ಉಡುಪಿ: ಪಶ್ಚಿಮಘಟ್ಟ ರಕ್ಷಣೆ ಕುರಿತು ಕಸ್ತೂರಿ ರಂಗನ್ ನೇತೃತ್ವದ ಸಮಿತಿ ನೀಡಿರುವ ವರದಿ ಅನುಷ್ಠಾನಗೊಳಿಸುವ ಕುರಿತು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಈಗಾಗಲೇ ಶಿಫಾರಸು ಮಾಡಿ ವರದಿ ನೀಡಿದೆ. ಕೇರಳ ರಾಜ್ಯ ಕೇಳಿರುವ ವಿನಾಯಿತಿಗಿಂತಲೂ ಹೆಚ್ಚಿನ ವಿನಾಯಿತಿಯನ್ನು ರಾಜ್ಯ ಸರಕಾರ ಕೇಳಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಆ. 8ರಂದು ಉಡುಪಿ ಪುರಭವನದಲ್ಲಿ ಲಕ್ಷ-ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ಸರಕಾರ ತನ್ನ ಶಿಫಾರಸು ಸಲ್ಲಿಸಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾದುದು. ರಾಜ್ಯ ಸರಕಾರ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ, ಕ್ಯಾಬಿನೆಟ್ ಉಪಸಮಿತಿ ರಚಿಸಿ, ಚರ್ಚೆ ನಡೆಸಿ 2015ರ ಎ. 24ರಂದು ಕೇಂದ್ರಕ್ಕೆ ಸಲ್ಲಿಸಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಜನವಸತಿಗೆ ತೊಂದರೆಯಾಗದ ರೀತಿಯಲ್ಲಿ ವರದಿ ಅನುಷ್ಠಾನಗೊಳಿಸಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪಶ್ಚಿಮಘಟ್ಟ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಕ್ಕೆ ಒಪ್ಪಿಗೆ ನೀಡಲಾಗಿದೆ. ನಿಯಂತ್ರಿತ ಕ್ರಷರ್, ನಿಯಂತ್ರಿತ ಮರಳುಗಾರಿಕೆಗೆ ಶಿಫಾರಸು ಮಾಡಲಾಗಿದೆ. ಕಸ್ತೂರಿ ರಂಗನ್ ವರದಿ 6 ರಾಜ್ಯಗಳಿಗೆ ಅನ್ವಯವಾಗುತ್ತದೆ. ಕೇರಳದ ಅನಂತರ ಕರ್ನಾಟಕ ಶಿಫಾರಸು ವರದಿ ನೀಡಿದೆ. ಕೇರಳ ಕೋರಿರುವ ವಿನಾಯಿತಿಗಿಂತಲೂ ಹೆಚ್ಚಿನ ವಿನಾಯಿತಿ ಕೇಳಲಾಗಿದೆ. ಹಾಗಾಗಿ ವರದಿ ಬಗ್ಗೆ ಯಾವುದೇ ಗೊಂದಲಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಹುಲಿ ಯೋಜನೆ ಬರಬೇಕಾದರೆ ರಾಜ್ಯಸರಕಾರದ ಒಪ್ಪಿಗೆ ಅಗತ್ಯ. ಈ ಹಿಂದಿನ ರಾಜ್ಯ ಸರಕಾರ ಅಂದಿನ ಕೇಂದ್ರದ ಯುಪಿಎ ಸರಕಾರಕ್ಕೆ ಹುಲಿಯೋಜನೆಯ ಬೇಡಿಕೆ ಸಲ್ಲಿಸಿತ್ತು. ಆದರೆ ಯುಪಿಎ ಸರಕಾರ ಅದಕ್ಕೆ ಮಂಜೂರಾತಿ ನೀಡಿರಲಿಲ್ಲ. ಈಗಿನ ಎನ್ಡಿಎ ಸರಕಾರ ಹುಲಿ ಯೋಜನೆಗೆ ಮಂಜೂರಾತಿ ನೀಡಿದ್ದರೂ ಅದನ್ನು ರಾಜ್ಯ ಸರಕಾರ ಒಪ್ಪಿಕೊಳ್ಳುವುದಿಲ್ಲ ಎಂದು ರಮಾನಾಥ ರೈ ಹೇಳಿದರು.
ರಾಜ್ಯ ಮತ್ತೆ ಗಂಧದ ಬೀಡು ಆಗಬೇಕು. ಇದಕ್ಕಾಗಿ ರಾಜ್ಯ ಸರಕಾರ “ಸಿರಿಚಂದನ’ ಯೋಜನೆ ಹಮ್ಮಿಕೊಂಡು ಗಂಧದ ಮರಗಳ ರಕ್ಷಣೆಗೆ ಮುಂದಾಗಿದೆ. ಸಿರಿಚಂದನ ಯೋಜನೆಯಡಿ ಉಡುಪಿ ಜಿಲ್ಲೆಯ ವಂಡಾರು ಗ್ರಾಮದ ಪ್ರದೇಶವೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅಲ್ಲಿ ಬೇಲಿ ಹಾಕಿ ಕಾವಲುಗಾರರನ್ನು ನೇಮಿಸಿ ಸ್ವಾಭಾವಿಕವಾಗಿ ಬೆಳೆದಿರುವ ಶ್ರೀಗಂಧದ ಮರಗಳ ರಕ್ಷಣೆ ಕೆಲಸ ನಡೆಯುತ್ತಿದೆ ಎಂದು ರೈ ಹೇಳಿದರು.
ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆರಂಭಿಸಲಾದ ಸರ್ವೇ ಕಾರ್ಯ ಮುಕ್ತಾಯವಾಗಿದೆ. ಶೀಘ್ರದಲ್ಲಿಯೇ ಕ್ಯಾಬಿನೆಟ್ನಲ್ಲಿ ಚರ್ಚೆ ನಡೆಸಿ ಸುಪ್ರೀಂ ಕೋರ್ಟ್ಗೆ ಅಫಿಧವಿತ್ ಸಲ್ಲಿಸಲಾಗುವುದು. ಇದರಿಂದ ಅವಿಭಜಿತ ದ.ಕ. ಜಿಲ್ಲೆಯ ಸುಮಾರು 1 ಲಕ್ಷ ಎಕರೆ ಜಮೀನು ಸಾರ್ವಜನಿಕರಿಗೆ ದೊರೆಯಲಿದೆ. ಆನೆಗಳ ಹಾವಳಿ ತಡೆಯಲು ರೈಲ್ವೇ ಹಳಿಪಟ್ಟಿಯಿಂದ ಬ್ಯಾರಿಕೇಡ್ ಮಾದರಿಯ ಬೇಲಿ ನಿರ್ಮಿಸಲು 212 ಕೋ. ರೂ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರದ ವಿಸ್ತರಣೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಮಾನಾಥ ರೈ, ಈ ಬಗ್ಗೆ ಅನುಮತಿಗೆ ಪರಿಸರ ಇಲಾಖೆಗೆ ಬೇಡಿಕೆ ಬಂದಿಲ್ಲ. ಪರಿಸರಕ್ಕೆ ಹಾನಿಯಾಗುವ ಯೋಜನೆಗೆ ಒಪ್ಪಿಗೆ ನೀಡುವುದಿಲ್ಲ ಎಂದರು.
ಎಲ್ಲೂರಿನಲ್ಲಿರುವ ಯುಪಿಸಿಎಲ್ ಉಷ್ಣವಿದ್ಯುತ್ ಸ್ಥಾವರದಿಂದ ಈಗಾಗಲೇ ಕೃಷಿ, ಮೀನುಗಾರಿಕೆ ಮೇಲೆ ದುಷ್ಪರಿಣಾಮ ಉಂಟಾಗಿದೆ. ಯುಪಿಸಿಎಲ್ನ್ನು ಮತ್ತೆ ವಿಸ್ತರಿಸಲು ಅನುಮತಿ ಕೇಳಲಾಗುತ್ತಿದೆ. ಅನುಮತಿ ಕೇಳುವ ಮೊದಲು ಧಾರಣಾ ಸಾಮರ್ಥ್ಯ ತಿಳಿದುಕೊಳ್ಳಬೇಕು ಎಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಗರಾಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ನಗರಸಭಾಧ್ಯಕ್ಷ ಪಿ. ಯುವರಾಜ್, ತಾ.ಪಂ. ಅಧ್ಯಕ್ಷೆ ಸುನಿತಾ ನಾಯ್ಕ, ಉಪಾಧ್ಯಕ್ಷ ಗಣೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.