ಬೆಂಗಳೂರು: ಸ್ಟೇಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ), ಬಾಹ್ಯಾಕಾಶ ಶಿಕ್ಷಣ ಮತ್ತು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅನುಶೋಧನಾ ಕ್ಷೇತ್ರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶದೆಲ್ಲೆಡೆ 100 ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ದತ್ತು ಪಡೆಯುವುದಾಗಿ ಇಸ್ರೋ ಮಾಹಿತಿ ನೀಡಿದೆ.
ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ ಮತ್ತು ಇಸ್ರೋ ನಡೆಸಿದ ವರ್ಚುವಲ್ ಕಾರ್ಯಕ್ರಮದಲ್ಲಿ ಸಂಸ್ಥೆ ಈ ಘೋಷಣೆಯನ್ನು ಮಾಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು, ದೇಶವನ್ನು ಆತ್ಮನಿರ್ಭರಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳು ಶ್ರಮಿಸುತ್ತಿವೆ. ನೀತಿ ಆಯೋಗ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡುವಿನ ಸಹಯೋಗವು ಸಹ ಆತ್ಮನಿರ್ಭರದ ಕನಸನ್ನು ನನಸಾಗಿಸುವಲ್ಲಿ ಪ್ರಯತ್ನ ನಡೆಸಲಿದೆ ಎಂದು ತಿಳಿಸಿದ್ದಾರೆ. ಇದು ದೇಶದ ಉದಯೋನ್ಮುಖ ಬಾಹ್ಯಾಕಾಶ ಸಂಶೋಧಕರು ಮತ್ತು ಗಗನಯಾತ್ರಿಗಳು ದೇಶದ ಅನುಭವಿಗಳಿಂದ ವಿಚಾರಗಳನ್ನು ಕಲಿಯುವ ಹಿನ್ನೆಲೆಯಲ್ಲಿಯೂ ಹೆಚ್ಚು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಅವರು, ಅನುಶೋಧನೆ ಮತ್ತು ಅನುಭವಿ ಕಲಿಕೆಯಿಂದ ವಿದ್ಯಾರ್ಥಿಗಳು ಹೆಚ್ಚು ಪಕ್ವಗೊಳ್ಳುತ್ತಾರೆ. ಇದು ಅವರಲ್ಲಿ ಕಲಿಕೆಯ ಆಸಕ್ತಿ ಹುಟ್ಟಿಸುವುದಕ್ಕೂ ನೆರವಾಗಲಿದೆ. ಶಾಲಾ ದಿನಗಳಿಂದಲೇ ಸಂಶೋಧನೆಯ ಮನೋಭಾವವನ್ನು ಬೆಳೆಸುವಲ್ಲಿಯೂ ಅನುಶೋಧನೆ ಸಹಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ 100 ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ದತ್ತು ಸ್ವೀಕಾರ ಮಾಡಲಿರುವ ಇಸ್ರೋ ಆ ಮೂಲಕ ದೇಶದೆಲ್ಲೆಡೆ ಉಪಸ್ಥಿತವಿರಲಿದೆ. ವಿದ್ಯಾರ್ಥಿಗಳು ತಮ್ಮ ಬಾಹ್ಯಾಕಾಶ ಕಲಿಕೆಯ ಕನಸುಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಇದು ಪೂರಕವಾಗಿರಲಿದೆ ಎಂದು ಶಿವನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.