ಬೆಂಗಳೂರು: ಸಾಮಾನ್ಯ ಕೂಲಿ ಕಾರ್ಮಿಕ ಕುಟುಂಬದಿಂದ ಬಂದ ಹುಡುಗಿಯೊಬ್ಬಳು ಬಿಎಸ್ಸಿ ನರ್ಸಿಂಗ್ನಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಎರಡು ಚಿನ್ನದ ಪದಕವನ್ನೂ ಮುಡಿಗೇರಿಸಿಕೊಂಡು ಛಲವಿದ್ದವರು ಏನನ್ನೂ ಸಾಧಿಸಿಯಾರು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
ಮಹಾರಾಷ್ಟ್ರದ ಸಣ್ಣ ಹಳ್ಳಿಯೊಂದರ ಬಡ ಕುಟುಂಬದ ಹುಡುಗಿ ಸೋನಾಲಿ ದೇವಾನಂದ್ ಈ ಬಾರಿಯ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ನ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ಕರ್ನಾಟಕದ ವಿಜಯಪುರದ ಶ್ರೀ ಬಿ ಎಂ ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ನ ವಿದ್ಯಾರ್ಥಿನಿಯಾಗಿದ್ದವರು.
ತಮ್ಮ ಈ ಸಾಧನೆಯ ಬಗ್ಗೆ ಮಾತನಾಡಿರುವ ಸೋನಾಲಿ, ನಾವು ತುಂಬಾ ಬಡವರು. ನನ್ನ ತಂದೆ ಕಟ್ಟಡ ಕಾರ್ಮಿಕರು. ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದರು. ಮಧ್ಯರಾತ್ರಿಯೂ ನನ್ನ ತಾಯಿಯೊಂದಿಗೆ ಜಗಳ ಮಾಡುತ್ತಿದ್ದರು. ನಮ್ಮ ಆರ್ಥಿಕ ಸ್ಥಿತಿ ಮತ್ತು ಮನೆಯ ಪರಿಸ್ಥಿತಿ ನನ್ನನ್ನು ಓದಿನೆಡೆಗೆ ಪ್ರೇರೇಪಿಸಿತು. ನನ್ನ ವಿದ್ಯಾಭ್ಯಾಸಕ್ಕಾಗಿ ತಾಯಿ ಮಂಗಳ ಸೂತ್ರವನ್ನೂ ಮಾರಿದ್ದರು. ಒಂದು ತುಂಡು ಚಪಾತಿ ಮತ್ತು ಮೆಣಸಿನ ಹುಡಿಯೇ ನಮಗೆ ಮಧ್ಯಾಹ್ನದ ಊಟವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಓದಿ ಏನಾದರೂ ಸಾಧಿಸಬೇಕೆಂಬ ಛಲದಿಂದ ಪ್ರಯತ್ನ ನಡೆಸಿದ್ದೆ. ಆ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ತಿಳಿಸಿದ್ದಾರೆ. ನನ್ನ ಶಿಕ್ಷಕರೊಬ್ಬರ ಮಾರ್ಗದರ್ಶನದಿಂದ ತಾನು ನರ್ಸಿಂಗ್ ಸೇರಿದ್ದೆ ಎಂದು ಹೇಳಿದ್ದಾರೆ.
ಜನರು ನನಗೆ ವಿದೇಶಕ್ಕೆ ತೆರಳಿ ಉದ್ಯೋಗ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಆದರೆ ನನಗೆ ಭಾರತದಲ್ಲಿಯೇ ಇದ್ದು, ಇಲ್ಲಿನ ಜನರ ಸೇವೆ ಮಾಡಬೇಕೆಂಬ ಆಸೆ ಇದೆ ಎಂದು ಹೇಳಿದ್ದಾರೆ. ನನ್ನ ಶಿಕ್ಷಕರ ನಿರಂತರ ಪ್ರೋತ್ಸಾಹದ ಕಾರಣದಿಂದಲೇ ನನಗೆ ಚಿನ್ನದ ಪದಕಗಳು ಲಭಿಸಿದೆ ಎಂದು ಸೋನಾಲಿ ನುಡಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.