ಬೆಂಗಳೂರು: ಮಾವಿನ ಹಣ್ಣು ಪ್ರಿಯರಿಗೆ ಅತ್ಯಂತ ಹಿತ ನೀಡುವ ತಿಂಗಳು ಎಪ್ರಿಲ್, ಮೇ. ಆದರೆ ಐಐಎಚ್ಆರ್ ನಲ್ಲಿ ಆವಿಷ್ಕಾರ ಮಾಡಲಾಗಿರುವ ಹೊಸ ತಳಿಯ ಅರ್ಕಾ ಸುಪ್ರಭಾತ ಮಾವು ಮಾತ್ರ ಕೊಂಚ ಭಿನ್ನ. ಎಲ್ಲಾ ಮಾವಿನ ತಿಂಗಳು ಸಾಮಾನ್ಯವಾಗಿ ಎಪ್ರಿಲ್, ಮೇ ತಿಂಗಳಿನಲ್ಲಿಯೇ ಹಣ್ಣಾದರೆ ಈ ಮಾವು ಮಾತ್ರ ಜುಲೈ ತಿಂಗಳಿನಲ್ಲಿ ಕೊಯ್ಲಿಗೆ ಬರುತ್ತದೆ. ಆ ಮೂಲಕ ಮೇ ಕಳೆದ ಮೇಲೂ ಮಾವು ಸವಿಯಬೇಕೆಂದು ಬಯಸಿದವರಿಗೆ ಸಿಹಿ ನೀಡಲಿದೆ ಅರ್ಕಾ ಸುಪ್ರಭಾತ ತಳಿ.
ಉಳಿದೆಲ್ಲಾ ಮಾವಿನ ತಳಿಗಳು ಪ್ರತಿ ವರ್ಷವೂ ಒಂದೇ ರೀತಿಯ ಫಸಲು ನೀಡುವುದು ಸಾಧ್ಯವಿಲ್ಲ. ಈ ಬಾರಿ ಬೆಳೆ ಕಡಿಮೆ ಇದ್ದರೆ ಮುಂದಿನ ಬಾರಿ ಉತ್ತಮ, ಮತ್ತೊಮ್ಮೆ ಕಡಿಮೆ ಹೀಗೆ ವೈಪರೀತ್ಯಗಳಾಗುತ್ತಲೇ ಇರುತ್ತದೆ. ಆದರೆ ಅರ್ಕಾ ಸುಪ್ರಭಾತ ಹಾಗಲ್ಲ. ಈ ನೂತನ ಕಸಿ ಮಾಡಿರುವ ಮಾವಿನ ತಳಿ ಪ್ರತಿ ವರ್ಷವೂ ಒಂದೇ ರೀತಿಯಾಗಿ ಫಸಲು ನೀಡಲಿವೆ. ಈ ಮಾವಿನ ಕೃಷಿ ಬೆಳೆಗಾರರಿಗೆ ನಿರಾಳತೆಯನ್ನು ನೀಡಲಿದೆ ಎಂದು ಐಐಎಚ್ಆರ್ ಮೂಲಗಳು ತಿಳಿಸಿವೆ.
ಈ ನೂತನ ಕಸಿ ಮಾವಿನ ಗಿಡಗಳು ಹೇಸರಘಟ್ಟದ ಐಐಎಚ್ಆರ್ ನಲ್ಲಿ ಲಭ್ಯವಿದ್ದು, ಒಂದು ಸಸಿಗೆ 70 ರೂ. ಗಳನ್ನು ನಿಗದಿ ಮಾಡಲಾಗಿದೆ. ನಾಲ್ಕು ಮೀ. ಅಂತರದಲ್ಲಿ ಒಂದೊಂದು ಸಸಿಯನ್ನು ನೆಡಬಹುದಾಗಿದ್ದು, ಈ ಸಸಿಗಳಿಗೆ ಗಿಡಗಳ ಸಾಂದ್ರತೆಗೆ ಒಗ್ಗಿಕೊಳ್ಳುವ ಗುಣವೂ ಇದೆ. ಇದು ತೇವಾಂಶ ಭರಿತ ಪ್ರದೇಶದ ಜೊತೆಗೆ, ಒಣ ಪ್ರದೇಶದಲ್ಲಿಯೂ ಬೆಳೆಯಲು ಪೂರಕವಾಗಿದೆ. ನಾಟಿ ಮಾಡಿದ ನಾಲ್ಕು ವರ್ಷಗಳಲ್ಲಿಯೇ ಈ ಮಾವು ಫಸಲು ನೀಡುತ್ತದೆ ಎಂದು ಸಂಸ್ಥೆ ಹೇಳಿದೆ. ಫಸಲು ಕೊಯ್ಲು ಮಾಡಿದ ಬಳಿಕ 10 ದಿನಗಳ ಕಾಲ ಈ ಮಾವಿನ ಹಣ್ಣುಗಳನ್ನು ಇರಿಸಿಕೊಳ್ಳಬಹುದಾಗಿದೆ.
ಈ ಮಾವು ಬಾದಾಮಿ ಮಾವಿನ ಹಣ್ಣಿನ ರುಚಿಯನ್ನೇ ಹೋಲುತ್ತದೆ. ತಿರುಳು ಸಹ ಬಾದಾಮಿ ಮಾವಿನ ಹಣ್ಣಿನ ತಿರುಳಿನಂತೆಯೇ ಇದೆ. ಒಂದು ಎಕರೆ ಪ್ರದೇಶದಲ್ಲಿ ಸುಮಾರು 400 ಅರ್ಕಾ ಸುಪ್ರಭಾತ ಗಿಡಗಳನ್ನು ಬೆಳೆಸಬಹುದಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.