ಆಕೆ ಆರು ತಿಂಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದಳು, ಬೇರೆಡೆಗೆ ಪ್ರಯಾಣಿಸುವ ಸಲುವಾಗಿ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಏರ್ಪೋರ್ಟ್ಗೆ ಬಂದಿದ್ದಳು. ರಾತ್ರಿ ಹತ್ತಕ್ಕೆ ಹೊರಡಬೇಕಾಗಿದ್ದ ಆಕೆಯ ವಿಮಾನ ತಡವಾಗಿ 10.50ಕ್ಕೆ ಹೊರಡುವುದೆಂದು ಘೋಷಿಸಲಾಯಿತು. ಆಕೆಯೇನೋ ವಿಮಾನಕ್ಕಾಗಿ ಕಾಯುತ್ತಾ ಕುಳಿತಲು ಆದರೆ ಮಡಿಲಲ್ಲಿದ್ದ ಪುಟ್ಟ ಕಂದ ಮಾತ್ರ ಹಸಿವಿನಿಂದ ಅಳಲಾರಂಭಿಸಿತು. ಮೊಲೆಯುಣಿಸುವಂತೆ ತನ್ನ ಕಂದ ಕೇಳುತ್ತಿದ್ದಾನೆ ಎಂಬ ಅರಿವು ಆಕೆಗಾಗಿತ್ತು. ಆದರೆ ಎಲ್ಲಿ ಮೊಲೆಯುಣಿಸುವುದು? ಏರ್ಪೋರ್ಟ್ನ ಮೂಲೆ ಮೂಲೆಯನ್ನೂ ಆಕೆ ತಡಕಾಡಿದಳು. ಆದರೆ ಸೂಕ್ತ ಸ್ಥಳ ಆಕೆಗೆ ಸಿಕ್ಕಲಿಲ್ಲ. ವಿಪರ್ಯಾಸವೆಂದರೆ ಸ್ಮೋಕಿಂಗ್ ಝೋನ್ ಇದೆ. ಆದರೆ ಮಗುವಿಗೆ ಹಾಲುಣಿಸಲು ತಾಯಿಗೆ ಪ್ರತ್ಯೇಕ ಕೊಠಡಿ ಇಲ್ಲ. ಕೊನೆಗೆ ಆಕೆ ಹೋದದ್ದು ಬಾತ್ ರೂಮ್ಗೆ, ನೂರಾರು ಮಂದಿ ಬಂದು ವಾಶ್ ಮಾಡಿ ಹೋಗುವ ಜಾಗದಲ್ಲಿ ಕಷ್ಟಪಟ್ಟು ಕೂತು ಆಕೆ ತನ್ನ ಶಿಶುವಿಗೆ ಹಾಲು ಕೊಡಬೇಕಾಯಿತು.
ಇದು ಆಕೆಯೊಬ್ಬಳ ಕಥೆಯಲ್ಲ. ನಮ್ಮ ದೇಶದ, ಬೇರೆ ದೇಶದ ಸಾವಿರಾರು ತಾಯಂದಿರು ಅನುಭವಿಸುವ ನರಕಯಾತನೆ. ದೂರದೂರಿಗೆ ಪ್ರಯಾಣಿಸುತ್ತಿರುವ ಸಂದರ್ಭ ತನ್ನ ಮಗು ಅಳುತ್ತಿದೆ ಎಂದು ಸಾರ್ವಜನಿಕ ಸ್ಥಳದಲ್ಲಿ ತಾಯಿಯೊಬ್ಬಳು ಮೊಲೆಯುಣಿಸಿದರೆ ಜನ ಅಸಹ್ಯಪಟ್ಟುಕೊಳ್ಳುತ್ತಾರೆ, ಇವಳಿಗೆ ಬೇರೆ ಜಾಗ ಸಿಕ್ಕಿಲ್ಲ ಎಂದು ಬಡಬಡಾಯಿಸುತ್ತಾರೆ. ಕೆಲವರಂತು ಬಿಟ್ಟ ಕಣ್ಣು ಬಿಟ್ಟಂತೆ ಕುತೂಹಲದಿಂದ ನೋಡುತ್ತಾರೆ. ತಾಯಿಯೊಬ್ಬಳು ಮಗುವಿಗೆ ಹಾಲು ಕೊಡುತ್ತಿದ್ದಾಳೆ ಎಂದು ಭಾವಿಸುವುದಕ್ಕಿಂತಲೂ ಅಶ್ಲೀಲವಾದುದನ್ನು ಮಾಡುತ್ತಿದ್ದಾಳೆ ಎಂದೇ ಗೊಣಗಾಡುತ್ತಾರೆ.
ಹೀಗೆ ಸಾರ್ವಜನಿಕವಾಗಿ, ಅಳುತ್ತಿದ್ದ ತನ್ನ ಮಗುವಿಗೆ ಎದೆ ಹಾಲು ನೀಡುತ್ತಿದ್ದ ತಾಯಿಯೊಬ್ಬಳ ಫೋಟೋವನ್ನು ಕ್ಲಿಕ್ಕಿಸಿದ್ದ ವ್ಯಕ್ತಿಯೊಬ್ಬ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಆಕೆಯ ತೇಜೋವಧೆಗೆ ಪ್ರಯತ್ನಿಸಿದ್ದ. ಆಕೆ ಅಶ್ಲೀಲತೆ ಪ್ರದರ್ಶಿಸಿದ್ದಳು ಎಂದು ದೊಡ್ಡದಾಗಿ ಕಾಮೆಂಟ್ ಹಾಕಿದ್ದ ಅದನ್ನು ನೂರಾರು ಮಂದಿ ವೀಕ್ಷಿಸಿದ್ದರು. ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇಲ್ಲಿ ಅಶ್ಲೀಲತೆ ಹೊಂದಿರುವವರು ತಾಯಿಯೋ ಅಥವಾ ಫೋಟೋ ಕ್ಲಿಕ್ಕಿಸಿ ಅದನ್ನು ಪ್ರಕಟಿಸಿ ಕೆಟ್ಟದಾಗಿ ಕಾಮೆಂಟ್ ಹಾಕಿದ ವ್ಯಕ್ತಿಯೋ ?
ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವುದು ಮಾತ್ರವಲ್ಲ, ಅದಕ್ಕೆ ಕಾಲ ಕಾಲಕ್ಕೆ ಸರಿಯಾಗಿ ಮೊಲೆಯುಣಿಸುವುದು ಕೂಡ ಅತ್ಯವಶ್ಯಕ. ತಾಯಿಯ ಎದೆ ಹಾಲು ಮಗುವಿಗೆ ಸದೃಢ ಆರೋಗ್ಯವನ್ನು ನೀಡುತ್ತದೆ. ಹುಟ್ಟಿನಿಂದ ಹಿಡಿದು ಕನಿಷ್ಠ ಆರು ತಿಂಗಳವರೆಗಾದರೂ ಶಿಶು ತಾಯಿಯ ಹಾಲುಂಡೇ ಬೆಳಯಬೇಕು ಎನ್ನುತ್ತದೆ ವೈದ್ಯ ಲೋಕ. ಪ್ರತಿಯೊಬ್ಬ ವ್ಯಕ್ತಿ ಕೂಡ ಮಗುವಿರುವಾಗ ಎದೆ ಹಾಲುಂಡೇ ಬೆಳೆದಿರುತ್ತಾನೆ. ಹೀಗಿದ್ದರೂ ಸಾರ್ವಜನಿಕವಾಗಿ ಮೊಲೆಯುಣಿಸುವುದು ಅಸಹ್ಯಕರ ಎಂಬ ಮನಸ್ಥಿತಿಯೇ ಹೆಚ್ಚಿನವರಲ್ಲಿದೆ. ಇದಕ್ಕೆ ಕಾರಣ ಹೆಣ್ಣಿನ ಸ್ತನಗಳನ್ನು ಲೈಂಗಿಕತೆಯ ಭಾವನೆಯಿಂದ ನೋಡುವ ಕೆಟ್ಟ ಗುಣ. ಲೈಂಗಿಕ ಭಾವನೆಯನ್ನು ಬಿಟ್ಟು ಅದರಿಂದಾಚೆ ನೋಡುವ ಮನೋಭಾವ ಬೆಳೆದಾಗ ಮಾತ್ರ ಸಾರ್ವಜನಿಕವಾಗಿ ಮೊಲೆಯುಣಿಸುತ್ತಿರುವ ತಾಯಿ ನಮಗೆ ಗೌರಪೂರ್ವಕಳಾಗಿ ಕಾಣುತ್ತಾಳೆ. ತನ್ನ ಮಗುವಿನ ಹಸಿವನ್ನು ನೀಗಿಸುವ ತ್ಯಾಗಮಯಿಯಾಗಿ ಕಾಣುತ್ತಾಳೆ.
ಪ್ರತಿವರ್ಷ ಸ್ತನ್ಯಪಾನ ಸಪ್ತಾಹವನ್ನು (ಈ ಬಾರಿ ಆಗಸ್ಟ್ 1 ರಿಂದ ಆಗಸ್ಟ್ 7 ರವರೆಗೆ) ಆಚರಿಸುತ್ತೇವೆ. ಮಗುವಿಗೆ ಹಾಲುಣಿಸುವುದು ಎಷ್ಟು ಅವಶ್ಯಕ, ತಾಯಿಯಾದವಳು ಯಾವ ಆಹಾರವನ್ನು ಸೇವಿಸಬೇಕು ಎಂಬ ಅರಿವನ್ನು ಮಹಿಳೆಯರಿಗೆ ಮೂಡಿಸುವ ಸಲುವಾಗಿ ಈ ಸಪ್ತಾಹ ಆಚರಿಸಲಾಗುತ್ತದೆ. ನಮ್ಮ ದೇಶದ ಯಾವುದೇ ಮೂಲೆಯಲ್ಲಿ ಹುಡುಕಾಡಿದರೂ ಮೊಲೆಯುಣಿಸಲು ಪ್ರತ್ಯೇಕ ಕೊಠಡಿಗಳು ಕಾಣುವುದಿಲ್ಲ. ಹಸಿವಿನಿಂದ ಅಳುತ್ತಿರುವ ಕಂದನನ್ನು ನೋಡಿ ತಾಯಿಯಾದವಳು ಎಂದಿಗೂ ಕೈಕಟ್ಟಿ ಕುಳಿತಿರುವುದಿಲ್ಲ. ಹೀಗಾಗಿ ತಾಯಂದಿರಿಗೆ ಮಾತ್ರ ಅರಿವು ಮೂಡಿಸುವುದಲ್ಲ ಪುರುಷ, ಯುವಕ, ಯುವತಿಯರಿಗೂ ಸಾರ್ವಜನಿಕವಾಗಿ ಮೊಲೆಯುಣಿಸುವುದು ಅಶ್ಲೀಲವಲ್ಲ, ಅಪರಾಧವಲ್ಲ ಎಂಬ ಅರಿವನ್ನು ಮೂಡಿಸಬೇಕಾಗಿದೆ. ಅದಕ್ಕಿಂತಲೂ ಹೆಣ್ಣನ್ನು, ತಾಯಿಯನ್ನು ಲೈಂಗಿಕ ದೃಷ್ಟಿಯಿಂದ ನೋಡುವ ಸಮಾಜದ ನೋಟವನ್ನು ಬದಲಾಯಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.