ಭಾರತವು 1947 ರಲ್ಲಿ ಬ್ರಿಟೀಷರ ಆಡಳಿತದಿಂದ ಮುಕ್ತಗೊಡು ಸ್ವಾತಂತ್ರ್ಯವನ್ನು ಪಡೆಯಿತು. ಅನೇಕ ವರ್ಷಗಳ ಕಾಲ ಪರಕೀಯರ ಆಕ್ರಮಣ ಮತ್ತು ದಬ್ಬಾಳಿಕೆಗೆ ಒಳಪಟ್ಟಿದ್ದ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ವೀರರು ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿರಿಸಿದ್ದರೆ ಇನ್ನೂ ಅನೇಕ ವೀರರು ಸ್ವಾತಂತ್ರ್ಯದ ಯಜ್ಞದಲ್ಲಿ ತಮ್ಮ ಪ್ರಾಣವನ್ನೇ ಹವಿಸ್ಸಾಗಿ ಅರ್ಪಿಸಿದ್ದರು. ಅನೇಕ ಮಹಿಳೆಯರು ತಮ್ಮ ಪುಟ್ಟ ಮಕ್ಕಳನ್ನೂ ತೊರೆದು ಹೋರಾಟವನ್ನು ನಡೆಸಿದ್ದಾರೆ, ಅನೇಕ ಯುವಕರು ತಮ್ಮ ಮುಂದಿನ ಜೀವನದ ಕುರಿತಾಗಿ ಚಿಂತಿಸದೆ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿದರು. ಆದರೆ ಸ್ವಾತಂತ್ರ್ಯ ದೊರಕಿದ ಬಳಿಕ ನಾವು ಕೇವಲ ಕೆಲವೇ ಹೋರಾಟಗಾರರನ್ನು ವೈಭವೀಕರಿಸುತ್ತಾ ಅನೇಕ ಅನರ್ಘ್ಯ ರತ್ನಗಳನ್ನು ನೆನಪಿಸಿಕೊಳ್ಳುವುದನ್ನೇ ಮರೆತುಬಿಟ್ಟೆವು. ಅಂತಹಾ ಪರಮ ವೀರರಲ್ಲಿ ಒಬ್ಬರೇ “ಪ್ರಫುಲ್ಲ ಚಂದ್ರ ಚಕಿ”.
ಪ್ರಫುಲ್ಲಾ ಚಕಿ ಡಿಸೆಂಬರ್ 10, 1888 ರಲ್ಲಿ ಬಂಗಾಳದ ಬೊಗ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿದರು. ಮಧ್ಯಮ ವರ್ಗದ ಕುಟುಂಬವೊಂದಕ್ಕೆ ಸೇರಿದವರಾದ ಪ್ರಫುಲ್ಲಾ ಚಕಿಯು ಮಗುವಾಗಿದ್ದಾಗಲೇ ಅವರ ತಂದೆ ಮೃತಪಟ್ಟಿದ್ದರು. ಗ್ರಾಮದಲ್ಲಿದ್ದ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದ ಪ್ರಫುಲ್ಲಾ ಚಕಿ ಮುಂದಿನ ಶಿಕ್ಷಣವನ್ನು ರಂಗಾಪುರದ ಜಿಲ್ಲಾ ಶಾಲೆಯಲ್ಲಿ ಪಡೆದರು. ಪ್ರೌಢ ಶಿಕ್ಷಣದ ಸಮಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಸಂಘಟಿಸುವ ಮತ್ತು ವ್ಯಾಯಾಮದ ಮೂಲಕ ದೈಹಿಕ ಸಾಮರ್ಥ್ಯವನ್ನು ಉತ್ತೇಜಿಸುವ ಸ್ಥಳೀಯ ಸಂಘಟನೆಯಾದ ಬಾಂಬಾದ್ ಸಮಿತಿಗೆ ಸೇರಿಕೊಂಡರು. ಹನ್ನೆರಡನೇ ತರಗತಿಯಲ್ಲಿದ್ದಾಗ ಕಾರ್ಲೈಲ್ ಸುತ್ತೋಲೆ ಉಲ್ಲಂಘಿಸಿದ ವಿದ್ಯಾರ್ಥಿಗಳ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಫುಲ್ಲಾ ಚಕಿಯನ್ನು ಶಾಲೆಯಿಂದ ಹೊರಹಾಕಲಾಯಿತು. ಬಳಿಕ ಅವರು ರಂಗಾಪುರ ರಾಷ್ಟ್ರೀಯ ಶಾಲೆಗೆ ಸೇರಿಕೊಂಡರು. ಅಲ್ಲಿ ಅವರು ಜಿತೇಂದ್ರ ನಾರಾಯಣ್ ರಾಯ್, ಅಬಿನಾಶ್ ಚಕ್ರವರ್ತಿ ಮತ್ತು ಇಶಾನ್ ಚಂದ್ರ ಚಕ್ರವರ್ತಿಯಂತಹಾ ಕ್ರಾಂತಿಕಾರಿಗಳೊಂದಿಗೆ ಸಂಪರ್ಕಕ್ಕೆ ಬಂದರು. ಜುಗಂತರ್ ಗ್ರೂಪ್ನ ಸಂಸ್ಥಾಪಕ ಬರಿಂದ್ರ ಕುಮಾರ್ ಘೋಷ್ ರಂಗಾಪುರಕ್ಕೆ ಭೇಟಿ ನೀಡಿದ್ದಾಗ ಪ್ರಫುಲ್ಲಾ ಚಕಿ ಅವರೊಂದಿಗೆ ಕಲ್ಕತ್ತಾಗೆ ಹೋಗಲು ನಿರ್ಧರಿಸಿದರು.
ಪ್ರಫುಲ್ಲರ ಮೊದಲ ಸವಾಲು ಖದಿರಾಮ್ ಬೋಸ್ರೊಂದಿಗೆ ಸೇರಿ ಮುಜಫರ್ಪುರದ ಮೆಜಿಸ್ಟ್ರೇಟ್ ಆಗಿದ್ದ ಕಿಂಗ್ಸ್ ಫೋರ್ಡ್ನನ್ನು ಕೊಲ್ಲುವುದು. ಕ್ರಾಂತಿಕಾರಿಗಳಿಬ್ಬರೂ ನಕಲಿ ಹೆಸರುಗಳನ್ನೂ ಇರಿಸಿಕೊಂಡರು, ಪ್ರಫುಲ್ಲಾ ಚಕಿ ದಿನೇಶ್ಚಂದ್ರ ರಾಯ್ ಎಂಬ ಹೆಸರನ್ನು ಬಳಸಿಕೊಂಡಿದ್ದರು. ಹತ್ಯೆಯನ್ನು ನಡೆಸಿದ 1908 ರ ಏಪ್ರಿಲ್ 30 ರ ರಾತ್ರೆ 8.30 ರ ಸಮಯದಲ್ಲಿ ಕಿಂಗ್ ಫೋರ್ಡ್ನ ಗಾಡಿ ಎಂದು ತಿಳಿದು ಇಬ್ಬರು ಹೆಂಗಸರನ್ನು ಕರೆದೊಯ್ಯುತ್ತಿದ್ದ ಗಾಡಿಯ ಮೇಲೆ ಬಾಂಬ್ ಎಸೆದಿದ್ದರು. ಗಾಡಿಯಲ್ಲಿ ಬಾಂಬ್ ಸ್ಫೋಟಿಸಿದ ಬಳಿಕ ಇಬ್ಬರೂ ಕ್ರಾಂತಿಕಾರಿಗಳು ಪ್ರತ್ಯೇಕವಾಗಿ ಪಲಾಯನ ಮಾಡಲು ನಿರ್ಧರಿಸಿದರು. ಸಮಸ್ತಾಪುರ ಗ್ರಾಮವನ್ನು ತಲುಪಲು ರಾತ್ರಿ ಪೂರ ನಡೆದ ಬಳಿಕ ಪ್ರಫುಲ್ಲಾ ಚಾಕಿ ಅವರಿಗೆ ಅಲ್ಲಿ ತ್ರಿಗುಣ ಚರಣ್ ಘೋಷ್ ಎಂಬ ರೈಲ್ವೆ ಸಿಬ್ಬಂದಿ ಅವರಿಗೆ ಆಹಾರವನ್ನೂ ಆಶ್ರಯವನ್ನೂ ನೀಡಿದ್ದರು. ಬಳಿಕ ತ್ರಿಗುಣ ಚರಣ್ ಪ್ರಫುಲ್ಲರಿಗೆ ರಾತ್ರೆಯ ರೈಲಿಗೆ ಇಂಟೆರ್ ಕ್ಲಾಸ್ ಟಿಕೆಟ್ ಒದಗಿಸಿದರು. ಈ ರೈಲು ಅವರನ್ನು ಮೊಕಾಮಾ ಘಾಟ್ಗೆ ಕರೆದೊಯುತ್ತಿತ್ತು ಅಲ್ಲಿಂದ ಅವರು ಹೌರಾಗೆ ಪಲಾಯನ ಮಾಡಬಹುದಾಗಿತ್ತು. ಆದರೆ ದುರದೃಷ್ಟವಶಾತ್ ನಂದಲಾಲ್ ಬ್ಯಾನರ್ಜಿ ಎಂಬ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಫುಲ್ಲಾ ಚಕಿ ಪ್ರಯಾಣಿಸುತ್ತಿದ್ದ ರೈಲಿನಲ್ಲೇ ಪ್ರಯಾಣಿಸುತ್ತಿದ್ದರು. ಪ್ರಫುಲ್ಲಾ ಚಕಿಯ ಚಲನವಲನಗಳನ್ನು ಗಮನಿಸುತ್ತಿದ್ದ ಅವರು ಬಾಂಬ್ ಸ್ಫೋಟಿಸಿದ ಇಬ್ಬರು ಕ್ರಾಂತಿಕಾರಿಗಳಲ್ಲಿ ಒಬ್ಬರೆಂದು ಸಂದೇಹಪಟ್ಟರು. ನಂತರ ಅವರು ಪ್ರಫುಲ್ಲಾ ಚಕಿಯೊಂದಿಗೆ ಮಾತುಕತೆ ನಡೆಸಿದಾಗ ಸಂದೇಹ ಮತ್ತಷ್ಟು ಬಲಗೊಂಡಿತ್ತು. ನಂದಲಾಲ್ ಬ್ಯಾನರ್ಜಿ ಅವರು ಶಿಮುರಾಯಿಘಾಟ್ ನಿಲ್ದಾಣದಿಂದ ಮಾಜಿಸ್ಟ್ರಾಟರಿಗೆ ಟೆಲಿಗ್ರಾಫ್ ಮಾಡಿದ್ದರು. ಪ್ರಫುಲ್ಲಾ ಚಕಿ ಮೂಕಂ ಘಾಟ್ನಲ್ಲಿ ರೈಲಿನಿಂದ ಇಳಿಯುತ್ತಿದ್ದ ಸಂದರ್ಭದಲ್ಲೇ ನಂದಲಾಲ್ ಬ್ಯಾನರ್ಜಿ ಹಲವಾರು ಪೊಲೀಸರೊಂದಿಗೆ ತನ್ನೆಡೆಗೆ ಬರುವುದು ಕಂಡುಬಂದಿತ್ತು.
ಪ್ರಫುಲ್ಲಾ ಚಕಿ ನಿಲ್ದಾಣದಿಂದ ಪಲಾಯನ ಮಾಡಲು ಪ್ರಯತ್ನಿಸಿದರೂ, ತನ್ನ ಬಂಧನವು ಖಚಿತವೆಂದು ಅರಿವಾದಾಗ, ಬಂಧನಕ್ಕಿಂತಲೂ ಸ್ವತಂತ್ರವಾಗಿ ಸಾಯುವುದೇ ಉತ್ತಮವೆಂದು ನಿರ್ಧರಿಸಿದ ಪ್ರಫುಲ್ಲಾ ಚಕಿ ಬಂದೂಕಿನಿಂದ ಸ್ವತಃ ತಲೆಗೆ ಎರಡು ಗುಂಡುಗಳನ್ನು ಹೊಡೆದುಕೊಂಡು ಹುತಾತ್ಮರಾದರು. ಆದರೆ ಅವರ ದೇಹವು ಮುಜಾಫರಪುರ ಪೊಲೀಸ್ ಠಾಣೆಗೆ ತಲುಪುವ ಹೊತ್ತಿಗಾಗಲೇ ಖುದಿರಾಮ್ ಬೋಸ್ ಹತ್ಯೆಯ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಂಡಿದ್ದರು. ಮೃತದೇಹ ಪ್ರಫುಲ್ಲಾ ಚಕಿಯದ್ದೆಂದು ಖದಿರಾಮ್ ದೃಢಪಡಿಸಿದರೂ ಬ್ರಿಟೀಷರು ಪ್ರಫುಲ್ಲಾ ಚಕಿಯ ತಲೆಯನ್ನು ಕತ್ತರಿಸಿ ಕಲ್ಕತ್ತಾಗೆ ಧೃಡೀಕರಣಕ್ಕಾಗಿ ಕಳುಹಿಸಿದ್ದರು. ಮುಂದೆ ಖುದಿರಾಮ್ ಬೋಸ್ಗೆ ಗಲ್ಲುಶಿಕ್ಷೆಯಾಯಿತು. ಅಮಾಯಕ ಮಹಿಳೆಯರನ್ನು ಹತ್ಯೆಗೆ ಕಾರಣರಾಗಿದ್ದಾರೆ ಎನ್ನುವ ಮೂಲಕ ಗಾಂಧೀಜಿ ಈ ಇಬ್ಬರು ತರುಣರ ಕೃತ್ಯವನ್ನು ಖಂಡಿಸಿದರೆ, ಬಾಲಗಂಗಾಧರ ತಿಲಕರು ಅವರನ್ನು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರೆಂದು ತಮ್ಮ ಪತ್ರಿಕೆಯಲ್ಲಿ ಬರೆದು ಗೌರವ ಸಲ್ಲಿಸಿದ್ದರು. ಇದೇ ಕಾರಣಕ್ಕಾಗಿ ಕಾರಣಕ್ಕಾಗಿ ಬ್ರಿಟೀಷರು ಮುಂದೆ ತಿಲಕರನ್ನೂ ದೇಶದ್ರೋಹದ ಆರೋಪದ ಮೇಲೆ ಬಂಧಿಸಿದ್ದರೆಂಬುದು ನಾವೆಲ್ಲರೂ ತಿಳಿದಿರುವ ವಿಷಯ.
ಕೇವಲ 19 ನೇ ವಯಸ್ಸಿನಲ್ಲೇ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಪ್ರಫುಲ್ಲಾ ಚಕಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಇಂತಹಾ ವೀರರನ್ನು ಪಶ್ಚಿಮ ಬಂಗಾಳದ ಸರಕಾರ ಪಠ್ಯಪುಸ್ತಕದಲ್ಲಿ ಭಯೋತ್ಪಾದಕರೆಂದು ಕರೆಯಲಾಗಿತ್ತು. ಮುಂದೆ ವಿವಾದದಿಂದಾಗಿ ತಪ್ಪನ್ನು ಸರಿಪಡಿಸಿದರೂ, ಯಾವ ನೆಲದಲ್ಲಿ ಜನಿಸಿ, ತಮ್ಮ ಜನ್ಮಭೂಮಿಯ ಸ್ವಾತಂತ್ರಕ್ಕಾಗಿ ಬಲಿದಾನವನ್ನು ನೀಡಿದರೋ ಅದೇ ದೇಶವು ಅವರನ್ನು ಮರೆತು ಬಿಟ್ಟಿತು. ಇಷ್ಟು ಮಾತ್ರವಲ್ಲದೆ ಅವರದೇ ದೇಶದ ಪಠ್ಯಪುಸ್ತಕಗಳಲ್ಲಿ ಅವರನ್ನು ಭಯೋತ್ಪಾದಕರು ಎನ್ನಲಾಯಿತು. ಯಾವ ಮಕ್ಕಳು ಮುಂದಿನ ಪೀಳಿಗೆಗೆ ವೀರರ ವೀರಗಾಥೆಯನ್ನು ಹೇಳಬೇಕಿತ್ತೋ ಅದೇ ಮಕ್ಕಳ ಮನದಲ್ಲಿ ಅವರ ಕುರಿತು ಋಣಾತ್ಮಕ ಭಾವನೆಗಳ ಬೀಜ ಬಿತ್ತುವ ಪ್ರಯತ್ನವನ್ನು ನಡೆಸಲಾಯಿತು. ನೈಜ ಸ್ವಾತಂತ್ರ ಹೋರಾಟಗಾರರನ್ನು ಮರೆಯದೆ ಸ್ಮರಿಸುವ ಜವಾಬ್ದಾರಿ ನಮ್ಮೆಲ್ಲರದೂ ಆಗಿದೆ ಎಂಬುದನ್ನು ಮರೆಯದಿರೋಣ ಅಲ್ಲವೇ?
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.