ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಗತಿಪರ ಕೃಷಿಕರ ತಂಡ ತೋಟಗಾರಿಕಾ ಇಲಾಖೆ ಸಹಕಾರದೊಂದಿಗೆ ʼಪಿಂಗಾರʼ ಹೆಸರಿನ ಉತ್ಪನ್ನ ತಯಾರಿಕ ಸಂಸ್ಥೆ ಆರಂಭಿಸಿ, ಉತ್ಪಾದನೆಗೆ ಮಾರ್ಗ ಕಂಡುಕೊಳ್ಳುವ ಮತ್ತು ಅದರಿಂದ ಲಾಭ ಪಡೆಯುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.
ಪ್ರಗತಿಪರ ರೈತರ ತಂಡವೊಂದು 2016 ರಲ್ಲಿ ಕಟ್ಟಿದ ಸಂಸ್ಥೆಯು ಇಂದು ಸಾವಿರ ರೈತರಿಗೆ ಜೀವನೋಪಯದ ಆಧಾರ ಸ್ತಂಭವಾಗಿದೆ. ಹಲಸಿನ ಹಣ್ಣು ಮತ್ತು ಬಾಳೆಹಣ್ಣಿನ ಉತ್ಪನ್ನಗಳನ್ನು ತಯಾರಿಸಿ ಅದನ್ನು ಮಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಮಾರಾಟ ಮಾಡುವುದು, ಬಂದ ಲಾಭವನ್ನು ಈ ಕೃಷಿಕರ ತಂಡದಲ್ಲಿರುವ ಸದಸ್ಯರು ಸಮಾನವಾಗಿ ಹಂಚಿಕೊಳ್ಳುವ ಮೂಲಕ ಹೀಗೂ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಈ ಸಂಸ್ಥೆ ಆರಂಭಿಸುವ ಪ್ರಕ್ರಿಯೆಯು 2012 ರಲ್ಲೇ ಆರಂಭವಾಗಿತ್ತು. ಈ ಬಗ್ಗೆ ತೋಟಗಾರಿಕೆ ಇಲಾಖೆಯು ರೈತರನ್ನು ಗುರುತಿಸಿ ಸಹಕಾರ ಸಂಸ್ಥೆಯ ಸ್ಥಾಪನೆಯ ಬಗ್ಗೆ ಎನ್ಜಿಒ ಒಂದಕ್ಕೆ ಗುತ್ತಿಗೆ ನೀಡಿತ್ತು. ಈ ಬೆಳವಣಿಗೆಯು ಯಶಸ್ವಿಯಾಗಿ ಮುಂದುವರೆದು ಪ್ರಸ್ತುತ ಸಾವಿರ ರೈತರು ಇದರಲ್ಲಿ ತೊಡಗಿಸಿಕೊಳ್ಳುವ ಮೂಲಕ ಬೃಹತ್ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಮಧ್ಯವರ್ತಿಗಳಿಲ್ಲದೆ ರೈತರು ತಯಾರಿಸಿದ ಉತ್ಪನ್ನಗಳು ನೇರ ಖರೀದಿಯಾಗುವಂತೆ ಮಾಡುವುದು ಮತ್ತು ಲಾಭಾಂಶವೂ ಸಂಪೂರ್ಣ ರೈತರಿಗೇ ದೊರೆಯುವಂತೆ ಮಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಈ ಕೃಷಿಕರ ಸಂಸ್ಥೆ ರೈತರಿಂದ, ರೈತರಿಗೋಸ್ಕರ ನಡೆಯುವ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ. ಆ ಮೂಲಕ ಹೀಗೂ ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿದೆ.
ಪಿಂಗಾರ ಉತ್ಪನ್ನ ತಯಾರಿ ಸಂಸ್ಥೆಯು ಹಲಸಿನ ಸೀಸನ್ನಲ್ಲಿ ಪ್ರತಿದಿನ 1500 ಹಪ್ಪಳ , ವಾರಕ್ಕೆ 25 ಕೆ.ಜಿ ಹಲ್ವಾ, 8-10 ಕೆ.ಜಿ ಚಿಪ್ಸ್, 5 ಕೆ.ಜಿ ಮಾಂಬಳ ತಯಾರಿಸುತ್ತದೆ. 1000 ರೂ. ಬಂಡವಾಳದೊಂದಿಗೆ ರೈತರು ಪಿಂಗಾರದ ಸದಸ್ಯರಾಗಿದ್ದಾರೆ. ಇಷ್ಟು ದೊಡ್ಡಮಟ್ಟದಲ್ಲಿ ರೈತರೇ ಕಂಪನಿ ಪ್ರಾರಂಭಿಸಿದ್ದು ರಾಜ್ಯದಲ್ಲೇ ಮೊದಲು ಎನ್ನುವ ಹೆಮ್ಮೆ ಈ ತಂಡಕ್ಕಿದೆ. ಕಳೆದ ವರ್ಷ ಈ ಸಂಸ್ಥೆಯು 2.5 ಕೋಟಿ ರೂ. ವಹಿವಾಟು ನಡೆಸಿದ್ದು, ಆ ಮೂಲಕ ಕೃಷಿಕರಿಂದ ಎಲ್ಲವೂ ಸಾಧ್ಯ ಎಂಬುದನ್ನು ಜಗಜ್ಜಾಹೀರು ಮಾಡಿದೆ. ಹಾಗೆಯೇ, ಏನನ್ನೋ ಸಾಧಿಸಬೇಕು ಎಂಬವರಿಗೆ ಸ್ಪೂರ್ತಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.