ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಬಿಪಿಎಲ್ ಪಡಿತರ ಚೀಟಿಯನ್ನು ಜಾರಿಗೆ ತರಲಾಗಿದೆ. ಆದರೆ ಈ ವ್ಯವಸ್ಥೆಯನ್ನು ಸ್ಥಿತಿವಂತ ಕುಟುಂಬಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಸರ್ಕಾರಿ, ಸರ್ಕಾರಿ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸಂಸ್ಥೆಯ ಅಧಿಕಾರಿಗಳು, ನೌಕರರು, ಅವರನ್ನು ಅವಲಂಬಿಸಿಕೊಂಡಿರುವವರು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಲ್ಲಿ ಅವುಗಳನ್ನು ತಕ್ಷಣ ಆಹಾರ ಇಲಾಖೆಗೆ ಸಲ್ಲಿಸಿ ರದ್ದುಪಡಿಸಿಕೊಳ್ಳುವಂತೆ ತಿಳಿಸಿದೆ.
ಇಲ್ಲವಾದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದಾಗಿಯೂ ಕಲಬುರ್ಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ದಯಾನಂದ ಪಾಟೀಲ್ ತಿಳಿಸಿದ್ದಾರೆ.
ಇಂತಹ ಅಕ್ರಮಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡು ಬಂದಲ್ಲಿ ಅವರು ಉದ್ಯೋಗ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ರೇಷನ್ ಅಂಗಡಿಗಳಿಂದಲೇ ಎಲ್ಲರೂ ಪಡಿತರ ಚೀಟಿ ಬಳಸಿ ಆಹಾರ ವಸ್ತುಗಳನ್ನು ಖರೀದಿಸಬೇಕಾಗಿದ್ದು, ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿಗಳನ್ನು ಬಳಸುತ್ತಿರುವವರನ್ನು ಪತ್ತೆ ಹಚ್ಚುವುದು ಸರ್ಕಾರಕ್ಕೆ ದೊಡ್ಡ ವಿಚಾರವೇನಲ್ಲ. ಆದ್ದರಿಂದ ತಕ್ಷಣವೇ ಸರ್ಕಾರಿ ಉದ್ಯೋಗಿಗಳು, ಸ್ಥಿತಿವಂತರು ಬಿಪಿಎಲ್ ಕಾರ್ಡುಗಳನ್ನು ಬಳಕೆ ಮಾಡುತ್ತಿದ್ದರೆ ಅವುಗಳನ್ನು ರದ್ದುಪಡಿಸಿ ಎಂದು ಅವರು ಎಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.