ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತೋರುತ್ತಲೇ ಇದೆ. ಆದರೂ ಇಂದಿಗೂ ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ನಿಲ್ಲುತ್ತಿಲ್ಲ. ಅದರಲ್ಲೂ ಬಾಲ್ಯವಿವಾಹ ಇಂದಿಗೂ ಜೀವಂತವಾಗಿರುವುದು ದುರಾದೃಷ್ಟವೇ ಸರಿ. ಬಾಲ್ಯವಿವಾಹ ಹೆಣ್ಣಿನ ಬದುಕನ್ನೇ ಕಸಿದುಕೊಳ್ಳುತ್ತದೆ. ಭವಿಷ್ಯವನ್ನು ರೂಪಿಸಿಕೊಳ್ಳುವ ವಯಸ್ಸಿನಲ್ಲಿ ಆಕೆ ಕುಟುಂಬದ ಜವಾಬ್ದಾರಿಯನ್ನು ತಲೆ ಮೇಲೆ ಹೊರಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆಕೆಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡೂ ಹದಗೆಡುತ್ತದೆ. ಇದೆಲ್ಲವನ್ನು ಮನಗಂಡು ಸರಕಾರ ಅನೇಕ ವರ್ಷಗಳ ಹಿಂದೆಯೇ ಬಾಲ್ಯವಿವಾಹಕ್ಕೆ ನಿಷೇಧ ಹೇರಿದೆ. ಆದರೂ ಇಂದಿಗೂ ಕೆಲವರು ತಮ್ಮ ಹೆಣ್ಣುಮಕ್ಕಳಿಗೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿಕೊಡುತ್ತಿದ್ದಾರೆ. ಸರ್ಕಾರದ ಪ್ರಯತ್ನಗಳ ನಡುವೆಯೂ ಬಾಲ್ಯ ವಿವಾಹ ನಡೆದೇ ಬಿಡುತ್ತಿದೆ.
ಇಂತಹ ಅನಿಷ್ಠ ಪದ್ಧತಿ ಬಾಲ್ಯವಿವಾಹದ ವಿರುದ್ಧ ಸಮರ ಸಾರಿದ್ದಾರೆ ರಾಜಸ್ಥಾನದ 32 ವರ್ಷದ ಮಹಿಳೆ ಡಾ. ಕೀರ್ತಿ ಭಾರತಿ. ಸಾರ್ಥಿ ಟ್ರಸ್ಟ್ ಅನ್ನು ಮುನ್ನಡೆಸುವ ಅವರು ಇದುವರೆಗೆ 41 ಬಾಲ್ಯವಿವಾಹಗಳನ್ನು ರದ್ದುಪಡಿಸಿದ್ದಾರೆ ಮತ್ತು ಸುಮಾರು 1,400 ಬಾಲ್ಯವಿವಾಹ ನಡೆಯುವುದನ್ನು ತಡೆದಿದ್ದಾರೆ. ಭಾರತದ ಮೊತ್ತಮೊದಲ ಬಾಲ್ಯ ವಿವಾಹ ರದ್ದು ಪ್ರಕರಣವೆಂದರೆ ಅದು ಲಕ್ಷ್ಮಿ ಸರ್ಗಾರ ಪ್ರಕರಣ. ಇಲ್ಲಿ ಬಾಲ್ಯ ವಿವಾಹ ರದ್ದು ಆಗಲು ಕಾರಣಕರ್ತರೇ ಕೀರ್ತಿ. 2012ರಲ್ಲಿ ಈ ಘಟನೆ ನಡೆದಿತ್ತು. ಇಲ್ಲಿ ಲಕ್ಷ್ಮಿ ಎಂಬ ಬಾಲ್ಯವಿವಾಹಿತೆ ಕಷ್ಟಕ್ಕೆ ಮರುಗಿದ್ದ ಕೀರ್ತಿ ತಮ್ಮ ಸಂಸ್ಥೆ ಸಾರ್ಥಿ ಮೂಲಕ ಆಕೆಯ ವಿವಾಹ ರದ್ದುಗೊಳ್ಳುವಂತೆ ಮಾಡಿದ್ದರು. ಈ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು.
ಡಾ.ಕೀರ್ತಿ ಮೂಲತಃ ಜೋಧಪುರದವರು, ಹುಟ್ಟಿದ್ದು ಗುಜರಾತಿನಲ್ಲಿ. ತಾಯಿಯ ಗರ್ಭದಲ್ಲಿ ಇರುವಾಗಲೇ ತಂದೆ ಅವರನ್ನು ಬಿಟ್ಟು ಹೋಗಿದ್ದರು. ಇದೇ ಕಾರಣಕ್ಕೆ ಅವರು ಸಮಾಜದಲ್ಲಿ ಹಲವು ನಿಂದನೆಗಳನ್ನು ಎದುರಿಸಬೇಕಾಯಿತು. ಕುಟುಂಬದವರೇ ಆಕೆಯ ಮೇಲೆ ದೈಹಿಕ ಮತ್ತು ಭಾವನಾತ್ಮಕ ಹಲ್ಲೆ ನಡೆಸಿದ್ದರು. 10ನೇ ವಯಸ್ಸಿನಲ್ಲೇ ಸಂಬಂಧಿಯೊಬ್ಬರು ಆಕೆಗೆ ವಿಷವುಣಿಸಿದ್ದರು. ಈ ಕಾರಣದಿಂದ ಅವರ ಬೆನ್ನೆಲುಬು ಹಾನಿಗೊಳಗಾಯಿತು, ಪಾರ್ಶ್ವವಾಯುಗೆ ಒಳಗಾದರು. ಕುಳಿತುಕೊಳ್ಳಲು ಅಥವಾ ನಡೆದಾಡಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಶಾಲೆಗೆ ಹೋಗುವುದು ಸಾಧ್ಯವಾಗಲಿಲ್ಲ. ಇವರ ತಾಯಿ ಎರಡು ವರ್ಷಗಳ ಕಾಲ ಆಕೆಯ ಚಿಕಿತ್ಸೆಗಾಗಿ ಪರದಾಡಿದರು. 12ನೇ ವಯಸ್ಸಿನಲ್ಲಿ ಕೀರ್ತಿ ಚೇತರಿಸಿಕೊಂಡರು.
ಕೀರ್ತಿ ತಮ್ಮ ಜೀವನದಲ್ಲಿ ತೆಗೆದುಕೊಂಡು ಮೊದಲ ಕ್ರಾಂತಿಕಾರಿ ಹೆಜ್ಜೆ ಎಂದರೆ ಅದು ಆಕೆಯ ಸರ್ನೇಮ್ ಆಯ್ಕೆ. ಭಾರತದಲ್ಲಿ ಸಾಮಾನ್ಯವಾಗಿ ಜಾತಿ ಅಥವಾ ಧರ್ಮ ಆಧಾರಿತವಾಗಿರುತ್ತದೆ, ಇಲ್ಲವೋ ಗಂಡನ ಹೆಸರಿನಲ್ಲಿ ಸರ್ನೇಮ್ ಇರುತ್ತದೆ. ಆದರೆ ಕೀರ್ತಿ ಅವರು ಭಾರತಿ ಎಂಬ ಸರ್ನೇಮ್ ಬಳಸಿಕೊಂಡರು. ಭಾರತದ ಮಗಳು ಎಂಬುದು ಇದರ ಅರ್ಥ.
ಹಲವು ಎನ್ಜಿಓಗಳೊಂದಿಗೆ ಕೆಲಸ ಮಾಡಿದ ಅವರು ಅನೇಕ ನೊಂದ ಹೆಣ್ಣು ಮಕ್ಕಳಿಗೆ ನೆರವಿನ ಹಸ್ತ ನೀಡಿದರು. ಆದರೆ ಈ ಎನ್ಜಿಓಗಳು ಕೇವಲ ಅರಿವು ಮೂಡಿಸುವ ಮಟ್ಟದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದು, 2011ರಲ್ಲಿ ತನ್ನದೇ ಆದ ಸಾರ್ಥಿ ಟ್ರಸ್ಟ ಅನ್ನು ಸ್ಥಾಪನೆ ಮಾಡಿದರು.
1929ರಲ್ಲೇ ಭಾರತದಲ್ಲಿ ಬಾಲ್ಯವಿವಾಹ ನಿಷೇಧವಾದರೂ, ಇನ್ನೂ ನಡೆಯುತ್ತಿರುವ ಬಾಲ್ಯ ವಿವಾಹಗಳ ವಿರುದ್ಧ ಅವರು ಸಮರ ಸಾರಲು ಆರಂಭಿಸಿದರು. ಲಕ್ಷ್ಮಿ ಪ್ರಕರಣವನ್ನು ಗೆದ್ದ ಬಳಿಕ ಅವರ ಹುಮ್ಮಸ್ಸು ಹೆಚ್ಚಾಯಿತು. ಈ ಪ್ರಕರಣದಿಂದ ಅವರ ಸಾರ್ಥಿ ಟ್ರಸ್ಟ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿತು. ಸಿಬಿಎಸ್ಸಿ ಪಠ್ಯಕ್ರಮದಲ್ಲಿ ಸೇರ್ಪಡೆಗೊಂಡಿತ್ತು. ಅಲ್ಲಿಂದ ಅವರು 41 ಬಾಲ್ಯ ವಿವಾಹ ರದ್ದು ಆಗುವಂತೆ ಮಾಡಿದ್ದಾರೆ. 1,400 ಬಾಲ್ಯವಿವಾಹಗಳು ನಡೆಯದಂತೆ ತಡೆದಿದ್ದಾರೆ. ವಿವಿಧ ಯೋಜನೆಗಳ ಅಡಿಯಲ್ಲಿ 7000 ಮಕ್ಕಳಿಗೆ ಪುನರ್ವಸತಿ ಕಲ್ಪಿಸಿದ್ದಾರೆ. ಈ ಮಕ್ಕಳು ಬಾಲಕಾರ್ಮಿಕತನ, ಲೈಂಗಿಕ ದೌರ್ಜನ್ಯ ಮತ್ತು ಎಚ್ಐವಿ ಪೀಡಿತರಾಗಿದ್ದಾರೆ.
ಹಳ್ಳಿಹಳ್ಳಿಗೂ ತೆರಳುವ ಸಾರ್ಥಿ ಟ್ರಸ್ಟ್ ಸದಸ್ಯರು, ಬಾಲ್ಯವಿವಾಹ ನಡೆಸದಂತೆ ಗ್ರಾಮಸ್ಥರಿಂದ ಪ್ರಮಾಣ ಮಾಡಿಸುತ್ತಾರೆ. ಅಂತಹ ಪ್ರಕರಣಗಳು ಕಂಡುಬಂದರೆ ಎನ್ಜಿಒಗೆ ತಿಳಿಸುವಂತೆ ಗ್ರಾಮಸ್ಥರ ಮನವೊಲಿಸುತ್ತಾರೆ.
ತಮ್ಮ ಕಾರ್ಯದಲ್ಲಿ ಕೀರ್ತಿ ಅವರಿಗೆ ಹಲವಾರು ಬೆದರಿಕೆಗಳು ಎದುರಾಗಿವೆ. ಕೆಲವರು ಅವರ ಮೇಲೆ ಅತ್ಯಾಚಾರ ಮಾಡುವ ಬೆದರಿಕೆ ಹಾಕಿದ್ದಾರೆ, ಕೆಲವರು ಅವರ ಎನ್ಜಿಓ ಮುಚ್ಚುವ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ರಾಜಕಾರಣಿಗಳು ಕೂಡ ಸೇರಿದ್ದಾರೆ. ಜಾತಿಯ ಮುಖಂಡರು ಸೇರಿದ್ದಾರೆ. ಆದರೆ ಎಂದೂ ಎದೆಗುಂದದೆ ತಮ್ಮ ಕಾರ್ಯವನ್ನು ಮುಂದುವರೆಸುತ್ತಿರುವ ಕೀರ್ತಿ ಮುಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಇನ್ನೂ ಹೆಚ್ಚಿನದನ್ನು ಮಾಡುವ ಆಶಯ ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.