ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಕೃಷಿ ಸುಧಾರಣಾ ಮಸೂದೆಗಳನ್ನು ವಿರೋಧಿಸಿ ಪಂಜಾಬ್, ಹರಿಯಾಣದ ಕಾಯ್ದೆ ವಿರೋಧಿಗಳು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರತಿಭಟಿಸುವ ಹಕ್ಕನ್ನು ನಮ್ಮ ದೇಶ ಎಲ್ಲರಿಗೂ ನೀಡಿದೆ, ಅದು ನಮ್ಮ ಸಂವಿಧಾನದತ್ತ ಹಕ್ಕು. ಹೀಗಾಗಿ ರೈತರ ಹೆಸರಲ್ಲಿ ನಡೆಸಲಾಗುತ್ತಿರುವ ಪ್ರತಿಭಟನೆಗಳ ಬಗ್ಗೆ ಆಕ್ಷೇಪ ಮಾಡಲಾಗುವುದಿಲ್ಲ, ಆದರೆ ರೈತ ಪ್ರತಿಭಟನೆಯ ಸೋಗಿನಲ್ಲಿ ನಡೆಸಲಾಗುತ್ತಿರುವ ದಾಂಧಲೆ, ಅನಾಚಾರಗಳನ್ನು ಸಹಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ.
ರೈತರ ನೆಪದಲ್ಲಿ ಕೆಲವರನ್ನು ಪ್ರತಿಭಟನೆಗೆ ಪ್ರಚೋದಿಸಿ ತಿಂಗಳುಗಟ್ಟಲೆ ಧರಣಿ ಕೂರಲು ಅವರಿಗೆ ಸರ್ವ ಸಹಾಯವನ್ನು ಮಾಡಿದ್ದು ಪಂಜಾಬ್ ಸರ್ಕಾರ. ಆದರೀಗ ಈ ಪ್ರತಿಭಟನೆ ಪಂಜಾಬ್ ಸರ್ಕಾರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.
ಕಳೆದ ವಾರದಲ್ಲಿ, ಪ್ರತಿಭಟನಾ ನಿರತರು ಪಂಜಾಬ್ನಲ್ಲಿ 1,400 ರಿಲಾಯನ್ಸ್ ಜಿಯೋ ಟವರ್ಗಳನ್ನು ಧ್ವಂಸ ಮಾಡಿದ್ದಾರೆ. ಜಿಯೋ ಟೆಲಿಕಾಂ ಉದ್ಯಮಕ್ಕೂ ಕೃಷಿ ಮಸೂದೆಗಳಿಗೂ ಏನು ಸಂಬಂಧ ಎಂದು ಅರ್ಥಮಾಡಿಕೊಳ್ಳುವುದು ಕಷ್ಟ, ಆದರೆ ಕೆಲ ರಾಜಕಾರಣಿಗಳು ಮತ್ತು ಎಡಪಂಥೀಯರು ಪಿತೂರಿ ನಡೆಸಿ ಪ್ರತಿಭಟನಾ ನಿರತರನ್ನು ರಿಲಾಯನ್ಸ್ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ನಡೆಸಿದ್ದಾರೆ. ಮುಖೇಶ್ ಅಂಬಾನಿಯ ರಿಲಾಯನ್ಸ್ ಸಾಮ್ರಾಜ್ಯವನ್ನು ಅಲ್ಲಾಡಿಸುವುದು ಅವರ ಉದ್ದೇಶ.
ಆದರೆ ಪ್ರತಿಭಟನಾ ನಿರತರು ಕೋಪದಲ್ಲಿ ತಮ್ಮ ಗುರಿಯನ್ನು ಆಯ್ಕೆಮಾಡುವಲ್ಲಿ ಎಡವಿದ್ದಾರೆ. ಅಂಬಾನಿಗೆ ಹಾನಿ ಮಾಡಲು ಹೋಗಿ ಸ್ವತಃ ತಮ್ಮ ನೆಚ್ಚಿನ ಕೆನಡಾಗೆ ಮತ್ತು ಪಂಜಾಬ್ ಸರ್ಕಾರಕ್ಕೆ ಹಾನಿಯುಂಟು ಮಾಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ರಿಲಾಯನ್ಸ್ ತನ್ನ ಟವರ್ ಆಸ್ತಿಯನ್ನು ಕೆನಡಾ ಮೂಲದ ಬ್ರೂಕ್ಫೀಲ್ಡ್ ಗೆ ರೂ. 25,215 ಕೋಟಿ ರೂ.ಗೆ ಮಾರಾಟ ಮಾಡಿದೆ. ಬ್ರೂಕ್ಫೀಲ್ಡ್ ಪರ್ಯಾಯ ಆಸ್ತಿ ನಿರ್ವಹಣಾ ಕಂಪನಿಯಾಗಿದ್ದು ಅದು ರಿಯಲ್ ಎಸ್ಟೇಟ್, ನವೀಕರಿಸಬಹುದಾದ ವಿದ್ಯುತ್, ಮೂಲಸೌಕರ್ಯ ಮತ್ತು ಖಾಸಗಿ ಷೇರುಗಳ ಮೇಲೆ ಕೇಂದ್ರೀಕರಿಸಿ ಉದ್ಯಮ ನಡೆಸುತ್ತದೆ. ಕೆನಡಾದ ಟೊರೊಂಟೊದಲ್ಲಿ ಇದರ ಪ್ರಧಾನ ಕಛೇರಿಯನ್ನು ಇದೆ. ಒಪ್ಪಂದದ ಪ್ರಕಾರ, ಬ್ರೂಕ್ಫೀಲ್ಡ್ 100 ಪ್ರತಿಶತದಷ್ಟು ಷೇರುಗಳನ್ನು ಖರೀದಿಸಿದೆ, ಅದು ಜಿಯೋ ಟವರ್ ಆಸ್ತಿಗಳ ಕಾರ್ಯಾಚರಣಾ ಕಂಪನಿಯಾದ ರಿಲಾಯನ್ಸ್ ಜಿಯೋ ಇನ್ಫ್ರಾಟೆಲ್ನ 100 ಪ್ರತಿಶತದಷ್ಟು ಷೇರುಗಳನ್ನು ಹೊಂದಿದೆ.
ಅಂದರೆ, ಪ್ರತಿಭಟನಾಕಾರರು ಧ್ವಂಸ ಮಾಡಿದ ಟವರ್ಗಳು ಕೆನಡಾದ ಕಂಪನಿಯೊಂದರ ಒಡೆತನದಲ್ಲಿದೆ, ಉಂಟಾದ ಹಾನಿಯನ್ನು ಸರಿಪಡಿಸಲು ಹಣವನ್ನು ಭರಿಸಬೇಕಾಗುತ್ತದೆ.
ಜಿಯೋ ಟವರ್ ಧ್ವಂಸಗೊಳಿಸುವಿಕೆ ಒಂದೇ ಪ್ರತಿಭಟನಾಕಾರರು ಮಾಡಿದ ಆವಂತರವಲ್ಲ. ವರದಿಗಳ ಪ್ರಕಾರ, ಪಂಜಾಬ್ ಮತ್ತು ಹರಿಯಾಣದ ಆರ್ಥಿಕತೆಗೆ ಪ್ರತಿಭಟನೆಯಿಂದ ದಿನಕ್ಕೆ 3,500 ಕೋಟಿ ರೂ.ನಷ್ಟವಾಗಿದೆ. “ರೈತರ ಹೆಸರಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ರಸ್ತೆಗಳು, ಟೋಲ್ ಪ್ಲಾಜಾಗಳು ಮತ್ತು ರೈಲ್ವೆಗಳು ದಿಗ್ಬಂಧನಕ್ಕೆ ಒಳಪಟ್ಟು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ರಫ್ತು ಮಾರುಕಟ್ಟೆಗಳಿಗೆ ಜವಳಿ, ವಾಹನ ಘಟಕಗಳು, ಬೈಸಿಕಲ್ಗಳು, ಕ್ರೀಡಾ ಸಾಮಗ್ರಿಗಳನ್ನು ಕ್ರಿಸ್ಮಸ್ಗೆ ಮುಂಚಿತವಾಗಿ ಪೂರೈಸಲು ಸಾಧ್ಯವಾಗಿಲ್ಲ, ಇದು ಜಾಗತಿಕ ಖರೀದಿದಾರರ ದೃಷ್ಟಿಯಲ್ಲಿ ನಮ್ಮ ಉದ್ಯಮಕ್ಕೆ ಧಕ್ಕೆ ತಂದಿದೆ” ಎಂದು ಅಸ್ಸೋಚಾಮ್ ಅಧ್ಯಕ್ಷ ಡಾ. ನಿರಂಜನ್ ಹಿರಾನಂದಾನಿ ಹೇಳಿದ್ದಾರೆ. ಟೆಲಿಕಾಂ ಟವರ್ಗಳ ಧ್ವಂಸ ದೃಶ್ಯಗಳು ವೈರಲ್ ಆಗಿರುವುದರಿಂದ, ಹೂಡಿಕೆ ಕೇಂದ್ರವಾಗಿ ಪಂಜಾಬ್ನ ಖ್ಯಾತಿಗೆ ಶಾಶ್ವತ ಕಳಂಕ ಉಂಟಾಗಿದೆ ಮತ್ತು ಉದ್ಯಮಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ನಿರ್ಧರಿಸುವ ಮೊದಲು ಹಲವಾರು ಬಾರಿ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಪ್ರತಿಭಟನೆ ನಡೆಯುತ್ತಿರುವ ರೀತಿ, ಮಧ್ಯವರ್ತಿಗಳು ನಡೆಸುತ್ತಿರುವ ಅನಾಹುತ ಪಂಜಾಬ್ಗೆ ಸಹಾಯ ಮಾಡುವುದಕ್ಕಿಂತ ಹೆಚ್ಚು ಹಾನಿ ಮಾಡುತ್ತಿದೆ. ಒಟ್ಟಿನಲ್ಲಿ ತಾನೇ ಸೃಷ್ಟಿ ಮಾಡಿದ ರೈತ ಪ್ರತಿಭಟನೆ ಈಗ ಪಂಜಾಬ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆರ್ಥಿಕ ಹೊಡೆತಗಳನ್ನು ಅದು ಎಷ್ಟರ ಮಟ್ಟಿಗೆ ಎಷ್ಟು ದಿನಗಳ ಕಾಲ ಸಹಿಸಿಕೊಳ್ಳಬಲ್ಲದು ಎಂಬುದು ಮುಂದೆ ಗೊತ್ತಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.