ನಮ್ಮ ಇತಿಹಾಸವನ್ನು ನಾವು ಸರಿಯಾಗಿ ಗಮನಿಸಿದಲ್ಲಿ ಒಂದು ವಿಚಾರ ಸ್ಪಷ್ಟವಾಗುತ್ತದೆ. ಇತಿಹಾಸದುದ್ದಕ್ಕೂ ಕೆಲವು ವ್ಯಕ್ತಿಗಳನ್ನು ಮತ್ತು ಕೆಲವು ವಿಚಾರಗಳನ್ನು ಮಾತ್ರ ವೈಭವೀಕರಿಸಿದ್ದರೆ, ಅನೇಕ ಅರ್ಹ ವ್ಯಕ್ತಿಗಳನ್ನು ಮತ್ತು ವಿಚಾರಗಳನ್ನು ಕಡೆಗಣಿಸಲಾಗಿದೆ. ಅದು ಜನರ ಮನದಲ್ಲಿ ನೆಲೆಸುವಂತೆ ಮಾಡುವ ಕಾರ್ಯಕ್ರಮಗಳಲ್ಲಿ ಇರಬಹುದು ಅಥವಾ ಶಾಲಾ ಪಠ್ಯಪುಸ್ತಕಗಳಲ್ಲಿ ಇರಬಹುದು, ದಿನಾಚರಣೆಗಳಲ್ಲಿ ಇರಬಹುದು ಅಥವಾ ವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಇರಬಹುದು. ಈ ವಿಚಾರವನ್ನು ಅಲ್ಲಗೆಳೆಯುವವರು ಖಂಡಿತವಾಗಿಯೂ ಸಿಗುತ್ತಾರೆ, ಆದರೆ ಈ ವಿಚಾರವು 100% ಸತ್ಯ. ಸ್ವಾತಂತ್ರ್ಯ ಪೂರ್ವದ ಇತಿಹಾಸವನ್ನು ಗಮನಿಸಿ. ಮೊಘಲರ ಬಗ್ಗೆ ನಮ್ಮ ಪಠ್ಯಪುಸ್ತಕಗಳು ತಿಳಿಸಿದಷ್ಟು, ಚೋಳರ ಬಗ್ಗೆಯಾಗಲೀ ಪಲ್ಲವರ ಬಗ್ಗೆಯಾಗಲೀ ತಿಳಿಸಿದೆಯೇ? ಅಕ್ಬರನ ಶೌರ್ಯದ ಪರಾಕ್ರಮದ ಬಗ್ಗೆ ವರ್ಣಿಸಿದಂತೆ, ರಾಣಿ ದುರ್ಗಾವತಿಯ ಬಗ್ಗೆಯಾಗಲೀ ಲಲಿತಾದಿತ್ಯನ ಶೌರ್ಯದ ಬಗ್ಗೆಯಾಗಲೀ ವರ್ಣನೆಗಳು ಪಠ್ಯಪುಸ್ತಕದಲ್ಲಾಗಲೀ ಗ್ರಂಥಾಲಯಗಳಲ್ಲಾಗಲೀ ಇವೆಯೇ? ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಘಟನೆಗಳೂ, ಸ್ವಾತಂತ್ರ್ಯ ಹೋರಾಟಗಾರರೂ ಕೂಡಾ ಇಂಥದ್ದೇ ಅವಗಣನೆಗೆ ತುತ್ತಾಗಿದ್ದಾರೆ. ಸ್ವಾತಂತ್ರ್ಯ ದೊರಕಿ ಅನೇಕ ದಶಕಗಳೇ ಕಳೆದರೂ ಹಲವು ವೀರ ಸೇನಾನಿಗಳಿಗೆ ನೀಡಬೇಕಾದ ಗೌರವವನ್ನು ನಾವು ನೀಡಿರಲಿಲ್ಲ. ಅಂತಹ ವೀರರಲ್ಲಿ ಪ್ರಮುಖ ಸೇನಾನಿಯೇ “ನೇತಾಜಿ ಸುಭಾಷ್ ಚಂದ್ರ ಬೋಸ್”.
“ಆಜಾದ್ ಹಿಂದ್ ಫೌಜ್” ಎಂಬ ಅಪರಿಮಿತ ವೀರರ ಸೇನೆಯನ್ನು ಮುನ್ನಡೆಸಿದ ಭಾರತದ ಪ್ರಥಮ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸರಿಗೆ ದೊರಕಿದ ಮನ್ನಣೆಯೂ ನಿಜಕ್ಕೂ ಅತ್ಯಲ್ಪ. ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಂದ ಪ್ರೇರಣೆಯನ್ನು ಪಡೆದ ನೇತಾಜಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು, ಈ ಸಂದರ್ಭದಲ್ಲಿ ಗಾಂಧೀಜಿಯನ್ನೂ ಸೇರಿ ಇತರ ಕಾಂಗ್ರೆಸ್ ನಾಯಕರಿಂದ ಬಹಳ ಕಿರುಕುಳವನ್ನು ಅನುಭವಿಸಿದ ಬಳಿಕ ಕಾಂಗ್ರೆಸ್ ಪಕ್ಷದ ದುರ್ಬಲ ನಿರ್ಧಾರಗಳಿಂದ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. 1938 ರಲ್ಲಿ ನೇತಾಜಿ ಬ್ರಿಟೀಷರ ಒಡೆದು ಆಳುವ ನೀತಿಯ ಕುರಿತಾಗಿ ಮತ್ತು ಭಾರತದ ವಿಭಜನೆಯ ಮುಸ್ಲಿಂ ಲೀಗ್ – ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲ ಬಾರಿಗೆ ಬಹಿರಂಗವಾಗಿ ಎಚ್ಚರಿಸಿದ್ದರಾದರೂ ಮಂದಗಾಮಿ ಕಾಂಗ್ರೆಸ್ ಪಕ್ಷದ ನಾಯಕರು ಅವರ ಎಚ್ಚರಿಕೆಯ ಮಾತುಗಳನ್ನು ಕಡೆಗಣಿಸಿದ್ದರು. ಪಾಣಿನಾಮವಾಗಿ 9 ವರ್ಷಗಳ ಒಳಗಾಗಿ ದೇಶವು ಎರಡು ಹೋಳಾಗಿ ವಿಭಜನೆಗೊಂಡಿತು. ಹಲವಾರು ರಾಷ್ಟ್ರಗಳಲ್ಲಿ ಓಡಾಡುತ್ತಾ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಯಾಗಿರಲಿಲ್ಲ. “ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು” ಎಂದು ದೇಶಭಕ್ತ ಯುವಕರಲ್ಲಿ ಹೊಸ ಕಿಚ್ಚನ್ನು ತುಂಬುತ್ತಿದ್ದ ಬೋಸರು ಲಕ್ಷಾಂತರ ಭಾರತೀಯರ ಹೃದಯದ ರಾಜನಾದದ್ದು ಅಚ್ಚರಿಯ ವಿಚಾರವೇನಲ್ಲ.
ದಿನದಿನಕ್ಕೂ ಹೆಚ್ಚುತ್ತಿದ್ದ ಬೋಸರ ಪ್ರಸಿದ್ಧಿ, ಭಾರತೀಯರಲ್ಲೇ ಅನೇಕರು ಕುರುಬುವಂತೆ ಮಾಡಿತ್ತು. ನೇತಾಜಿ ಸುಭಾಷ್ಚಂದ್ರ ಬೋಸ್ ಅವರು 1945ರ ಆಗಸ್ಟ್ 18 ರಂದು ತೈವಾನ್ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ಮೃತಪಟ್ಟಿದ್ದಾರೇ ಎಂದು ಜಪಾನ್ ಸರ್ಕಾರವು ಅಧಿಕೃತವಾಗಿ ವರದಿಯನ್ನು ಸಲ್ಲಿಸಿತಾದರೂ, ಅನೇಕ ಭಾರತೀಯರು ಈ ವಿಚಾರವನ್ನು ಇಂದಿಗೂ ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಿಲ್ಲ. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಸಂಪೂರ್ಣ ಸ್ವರಾಜ್ಯವನ್ನು ಸ್ಥಾಪಿಸಿದ್ದ ಬೋಸರು ಇದಕ್ಕೆ ಶಾಹೀದ್ ಮತ್ತು ಸ್ವರಾಜ್ಯ ಎಂಬುದಾಗಿ ಮರುನಾಮಕರಣವನ್ನೂ ಮಾಡಿದ್ದರು. ದೇಶದೆಡೆಗೆ ತಮ್ಮ ಕರ್ತವ್ಯವನ್ನು ಸಂಪೂರ್ಣವಾಗಿ ಸಮರ್ಥವಾಗಿ ನಿರ್ವಹಿಸಿದ್ದ ಬೋಸರಿಗೆ ಸಮರ್ಪಕ ಗೌರವವನ್ನು ನೀಡಲು ನಾವೆಲ್ಲರೂ ಅನೇಕ ವರ್ಷಗಳ ಕಾಲ ವಿಫಲರಾಗಿದ್ದೇವೆಂಬುದು ಖೇದಕರ ವಿಚಾರ. ಕೆಲವು ವರ್ಷಗಳ ಹಿಂದಿನವರೆಗೂ ದಿನಾಚರಣೆಗಳು ಕೇವಲ ಕೆಲವೇ ಕೆಲವು ವ್ಯಕ್ತಿಗಳ ಸ್ಮರಣೆಯಲ್ಲಿ ಆಚರಿಸಲ್ಪಡುತ್ತಿದ್ದವು. ಪ್ರಶಸ್ತಿಗಳು ಪುರಸ್ಕಾರಗಳು ಪ್ರಸಿದ್ಧರಿಗೆ ಮಾತ್ರ ನೀಡಲಾಗುತ್ತಿತ್ತು. ಉದಾಹರಣೆಗೆ ಪದ್ಮ ಪ್ರಶಸ್ತಿಗಳು ಬಹುಪಾಲು ಜನಪ್ರಿಯ ವ್ಯಕ್ತಿಗಳಿಗೆ ನೀಡಲಾಗುತ್ತಿತ್ತು. ಅಧಿಕಾರದಲ್ಲಿದ್ದವರನ್ನು ಸಂಪ್ರೀತಗೊಳಿಸಿ ಪ್ರಶಸ್ತಿ ಪಡೆದವರ ಪಟ್ಟಿ ಬಹಳ ಉದ್ದವಿದೆ. ಪಠ್ಯ ಪುಸ್ತಕಗಳಲ್ಲಿ ದೇಶವು ಸ್ವಾತಂತ್ರ ಪಡೆಯಲು ಕೆಲವೇ ವ್ಯಕ್ತಿಗಳ ಕೊಡುಗೆಗಳನ್ನು ಮಾತ್ರ ವೈಭವೀಕರಿಸಲಾಗುತ್ತದೆ. ಜನ್ಮ ಜಯಂತಿ ಮತ್ತು ಪುಣ್ಯಸ್ಮರಣೆಗಳ ಆಚರಣೆ ಕೆಲವು ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿ ಉಳಿದದ್ದು ನಮಗೆಲ್ಲರಿಗೂ ತಿಳಿದೇ ಇದೆ. ಕೆಲವು ವ್ಯಕ್ತಿಗಳ ಸ್ಮರಣಾರ್ಥ ಮಾತ್ರ ಪ್ರಶಸ್ತಿಗಳನ್ನು ನೀಡಲಾಗುತ್ತದೆ, ರಸ್ತೆಗಳಿಗೆ ಸರಕಾರೀ ಸಂಸ್ಥೆಗಳ ನಾಮಕರಣವನ್ನು ಮಾಡಲಾಗುತ್ತದೆ.
ಆದರೆ 2014 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಹಲವಾರು ಪ್ರಮುಖ ಬದಲಾವಣೆಯನ್ನು ದೇಶವು ನೋಡುತ್ತಿದೆ. ಯಾವುದೇ ಹೊಸ ಆಯೋಜನೆಯೂ ಪ್ರಮುಖ ಹುದ್ದೆಯಲ್ಲಿರುವ ನಾಯಕರ ಹೆಸರಿನಲ್ಲಿ ಅಥವಾ ಅವರ ಕುಟುಂಬ ಸದಸ್ಯರ ಹೆಸರಲ್ಲಿ ತರಲಾಗಿಲ್ಲ. ಬದಲಾಗಿ ಹುದ್ದೆಯ ಹೆಸರಿನಲ್ಲೇ ಯೋಜನೆಗಳನ್ನು ಹೊರತರಲಾಗುತ್ತಿದೆ. ಪ್ರಶಸ್ತಿ ಪುರಸ್ಕೃತರ ಹೆಸರನ್ನೂ ಗಮನಿಸಿ ಕಿತ್ತಳೆಯನ್ನು ಮಾರಿ ಶಾಲೆಯನ್ನು ನಿರ್ಮಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬ, ಪರಿಸರದ ಕುರಿತಾಗಿ ಅಪರಿಮಿತ ಜ್ಞಾನ ಹೊಂದಿರುವ ತುಳಸಿ ಗೌಡ, ಭೋಪಾಲ್ ಅನಿಲ ದುರಂತ ಸಂತ್ರಸ್ತರಿಗಾಗಿ ಮೂರು ದಶಕಗಳಿಂದ ಹೋರಾಡುತ್ತಿರುವ ಅಬ್ದುಲ್ ಜಬ್ಬಾರ್ ಹೀಗೆ ಎಲೆಮರೆಯ ಕಾಯಿಗಳಂತೆ ಸಮಾಜಕ್ಕಾಗಿ ದುಡಿದ ವ್ಯಕ್ತಿಗಳ ಪಟ್ಟಿಯು ಬೆಳೆಯುತ್ತಾ ಹೋಗುತ್ತದೆ. ಜನ ಸಾಮಾನ್ಯರ ಅಸಾಮಾನ್ಯ ಸೇವೆಯನ್ನು ಗುರುತಿಸಿ ಗೌರವಿಸುವ ನೂತನ ಸಂಪ್ರದಾಯಕ್ಕೆ ನರೇಂದ್ರ ಮೋದಿಯವರು ನಾಂದಿ ಹಾಡಿದ್ದಾರೆ. ದೇಶಕ್ಕಾಗಿ, ಸಮಾಜಕ್ಕಾಗಿ ತಮ್ಮ ಸರ್ವಸ್ವವನ್ನೂ ನೀಡಿದ ವ್ಯಕ್ತಿಗಳನ್ನು ಗೌರವಿಸುವ ಕಾರ್ಯದಲ್ಲೂ ನರೇಂದ್ರ ಮೋದಿಯವರ ಸರಕಾರ ಮುನ್ನಡೆಯುತ್ತಿದೆ. ಡಿಸೆಂಬರ್ 25 ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವನ್ನು ಸುಶಾಸನ ದಿನ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನವನ್ನಾಗಿಯೇ ಆಚರಿಸುವಂತೆಯೇ ಇದೀಗ ರಾಷ್ಟ್ರದ ಕಣ್ಮಣಿ ನೇತಾಜಿ ಸುಭಾಷ್ ಚಂದ್ರ ಬೋಸರ ಜನ್ಮದಿನವನ್ನು “ಪರಾಕ್ರಮ ದಿನ”ವನ್ನಾಗಿ ಆಚರಿಸುವ ಘೋಷಣೆಯನ್ನು ಮಾಡುವ ಮೂಲಕ ಸ್ವಾತಂತ್ರ ಸೇನಾನಿಗೆ ಗೌರವವನ್ನು ಸಲ್ಲಿಸಿದೆ. ಆಜಾದ್, ಪರಾಕ್ರಮ ಮತ್ತು ನೇತಾಜಿ ಮೂರೂ ಒಂದೇ ಅರ್ಥವನ್ನು ನೀಡುವ ಮೂರು ಶಬ್ದಗಳು ಎಂದರೆ ಉತ್ಪ್ರೇಕ್ಷೆಯಲ್ಲ. ದೇಶದ ಪರಮ ವೀರ ಪುತ್ರನ ಶೌರ್ಯ ಮತ್ತು ಪರಾಕ್ರಮಗಳನ್ನು ಸ್ಮರಿಸುತ್ತಾ ಪರಾಕ್ರಮ ದಿನದ ಶುಭಾಶಯಗಳು.
ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.