ಬೆಳ್ತಂಗಡಿ: ಬ್ಯಾಂಕುಗಳು ಆಧುನಿಕ ತಂತ್ರಜ್ಞಾನ ಬಳಸಿ ಹಣದ ವ್ಯವಹಾರವನ್ನು ಸುಲಭಗೊಳಿಸಿರುವುದನ್ನು ರೈತರು ಅರ್ಥಮಾಡಿಕೊಂಡು ಬಳಸಿಕೊಂಡಲ್ಲಿ ಹಲವಾರು ಸಮಸ್ಯೆಗಳು ಪರಿಹಾರವಾಗಬಲ್ಲುದು ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾವೇರಿ ಕಟ್ಟಡದಲ್ಲಿ ಕಾರ್ಪೋರೇಶನ್ ಬ್ಯಾಂಕಿನ ಇ-ಲಾಬಿಯನ್ನು ಉದ್ಘಾಟಿಸಿ ಬಳಿಕ ಪ್ರವಚನ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮೀಟರ್ ಬಡ್ಡಿ ಲೆಕ್ಕಾಚಾರದಿಂದ ರೈತರು ಸಾಲದ ಒತ್ತಡಕ್ಕೆ ಸಿಲುಕಿದ್ದಾರೆ. ಖಾಸಗಿ ಬಡ್ಡಿದಾರರು ಹಾಕುವ ಬಡ್ಡಿ ಬಡರೈತನನ್ನು ಕಂಗಾಲು ಮಾಡುತ್ತಿದೆ. ಕಾರ್ಪೋರೇಶನ್ ಬ್ಯಾಂಕ್ ಮಾಡಿರುವ ಇ-ಬ್ಯಾಂಕ್ ಸೌಲಭ್ಯ ರೈತರಿಗೆ ಅತೀ ಹೆಚ್ಚಿನ ಪ್ರಯೋಜನವಾಗಲಿದೆ. ಇದರಿಂದ ಬಡ್ಡಿಯ ಒತ್ತಡಕ್ಕೆ ಸಿಲುಕುವುದು ತಪ್ಪುತ್ತದಲ್ಲದೆ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲುದು. ಅನಕ್ಷರಸ್ಥರೂ ಇದನ್ನು ಬಳಸಿಕೊಳ್ಳಬಹುದಾಗಿರುವುದರಿಂದ ಈ ವ್ಯವಸ್ಥೆಯನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಅತಿ ಹೆಚ್ಚಿನ ಪ್ರಚಾರವನ್ನು ನೀಡಲಾಗುವುದು ಎಂದರು.
ಹಿಂದೆ ಬ್ಯಾಂಕಿನ ವ್ಯವಹಾರಕ್ಕೆ ಒಂದು ವಾರ ಬೇಕಾಗುತ್ತಿತ್ತು. ಆದರೆ ತಂತ್ರಜ್ಞಾನದಿಂದಾಗಿ ಅದನ್ನು ನಿಮಿಷದಲ್ಲಿ ಮಾಡಿ ಮುಗಿಸಬಹುದಾಗಿದೆ. ನಗದುರಹಿತ ವ್ಯವಹಾರದ ಅತ್ಯಂತ ಆಧುನಿಕ ವ್ಯವಸ್ಥೆಯನ್ನು ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿರುವುದಕ್ಕೆ ಮತ್ತು ಕ್ಷೇತ್ರದಲ್ಲಿ ಅನುಷ್ಠಾನ ಮಾಡಿರುವುದಕ್ಕೆ ಬ್ಯಾಂಕ್ ಅಧಿಕಾರಿಗಳನ್ನು ಡಾ| ಹೆಗ್ಗಡೆ ಅಭಿನಂದಿಸಿದರು.
ಬ್ಯಾಂಕ್ ಅಧ್ಯಕ್ಷ ಎಸ್. ಆರ್. ಬನ್ಸಾಲ್ಅವರು, ಉಳಿತಾಯದ ವ್ಯವಹಾರದಲ್ಲಿ ಬ್ಯಾಂಕ್ ಅಗ್ರಣಿಯಾಗಿದೆ. ಪ್ರಸಕ್ತ ವರ್ಷದಲ್ಲಿ ೫ ಕೋಟಿ ೪೦ ಲಕ್ಷ ನಿವ್ವಳ ಉಳಿತಾಯ ಆಗಿದ್ದು ಶೇ.60 ಹೆಚ್ಚಳವಾಗಿದೆ. ನಮ್ಮ ಉಳಿತಾಯದ ವಿಧಾನಗಳನ್ನು ಆರ್ಬಿಐ ಗವರ್ನರ್ಗೆ ಪತ್ರ ಮುಖೇನ ತಿಳಿಸಿದ್ದೆ. ಅದನ್ನು ಅವರು ದೇಶದ ಎಲ್ಲಾ ಬ್ಯಾಂಕುಗಳ ಅಧ್ಯಕ್ಷರಿಗೆ ರವಾನಿಸಿದ್ದರು. ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕ ಬ್ಯಾಂಕಿಂಗ್ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ ರಾಜ್ಯವಾಗಿದೆ. ಇಲ್ಲಿ ಜನ ಉಳಿತಾಯ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ ಎಂದರು.
ವೇದಿಕೆಯಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಷೇಂದ್ರಕುಮಾರ್ ಇದ್ದರು. ಕ್ಷೇತ್ರದ ವತಿಯಿಂದ ಬ್ಯಾಂಕಿನ ಅಧ್ಯಕ್ಷರನ್ನು ಸಮ್ಮಾನಿಸಲಾಯಿತು. ಹನಿಗವನ ಸಾಹಿತಿ ಡುಂಢಿರಾಜ್ ಭಟ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಮಂಗಳೂರು ವಲಯ ಮುಖ್ಯಸ್ಥ ಎಮ್.ಡಿ. ಗಣೇಶ್ ಸ್ವಾಗತಿಸಿದರು. ಬ್ಯಾಂಕಿನ ಉಜಿರೆ ಶಾಖಾ ಪ್ರಬಂಧಕ ಗುರುರಾಜ್ ಆರ್. ಕೊಲ್ಲಾಪುರೆ ವಂದಿಸಿದರು.
ಇ-ಲಾಬಿ: ಬ್ಯಾಂಕ್ ಶಾಖೆಯ ಪ್ರತಿರೂಪವೇ ಇ-ಲಾಬಿ ಆಗಿದ್ದುಇಲ್ಲಿ ನಾಲ್ಕು ಯಂತ್ರಗಳ ಮೂಲಕ ದಿನದ 24 ಗಂಟೆಯೂ ಗ್ರಾಹಕರಿಗೆ ಬ್ಯಾಂಕ್ ಸೇವೆ ನೀಡಲಾಗುತ್ತದೆ. ರೂ. 50 ಸಾವಿರದ ತನಕ ಹಣವನ್ನು ಖಾತೆಗೆ ಜಮಾ ಮಾಡಬಹುದು. ಬೇಕಾದಾಗ ಖಾತೆಯಿಂದ ಹಣ ಪಡೆಯಬಹುದು. ಬೇರೆ ಬ್ಯಾಂಕಿನ ಚೆಕ್ನ್ನು ಖಾತೆಗೆ ಜಮಾ ಮಾಡಬಹುದು. ಸ್ವ-ಸಹಾಯ ಪದ್ಧತಿಯಲ್ಲಿ ಪಾಸ್ ಬುಕ್ ಪಡೆಯಬಹುದು. ಇದು 24 ಗಂಟೆ ಕಾರ್ಯಚರಿಸುತ್ತದೆ. ಮಂಗಳೂರು ವಲಯದಲ್ಲಿ ಕಾರ್ಪೋರೇಶನ್ ಬ್ಯಾಂಕ್ ಪ್ರಾಯೋಜಿತ 9 ಇ-ಲಾಬಿ ಘಟಕಗಳಿವೆ. ಧರ್ಮಸ್ಥಳದಲ್ಲಿ ಆರಂಭವಾಗಿರುವುದು ದೇಶದಲ್ಲಿನ 143 ನೇ ಕೇಂದ್ರವಾಗಿದೆ.
ಇಪ್ಪತ್ತನಾಲ್ಕು ಗಂಟೆ ಕಾರ್ಯಾಚರಿಸುವ ಇ-ಲಾಬಿಯಲ್ಲಿ ಗ್ರಾಹಕರು ನಗದನ್ನು ಭರ್ತಿ ಮಾಡಬಹುದು. ಚೆಕ್ ಹಾಕಬಹುದು. ಎಟಿಎಂ ಉಪಯೋಗಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.