ಆಲೂರು ವೆಂಕಟರಾಯರು ಕನ್ನಡ ಕಟ್ಟಾಳುವಾಗಿದ್ದವರು. ಹರಿದು ಹಂಚಿ ಹೋಗಿದ್ದ ಕರುನಾಡನ್ನು ಏಕೀಕೃತಗೊಳಿಸಲು ಭದ್ರ ಬುನಾದಿ ಹಾಕಿಕೊಟ್ಟ ಧೀಮಂತ ವ್ಯಕ್ತಿ. ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿದ್ದ ಆಲೂರು ಓರ್ವ ಕನ್ನಡಿಗರಾಗಿ ಪ್ರಾದೇಶಿಕತೆ ಮತ್ತು ಭಾಷಾ ಸ್ವಾಭಿಮಾನವನ್ನು ತಮ್ಮ ಜೀವನದುದ್ದಕ್ಕೂ ಇರಿಸಿಕೊಂಡು ಮೆರೆದವರು. ದ.ರಾ. ಬೇಂದ್ರೆಯವರ ಜೊತೆಗೂ ಆಪ್ತತೆ ಹೊಂದಿದ್ದವರು ಆಲೂರರು. ಇವರ ಕತೃತ್ವ ಶಕ್ತಿ, ಕನ್ನಡ ಭಾಷೆ, ನೆಲಕ್ಕಾಗಿ ಇವರ ನಡೆಸಿದ ಹೋರಾಟ, ಪರಿಶ್ರಮವನ್ನು ಕಂಡಿದ್ದ ಬೇಂದ್ರೆ ಇವರನ್ನು ಕರ್ನಾಟಕ ಪ್ರಾಣೋಪಾಸಕ ಎಂದು ಕರೆದರು.
ಪತ್ರಿಕಾರಂಗ, ಸಾಹಿತ್ಯ, ಸಾಂಸ್ಕೃತಿಕ ವಲಯಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಆಲೂರರಿಗೆ ಕನ್ನಡ ಕುಲಪುರೋಹಿತ ಎಂಬ ಗೌರವ ಉಪಾದಿಯೂ ಇದೆ.
1880, ಜುಲೈ 12 ರಂದು ವಿಜಯಪುರದಲ್ಲಿ ಆಲೂರು ಭೀಮರಾಯ ಮತ್ತು ಭಾಗೀರಥಮ್ಮ ದಂಪತಿ ಮಗನಾಗಿ ಆಲೂರು ವೆಂಕಟರಾಯರು ಜನಿಸಿದರು. ಇವರ ಹಿರಿಯರು ಧಾರವಾಡ ಸಮೀಪದ ಆಲೂರು ಬಳಿ ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ವೆಂಕಟರಾಯರು ನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. 1905 ರಲ್ಲಿ ಮುಂಬಯಿಯಲ್ಲಿ ಎಲ್.ಎಲ್.ಬಿ. ಪದವಿ ಪಡೆದ ನಂತರ ಧಾರವಾಡಕ್ಕೆ ಮರಳಿದರು. ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇವರ ಸಹಪಾಠಿಗಳಾಗಿದ್ದವರು ಸೇನಾಪತಿ ಬಾಪಟ್ ಮತ್ತು ವೀರ ಸಾವರ್ಕರ್. ಫರ್ಗ್ಯೂಸನ್ ಆಂಗ್ಲರ ಆಳ್ವಿಕೆಯಲ್ಲಿ ಆರಂಭಿಸಲ್ಪಟ್ಟ ಕಾಲೇಜಾಗಿದ್ದರು 1920 ರ ಹೊತ್ತಿಗೆ ಹೆಚ್ಚಾಗಿ ದೇಶಭಕ್ತರೇ ಇದ್ದ ಶಿಕ್ಷಣ ಸಂಸ್ಥೆಯಾಗಿ ಮಾರ್ಪಾಡಾಗಿತ್ತು. ಸ್ವಾತಂತ್ರ್ಯದ ದನಿ ಮೊಳಗುತ್ತಿದ್ದ ಆ ಸಂದರ್ಭದಲ್ಲಿ ವೀರ ಸಾವರ್ಕರ್ರಿಗೆ ತಂಗಲು ವಸತಿ ವ್ಯವಸ್ಥೆ ಇಲ್ಲದೇ ಹೋದಾಗ ಸ್ವಯಂ ಆಲೂರರೇ ವೀರ ಸಾವರ್ಕರ್ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಿ ಸಹಕರಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಮಂದಿ ಕ್ರಾಂತಿಕಾರಿ ದೇಶಭಕ್ತರ ಮಧ್ಯೆ ಇದ್ದ ಆಲೂರರು ಸಹಜವಾಗಿ ರಾಷ್ಟ್ರೀಯತೆಯ ಹರಿಕಾರರೇ ಆಗಿದ್ದರು. ಮಹಾರಾಷ್ಟ್ರೀ ಸಂಸ್ಕೃತಿಯನ್ನೇ ಧ್ಯೇಯವಾಗಿಸಿ ಆರಂಭಿಸಲ್ಪಟ್ಟಿದ್ದ ಹಲವು ಚಳುವಳಿಗಳು ಅಲೂರರನ್ನು ತಮ್ಮ ನಾಡು, ನುಡಿ, ಕಾಯಕದತ್ತ ತೊಡಗುವಂತೆ ಮಾಡಿತು ಎಂದರೆ ತಪ್ಪಾಗದು. ಒಂದೊಮ್ಮೆ ರಜಾ ಸಂದರ್ಭ ಕನ್ನಡನಾಡಿನ ಐತಿಹಾಸಿಕ ತಾಣಗಳಿಗೆ ಭೇಟಿ ಕೊಟ್ಟ ಆಲೂರರಿಗೆ, ಹಂಪೆಯ ಪೂರ್ವ ಇತಿಹಾಸ ಸಾಕಷ್ಟು ಪ್ರಭಾವಿಸಿತು. ಚಾರಿತ್ರಾರ್ಹವಾದ ವಿಜಯನಗರ ಸಾಮ್ರಾಜ್ಯದ ಶ್ರೀಮಂತಿಕೆ ಮಾತ್ರವಲ್ಲದೆ, ಎಲ್ಲ ಕನ್ನಡಗಿರು ಹೆಮ್ಮೆ ಪಡಲೇಬೇಕಾದ ಹೋಯ್ಸಳ, ಚಾಲುಕ್ಯರ ಐತಿಹಾಸಿಕತೆಗಳನ್ನು ತಮ್ಮ ಲೇಖನಿ ಮೂಲಕ ಬರೆದು ಪ್ರಕಟಿಸಿ ಎಲ್ಲರೂ ಓದುವಂತೆ ಮಾಡಿದರು. ಪ್ರತಿಯೋರ್ವ ಕನ್ನಡಿಗನು ತನ್ನ ಚರಿತ್ರೆಯ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಸ್ವಾಭಿಮಾನದಿಂದ ಅದರ ಬಗ್ಗೆ ಹೇಳಿಕೊಳ್ಳಬೇಕು ಎಂಬುದು ಅವರ ಬಯಕೆಯಾಗಿತ್ತು. ಹಿರಿಯ ಸಾಹಿತಿಗಳ ಭೇಟಿ ಅವರೊಂದಿಗಿನ ಅಭಿಪ್ರಾಯ ಹಂಚಿಕೆ, ಅವರಲ್ಲಿ ತಮ್ಮ ಸಂಪಾದಕತ್ವದ ಪತ್ರಿಕೆಗೆ ಲೇಖನಗಳನ್ನು ಸ್ವೀಕರಿಸಿ ಪ್ರಕಟಿಸುವುದು, ಜನಸಾಮಾನ್ಯರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬರೆಯಲು ಉತ್ತೇಜಿಸುವುದು ಇವರ ನಿರಂತರ ಕಾಯಕವಾಗಿತ್ತು. ಈಗಿನ ಕರ್ನಾಟಕದ ಕೊಂಕಣ ಭಾಗ, ಉತ್ತರದ ಬೆಳಗಾಂ, ಧಾರವಾಡ, ಪೂರ್ವದ ಹೈದ್ರಾಬಾದ್ ಕರ್ನಾಟಕದ ಮೂಲೆ ಮೂಲೆಗೆ ಸಂಚರಿಸಿದ ಇವರು ಜನರಲ್ಲಿ ಏಕೀಕರಣದ ಅಗತ್ಯತೆ ಮತ್ತು ಅದರ ಮಹತ್ವದ ಬಗ್ಗೆ ತಿಳಿಸಿ ಎಲ್ಲರನ್ನು ಒಗ್ಗೂಡಿಸಿದರು. ಇವರ ನಿರಂತರ ಶ್ರಮದ ಮೂಲಕ ಸ್ಥಳೀಯ ಮಟ್ಟದಲ್ಲಿ ಜನರನ್ನು ಒಗ್ಗೂಡಿಸಿ ಬ್ರಿಟಿಷರ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದ ಕರುನಾಡಿನ ಹಲವು ಭಾಗಗಳನ್ನು ಜೋಡಿಸಲು ಸಾಧ್ಯವಾಗಿತ್ತು.
ಪ್ರಾದೇಶಿಕವಾದ ರಾಷ್ಟ್ರೀಯತೆಗೆ ವಿರುದ್ಧವಲ್ಲ ಹಾಗೆಯೇ ರಾಷ್ಟ್ರೀಯತೆ ಪ್ರಾದೇಶಿಕತೆಗೂ ವಿರೋಧಿಯಲ್ಲ ಎಂದು ನಂಬಿದ್ದ ಆಲೂರು ವೆಂಕಟರಾಯರು ತಮ್ಮ ಜೀವನದುದ್ದಕ್ಕೂ ಕನ್ನಡತನವನ್ನೇ ಮೇಳೈಸುವಂತೆ ಮಾಡಿದರು. ಬಾಲಗಂಗಾಧರ ತಿಲಕರ ಧಾರ್ಮಿಕ ಸಾಮಾಜಿಕ ರಾಷ್ಟ್ರೀಯ ಚಳುವಳಿಗಳಿಂದ ಪ್ರೇರಿತರಾಗಿದ್ದ ಆಲೂರು ತಿಲಕರ ಕಾರ್ಯವೈಖರಿಯಿಂದ ಪ್ರಭಾವಿತರಾಗಿದ್ದರು.
ಚಂದ್ರೋದಯ, ಕರ್ನಾಟಕ ಪತ್ರ, ರಾಜಹಂಸ, ಕರ್ನಾಟಕ ವೃತ್ತ ಮೊದಲಾದ ಪತ್ರಿಕೆ, ಮಾಸಿಕಗಳನ್ನು ಆರಂಭಿಸಿದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿದ್ಯಾರಣ್ಯ ಚರಿತ್ರೆ ಇವರ ಮೊದಲ ಕೃತಿ, ಬಾಲಗಂಗಾಧರ ತಿಲಕರ ಗೀತಾ ರಹಸ್ಯ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿದವರು ಆಲೂರು ವೆಂಕಟರಾಯರು.
1956 ನ. 1 ರಂದು ಕರ್ನಾಟಕ ರಾಜ್ಯ ಏಕೀಕರಣವಾದ ದಿನದಂದು ಬಹಳ ಸಂತಸಪಟ್ಟ ಆಲೂರು. ಹಂಪೆಗೆ ತೆರಳಿ ತಾಯಿ ಭುವನೇಶ್ವರಿಗೆ ನಮಿಸಿ, ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಿದ್ದರಂತೆ, ಹೀಗೆ ಕರ್ನಾಟಕದ ಕುಲ ಪುರೋಹಿತ ಎಂದು ಕರೆಯಿಸಿಕೊಂಡ ಇವರಿಗೆ 1963 ರಲ್ಲಿ ಬೆಂಗಳೂರಿನಲ್ಲಿ ವಿಶೇಷವಾಗಿ ಸತ್ಕರಿಸಿ ಗೌರವಿಸಲಾಗಿತ್ತು.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.