News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
×
Home About Us Advertise With s Contact Us

ಕ್ಷಾತ್ರ ಸನ್ಯಾಸಿ, ಸಮಾಜೋದ್ಧಾರದ ಹಠಯೋಗಿ ಸ್ವಾಮಿ ಶ್ರದ್ಧಾನಂದರು

ಆರ್ಯ ಸಮಾಜದ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿಗಳ ಸ್ವಧರ್ಮ ರಕ್ಷಣೆಗೆ ಸ್ವರಾಜ್ಯ ಸ್ಥಾಪನೆಯಾಗಬೇಕು ಎಂಬ ಅಭಿಪ್ರಾಯಕ್ಕೆ ಅನುಗುಣವಾಗಿ ಕಾವಿ ಧರಿಸಿ ಸನ್ಯಾಸ ಪಾಲಿಸುತ್ತಲೇ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತವರು ಸ್ವಾಮಿ ಶ್ರದ್ಧಾನಂದರು. ಇವರು ಗಾಂಧೀಜಿಯವರಿಂದಲೇ ಮಹಾತ್ಮಾ ಎಂದು ಕರೆಸಿಕೊಂಡವರು.

1919 ಮಾರ್ಚ್ 30 ರಂದು ದೆಹಲಿಯಲ್ಲಿ ಪ್ರಕ್ಷುಬ್ದ ವಾತಾವರಣ. ಬ್ರಿಟಿಷ್ ಸರ್ಕಾರ ರೌಲಟ್ ಆಕ್ಟ್ ಎಂಬ ಕರಾಳ ಕಾನೂನಿನ ಜಾರಿಗೆ ಹೊರಟಾಗ ಜನಸಾಮಾನ್ಯರಿಂದಲೂ ತೀವ್ರ ಪ್ರತಿಭಟನೆ. ಭಾರತೀಯ ಸ್ವಾತಂತ್ರ್ಯ ಚಳವಳಿಗಾರರ ದಿಗ್ಭಂಧನಕ್ಕೆ ಅನೇಕ ದುಷ್ಟ ಕ್ರಮಗಳನ್ನು ಸೂಚಿಸಿದ್ದ ರೌಟಲ್ ಆಕ್ಟ್‌ಗೆ ಗಾಂಧೀಜಿ, ಮದನ ಮೋಹನ ಮಾಳವೀಯ ಮೊದಲ್ಗೊಂಡು ನೂರಾರು ನಾಯಕರು ಪ್ರತಿಭಟನೆ ಸೂಚಿಸಿದ್ದರು.

ಅಬ್ಬರಿಸಿದ ಧೀರ ಸಂನ್ಯಾಸಿ

ದೆಹಲಿಯ ಚಾಂದನಿ ಚೌಕ್ ನಲ್ಲೊಂದು ಎತ್ತರದ ಗಡಿಯಾರ ಗೋಪುರ, ಅದರ ಸನಿಹಕ್ಕೆ ಬಂತು ಸ್ವಾತಂತ್ರ್ಯ ಚಳವಳಿಗಾರರ ಮೆರವಣಿಗೆ. ಅದರ ನೇತೃತ್ವ ವಹಿಸಿದ್ದವರು ಆರೂಕಾಲು ಅಡಿ ಎತ್ತರದ ಭೀಮಕಾಯದ ಕಾಷಾಯ ವಸ್ತ್ರಧಾರಿ ಸನ್ಯಾಸಿ. ರೌಲಟ್ ಆಕ್ಟ್ ಹಿಂತೆದುಕೊಳ್ಳಿ ಎಂಬ ಘರ್ಜನೆಯೊಂದಿಗೆ ಮುನ್ನುಗ್ಗುತ್ತಿತ್ತು ಆ ಜಾಥಾ. ಮೊದಲೇ ಗುಪ್ತಚರ ವರದಿ ತರಿಸಿಕೊಂಡು ಇಂತಹ ಪ್ರತಿಭಟನೆಯನ್ನು ನಿರೀಕ್ಷಿಸಿದ್ದ ಬ್ರಿಟಿಷ್ ಸರ್ಕಾರ ಅದಕ್ಕೆ ಪ್ರತಿಯಾಗಿ ಸಿದ್ಧತೆ ನಡೆಸಿತ್ತು. ಚಳವಳಿಗಾರರ ಮೇಲೆ ಗುಂಡು ಹಾರಿಸಲು ಬಂದೂಕುಧಾರಿ ಗೂರ್ಖಾ ಸೈನಿಕರ ತುಕಡಿಯನ್ನು ನಿಯೋಜಿಸಲಾಗಿತ್ತು. ಅದು ಸನ್ನದ್ಧವಾಗಿ ಫಂಟಾಘರ್ ಬಳಿ ಮುಂದಿನ ಆಜ್ಞೆಗೆ ಕಾದಿತ್ತು. ಮೆರವಣಿಗೆ ಅಲ್ಲಿಗೆ ಸಮೀಪಿಸುತ್ತಿದ್ದಂತೆಯೇ ಮೇಲಾಧಿಕಾರಿಯ ಆಜ್ಞೆ ಮೇರೆಗೆ ಬಂದೂಕುಗಳನ್ನು ಚಳವಳಿಗಾರರ ಕಡೆ ತಿರುಗಿಸಿ ನಿಂತರು ಗೂರ್ಖಾ ಸೈನಿಕರು. 40 ಸಾವಿರ ಜನರಿದ್ದ ಆ ಮೆರವಣಿಗೆಯಲ್ಲಿ ಅಶಾಂತಿ ಭುಗಿಲೆದ್ದಿತು.

ಮುಂದೆ ನಿಂತಿದ್ದ ಸನ್ಯಾಸಿ ಗೂರ್ಖಾ ಸೈನಿಕರ ಬಳಿ ಸಾಗಿದರು. ಸೈನಿಕರು ಸನ್ಯಾಸಿಯ ಎದೆಗೆ ಗುರಿಯಿಟ್ಟು ಇನ್ನೇನು ಟ್ರಿಗರ್ ಒತ್ತಬೇಕು. ಮರುಕ್ಷಣವೇ ಗುಂಡು ಹಾರಿಸುವಿರಾ? ಇಗೋ ಹಾರಿಸಿ? ಎನ್ನುತ್ತ ಆ ಸನ್ಯಾಸಿ ತನ್ನ ಅಂಗಿಯ ಗುಂಡಿಗಳನ್ನು ಬಿಚ್ಚಿ ಅವರನ್ನು ಆಹ್ವಾನಿಸಿದ. ಆ ಆಜಾನು ಬಾಹುವಿನ ಎದೆಗಾರಿಕೆ ನೋಡಿ ತಬ್ಬಿಬ್ಬಾದ ಸೈನಿಕರು ಸುಮ್ಮನಾಗಿಬಿಟ್ಟರು. ಪರಿಸ್ಥಿತಿ ವಿಕೋಪಕ್ಕೆ ಸಾಗಿತ್ತು. ಅಷ್ಟರಲ್ಲಿ ಅಶ್ವಾರೋಹಿ ಸೈನಿಕ ಅಧಿಕಾರಿಯೊಬ್ಬ ಬಂದು ಮುಂದಾಗಲಿದ್ದ ಅನಾಹುತವನ್ನು ತಪ್ಪಿಸಿದ. ಆ ಧೀರ ಸನ್ಯಾಸಿ ಹೆಸರು ಸ್ವಾಮಿ ಶ್ರದ್ಧಾನಂದ. ಅವರು ಆರ್ಯ ಸಮಾಜದಿಂದ ಪ್ರೇರಿತರಾಗಿದ್ದರು. ಆರ್ಯ ಸಮಾಜದ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿಗಳ ಸ್ವಧರ್ಮ ರಕ್ಷಣೆಗೆ ಸ್ವರಾಜ್ಯ ಸ್ಥಾಪನೆಯಾಗಬೇಕು ಎಂಬ ಅಭಿಪ್ರಾಯಕ್ಕೆ ಅನುಗುಣವಾಗಿ ಕಾವಿ ಧರಿಸಿ ಸನ್ಯಾಸ ಧರ್ಮ ಪಾಲಿಸುತ್ತಲೇ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತವರು. ಗಾಂಧೀಜಿಯವರಿಂದಲೇ ಮಹಾತ್ಮ ಎಂದು ಕರೆಸಿಕೊಂಡವರು. ಶ್ರದ್ಧಾನಂದ ಎಂಬುದು ಅವರು ಸನ್ಯಾಸ ಸ್ವೀಕರಿಸಿದ ನಂತರದ ಹೆಸರು. ಬೃಹಸ್ಪತಿ ಎಂಬುದು ಜನ್ಮನಾಮ, ನಂತರ ಅವರನ್ನು ಮುನ್ಷಿರಾಮ ಎಂದು ಕರೆಯುವುದು ರೂಢಿಗೆ ಬಂತು.

ನಾಸ್ತಿಕನಾದ ಮುನ್ಷಿರಾಮ- 1856 ರ ಫೆಬ್ರವರಿ 22 ರಂದು ಪಂಜಾಬಿನ ಜಲಂಧರ್ ಜಿಲ್ಲೆಯ ತಲವನ್ ಎಂಬಲ್ಲಿ ಲಾಲಾ ನಾನಕ್ ಚಂದ್ ಎಂಬಾತನ ಮಗನಾಗಿ ಅವರ ಜನನ. ನಾನಕ್ ಚಂದ್ ಸಂಯುಕ್ತ ಪ್ರಾಂತ್ಯಗಳ ಈಗಿನ ಉತ್ತರಪ್ರದೇಶದ ಪೋಲಿಸ್ ಇನ್ಸ್ಪೆಕ್ಟರ್ ಆಗಿದ್ದ. ದರ್ಪ – ಕ್ರೌರ್ಯ ವೃತ್ತಿ ಅದು. ಅದಕ್ಕೆ ತಕ್ಕಂತಿತ್ತು ನಾನಕ್ ಚಂದ್ ನಡವಳಿಕೆ. ಅವನಿಗೆ ಊರಿಂದೂರಿಗೆ ವರ್ಗಾವಣೆ ಮಾಮೂಲಿಯಾಗಿತ್ತು. ಮನೆಯವರೆಲ್ಲರೂ ಶಿವಭಕ್ತರು. ಮುನ್ಷಿರಾಮನೂ ಆರಂಭದಲ್ಲಿ ಶಿವಭಕ್ತನೇ, ಅದೂ ಬಾಲ್ಯಾವಸ್ಥೆಯಲ್ಲಿ. ಆದರೆ ಮನಸ್ಸು ಬಿಚ್ಚಿ ಸುತ್ತಮುತ್ತಲೂ ನೋಡಲಾರಂಭಿಸಿದಾಗ ಅವನ ಆಸ್ತಿಕತೆಗೆ ಧಕ್ಕೆ ಬಂತು. ಇದಕ್ಕೆ ಪುಷ್ಠಿ ಕೊಡುವಂತೆ ಒಂದು ಘಟನೆ. ನಾನಕಲ್ ಚಂದ್ ಪದೇಪದೇ ವರ್ಗಾವಾಗುತ್ತಿರುವುದು ಸರಿಯಷ್ಟೆ. ಅವನಿಗೆ ಕಾಶಿಗೆ ವರ್ಗವಾದಾಗ ಅಲ್ಲಿಯೇ ಮುನ್ಷಿ ರಾಮನ ವಿದದ್ಯಾಭ್ಯಾಸ ಮುಂದುವರಿಯಿತು. ಕಾಶಿಯಲ್ಲಿದ್ದಾಗ ಒಮ್ಮೆ ವಿಶ್ವನಾಥನ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋದಾಗ, ರೇವಾ ಸಂಸ್ಥಾನದ ರಾಣಿ ಗರ್ಭಗುಡಿಗೆ ಹೋಗಿದ್ದರು. ಮುನ್ಷಿರಾಮ ಒಳಗೆ ಹೋಗಲು ಯತ್ನಿಸಿದಾಗ ಪೋಲಿಸರು ಮತ್ತು ಅಲ್ಲಿನ ಅರ್ಚಕರು ಅಡ್ಡಗಟ್ಟಿದರು. ದೇವರ ಬಗ್ಗೆಗಿನ ನಂಬಿಕೆಗೆ ಪೆಟ್ಟು ಬಿತ್ತು. ದೇವರ ದರ್ಶನಕ್ಕೂ ಬಡವ ಬಲ್ಲಿದರೆಂಬ ಬೇಧವೆ ಎಂದು ಜಿಜ್ಞಾಸೆ ಉಂಟಾಯಿತು. ಹೀಗೆ ಮುನ್ಷಿರಾಮರ ಬದುಕು ಹೊಸ ಧಾರ್ಮಿಕ ಚಿಂತನೆಗೆ ವಾಲಿದ ವಿಚಾರಗಳು ಹಲವಿದೆ.

ಓರ್ವ ಕರ್ಮಯೋಗಿಯಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಟ ಯೋಗಿಯಾಗಿ, ಶುದ್ದಿ ಚಳವಳಿಯ ಮೂಲಕ ಮತಾಂತರಿಗಳನ್ನು ಸ್ವಧರ್ಮಕ್ಕೆ ಮರಳಿಸಿದ ಸಧರ್ಮ ಮಾರ್ಗಿಯಾಗಿ ಸ್ವಾಮಿ ಶ್ರದ್ಧಾನಂದರು ನೆನಪಿನಲ್ಲಿರುತ್ತಾರೆ.

✍️ ಡಾ. ಬಾಬು ಕೃಷ್ಣಮೂರ್ತಿ

(ಅಂಕಣದ ಆಯ್ದ ಭಾಗ)

Tags:

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

 

Recent News

Back To Top