ಶಿವಾಜಿ ಮಹಾರಾಜರ ಬಸ್ರೂರು ಆಗಮನವನ್ನು ಪ್ರತಿ ವರ್ಷ ಕುಂದಾಪುರದ ಪ್ರಾಚೀನ ಬಂದರು ನಗರಿಯಾದ ಬಸ್ರೂರಿನಲ್ಲಿ ಆಚರಿಸಲಾಗುತ್ತದೆ. ಫೆ.13 ಛತ್ರಪತಿ ಶಿವಾಜಿ ಮಹಾರಾಜ್ ಬಸ್ರೂರಿಗೆ ಆಗಮಿಸಿದ ಮಹತ್ತರ ದಿನ. ಸಾವಿರ ಮಂದಿ ಸೈನಿಕರೊಂದಿಗೆ ಹಲವು ದೋಣಿಗಳಲ್ಲಿ ಸಮುದ್ರ ಮಾರ್ಗವಾಗಿ ಬಸ್ರೂರಿಗೆ ಆಗಮಿಸಿದ ವಿಶೇಷ ದಿನ. ಬಸ್ರೂರು ಆಗಮನದ ಹಿಂದೆ ಪೋರ್ಚುಗೀಸರ ಸ್ಥಳೀಯ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವುದು, ಪೋರ್ಚುಗೀಸರ ವಶದಲ್ಲಿದ್ದ ಬಂದರು, ಕೋಟೆಗಳನ್ನು ವಶಪಡಿಸಿ ಸ್ಥಳೀಯ ಪಾಳೇಗಾರನಿಗೆ ಒಪ್ಪಿಸುವುದು ಪ್ರಮುಖ ಉದ್ದೇಶವಾಗಿರುತ್ತದೆ.
ಮಹಾರಾಷ್ಟ್ರದ ಸಿಂಧುದುರ್ಗದಿಂದ ಶಿವಾಜಿಯ ನೌಕಾಯಾನ ಆರಂಭಗೊಳ್ಳುತ್ತದೆ. ಬಿದನೂರಿನ ರಾಯನಾಗಿದ್ದ ಸೋಮಶೇಖರನು ಪೋರ್ಚುಗೀಸರ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲಲು ಶಿವಾಜಿಯ ಸಹಾಯ ಕೇಳಿಕೊಂಡಾಗ ಶಿವಾಜಿ ಸಮುದ್ರ ಮಾರ್ಗವಾಗಿ ಬಸ್ರೂರು ತಲುಪುತ್ತಾನೆ.
ಬಸ್ರೂರಿನಲ್ಲಿದ್ದ ಪೋಚುಗೀಸರ ಅಟ್ಟಹಾಸವನ್ನು ಮೆಟ್ಟಿನಿಂತ ಶಿವಾಜಿ ನಂತರ ಗೋಕರ್ಣಕ್ಕೆ ತೆರಳಿ, ಅಂಕೋಲಾದ ಸೋಮಶೇಖರನ ಅತಿಥ್ಯವನ್ನು ಪಡೆದು ಗಂಗೊಳ್ಳಿ, ಕಾರವಾರ ಮಾರ್ಗವಾಗಿ ತನ್ನ ಸ್ವಸ್ಥಾನಕ್ಕೆ ಮರಳುತ್ತಾನೆ. ಇದಕ್ಕಿಂತ ಹಿಂದೆ ಶಿವಪ್ಪ ನಾಯಕ ತನ್ನ ಸಾಮ್ರಾಜ್ಯ ರಕ್ಷಣೆಗಾಗಿ ಶಿವಾಜಿಯ ತಂದೆ ಶಹಾಜಿಯ ಸಹಾಯ ಪಡೆದಿದ್ದ ಎಂಬುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಶಹಾಜಿ ಮಹಾರಾಜ್ ಹಲವು ವರ್ಷಗಳಿಂದ ಕರ್ನಾಟಕ ಭಾಗದಲ್ಲಿ ಪಾಳೇಗಾರನಾಗಿದ್ದ ಎಂಬ ವಿಚಾರ ಚರಿತ್ರೆಯ ಪುಟಗಳಲ್ಲಿದೆ. ಬಸ್ರೂರು ಪ್ರದೇಶದಲ್ಲಿ ಪೋರ್ಚುಗೀಸರ ಉಪಟಳ ಹೆಚ್ಚಾದಾಗ, ಸ್ಥಳೀಯ ರೈತರನ್ನು, ಕಾರ್ಮಿಕರನ್ನು ಸುಲಿಗೆ ಮಾಡಲು ಪೋರ್ಚುಗೀಸರು ಹೊರಟಾಗ ಸೋಮಶೇಖರ ನಾಯಕ ತನ್ನ ವಕೀಲನನ್ನು ಶಿವಾಜಿಯ ಬಳಿಗೆ ಕಳುಹಿಸಿ ತನ್ನ ಸಮಸ್ಯೆಯನ್ನು ಹೇಳಿ, ಸಹಾಯ ಬೇಡುತ್ತಾನೆ. ಪ್ರಾಚೀನ ಚರಿತ್ರೆ ಪುಟಗಳಲ್ಲಿ ವಸುಪುರ ಎಂದೇ ಖ್ಯಾತವಾಗಿದ್ದ ಬಸ್ರೂರಿಗೆ ಶಿವಾಜಿ ಸೈನ್ಯ ಆಗಮಿಸಿ, ಪೋರ್ಚುಗೀಸರ ವಶದಲ್ಲಿದ್ದ ಕೋಟೆ ಹಾಗೂ ಬಂದರು ಪ್ರದೇಶವನ್ನು ವಶಪಡಿಸಿಕೊಳ್ಳುತ್ತದೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪೋರ್ಚುಗೀಸರ ಪಾಳಯದಲ್ಲಿ ಶಿವಾಜಿ ಸೈನಿಕರ ಗೆರಿಲ್ಲಾ ಯುದ್ಧ ತಂತ್ರ ನಡುಕ ಹುಟ್ಟಿಸುತ್ತದೆ. ಶಿವಾಜಿಯ ಸೈನ್ಯ ಪೋರ್ಚುಗೀಸರ ವಶದಲ್ಲಿದ್ದ ಕೋಟೆ ಹಾಗೂ ಬಂದರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆ ಬಳಿಕ ಬಂದರು ಹಾಗೂ ಕೋಟೆಯನ್ನು ಸ್ಥಳೀಯ ಬಸ್ರೂರು ಪಾಳೇಗಾರರಿಗೆ ನೀಡುತ್ತಾರೆ. ಫೆ.8 ರಂದು ಸಿಂದುದುರ್ಗದಿಂದ ಹೊರಟ ಶಿವಾಜಿ ನೌಕಾದಳ, ಫೆ. 13 ರಂದು ಶಿವಾಜಿ ಸಮುದ್ರ ಮಾರ್ಗವಾಗಿ ಬಸ್ರೂರು ತಲುಪುತ್ತದೆ. ಹೋರಾಟವೂ ನಡೆಯುತ್ತದೆ. ಬಿದನೂರಿನ ಸೈನಿಕರ ಗುಪ್ತಚರರು ಪೋರ್ಚುಗೀಸರ ಚಲನವಲನಗಳ ಬಗ್ಗೆ ಶಿವಾಜಿ ಸೈನ್ಯಕ್ಕೆ ಮಾಹಿತಿ ನೀಡಿ, ಅವರ ಸದ್ದಡಗುವಂತೆ ಮಾಡುವಲ್ಲಿ ಶಿವಾಜಿಗೆ ನೆರವಾಗುತ್ತಾರೆ. ಸ್ಥಳೀಯರು ಹಾಗೂ ಪಾಳೇಗಾರರು ತಮ್ಮ ಬಂದರು, ನದಿ ಹಿನ್ನೀರ ಪ್ರದೇಶ ಸಹಿತ ಸಂಪೂರ್ಣ ಕೋಟೆ ತಮ್ಮ ವಶಕ್ಕೆ ಬಂದುದರ ವಿಜಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ.
ನಂತರ ಶಿವಾಜಿಯು ಗೋಕರ್ಣ ತೆರಳಿ ದೇವರ ದರ್ಶನ ಪಡೆದು ಗಂಗೊಳ್ಳಿ, ಹೊನ್ನಾವರ, ಅಂಕೋಲಾ ಮಾರ್ಗವಾಗಿ ಸಿಂಧೂದುರ್ಗದತ್ತ ತೆರಳಿದ ಎಂಬುದನ್ನು ಚರಿತ್ರೆ ಮಾತ್ರವಲ್ಲದೆ ಬಸ್ರೂರಿನ ಜನಮಾನಸ ವರ್ಷಕ್ಕೊಮ್ಮೆ ನೆನಪಿಸಿಕೊಳ್ಳುತ್ತದೆ. ಅಂದು ದೆಂಗುರ್ಲಾ ಡಚ್ಚರ ಬಂದರಾಗಿದ್ದರೆ, ಪಣಜಿ, ವಾಸ್ಕೋ ಪೋರ್ಚುಗೀಸರ ಒಡೆತನದಲ್ಲಿತ್ತು. ನಂತರ ಬರುವ ಕಾರವಾರದಲ್ಲಿ ಬ್ರಿಟಿಷ್ ತುಕಡಿಗಳು ಬೀಡು ಬಿಟ್ಟಿದ್ದವು. ಅಂಕೋಲಾದಲ್ಲಿ ಬಿದನೂರಿನ ರಾಯ ಸೋಮಶೇಖರನು ಶಿವಾಜಿಗೆ 3 ಲಕ್ಷ ಡಚ್ ಗಿಲ್ಡರ್ಸ್ ಹಣವನ್ನು ನೀಡಿ ಧನ್ಯವಾದ ತಿಳಿಸಿದ್ದನಂತೆ. ಬಿದನೂರಿನ ನಾಯಕರು ನಂತರ ಇಕ್ಕೇರಿ ಕೆಳದಿ ಸಂಸ್ಥಾನವನ್ನು ಆಳಿದ ಪ್ರಮುಖ ರಾಜವಂಶವಾಗಿದೆ. ಸೋಮಶೇಖರ ನಾಯಕ, ಶಿವಪ್ಪ ನಾಯಕರು ಕಾಸರಗೋಡಿನ ಬೇಕಲವನ್ನು ಕೇಂದ್ರವಾಗಿಸಿ ಆಳಿದ ಚರಿತ್ರೆಯೂ ಹೆಸರುವಾಸಿ. ಹಲವು ಕೋಟೆ ಕೊತ್ತಲಗಳನ್ನು ನಿರ್ಮಿಸಿ ಸಮುದ್ರ ವ್ಯಾಪಾರದ ಮೇಲಿನ ಸ್ವಾಮ್ಯವನ್ನು ತಮ್ಮದಾಗಿಸಿದ್ದ ನಾಯಕರು ಪರಾಕ್ರಮಿಗಳೂ ಆಗಿದ್ದರು. ದಕ್ಷಿಣ ಕನ್ನಡ, ಕಾಸರಗೋಡು ಸಹಿತ ಉಡುಪಿ, ಕುಂದಾಪುರದಲ್ಲಿರುವ ಮರಾಟಿ ಮನೆ ಮಾತಾಗಿರುವ ಸಮುದಾಯಗಳು ಇಂತಹ ಅನನ್ಯ ಬಂಧವಿರುವ ಬಿದನೂರು ಸಂಸ್ಥಾನ ಹಾಗೂ ಶಿವಾಜಿ ಸೈನ್ಯದ ಬಗೆಗಿನ ಬಗ್ಗೆ ಮತ್ತಷ್ಟು ಮಾಹಿತಿ ಕ್ರೋಢೀಕರಿಸಲು ಪ್ರೋತ್ಸಾಹಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಪ್ರಮುಖ ಭಾಗವಾದ ಪೆನುಕೊಂಡ ಹಾಗೂ ಛತ್ರಪತಿಯ ಶಿವಾಜಿ ಸಂಸ್ಥಾನಕ್ಕೂ ಅವಿನಾಭಾವ ಸಂಬಂಧಗಳಿರುವಂತೆ ಕಾಣುತ್ತದೆ. ಬಿದನೂರಿನ ಜೊತೆ ಇದ್ದ ಸಂಬಂಧಕ್ಕೆ ಮುಖ್ಯ ಕಾರಣ ಶಹಾಜಿ ಮಹಾರಾಜ್. ಅನ್ಯರ ಆಕ್ರಮಣದ ವಿರುದ್ಧ ಹೋರಾಟ ನಡೆಸಿದ್ದ ಶಹಾಜಿಯಿಂದ ಇದು ಸಾಧ್ಯವಾಗಿತ್ತಂತೆ. ಮುಖ್ಯವಾಗಿ ನಿಜಾಂ ಶಾಹಿ ಹುಕುಮತ್ತಿನ ವಿರುದ್ಧ ಶಹಾಜಿ ಮಹಾರಾಜ್ ಬಿದನೂರಿನ ನಾಯಕರಿಗೆ ಸಹಾಯ ಒದಗಿಸಿದ್ದ ಎಂಬುದು ಅತಿ ಮುಖ್ಯವಾದ ಐತಿಹಾಸಿಕತೆ.
ಕಡಲತಡಿಯ ಬಹಳ ಸುಂದರವಾದ ಬಸ್ರೂರು ಪ್ರದೇಶಕ್ಕೆ ಶಿವಾಜಿ ಮಹಾರಾಜರು ಆಗಮಿಸಿದ್ದ 350 ನೇ ವರ್ಷಾಚರಣೆಯನ್ನು 2015 ರಲ್ಲಿ ಆಚರಿಸಲಾಗಿತ್ತು. ಬಹಳ ಹೆಮ್ಮೆ ಮತ್ತು ಗೌರವದಿಂದ ಆಚರಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಗಣ್ಯರು ಭಾಗವಹಿಸಿದ್ದರು, 2016, 17 ರಲ್ಲೂ ಶಿವಾಜಿ ಬಸ್ರೂರು ಆಗಮನ ದಿನವನ್ನು ಆಚರಿಸಲಾಗಿತ್ತು. ಈ ಸಂದರ್ಭ ಸಂಘಟನೆಯ ಹಿರಿಯ ಆದರ್ಶ ವ್ಯಕ್ತಿಯಾಗಿರುವ ಹರಿ ಭಾವುಜಿ ಭಾಗವಹಿಸಿದ್ದರು. ಸತತವಾಗಿ ಹಲವು ವಷಗಳ ಕಾಲ ಆಚರಿಸಲ್ಪಟ್ಟ ಬಸ್ರೂರು ಉತ್ಸವ ಮತ್ತು ಶಿವಾಜಿ ಆಗಮನ ದಿನಾಚರಣೆಯನ್ನು ಕಳೆದ ಬಾರಿ ಕೊರೊನಾ ಸಾಂಕ್ರಾಮಿಕದ ಕಾರಣ ನಡೆದಿರಲಿಲ್ಲ. ಈ ಬಾರಿ ವಿಶೇಷ ಕಾಯಕ್ರಮಗಳಿವೆ.
ಛತ್ರಪತಿ ಶಿವಾಜಿ ಮಹಾರಾಜ್ ವಿಚಾರದಲ್ಲಿ ಸಂಕುಚಿತ ಭಾವವನ್ನು ಹೊಂದುವುದು, ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಔಚಿತ್ಯಪೂರ್ಣವಲ್ಲ. ಶಿವಾಜಿ ಎಂಬ ಹೆಸರು ಮತ್ತು ವ್ಯಕ್ತಿತ್ವ ಒಂದು ವ್ಯಾಪ್ತಿಗೆ ಸೀಮಿತವಲ್ಲ, ಸರ್ವವ್ಯಾಪಿ.
✍️ಸಂದೀಪ್ ಮಹಾದೇವ ರಾವ್ ಮಹಿಂದ್, ರಾಷ್ಟ್ರೀಯ ಚಿಂತಕರು
ಅನುವಾದ: ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.