಕರ್ ಮಾರೆಂಗೆ” (ನಿಮ್ಮ ಮನೆಗೆ ನುಗ್ಗಿ ಕೊಲ್ಲುತ್ತೇವೆ) ಎಂಬ ಸಂದೇಶವನ್ನು ನೀಡಿತು.
ಈ ದಾಳಿಯೊಂದಿಗೆ ಭಾರತದ ಮಿಲಿಟರಿ ತನ್ನ ಕಾರ್ಯಾಚರಣೆಗಳನ್ನು ನಡೆಸುವ ವಿಧಾನದಲ್ಲಿ ಒಂದು ಮಾದರಿ ಬದಲಾವಣೆಯನ್ನು ಕಂಡುಕೊಂಡಿತು. ತನ್ನ ನೆಲದೊಳಗೆ ನುಗ್ಗಿ ತನ್ನ ಭಯೋತ್ಪಾದಕ ತರಬೇತಿ ಶಿಬಿರವನ್ನು ಭಾರತೀಯರು ಧ್ವಂಸ ಮಾಡಬಲ್ಲರು ಎಂದು ಪಾಕಿಸ್ಥಾನ ಕನಸು ಮನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಅದರೆ ಅದರ ಯೋಚನೆಯನ್ನೇ ಬುಡಮೇಲು ಮಾಡಿತ್ತು ಬಾಲಕೋಟ್ ವೈಮಾನಿಕ ದಾಳಿ.
ಬಾಲಕೋಟ್ ವಾಯುದಾಳಿಯ ನಂತರ ಭಾರತದಲ್ಲಿ ಯಾವುದೇ ದೊಡ್ಡ ಭಯೋತ್ಪಾದಕ ದಾಳಿ ನಡೆದಿಲ್ಲ. ಭಾರತ ಮತ್ತೆ ಅದೇ ರೀತಿಯಲ್ಲಿ ಅಥವಾ ಅದಕ್ಕಿಂತಲೂ ಹೆಚ್ಚು ವಿನಾಶಕಾರಿಯಾಗಿ ಪ್ರತಿಕ್ರಿಯಿಸಬಲ್ಲದು ಎಂಬ ಭಯ ಶತ್ರುಗಳನ್ನು ಕಾಡುತ್ತಿರುವುದು ಇದಕ್ಕೆ ಕಾರಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.