ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ನ ಕ್ಯಾಲಿಫೋರ್ನಿಯಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. “ದುರುದ್ದೇಶಪೂರಿತ ಮತ್ತು ತಿರಸ್ಕಾರದ ಕೃತ್ಯ” ಇದೆಂದು ಭಾರತ ಬಣ್ಣಿಸಿದೆ.
ಭಾರತ ಶನಿವಾರ ಘಟನೆಯನ್ನು ತೀವ್ರವಾಗಿ ಖಂಡಿಸಿ, ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಅಮೆರಿಕಾಗೆ ಕೋರಿದೆ.
ಗುರುವಾರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಈ ಪ್ರತಿಮೆಯನ್ನು ಭಾರತ ಸರ್ಕಾರವು 2016 ರಲ್ಲಿ ಡೇವಿಸ್ ನಗರಕ್ಕೆ ಉಡುಗೊರೆಯಾಗಿ ನೀಡಿತ್ತು ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
“ಶಾಂತಿ ಮತ್ತು ನ್ಯಾಯಕ್ಕಾಗಿ ಸಾರ್ವತ್ರಿಕವಾಗಿ ಗೌರವಿಸಲ್ಪಡುವ ವ್ಯಕ್ತಿತ್ವದ ವಿರುದ್ಧದ ಈ ದುರುದ್ದೇಶಪೂರಿತ ಮತ್ತು ತಿರಸ್ಕಾರದ ಕೃತ್ಯವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ” ಎಂದಿದೆ.
ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತದ ರಾಯಭಾರ ಕಚೇರಿಯು ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮತ್ತು ಈ ಅವಹೇಳನಕಾರಿ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯುಎಸ್ ವಿದೇಶಾಂಗ ಇಲಾಖೆಗೆ ಮನವಿ ಮಾಡಿದೆ. ಸ್ಯಾನ್ ಫ್ರಾನ್ಸಿಸ್ಕೋದ ಭಾರತದ ಕಾನ್ಸುಲೇಟ್ ಜನರಲ್ ಈ ವಿಷಯವನ್ನು ಪ್ರತ್ಯೇಕವಾಗಿ ಡೇವಿಸ್ ನಗರ ಮತ್ತು ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿದ್ದು, ಇದು ತನಿಖೆಯನ್ನು ಪ್ರಾರಂಭಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಡೇವಿಸ್ ಮೇಯರ್ ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದೆ. ಸ್ಥಳೀಯ ಭಾರತೀಯ ಸಮುದಾಯ ಸಂಸ್ಥೆಗಳು ವಿಧ್ವಂಸಕ ಕೃತ್ಯವನ್ನು ಖಂಡಿಸಿವೆ.
ಈ ವಿಧ್ವಂಸಕ ಕೃತ್ಯವು ಸ್ವೀಕಾರಾರ್ಹವಲ್ಲ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ತಿಳಿಸಿದೆ ಮತ್ತು ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.