ಬೆಳ್ತಂಗಡಿ: ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ ಅವರ ಕೈ ಕಡಿದ ಆರೋಪಿ ಗೋಪಾಲಗೌಡನನ್ನು ಬಂಧಿಸಲು ಪೋಲೀಸರು ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಆತನನ್ನು ಕೂಡಲೆ ಬಂಧಿಸಲಾಗುವುದು. ಮೂಲನಿವಾಸಿಗಳು ಭಯಪಡುವ ಅಗತ್ಯವಿಲ್ಲ, ಸರಕಾರ ನಿಮ್ಮ ಬೆಂಬಲಕ್ಕಿದೆ ಎಂದು ಶಾಸಕ ಕೆ. ವಸಂತ ಬಂಗೇರ ಅವರು ಕಾಟಾಜೆಯ ಜನರಲ್ಲಿ ಧೈರ್ಯ ತುಂಬಿದ್ದಾರಲ್ಲದೆ ಭರವಸೆ ನೀಡಿದ್ದಾರೆ.
ಶನಿವಾರ ಕಾಟಾಜೆ ಮಲೆಕುಡಿಯ ಕಾಲೊನಿಗೆ ಭೇಟಿ ನೀಡಿದ ಶಾಸಕ ಬಂಗೇರ ಅವರು ಸುಂದರ ಮಲೆಕುಡಿಯ ಅವರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕಾಟಾಜೆ ಪರಿಸರದಲ್ಲಿ ಗೊಪಾಲಗೌಡ ಮತ್ತು ಕುಟುಂಬದವರ ದಬ್ಬಾಳಿಕೆಯಿಂದ ನೊಂದಿದ್ದ ಜನರು ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದೆ ತೆರೆದಿಟ್ಟರು. ಯಾರಿಗೂ ಜಮೀನಿನ ಹಕ್ಕುಪತ್ರ ನೀಡಲು ಬಿಡುತ್ತಿಲ್ಲ. ರಸ್ತೆ ರಿಪೇರಿಗೆ ಅವಕಾಶ ನೀಡುವುದಿಲ್ಲ. ನದಿಯಿಂದ ಕಾಲುವೆಯಲ್ಲಿ ಬರುವ ನೀರನ್ನು ತೆಗೆಯಲು ಅಡ್ಡಬರುತ್ತಾರೆ. ಮನೆಗಳಿಗೆ ನುಗ್ಗಿ ಆತ ಮತ್ತು ತಂಡ ದೌರ್ಜನ್ಯವೆಸಗುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಂಡರು.
ಜನರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಶಾಸಕರು ಇನ್ನು ಇಂತಹ ದೌರ್ಜನ್ಯಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಇಲ್ಲಿನ ನಿವಾಸಿಗಳಿಗೆಲ್ಲ ಹಕ್ಕುಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಕ್ರಮ ಸಕ್ರಮ ಅರ್ಜಿ ಸಲ್ಲಿಸಿದವರ ಜಮೀನಿನ ಅಳತೆ ಕಾರ್ಯ ಅರಂಭಿಸಲಾಗಿದೆ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯವರ ನಡುವೆ ಜಾಗದ ಬಗ್ಗೆ ಗೊಂದಲವಿದೆ. ಅದನ್ನು ಜಂಟಿ ಸಮೀಕ್ಷೆ ಮೂಲಕ ಪರಿಹರಿಸಲಾಗುವುದು. ಇಲ್ಲಿನ ಮೂಲನಿವಾಸಿಗಳಿಗೆ ಮತ್ತು ಇತರೆ ಕುಟುಂಬಗಳಿಗೆ ಹಕ್ಕುಪತ್ರ ನೀಡುವುದಕ್ಕೆ ಮೊದಲ ಆದ್ಯತೆ ನೀಡುವುದಾಗಿ ಅವರು ತಿಳಿಸಿದರು. ರಸ್ತೆ ದುರಸ್ತಿಯ ವಿಚಾರ ಈ ಹಿಂದೆಯೇ ಗಮನಕ್ಕೆ ಬಂದಿದೆ. ನೆರಿಯದಿಂದ ಕಾಟಾಜೆ ವರೆಗೆ 5 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಕಾಲುವೆಯ ಮೂಲಕ ನೀರು ಹರಿಸುವುದಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ತಹಶೀಲ್ದಾರರಿಗೆ ದೂರು ನೀಡುವಂತೆ ಸೂಚಿಸಿದರು. ಅದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಿದರೆ ಪೋಲೀಸರನ್ನು ಕರೆಸಿ ತೆರವುಗೊಳಿಸಲಾಗುವುದು. ಅಲ್ಲದೇ ಗೊಪಾಲಗೌಡರು ಅಕ್ರಮ ಜಮೀನು ಹೊಂದಿದ್ದರೆ ಅದನ್ನು ಅಳತೆ ಮಾಡಿ ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯರಿಗೆ ಭರವಸೆ ನೀಡಿದರು. ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದ್ದು, ಅಗತ್ಯ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು.
ಶಾಸಕರೊಂದಿಗೆ ಎ.ಪಿ.ಎಂ.ಸಿ. ಉಪಾಧ್ಯಕ್ಷ ಲಕ್ಷ್ಮಣ ಮಲೆಕುಡಿಯ, ನೆರಿಯ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಶ್ರಫ್, ರಾಜನ್, ಶೆರ್ಲಿ ಬಿನೋಯಿ, ಕಸ್ತೂರಿ, ಸ್ಥಳೀಯ ಮುಖಂಡರುಗಳಾದ ಪೂವಪ್ಪ ಪೂಜಾರಿ, ಸೆಬಾಸ್ಟಿಯನ್, ರಾಮಕೃಷ್ಣ, ಸಂಜೀವಗೌಡ, ಬಲಕೃಷ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.