ಬಾಗಲಕೋಟೆ: ನಗರದ ವಿದ್ಯಾಗಿರಿಯಲ್ಲಿ ಸೇವಾಭಾರತಿ ಸಂಚಾಲಿತ ಆಶ್ರಯಧಾಮ (ಆಶ್ರಯ ರಹಿತ ಮಕ್ಕಳ ಪುನರ್ವಸತಿ ಕೇಂದ್ರ)ದಲ್ಲಿ ತಂದೆ ತಾಯಿಗಳಿಲ್ಲದ 20-25 ಮಕ್ಕಳು ಇದ್ದಾರೆ. ಎಲ್ಲಾ ಮಕ್ಕಳಿಗೂ ತಮ್ಮ ತಂದೆ ತಾಯಿಗಳು, ಪಾಲಕರು, ಅಣ್ಣಂದಿರು, ಅಕ್ಕಂದಿರು, ಅಥವಾ ಮನೆಯಲ್ಲಿನ ದೊಡ್ಡವರು ಮಕ್ಕಳಿಗೆ ಚಾಕೊಲೇಟ್, ಹಣ್ಣುಗಳನ್ನು, ಸಿಹಿ ತಿನಿಸುಗಳನ್ನು ತಿನ್ನಲು ಹಣ ಕೊಡುತ್ತಾರೆ. ಆದರೆ ಈ ತರಹದ ಆಶ್ರಯಧಾಮದ ಮಕ್ಕಳು ಸಿಹಿ ತಿನಿಸುಗಳಿಗೆ ಅಥವಾ ಇನ್ನಾವುದಕ್ಕೇ ಇರಲಿ ದುಡ್ಡು ಕಾಣುವುದೇ ಅಪರೂಪ.
ತಂದೆ ತಾಯಿಗಳಿಲ್ಲದವರ ಕಷ್ಟ ಎಷ್ಟು ಯೋಚಿಸಿದರೂ ಅನುಭವಕ್ಕೆ ಬರುವುದು ಕಡಿಮೆಯೇ. ಹಾಗೆಂದು ಈ ತರಹದ ಆಶ್ರಯ ಧಾಮಗಳಲ್ಲಿ ತಂದೆ ತಾಯಿಗಳಷ್ಟೆ ಸಮನಾದ ಪ್ರೀತಿ ನೀಡುವ ವ್ಯವಸ್ಥೆ ಸಂಘ ಪರಿವಾರದ ಸಂಸ್ಥೆ ಸೇವಾ ಭಾರತಿಯಲ್ಲಿ ನಡೆದುಕೊಂಡು ಬಂದಿದೆ ಎಂಬುದು ಸಂತಸದಾಯಕ ವಿಚಾರ. ಈ ಆಶ್ರಯಧಾಮ ನೋಡಿಕೊಳ್ಳುವ ಸ್ವಯಂಸೇವಕನ ಕುಟುಂಬವೆ ಈ ಮಕ್ಕಳಿಗೆ ತಂದೆ ತಾಯಿ ಬಂಧು ಬಳಗ ಎಲ್ಲಾ.
ಈ ಸೇವಾ ಭಾರತಿಯ ಆಶ್ರಮವು ಸರ್ಕಾರದಿಂದ ಮಕ್ಕಳನ್ನು ಸಾಕಿ, ಸಲುಹುವುದಕ್ಕಾಗಿ ಯಾವುದೇ ರೀತಿಯಿಂದಲೂ ಹಣ ಪಡೆದುಕೊಳ್ಳುವುದಿಲ್ಲ. ಇಲ್ಲಿನ ಮಕ್ಕಳ ದಿನನಿತ್ಯದ ಖರ್ಚು, ಶಿಕ್ಷಣ, ಊಟ ವಸತಿಗಳನ್ನು ನಿರ್ವಹಿಸಲು ಸಮಾಜದಲ್ಲಿನ ಸೇವಾ ಮನೋಭಾವನೆಯಿರುವ ವ್ಯಕ್ತಿಗಳಿಂದ ದೇಣಿಗೆ ರೂಪದಲ್ಲಿ ಹಣ, ಕಿರಾಣಿ, ಶಿಕ್ಷಣದ ಸಾಮಗ್ರಿಗಳನ್ನು ಪಡೆದು ನಿರ್ವಹಿಸಲಾಗುತ್ತದೆ. ಹಾಗೆಂದು ಈ ಮಕ್ಕಳ ಸೇವಾ ಮನೋಧರ್ಮವೇನೂ ಬಡತನದಲ್ಲಿಲ್ಲ. ಇದಕ್ಕೆ ಸಾಕ್ಷಿಯಾದದ್ದು ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಮಕ್ಕಳು ಅರ್ಪಿಸಿದ ನಿಧಿ.
ಸಂಘ ಸಂಸ್ಕಾರದ ಫಲವಾಗಿ ಈ ಮಕ್ಕಳಲ್ಲಿ ಸೇವಾ ಮನೋಭಾವನೆ ಹಾಗೂ ಶ್ರೀರಾಮನ ಮೇಲಿನ ಭಕ್ತಿ ಎಷ್ಟಿತ್ತಂದರೆ ಆ ಭಾವವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ಅಸಾಧ್ಯ. ಹಾಗಾದರೆ ಈ ಮಕ್ಕಳಲ್ಲಿ ದುಡ್ಡು ಎಲ್ಲಿಂದ ಬಂತು ಅಂತ ಸಹಜ ಪ್ರಶ್ನೆ ಮೂಡಬಹುದು. ಬಾಗಲಕೋಟೆಯ ಜನರು ಆ ಆಶ್ರಯಧಾಮಕ್ಕೆ ಬಂದು ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ಅಥವಾ ಮನೆಯ ಶುಭ ಸಮಾರಂಭದ ನೆನಪಿಗಾಗಿ ಹಾಗೂ ಸೇವಾ ಮನೋಭಾವದ ಸಲುವಾಗಿ ಆರಿಸಿಕೊಳ್ಳುವ ನಿರಂತರ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಆಚರಿಸಿಕೊಂಡು ಹೋಗುವ ಜನರ ಖುಷಿಯನ್ನು ನೋಡಿ ಈ ಆಶ್ರಯ ರಹಿತ ಮಕ್ಕಳು ಖುಷಿ ಪಡುತ್ತಾರೆ. ಅವರು ನೀಡಿದ ಹಣವನ್ನು ಈ ಮಕ್ಕಳು ಇದೀಗ ನಿಧಿ ಸಮರ್ಪಣೆ ಮಾಡಿದ್ದಾರೆ. ನಾಲ್ಕು ಕಾಸು ಚಿಲ್ಲರೆ ಕಂಡೊಡನೆ ಗೂಡಂಗಡಿಗಳಿಗೆ ಹೋಗುವ ಮಕ್ಕಳನ್ನು ಕಾಣುವ ಮಧ್ಯೆದಲ್ಲಿಯೇ, ಚಿಲ್ಲರೆ ಹಣವನ್ನು ಕಾಣಲು ಕಷ್ಟ ಪಡುವ ಇಂತಹ ಮಕ್ಕಳು ತಮಗಾಗಿ ನೀಡಿದ ಹಣವನ್ನು ಏನೊಂದು ಯೋಚಿಸದೇ ಶ್ರೀರಾಮನ ಮಂದಿರಕ್ಕಾಗಿ ಭಕ್ತಿಪೂರ್ವಕವಾಗಿ ನಿಧಿಯಾಗಿ ನೀಡಿದ ಘಟನೆ ನಮ್ಮೆಲ್ಲರನ್ನು ಮೂಖವಿಸ್ಮೀತರನ್ನಾಗಿಸಿದ್ದು ಮಾತ್ರ ಸುಳ್ಳಲ್ಲ. ಇನ್ನೊಂದು ವಿಶೇಷ ಪ್ರೇರಣಾದಾಯಿ ಏನೆಂದರೆ ಎಲ್ಲಾ ಮಕ್ಕಳು ಒಟ್ಟಾಗಿ ನಿಧಿ ನೀಡಿದ್ದಾರೆ. ಅದಲ್ಲದೆ ಒಬ್ಬ ಹುಡುಗ ಬಂದು ಅಣ್ಣ ನನ್ ಬಳಿ 100 ರೂ. ಇದೆ ಇದನ್ನು ತೆಗೆದುಕೊಳ್ಳಿ ಎಂದು ತನ್ನಲ್ಲಿದ್ದ ಎಲ್ಲಾ ಮೊತ್ತವನ್ನೂ ಸಮರ್ಪಿಸಿದ್ದಾನೆ. ಆ ಕ್ಷಣದಲ್ಲಿ ನನಗೆ ಮಾತೆ ಹೊರಡಲಿಲ್ಲ. ಈ ಎಲ್ಲರ ಜೊತೆಗೆ ನನ್ನದು ವೈಯಕ್ತಿಕವಾಗಿ ರಾಮನಿಗೆ ಮುಟ್ಟಲಿ ಅನ್ನುವ ಭಾವನೆ ಅವನಲ್ಲಿತ್ತು.
ಹಣ ಎಷ್ಟೇ ಇದ್ದರೂ ಸಮಾಜಕ್ಕಾಗಿ ವ್ಯಯಿಸುವವರು ಅತಿ ವಿರಳ. ಅಂತಹದ್ದರ ಮಧ್ಯೆ ಒಂದು ಪೈಸೆ ತಮ್ಮ ಸ್ವಂತ ದುಡ್ಡು ಇಲ್ಲದಿದ್ದರೂ, ತಮಗೆ ದಾನದ ರೂಪದಲ್ಲಿ ನೀಡಿದ ಧನವನ್ನು ರಾಮನಿಗಾಗಿ ನಿಧಿ ಅರ್ಪಿಸಿದ ಈ ಆಶ್ರಯ ರಹಿತ ಮಕ್ಕಳಂತಹ ಮುಗ್ಧರೇ ಅಲ್ಲವೇ ನಮಗೆ ಪ್ರೇರಣೆ.
ಹಣ ಗಳಿಸುವುದು ಮುಖ್ಯವಲ್ಲ. ಅದನ್ನು ಹೇಗೆ ಬಳಕೆ ಮಾಡುತ್ತೇವೆಂಬುದು ಮುಖ್ಯ. ದೇವರ ಹೆಸರಲ್ಲಿ ಸೇವೆ, ಭಕ್ತಿಗಾಗಿ ನೀಡುವುದು ಮುಖ್ಯ. ಅದರಲ್ಲೂ ಮಕ್ಕಳು ನೀಡುತ್ತಿರುವುದು ಬಹುಮುಖ್ಯ. ಈ ತರಹದ ಆಶ್ರಯ ರಹಿತ ಮಕ್ಕಳು ನೀಡುತ್ತಿರುವುದು ಪರಮ ಶ್ರೇಷ್ಠ ಸೇವಾ, ಭಕ್ತಿಭಾವ. ಕಷ್ಟಗಳಲ್ಲೆ ಕನಸುಗಳನ್ನಿಟ್ಟುಕೊಂಡು, ಪ್ರತಿನಿತ್ಯ ಕಷ್ಟಗಳಲ್ಲೆ ಬದುಕುವ ನಿರ್ಮಲ ಮನಸ್ಸಿನ ಭಕ್ತಿಭಾವದ, ಶ್ರದ್ಧೆಯ ಮಕ್ಕಳು ಮುಂದಿನ ದಿನಮಾನಗಳಲ್ಲಿ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ಬೆಳೆಯಲಿ ಎನ್ನುವ ಆಶಯದೊಂದಿಗೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.