ಭಾರತದ ಬಹುತೇಕ ರೈತರು ಬಹಳ ಬಡತನದಿಂದ ಜೀವನವನ್ನು ನಡೆಸುತ್ತಿದ್ದಾರೆ. ದೇಶದ ರೈತರ ಸರಾಸರಿ ವಾರ್ಷಿಕ ಆದಾಯವು ಕೇವಲ 77 ಸಾವಿರ ರೂಪಾಯಿಗಳಷ್ಟು. ಬಿಹಾರದಂತಹ ರಾಜ್ಯಗಳ ರೈತರ ವಾರ್ಷಿಕ ಆದಾಯ 47 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿದೆ. ದೇಶದ 60% ಜನರು ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ದೇಶದ ಜಿಡಿಪಿಯಲ್ಲಿ ಕೃಷಿ ವಲಯದ ಕೊಡುಗೆ ಕೇವಲ 16% ಮಾತ್ರ. ದೇಶದ 60% ಜನತೆ ದೇಶದ 16% ಆದಾಯವನ್ನು ಹಂಚಿಕೊಂಡು ಬದುಕಬೇಕಾದ ದುಸ್ಥಿತಿ ಇದೆ. ದೇಶದ ರೈತರಲ್ಲಿ ಪ್ರತೀ ಮೂವರಲ್ಲಿ ಒಬ್ಬ ರೈತ ಬಡತನದ ರೇಖೆಗಿಂತ ಕೆಳಗೆ ಇದ್ದಾನೆ ಎಂದು ಪಟಿಯಾಲಾದ ಪಂಜಾಬಿ ಯುನಿವರ್ಸಿಟಿಯು 2017 ನೇ ಇಸವಿಯಲ್ಲಿ ನಡೆಸಿದ ಅಧ್ಯಯನವು ಹೇಳಿದೆ. ಸಣ್ಣ ಹಿಡುವಳಿ ಜಮೀನು, ಕಡಿಮೆ ಇಳುವರಿ, ನೀರಿನ ಕೊರತೆ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಪ್ರಾಕೃತಿಕ ಅವಘಡಗಳು, ಸಾಂಪ್ರದಾಯಿಕ ಕೃಷಿ ಪದ್ಧತಿಗೆ ರೈತರು ಇನ್ನೂ ಜೋತು ಬಿದ್ದಿರುವುದು, ಮಧ್ಯವರ್ತಿಗಳಿಂದ ವಂಚನೆ ಮೊದಲಾದ ವಿಚಾರಗಳು ರೈತರನ್ನು ಬಡವರನ್ನಾಗಿಯೇ ಉಳಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ರೈತರ ಜೀವನ ಮಟ್ಟದ ಸುಧಾರಣೆಗೆ ಸರಕಾರವು ಬಹಳ ಯೋಜನೆಗಳನ್ನು ಹಮ್ಮಿಕೊಂಡಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಿದರೆ ಮಾತ್ರ ರೈತರ ಜೀವನಮಟ್ಟ ಸುಧಾರಣೆಯಾಗಲು ಸಾಧ್ಯ ಎಂದು ಅರ್ಥ ಮಾಡಿಕೊಂಡಿರುವ ಕೇಂದ್ರ ಸರಕಾರವು 2022 ನೇ ಇಸವಿಯ ಒಳಗಾಗಿ ದೇಶದ ಎಲ್ಲಾ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಯೋಜನೆಯನ್ನು ಹಾಕಿಕೊಂಡಿದೆ. ಹಲವು ವರ್ಷಗಳ ಮೊದಲು ರೈತರಿಗೆ ಸರಿಯಾಗಿ ರಸಗೊಬ್ಬರವೇ ಸಿಗುತ್ತಿರಲಿಲ್ಲ. ಸರಕಾರವು ಸಬ್ಸಿಡಿ ಸಹಿತವಾಗಿ ಕೊಡುತ್ತಿದ್ದ ರಸಗೊಬ್ಬರವನ್ನು ಉದ್ಯಮಿಗಳು ಅಕ್ರಮವಾಗಿ ಖರೀದಿಸಿ ಕೈಗಾರಿಕಾ ಉದ್ದೇಶಗಳಿಗೆ ಬಳಸುತ್ತಿದ್ದರು. ಇದರ ಪರಿಣಾಮವಾಗಿ ರೈತರಿಗೆ ರಸ ಗೊಬ್ಬರ ಸಿಗುತ್ತಿರಲಿಲ್ಲ. ರಸಗೊಬ್ಬರ ಸಿಗದೆ ರೈತರು ಪ್ರತಿಭಟನೆ ನಡೆಸಿ, ಅದು ಹಿಂಸಾತ್ಮಕ ರೂಪವನ್ನು ತಾಳಿ ರೈತರ ಮೇಲೆ ಪೋಲೀಸರು, ಗೋಲೀಬಾರ್, ಲಾಠೀ ಚಾರ್ಜ್ ನಡೆಸಿದ ಎಷ್ಟೋ ಪ್ರಕರಣಗಳೂ ಈ ಹಿಂದೆ ನಡೆದಿವೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರಕಾರವು ಆಡಳಿತಕ್ಕೆ ಬಂದ ನಂತರ ರಸಗೊಬ್ಬರಕ್ಕೆ ಕಹಿಬೇವನ್ನು ಬೆರಸಿ ರಸಗೊಬ್ಬರವು ಕೈಗಾರಿಕಾ ವಲಯದಲ್ಲಿ ದುರುಪಯೋಗವಾಗದಂತೆ ತಡೆಗಟ್ಟಿದೆ. ರಸಗೊಬ್ಬರವನ್ನು ಖರೀದಿದಾರನ ಆಧಾರ್ ಲಿಂಕ್ ಮಾಡಿ ಅರ್ಹರಿಗೇ ಸಬ್ಸಿಡಿ ಸಿಗುವಂತೆ ಮಾಡಲಾಗಿದ್ದು ಇತ್ತೀಚೆಗಿನನ ವರ್ಷಗಳಲ್ಲಿ ರೈತರಿಗೆ ರಸಗೊಬ್ಬರವು ಯಥೇಚ್ಚವಾಗಿ ಸಿಗುವಂತಾಗಿದೆ. ರಸಗೊಬ್ಬರದ ಬೆಲೆಯೂ ಗಣನೀಯವಾಗಿ ಇಳಿದಿದೆ.
ರೈತರು ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ ಮೊದಲಾದ ಕಾರಣಗಳಿಂದ ನಷ್ಟವನ್ನು ಅನುಭವಿಸುವಂತಾದ ಸಮಯದಲ್ಲಿ ಅವರಿಗಾದ ನಷ್ಟವನ್ನು ಭರಿಸುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಎಂಬ ಹೆಸರಿನ ಫಸಲಿನ ಮೇಲಿನ ವಿಮೆ ಯೋಜನೆಯನ್ನು 2016 ರಲ್ಲಿ ಜಾರಿ ಮಾಡಲಾಗಿದೆ. ರೈತರಿಗೆ ಕಡಿಮೆ ಮೊತ್ತದ ವಿಮೆಯನ್ನು ನಿಗದಿಪಡಿಸಲಾಗಿದ್ದು, ರೈತರು ಪಾವತಿಸಿದ ವಿಮೆಯ ಕಂತಿನ ಮೊತ್ತದ ಐದು ಪಟ್ಟು ಮೊತ್ತವನ್ನು ಸರಕಾರ ಭರಿಸುತ್ತದೆ. 2016-17 ರಲ್ಲಿ 12,949 ಕೋಟಿ ರುಪಾಯಿಗಳ ಬೆಳೆನಷ್ಟ ಪರಿಹಾರವನ್ನು ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರಿಗೆ ಕೊಡಲಾಗಿತ್ತು. 2018 ರ ಖಾರಿಫ್ ಸೀಸನ್ ಒಂದರಲ್ಲೇ ಬೆಳೆ ನಷ್ಟಕ್ಕೆ 9046 ಕೋಟಿ ರುಪಾಯಿಗಳ ಪರಿಹಾರವನ್ನು ರೈತರಿಗೆ ಕೊಡಲಾಗಿದೆ. 2020-21 ರಲ್ಲಿ ಫಸಲ್ ಬಿಮಾ ಯೋಜನೆಯಡಿಯಲ್ಲಿ, 15,306 ಕೋಟಿ ರುಪಾಯಿಗಳನ್ನು ಸರಕಾರವು ವಿಮಾ ಮೊತ್ತವಾಗಿ ಪಾವತಿ ಮಾಡಿತ್ತು. 2021-22 ರ ಬಜೆಟ್ ನಲ್ಲಿ ಫಸಲ್ ಬಿಮಾ ಯೋಜನೆಗೆ ಸರಕಾರವು 16,000 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದೆ. ಈ ರೈತರಿಗೆ ಹಿಂದೆಂದೂ ಇರದ ಆರ್ಥಿಕ ಭದ್ರತೆಯನ್ನು ಈ ಬೆಳೆ ವಿಮೆ ಯೋಜನೆಯು ನೀಡಿದೆ. ಕೃಷಿ ಯಾಂತ್ರೀಕರಣಕ್ಕೂ ಸಹಾಯಧನವನ್ನು ರೈತರ ಖಾತೆಗಳಿಗೆ ನೇರ ತಲುಪಿಸಲಾಗುತ್ತಿದೆ. ಪ್ರಧಾನ್ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯ ಮೂಲಕ ದೇಶದ 11 ಕೋಟಿ ರೈತರಿಗೆ ವಾರ್ಷಿಕವಾಗಿ 3 ಕಂತುಗಳಲ್ಲಿ ತಲಾ 6000 ರುಪಾಯಿಗಳನ್ನು ವಿತರಿಸಲಾಗುತ್ತಿದೆ. ಈ ಬಾರಿಯ ಬಜೆಟ್ ನಲ್ಲಿ 75,000 ಕೋಟಿ ರುಪಾಯಿಗಳನ್ನು ಕಿಸಾನ್ ಸಮ್ಮಾನ್ ನಿಧಿ ಯೋಜನೆಗೋಸ್ಕರ ಮೀಸಲಿಡಲಾಗಿದೆ. ಈ ವರ್ಷದ ಬಜೆಟ್ನಲ್ಲಿ ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಯೋಜನೆಯಡಿಯಲ್ಲಿ 16.5 ಲಕ್ಷ ಕೋಟಿ ರುಪಾಯಿಗಳ ಕೃಷಿ ಸಾಲವನ್ನು ಬ್ಯಾಂಕ್ಗಳ ಮೂಲಕ ವಿತರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಕಳೆದ 6 ವರ್ಷಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಕೊಡಲಾಗುತ್ತಿದ್ದ ಕನಿಷ್ಠ ಬೆಂಬಲ ಬೆಲೆಯನ್ನು ಬಹುತೇಕ ದ್ವಿಗುಣಗೊಳಿಸಲಾಗಿದೆ. 2013-14 ರಲ್ಲಿ ಜೋಳದ ಬೆಂಬಲ ಬೆಲೆ 1520 ಇದ್ದಿದ್ದು 2019-20 ರಲ್ಲಿ ಜೋಳದ ಬೆಂಬಲ ಬೆಲೆ ರೂ 2570 ಕ್ಕೆ( 169% ಏರಿಕೆ) ಏರಿಸಲ್ಪಟ್ಟಿದೆ. ಅದೇ ರೀತಿ ರಾಗಿಗೆ ರೂಪಾಯಿ 1325 ಬೆಂಬಲ ಬೆಲೆ ಇದ್ದಿದ್ದು ಈಗ ಆ ಮೊತ್ತ ರೂ 3150 ಕ್ಕೆ(238% ಏರಿಕೆ) ಏರಿಸಲ್ಪಟ್ಟಿದೆ. 2013-14 ರಲ್ಲಿ ಒಂದು ಕ್ವಿಂಟಾಲ್ ಭತ್ತಕ್ಕೆ 1080 ರೂಪಾಯಿಗಳ ಬೆಂಬಲ ಬೆಲೆ ಇದ್ದರೆ ಈಗ ಈ ಬೆಲೆ ರೂ 1815 ಕ್ಕೆ(168% ಏರಿಕೆ) ಏರಿಸಲ್ಪಟ್ಟಿದೆ. 2013-14 ರಲ್ಲಿ ಗೋದಿಗೆ ಕ್ವಿಂಟಾಲ್ ಒಂದಕ್ಕೆ 1350 ರೂಪಾಯಿಗಳ ಬೆಂಬಲ ಬೆಲೆ ಇದ್ದಿದ್ದು 2020-21 ಕ್ಕೆ ಅನ್ವಯವಾಗುವಂತೆ ಈ ಮೊತ್ತವನ್ನು 1925 ರೂಪಾಯಿಗಳಿಗೆ ಏರಿಸಲಾಗಿದೆ. ಬೆಂಬಲ ಬೆಲೆಯನ್ನು ಗಣನೀಯವಾಗಿ ಏರಿಸಿರುವುದು ರೈತರು ಬೆಲೆ ಕುಸಿತದ ನಷ್ಟಕ್ಕೆ ಸಿಲುಕದಂತೆ ತಡೆಯುತ್ತದೆ.
ರೈತರ ಜೀವನ ಮಟ್ಟವನ್ನು ಸುಧಾರಿಸುವ ಯೋಜನೆಯ ಮುಂದುವರಿದ ಭಾಗವಾಗಿಯೇ ರೈತರ ಕಾಯಿದೆ 2020 ನ್ನು ಕೇಂದ್ರ ಸರಕಾರವು ಜಾರಿ ಮಾಡಿದೆ. ಈ ಕಾಯಿದೆಯಡಿಯಲ್ಲಿ ಮೂರು ಭಾಗಗಳಿವೆ.
1. ರೈತರ ಉತ್ಪಾದನಾ ವಸ್ತುಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯಿದೆ
ಈ ಕಾಯಿದೆಯಡಿಯಲ್ಲಿ ಕೃಷಿಕರಿಗೆ ತಾವು ಬೆಳೆದ ವಸ್ತುಗಳನ್ನು ಎಪಿಎಂಸಿ ಮಂಡಿಯ ಹೊರಗೂ ಮಾರುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೊಸ ಕಾಯಿದೆಯ ಅನ್ವಯ ರೈತರು ತಾವು ಬೆಳೆಸಿದ ವಸ್ತುಗಳನ್ನು ಹೊರ ರಾಜ್ಯಗಳಿಗೆ ಕೂಡಾ ತೆಗೆದುಕೊಂಡು ಹೋಗಿ ಮಾರಾಟ ಮಾಡಬಹುದು. ನೊಂದಾಯಿತ ಖಾಸಗಿ ಖರೀದಿದಾರರೂ ರೈತರ ಕೈಯಿಂದ ನೇರವಾಗಿ ಖರೀದಿ ಮಾಡುವ ಅವಕಾಶ ಇದೆ. ಇ-ಕಾಮರ್ಸ್, ಇ-ಟ್ರೇಡಿಂಗ್ ಮೂಲಕವೂ ರೈತರು ಮಾರಾಟ ಮಾಡಬಹುದು. ಸರಕಾರವು ರೈತರ ಮಾರಾಟದ ಮೇಲೆ ಯಾವುದೇ ರೀತಿಯ ಮಾರುಕಟ್ಟೆ ಶುಲ್ಕ, ಸೆಸ್ಗಳನ್ನು ಹೇರುವಂತಿಲ್ಲ. ಈ ಕಾಯಿದೆಯು ಎಪಿಎಂಸಿ ಶುಲ್ಕ, ಏಜೆಂಟ್ ಕಮಿಷನ್ಗಳ ಹೊರೆಯಿಂದ ರೈತರನ್ನು ರಕ್ಷಿಸುತ್ತದೆ. ಈಗಿರುವ ಎಪಿಎಂಸಿ ಮಂಡಿಗಳಲ್ಲಿ ಕಮಿಷನ್ ಏಜೆಂಟ್ಗಳಿಗೆ (ಇವರನ್ನು ಅರ್ಥಿಯಾಗಳು ಎಂದು ಕರೆಯಲಾಗುತ್ತದೆ) 2.5 % ಕಮಿಷನ್ ಕೊಡಬೇಕಾಗುತ್ತದೆ. ಎಪಿಎಂಸಿ ಚಾರ್ಜ್ಗಳು ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಪಂಜಾಬ್ ರಾಜ್ಯದಲ್ಲಿ ಎಪಿಎಂಸಿ ಶುಲ್ಕ 3%, ವಹಿವಾಟು ಕಮಿಷನ್ 3% ಹಾಗೂ ಅರ್ಥಿಯಾಗಳ ಕಮಿಷನ್ 2.5%, ಹೀಗೆ ರೈತನು ತನ್ನ ವಸ್ತುಗಳನ್ನು ಮಾರಾಟ ಮಾಡಿದ ಮೇಲೆ ದೊರಕಿದ ಮೊತ್ತದಲ್ಲಿ ಒಟ್ಟು 8.5 % ಮೊತ್ತವನ್ನು ಎಪಿಎಂಸಿಯಲ್ಲಿ ಪಾವತಿ ಮಾಡಬೇಕಾಗುತ್ತದೆ. ಹೊಸ ಕಾನೂನಿನಿಂದಾಗಿ ರೈತರಿಗೆ ಮಂಡಿಯಲ್ಲಿ ಮಧ್ಯವರ್ತಿಗಳಿಗೆ ಹಾಗೂ ಎಪಿಎಂಸಿಗೆ ಕೊಡುತ್ತಿರುವ ಮೊತ್ತ ಉಳಿತಾಯವಾಗುತ್ತದೆ. ಬೇರೆ ರಾಜ್ಯಗಳಲ್ಲಿ ಹೆಚ್ಚು ಬೆಲೆ ಸಿಗುವುದಿದ್ದರೆ ರೈತರು ಬೇರೆ ರಾಜ್ಯಗಳಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಿ ಮಾರುವ ಅವಕಾಶವನ್ನೂ ಈ ಕಾಯಿದೆ ಕಲ್ಪಿಸಿಕೊಟ್ಟಿದೆ. ಪ್ರಾಯೋಗಿಕವಾಗಿಯೂ ಮುಕ್ತ ಮಾರುಕಟ್ಟೆಯು ರೈತರಿಗೆ ಲಾಭದಾಯಕವಾಗಿದೆ. ಕರ್ನಾಟಕದಲ್ಲಿ ಕಾಫಿ ಹಾಗೂ ಅಡಿಕೆ ಬೆಳೆಗಾರರು ತಮಗೆ ದೊರಕಿದ ಮುಕ್ತ ಮಾರುಕಟ್ಟೆಯ ಸೌಲಭ್ಯದಲ್ಲಿ ತಮ್ಮ ಕೃಷಿ ಉತ್ಪನ್ನಗಳಿಗೆ ನ್ಯಾಯಯುತವಾದ ಹಾಗೂ ಉತ್ತಮ ಬೆಲೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಥಳೀಯ ಮಧ್ಯವರ್ತಿಗಳು ಮಾಡುತ್ತಿರುವ ವಂಚನೆಯಿಂದ ರೈತನಿಗೆ ಹೊರಬರಲು ಈ ಕಾಯಿದೆಯು ಅವಕಾಶವನ್ನು ಕೊಟ್ಟಿದೆ. ಹೊಸ ಕಾಯಿದೆಯನ್ವಯ ಎಪಿಎಂಸಿಯನ್ನು ಮುಚ್ಚಲಾಗುತ್ತದೆ ಹಾಗೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ತೆಗೆದು ಹಾಕಲಾಗುವುದು ಎಂದು ಕೆಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಸುಳ್ಳು ಹೇಳಿ ರೈತರನ್ನು ದಾರಿತಪ್ಪಿಸುತ್ತಿವೆ. ಆದರೆ ಎಪಿಎಂಸಿ ವ್ಯವಸ್ಥೆ ಈ ಹಿಂದಿನಂತೆಯೇ ಮುಂದುವರಿಯಲಿದೆ ಹಾಗೂ ಎಪಿಎಂಸಿಯಲ್ಲಿ ಮಾರಾಟ ಮಾಡುವವರೂ ಈ ಹಿಂದಿನಂತೆಯೇ ಮಾರಾಟ ಮಾಡಲು ಯಾವುದೇ ಅಡ್ಡಿ ಈ ಕಾಯಿದೆಯಲ್ಲಿಲ್ಲ. ಕನಿಷ್ಠ ಬೆಂಬಲ ಬೆಲೆಯು ಕೂಡಾ ಈ ಹಿಂದಿನಂತೆಯೇ ಮುಂದುವರಿಯಲಿದೆ.
2. ರೈತರ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕಾಯಿದೆ( ರೈತರ ಸಬಲೀಕರಣ ಮತ್ತು ಸಂರಕ್ಷಣೆ)
ಈ ಕಾಯ್ದೆಯಡಿಯಲ್ಲಿ ಗುತ್ತಿಗೆ ಕೃಷಿಯ ಸಂದರ್ಭದಲ್ಲಿ ರೈತರ ಹಿತಾಸಕ್ತಿಗಳನ್ನು ಕಾಪಾಡುವ ವಿಚಾರಕ್ಕೆ ಮಹತ್ವವನ್ನು ಕೊಡಲಾಗಿದೆ ಮತ್ತು ರೈತರ ಹಾಗೂ ಖರೀದಿದಾರರ ನಡುವಿನ ಒಪ್ಪಂದಗಳಿಗೆ ಕಾನೂನಿನ ಚೌಕಟ್ಟನ್ನು ಹಾಕಿ ಕೊಡಲಾಗಿದೆ. ಗುತ್ತಿಗೆಗೆ ತೆಗೆದುಕೊಂಡ ವ್ಯಕ್ತಿ ಹಾಗೂ ಸಂಸ್ಥೆಗಳು ಗುತ್ತಿಗೆ ಕೃಷಿಯ ಸಂದರ್ಭದಲ್ಲಿ ಕೃಷಿಕನಿಗೆ ಯಾವುದೇ ರೀತಿಯ ಮೋಸವನ್ನು ಮಾಡದಂತೆ ಈ ಕಾಯಿದೆ ಕಾನೂನು ಭದ್ರತೆಯನ್ನು ಕೊಟ್ಟಿದೆ. ತನ್ನ ಸಂಸ್ಥೆಯು ಗುತ್ತಿಗೆ ಕೃಷಿಯಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಮುಖೇಶ್ ಅಂಬಾನಿ ಹೇಳುತ್ತಿದ್ದರೂ, ಅಂಬಾನಿ ಅದಾನಿ, ಟಾಟಾಗಳಂತಹ ಬೃಹತ್ ಉದ್ಯಮಿಗಳಿಗೆ ಅನುಕೂಲವಾಗುವಂತೆ ಈ ಕಾನೂನನ್ನು ರಚಿಸಲಾಗಿದೆ ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತಿದೆ. ಈಗಾಗಲೇ ಪಂಜಾಬ್ ಹರಿಯಾಣಾಗಳಲ್ಲಿ ಗುತ್ತಿಗೆ ಕೃಷಿ ವ್ಯವಸ್ಥೆ ಜಾರಿಯಲ್ಲಿದೆ. ನೆಸ್ಲೆ, ಹಿಂದುಸ್ಥಾನ್ ಯೂನಿಲೀವರ್ ಮೊದಲಾದ ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳು ಹಳೇ ಎಪಿಎಂಸಿ ಕಾಯಿದೆಯಡಿಯಲ್ಲಿ ಈಗಾಗಲೇ ಭಾರತದಲ್ಲಿ ಗುತ್ತಿಗೆ ಕೃಷಿಯನ್ನು ಮಾಡುತ್ತಿರುವಾಗ ಹೊಸ ಕಾಯಿದೆಯು ಅಂಬಾನಿ, ಅದಾನಿಗಳ ಪರವಾಗಿದೆ ಎಂದು ಆಪಾದನೆ ಮಾಡುವುದರಲ್ಲಿ ಅರ್ಥವಿಲ್ಲ. ಈ ಕಾಯಿದೆಯ ಮುಖ್ಯ ಉದ್ದೇಶ ಗುತ್ತಿಗೆ ಕೃಷಿಯ ಸಂದರ್ಭದಲ್ಲಿ ರೈತನಿಗೆ ಕಾನೂನಾತ್ಮಕ ರಕ್ಷಣೆ ಕೊಡುವುದು ಮಾತ್ರ.
3. ಅಗತ್ಯ ಸರಕು ವಸ್ತುಗಳ ಕಾಯ್ದೆಯ ತಿದ್ದುಪಡಿ
ಈ ಕಾಯಿದೆಯಡಿಯಲ್ಲಿ ಸಿರಿಧಾನ್ಯಗಳು, ಬೇಳೆಕಾಳುಗಳು, ಆಲೂಗಡ್ಡೆ, ಈರುಳ್ಳಿ, ಖಾದ್ಯ ಎಣ್ಣೆಬೀಜಗಳು ಹಾಗೂ ಖಾದ್ಯ ಎಣ್ಣೆಗಳನ್ನು ಅಗತ್ಯ ವಸ್ತು ಸರಕುಗಳ ಪಟ್ಟಿಯಿಂದ ಹೊರಗಿಡಲಾಗಿದ್ದು ರೈತರಿಗೆ ಸಮರ್ಪಕ ಬೆಲೆ ಬರುವ ವರೆಗೂ ಈ ವಸ್ತುಗಳನ್ನು ದಾಸ್ತಾನು ಇಡುವುದಕ್ಕೆ ಅನುಮತಿಯನ್ನು ಕೊಡಲಾಗಿದೆ. ಈ ಮೊದಲು ಅಗತ್ಯ ವಸ್ತುಗಳ ದಾಸ್ತಾನು ಕಾಯಿದೆಯಡಿಯಲ್ಲಿ ರೈತರರಿಗೆ ಮೇಲೆ ಹೇಳಲಾದ ಕೃಷಿ ವಸ್ತುಗಳನ್ನು ದಾಸ್ತಾನು ಇಡುವುದಕ್ಕೆ ಅವಕಾಶವಿರಲಿಲ್ಲ. ಈಗ ಸೂಕ್ತ ಬೆಲೆ ಬರುವವರೆಗೆ ರೈತರು ಈ ವಸ್ತುಗಳನ್ನು ದಾಸ್ತಾನು ಇಡಬಹುದು. ಬೆಲೆಯೇರಿಕೆಯಂತಹ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಈ ವಸ್ತುಗಳ ದಾಸ್ತಾನು ವಿಚಾರದಲ್ಲಿ ಸರಕಾರವು ಮಧ್ಯಪ್ರವೇಶಿಸಬಹುದಾಗಿದೆ.
ಮೇಲೆ ಹೇಳಲಾದ ಮೂರೂ ರೈತರ ಕಾಯಿದೆಗಳು ರೈತರ ಹಿತರಕ್ಷಣೆಗಾಗಿಯೇ ರೂಪುಗೊಂಡಿದ್ದು ಇವುಗಳಿಂದಾಗಿ ರೈತರ ಮಾರುಕಟ್ಟೆ ವಿಸ್ತಾರವಾಗಲಿದೆ. ಹೊಸ ಕಾನೂನು ರೈತರಿಗೆ ಅಂತಾರಾಜ್ಯ ಮಾರುಕಟ್ಟೆಯ ಸೌಲಭ್ಯವನ್ನು ಒದಗಿಸುವುದರಿಂದ ರೈತರ ಕಾನೂನುಗಳು ರಾಜ್ಯ ಸರಕಾರದ ವ್ಯಾಪ್ತಿಯ ಒಳಗೆ ಉಳಿಯುವುದಿಲ್ಲ
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಅರ್ಥಶಾಸ್ತ್ರಜ್ಞರಾದ ಗೀತಾ ಗೋಪೀನಾಥನ್ ಅವರು ʼಭಾರತದ ಹೊಸ ರೈತರ ಕಾನೂನುಗಳು ರೈತರ ಆದಾಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆʼ ಎಂದು ಹೇಳುತ್ತಾರೆ. ಭಾರತದ ಹಸಿರು ಕ್ರಾಂತಿಯ ಹರಿಕಾರೆರೆಂದೇ ಗುರುತಿಸಲ್ಪಟ್ಟಿರುವ ಎಮ್. ಎಸ್. ಸ್ವಾಮಿನಾಥನ್ ʼಹೊಸ ಕೃಷಿ ಕಾಯಿದೆಗಳು ಕೃಷಿಕರ ಮಾರುಕಟ್ಟೆಯನ್ನು ವಿಸ್ತರಿಸಿದೆʼ ಎಂದು ಹೇಳುತ್ತಾರೆ. ʼದೇಶದ ಕೃಷಿಕರ ಆದಾಯವು ತೀರಾ ಕೆಳಮಟ್ಟದಲ್ಲಿದ್ದು, ಇದು ದೇಶದ ಜನತೆಯ ತಲಾ ಜಿಡಿಪಿಯ ಅರ್ಧಕ್ಕಿಂತಲೂ ಕಡಿಮೆ. ಹೊಸಕಾನೂನುಗಳು ಭಾರತದ ಕೃಷಿ ವಲಯವನ್ನು ಉದಾರೀಕರಣಗೊಳಿಸಲಿವೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲಿವೆʼ ಎಂದು ಪ್ರಸಿದ್ಧ ಲೇಖಕ ಚೇತನ್ ಭಗತ್ ಹೇಳುತ್ತಾರೆ.
ರೈತರ ಆರ್ಥಿಕ ಮಟ್ಟದಲ್ಲಿ ಸುಧಾರಣೆಯಾಗದೆ ದೇಶದ ಉದ್ಧಾರ ಸಾಧ್ಯವಿಲ್ಲ. ಹೊಸ ರೈತರ ಕಾನೂನುಗಳು ದಿನ ಬೆಳಗಾಗುವಾಗ ರೈತರ ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆಯನ್ನೇನೂ ತರದು. ಆದರೆ ದೀರ್ಘಾವಧಿಯಲ್ಲಿ ಕಾನೂನುಗಳು ರೈತರ ಆದಾಯವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಹೊಸ ರೈತರ ಕಾನೂನ್ನು ವಿರೋಧಿಸಿ ರಾಜಕೀಯ ಲಾಭವನ್ನು ಹೊಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಕೆಲವು ರಾಜಕೀಯ ಪಕ್ಷಗಳು ನಿಜವಾಗಿಯೂ ರೈತರ ಪ್ರಗತಿಗೆ ಅಡ್ಡಗಾಲು ಇಡುತ್ತಿವೆ.
✍️ ಗಣೇಶ್ ಭಟ್ ವಾರಣಾಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.