ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ ಎಂಬಲ್ಲಿ ಆಳುಪ ದೊರೆ ಮೂರನೇ ಕುಲಶೇಖರನ ಶಾಸನವನ್ನು ಇಲ್ಲಿನ ಸ್ಥಳೀಯ ಯುವಕರು ಪತ್ತೆ ಮಾಡಿದ್ದಾರೆ. ಶಾಸನವು ಮಣ್ಣಿನಲ್ಲಿ ಹುದುಗಿ ಹೋಗಿದ್ದು, ಸ್ಥಳೀಯರ ಸಹಕಾರದಿಂದ ಇದನ್ನು ಸರಿಪಡಿಸಿ ನಿಲ್ಲಿಸಲಾಗಿದೆ.
ಈ ಶಾಸನವನ್ನು ಅಧ್ಯಯನ ಮಾಡಿದ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಮಾಹಿತಿ ನೀಡಿದ್ದು, ಈ ಶಾಸನವು 19 ಸಾಲುಗಳನ್ನು ಒಳಗೊಂಡಿರುವುದಾಗಿ ತಿಳಿಸಿದ್ದಾರೆ. ಇದು ಗ್ರಾನೈಟ್ ಶಿಲೆ (ಕಣ ಶಿಲೆ) ಯಿಂದ ಕೊರೆಯಲ್ಪಟ್ಟಿದ್ದು, 4 ಅಡಿ ಎತ್ತರ ಹಾಗೂ 2 ಅಡಿ ಅಗಲವಿದ್ದು, ಕನ್ನಡ ಲಿಪಿ ಮತ್ತು ಭಾಷೆಯಲ್ಲಿದೆ. ಶಾಸನದಲ್ಲಿ ಮೂರನೇ ಕುಲಶೇಖರನನ್ನು ಶ್ರೀ ಮತ್ಪ್ಯಾಂಡ್ಯ ಚಕ್ರವರ್ತಿರಾಯ ಗಜಾಂಕುಶ ವೀರ ಕುಲಶೇಖರ ಎಂದು ಸಂಭೋದಿಸಲಾಗಿದೆ. ಶಾಸನದಲ್ಲಿ ಸಾಧಾರಣ ಸಂವತ್ಸರದ ಧನು ಮಾಸ 2 ನೆಯ ಆದಿತ್ಯವಾರ ಎಂಬ ಕಾಲಮಾನದ ಉಲ್ಲೇಖವಿರುವುದನ್ನು ಕಾಣಬಹುದಾಗಿದೆ. ವೀರ ಕುಲಶೇಖರ ಮಂಗಳೂರ ರಾಜ್ಯವನ್ನು ಪ್ರತಿಪಾಲಿಸುತ್ತಿದ್ದ ಸಂದರ್ಭದಲ್ಲಿ ಅಡಿಯಾರ ಪ್ರದೇಶದ ಬೆದೆಕಾರು (ಮಳೆಗಾಲದಲ್ಲಿ ಬೆಳೆಯುವ ತರಿ ಭೂಮಿ) ಭೂಮಿಗಳನ್ನು ದಾನ ಕೊಟ್ಟಿರುವ ಉಲ್ಲೇಖವನ್ನು ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಶಾಸನದ ಕೊನೆಯಲ್ಲಿ ಈ ಶಾಸನವನ್ನು ಯಾರು ಹಾಳು ಮಾಡುವರೋ ಅವರು ಗಂಗೆ ಮತ್ತು ವಾರಣಾಸಿಯಲ್ಲಿ ಸಹಸ್ರ ಗೋವುಗಳನ್ನು ಕೊಂದ ದೋಷಕ್ಕೆ ಹೋಗುವರು ಎಂಬ ಶಾಪಾಶಯ ವಾಕ್ಯವನ್ನು ಬರೆಯಲಾಗಿದೆ. ಈ ದಾನವನ್ನು ಗುರುವ (ಗುರುವಣಪ್ಪ) ಒಡೆಯನು ಮಾಡಿರುವುದಾಗಿಯೂ ಶಾಸನದಲ್ಲಿ ಬರೆಯಲಾಗಿದೆ.
ಮುಖ್ಯವಾಗಿ ಶಾಸನದಲ್ಲಿ ಉಲ್ಲೇಖಗೊಂಡ ಅಡಿಯಾರ ಎಂಬ ಹೆಸರಿನ ಊರು ಪ್ರಸ್ತುತ ಚಾಲ್ತಿಯಲ್ಲಿರುವ ಅಡ್ಯಾರ್ ಇದರ ಪೂರ್ವದ ಹೆಸರಾಗಿರಬಹುದು ಎಂದು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರಿಗೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಅವರು ಕ್ಷೇತ್ರಕಾರ್ಯ ಶೋಧನೆಯಲ್ಲಿ ಸಹಾಯ ಮಾಡಿದ್ದಾರೆ.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಸುರೇಶ್ ಶೆಟ್ಟಿ, ಪ್ರಸನ್ನ ಅಡ್ಯಾರ್, ವಿನೀತ್ ಕುಮಾರ್, ಸುಜಿತ್ ಅಡ್ಯಾರ್, ವಿಶ್ವಾಸ್ ಅಡ್ಯಾರ್, ರಿಖಿಲ್, ರತನ್ ಮೊದಲಾದವರು ಸಹಕಾರ ನೀಡಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.