ಮಹಾನ್ ತತ್ವಜ್ಞಾನಿ, ಧಾರ್ಮಿಕ ಸುಧಾರಕ, ಆರ್ಯಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿ ಅವರು ಭಾರತದ ಧಾರ್ಮಿಕ ಇತಿಹಾಸದಲ್ಲಿ ಪ್ರಮುಖರು. ಇವರು 1824 ಫೆಬ್ರವರಿ 12 ರಂದು ಗುಜರಾತ್ನ ಟಂಕಾರದಲ್ಲಿ ಬ್ರಾಹ್ಮಣ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ಮೂಲ ಹೆಸರು ಮುಲ್ ಶಂಕರ್. ಅವರ ತಂದೆ ಕರ್ಶನ್ಜಿ ಲಾಲ್ಜಿ ಕಪಾಡಿ, ತಾಯಿ ಯಶೋದಾ ಬಾಯಿ.
ಬಾಲ್ಯದಲ್ಲೇ ಆಧ್ಯಾತ್ಮದ ಒಲವಿದ್ದ ದಯಾನಂದ ಸರಸ್ವತಿ ಅವರು, ಆಗಲೆ ಸಮಾಜದಲ್ಲಿನ ಮೌಡ್ಯಗಳನ್ನು ಪ್ರಶ್ನಿಸುತ್ತಾ ಭಾರತದ ಧಾರ್ಮಿಕ ಸುಧಾರಣಾ ಚಳುವಳಿಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದರು. ಅವರು ಚಿಕ್ಕವರಿರುವಾಗ ಕಾಲರಾ ರೋಗದಿಂದಾದ ಸಂಭವಿಸಿದ ತಂಗಿ ಮತ್ತು ಚಿಕ್ಕಪ್ಪನ ಸಾವುಗಳು ದಯಾನಂದರ ಮೇಲೆ ಪರಿಣಾಮ ಬೀರಿತ್ತು. ಹದಿಹರೆಯದ ವಯಸ್ಸಿನಲ್ಲಿ ಅವರಿಗೆ ಮದುವೆ ಮಾಡುವ ನಿಟ್ಟಿನಲ್ಲಿ ಮನೆಯಲ್ಲಿ ಪ್ರಯತ್ನ ನಡೆಸುತ್ತಾರೆ. ಆದರೆ ಮದುವೆಯನ್ನೇ ಧಿಕ್ಕರಿಸಿ 1846 ರಲ್ಲಿ ಮನೆಯಿಂದ ಹೊರ ನಡೆದರು. ಪ್ರಾಪಂಚಿಕ ವಸ್ತು ಸುಖಗಳನ್ನು ತ್ಯಜಿಸಿದರು. ವಿರಕ್ತ ಜೀವನವನ್ನು ಅನುಸರಿಸಿದರು. ಆಧ್ಯಾತ್ಮಿಕ ಚಟುವಟಿಕೆಗಳತ್ತ ಹೆಚ್ಚು ಪ್ರೇರಿತರಾದ ಅವರು ಅರಣ್ಯಗಳಲ್ಲಿ, ಹಿಮಾಲಯ ಪರ್ವತಗಳ ತಪ್ಪಲಲ್ಲಿ ಏಕಾಂತವನ್ನು ಕಳೆದರು.
ಸಮಾಜದಲ್ಲಿನ ಮೌಢ್ಯಗಳನ್ನು ಪ್ರಶ್ನಿಸುತ್ತಾ ಸಮಾಜದಲ್ಲಿ ಸುಧಾರಣೆ ತರಲು ಪ್ರಯತ್ನಿಸಿದ ಹಲವು ಗಣ್ಯರಲ್ಲಿ ಸ್ವಾಮಿ ದಯಾನಂದ ಸರಸ್ವತಿ ಅವರು ಮುಖ್ಯರಾಗುತ್ತಾರೆ. 1845 ರಿಂದ 1869 ರವರೆಗೆ ಸುಮಾರು ಇಪ್ಪತ್ತೈದು ವರ್ಷಗಳ ಅವಧಿಯನ್ನು ಇವರು ಧಾರ್ಮಿಕ ಸತ್ಯಗಳ ಹುಡುಕಾಟದ ಹಾದಿಯಲ್ಲಿಯೇ ಕಳೆದವರು. ವಿರಾಜಾನಂದ್ ದಂಡೇಶ ಅವರ ಶಿಷ್ಯರಾಗಿ, ಮೂಲ ಸತ್ವದಿಂದ ದೂರ ಸರಿದಿದ್ದ ಹಿಂದೂ ಧರ್ಮವನ್ನು ವೇದಾಧ್ಯಯನದ ಮೂಲಕ ಪುನಃ ಸ್ಥಾಪಿಸುವುದಾಗಿ ಗುರುಗಳಿಗೆ ಭರವಸೆ ನೀಡಿದರು. 1848 ರಲ್ಲಿ ಸ್ವಾಮಿ ಪೂರ್ಣಾನಂದ ಸರಸ್ವತಿಗಳು ಅವರಿಗೆ ಸಂನ್ಯಾಸ ದೀಕ್ಷೆ ನೀಡಿ ಅವರನ್ನು ಸ್ವಾಮಿ ದಯಾನಂದ ಸರಸ್ವತಿ ಎಂದು ಕರೆದರು.
ಹಿಂದೂ ಧರ್ಮದಲ್ಲಿನ ಧಾರ್ಮಿಕ ನಂಬಿಕೆಗಳಲ್ಲಿ ಒಂದಾದ ಮೂರ್ತಿಪೂಜೆಯನ್ನು ಬಲವಾಗಿ ವಿರೋಧಿಸಿದ ಅವರು ವೇದಗಳ ಮೇಲೆ ಹೆಚ್ಚಿನ ಅಧ್ಯಯನ ನಡೆಸಿದರು. ಹಿಂದು ಸಮಾಜವನ್ನು ತಿದ್ದಲು ವೇದದ ಮೊರೆ ಹೋದ ಮೊದಲ ತತ್ವಜ್ಞಾನಿ ಎನಿಸಿಕೊಂಡರು. ಇವರ ಪ್ರಸಿದ್ದ ಕೃತಿಯಾದ ʼಸತ್ಯಾರ್ಥ ಪ್ರಕಾಶʼ ದಲ್ಲಿ ʼವೇದಗಳಿಗೆ ಹಿಂತಿರುಗಿʼ ಎಂದು ಕರೆಕೊಟ್ಟರು. ಈ ಕೃತಿಯು ಮುಂದೆ ದೇಶದ ಅನೇಕ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯನ್ನು ನೀಡಿತು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವ ಘೋಷವಾಕ್ಯದೊಂದಿಗೆ ಸ್ವರಾಜ್ಯದ ಕಲ್ಪನೆಯಲ್ಲಿ ಬ್ರಿಟಿಷರಿಗೆ ಬಿಸಿ ಮುಟ್ಟಿಸಿದ ಬಾಲಗಂಗಾಧರ ತಿಲಕ್ ಅವರಿಗೆ ಪ್ರೇರಣೆಯ ಅಂಶ ದೊರಕಿದ್ದು ಸ್ವಾಮಿ ದಯಾನಂದ ಸರಸ್ವತಿ ಅವರು 1876 ರಲ್ಲಿ ಮೊಳಗಿಸಿದ ʼಇಂಡಿಯಾ ಫಾರ್ ಇಂಡಿಯನ್ಸ್ʼ ಎಂಬ ಘೋಷಣೆಯಿಂದಲೇ ಎಂಬುದನ್ನು ನಾವಿಲ್ಲಿ ಗಮನಿಸಲೇಬೇಕು. ಸ್ವರಾಜ್ಯದ ಕಲ್ಪನೆಯನ್ನು ತುಂಬಿದ ಇವರ ತತ್ವಗಳು ಅಂದಿಗೂ ಪ್ರಸ್ತುತ, ಇಂದಿಗೂ ಸಹ. ಬೇರೆ ಧರ್ಮಕ್ಕೆ ಮತಾಂತರಗೊಂಡ ಅನೇಕ ಹಿಂದೂಗಳನ್ನು ಮರಳಿ ಮಾತೃಧರ್ಮಕ್ಕೆ ಕರೆತರಲು ಶುದ್ಧಿ ಚಳುವಳಿ ಪ್ರಾರಂಭಿಸಿದರು. ದಯಾನಂದ ಸರಸ್ವತಿ ಅವರ ಈ ನಡೆ ಆ ಕಾಲದ ಮತಾಂತರಿಗಳ ಷಡ್ಯಂತ್ರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ವೈದಿಕ ಧರ್ಮದ ರಕ್ಷಣೆ ಮತ್ತು ಪ್ರಚಾರ ಮಾಡಿದ್ದರಿಂದ ಇವರನ್ನು ʼಆಧುನಿಕ ಭಾರತದ ಹಿಂದೂ ಧರ್ಮದ ಪ್ರಥಮ ಸುಧಾರಕʼ ಎಂದೂ ಕರೆಯುತ್ತಾರೆ.
ಧಾರ್ಮಿಕ ಚಳುವಳಿ ಮೂಲಕ ಮಿಷನರಿಗಳಿಗೆ ಮತ್ತು ಇಲ್ಲಿನ ಬ್ರಿಟಿಷರಿಗೆ ಭಯ ಹುಟ್ಟಿಸಿ, ಹಿಂದೂ ಧರ್ಮದಲ್ಲಿನ ಧಾರ್ಮಿಕ ವಿಚಾರಗಳನ್ನು ಗಟ್ಟಿಗೊಳಿಸುತ್ತಾ ಹಿಂದೂ ಧರ್ಮದ ಕೀರ್ತಿಯನ್ನು ಎತ್ತರಕ್ಕೇರಿಸಿದ ಸ್ವಾಮಿ ದಯಾನಂದ ಸರಸ್ವತಿಯವರ ನಿಸ್ವಾರ್ಥ, ಸಮಾಜ ಹಿತದ ಕಾರ್ಯ ನೆನೆಯಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ವ್ಯಕ್ತಿಗೆ ಸಾವಿದೆ. ಆದರೆ ಅವರು ಸಮಾಜದಲ್ಲಿ ನೆಟ್ಟು ಹೋದ ಮೌಲ್ಯಗಳಿಗೆ ಸಾವಿಲ್ಲ. ಅವು ಸದಾ ಜೀವಂತ. ಕಾಲ ಕಾಲಕ್ಕೂ ಆ ತತ್ವಗಳನ್ನು ಅನುಸರಿಸುವ ಅದೆಷ್ಟೋ ಜನರು ನಮಗೆ ಸಿಗುತ್ತಾರೆ. ಅಂತಹ ಸಾರ್ವಕಾಲೀಕ ತತ್ವಾದರ್ಶಗಳ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನ ನಡೆಸಿದ ಮತ್ತು ಇಂದಿಗೂ ಪ್ರೇರೇಪಣಾ ಶಕ್ತಿಯಾಗಿ ತಮ್ಮ ತತ್ವಗಳ ಮೂಲಕವೇ ಜೀವಿಸುತ್ತಿರುವ ಸ್ವಾಮಿ ದಯಾನಂದ ಸರಸ್ವತಿ ಅವರು ಇಂದಿಗೂ ಸಮಾಜಕ್ಕೆ ಸ್ಪೂರ್ತಿ ಎಂಬುದರಲ್ಲಿ ಎರಡು ಮಾತಿಲ್ಲ.
✍️ವಿಶ್ವಾಸ್ ಅಡ್ಯಾರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.