ನೇಹಾಳಿಗೆ ಚರ್ಚ್ನಲ್ಲಿ ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ, ಆದರೆ ಕಳೆದ ವರ್ಷದಿಂದ ಕೇವಲ 14ನೇ ವಯಸ್ಸಿನಲ್ಲೇ ಆಕೆಗೆ ಆ ಅವಕಾಶ ಕೈತಪ್ಪಿ ಹೋಗಿದೆ. ಆಕೆಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ 45 ವರ್ಷ ವ್ಯಕ್ತಿಯ ಜೊತೆಗೆ ಮದುವೆ ಮಾಡಿಕೊಡಲಾಗಿದೆ.
ತನ್ನ ವ್ಯಥೆಯನ್ನು ಆಕೆ ತಗ್ಗಿದ ಧ್ವನಿಯಲ್ಲಿ ಹೇಳುತ್ತಾಳೆ. ಅಪ್ರಾಪ್ತ ವಯಸ್ಸಿನವರ ಮದುವೆಗೆ ಸಂಬಂಧಿಸಿದಂತೆ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಆಕೆಯ ಪತಿ ಈಗ ಜೈಲಿನಲ್ಲಿದ್ದಾನೆ, ಆದರೆ ಭದ್ರತಾ ಸಿಬ್ಬಂದಿಗಳು ನ್ಯಾಯಾಲಯದಲ್ಲಿ ಆತನ ಸಹೋದರನಿಂದ ಪಿಸ್ತೂಲ್ ಅನ್ನು ವಶಪಡಿಸಿಕೊಂಡ ನಂತರ ಆಕೆಗೆ ಭಯ ಆವರಿಸಿದೆ. ತನ್ನನ್ನು ಮತ್ತು ತನ್ನ ಕುಟುಂಬವನ್ನು ಏನು ಮಾಡುತ್ತಾರೋ ಎಂಬ ಆತಂಕ ಆಕೆಗೆ ನಿತ್ಯ ಇದೆ.
ಆತ ನನ್ನನ್ನು ಕೊಲ್ಲಲು ಗನ್ ತಂದಿದ್ದ ಎಂದು ನೇಹಾ ಆತಂಕದಿಂದ ಹೇಳುತ್ತಾಳೆ.
ಪ್ರತಿವರ್ಷ ಪಾಕಿಸ್ತಾನದಲ್ಲಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ದೌರ್ಜನ್ಯಕ್ಕೆ ಒಳಪಡುವ ಸುಮಾರು 1,000 ಧಾರ್ಮಿಕ ಅಲ್ಪಸಂಖ್ಯಾತ ಹುಡುಗಿಯರಲ್ಲಿ ನೇಹಾ ಕೂಡ ಒಬ್ಬಳು. ಇಂತಹ ಮತಾಂತರ ಒಪ್ಪಿಗೆಯಿಲ್ಲದ ವಿವಾಹಗಳಿಗೆ ದಾರಿ ಮಾಡಿಕೊಡುತ್ತದೆ. ಕೊರೊನಾವೈರಸ್ ಲಾಕ್ಡೌನ್ ಸಮಯದಲ್ಲಿ ಇಂತಹ ಘಟನೆಗಳು ಅಲ್ಲಿ ವೇಗಗೊಂಡಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ. ಹುಡುಗಿಯರು ಶಾಲೆಯಿಂದ ಹೊರಗುಳಿದು ಮನೆಯ ಸುತ್ತಮುತ್ತಲೇ ಕಾಣಿಸಿಕೊಳ್ಳುತ್ತಾ ಇರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಕಳ್ಳಸಾಗಣೆದಾರರು ಅಂತರ್ಜಾಲದಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಮತ್ತು ಹೆಚ್ಚು ಸಾಲದಲ್ಲಿರುವ ಕುಟುಂಬಗಳ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದರು ಎನ್ನಲಾಗಿದೆ.
ಧಾರ್ಮಿಕ ಸ್ವಾತಂತ್ರ್ಯಗಳ ಉಲ್ಲಂಘನೆಗಾಗಿ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಈ ತಿಂಗಳು ಪಾಕಿಸ್ತಾನವನ್ನು “ನಿರ್ದಿಷ್ಟ ಕಾಳಜಿಯ ದೇಶ” ಎಂದು ಘೋಷಿಸಿದೆ. ಅದರೆ ಪಾಕಿಸ್ತಾನ ಸರ್ಕಾರ ಅದನ್ನು ತಿರಸ್ಕರಿಸಿದೆ. ಅಲ್ಪಸಂಖ್ಯಾತ ಹಿಂದೂ, ಕ್ರಿಶ್ಚಿಯನ್ ಮತ್ತು ಸಿಖ್ ಸಮುದಾಯಗಳಲ್ಲಿನ ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲು ಅಪಹರಿಸಲಾಗಿದೆ, ಬಲವಂತವಾಗಿ ಮದುವೆಯಾಗಿ ಅತ್ಯಾಚಾರಕ್ಕೆ ಒಳಪಡಿಸಲಾಗಿದೆ ಎಂಬ ಯುಎಸ್ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಮೌಲ್ಯಮಾಪನ ತಿಳಿಸಿದೆ.
ಮತಾಂತರಗೊಂಡ ಹುಡುಗಿಯರಲ್ಲಿ ಹೆಚ್ಚಿನವರು ದಕ್ಷಿಣ ಸಿಂಧ್ ಪ್ರಾಂತ್ಯದ ಬಡ ಹಿಂದೂಗಳಾಗಿದ್ದರೆ, ನೇಹಾ ಸೇರಿದಂತೆ ಕ್ರಿಶ್ಚಿಯನ್ನರನ್ನು ಒಳಗೊಂಡ ಎರಡು ಹೊಸ ಪ್ರಕರಣಗಳು ಇತ್ತೀಚಿನ ತಿಂಗಳುಗಳಲ್ಲಿ ಆ ದೇಶದಲ್ಲಿ ಸದ್ದು ಮಾಡಿದೆ.
ಹುಡುಗಿಯರನ್ನು ಸಾಮಾನ್ಯವಾಗಿ ಪರಿಚಯಸ್ಥರು ಮತ್ತು ಸಂಬಂಧಿಕರು ಅಥವಾ ವಧುಗಳನ್ನು ಹುಡುಕುತ್ತಿರುವ ಪುರುಷರು ಅಪಹರಿಸುತ್ತಾರೆ. ಕೆಲವೊಮ್ಮೆ ಅವರನ್ನು ಪ್ರಬಲ ಭೂಮಾಲೀಕರು ಸಾಲಗಳನ್ನು ತೀರಿಸದಿದ್ದಕ್ಕಾಗಿ ಬಲವಂತವಾಗಿ ಕರೆದುಕೊಂಡು ಹೋಗುತ್ತಾರೆ. ಒಮ್ಮೆ ಮತಾಂತರಗೊಂಡ ನಂತರ, ಹುಡುಗಿಯರಿಗೆ ಬೇಗನೆ ಮದುವೆ ಮಾಡಲಾಗುತ್ತದೆ, ವಯಸ್ಸಾದ ಪುರುಷರಿಗೆ ಅಥವಾ ಅವರ ಅಪಹರಣಕಾರರಿಗೆಯೇ ಮದುವೆ ಮಾಡಿಕೊಡಲಾಗುತ್ತದೆ ಎಂದು ಪಾಕಿಸ್ತಾನದ ಸ್ವತಂತ್ರ ಮಾನವ ಹಕ್ಕುಗಳ ಆಯೋಗದ ಹೇಳುತ್ತದೆ.
ಇಸ್ಲಾಮಿಕ್ ಧರ್ಮಗುರುಗಳು, ಒಕ್ಕೂಟಗಳು ನಡೆಸುವ ಪಾಪಿ ಕೃತ್ಯಗಳನ್ನು ಕಾನೂನುಬದ್ಧಗೊಳಿಸುವ ಕಾರ್ಯ ಅಲ್ಲಿನ ನ್ಯಾಯಾಧೀಶರಿಗೆ ಹೊಸತಲ್ಲ. ತನಿಖೆ ಮಾಡಲು ನಿರಾಕರಿಸುವ ಮೂಲಕ ಅಥವಾ ವಿಧ್ವಂಸಕ ಕೃತ್ಯ ನಡೆದಿದೆ ಎನ್ನುವುದನ್ನೇ ನಿರಾಕರಿಸುವ ಮೂಲಕ ಅಪರಾಧಿಗಳಿಗೆ ಸಹಾಯ ಮಾಡುವ ಭ್ರಷ್ಟ ಪೊಲೀಸರ ಕೈವಾಡ ಇಂತಹ ಪ್ರಕರಣಗಳ ಹೆಚ್ಚಳಕ್ಕೆ ಕಾರಣ. ಪೊಲೀಸರು ಇದರಿಂದ ಹಣ ಸಂಪಾದಿಸುತ್ತಾರೆ ಎಂದು ಮಕ್ಕಳ ರಕ್ಷಣಾ ಕಾರ್ಯಕರ್ತರು ಹೇಳುತ್ತಾರೆ.
ಸಾಮಾಜಿಕ ಕಾರ್ಯಕರ್ತ ಜಿಬ್ರಾನ್ ನಾಸಿರ್ ಇಂತಹ ಕೃತ್ಯಗಳ ನೆಟ್ವರ್ಕ್ ಅನ್ನು “ಮಾಫಿಯಾ” ಎಂದು ಕರೆದಿದ್ದಾರೆ. ಅವರ ಪ್ರಕಾರ, ಮುಸ್ಲಿಮೇತರ ಹುಡುಗಿಯರನ್ನು ಬೇಟೆಯಾಡಲಾಗುತ್ತದೆ. ಏಕೆಂದರೆ ಅವರು ಶಿಶು ಕಾಮಿ ಪುರುಷರಿಗೆ ಅತ್ಯಂತ ದುರ್ಬಲ ಮತ್ತು ಸುಲಭವಾದ ಗುರಿಗಳಾಗಿದ್ದಾರೆ.ಇಸ್ಲಾಂಗಾಗಿ ಮತಾಂತರಗಳನ್ನು ಮಾಡುವುದಲ್ಲ, ಕನ್ಯೆಯಾಗಿರುವ ವಧುಗಳನ್ನು ತಮಗಾಗಿ ತಮ್ಮವರಿಗಾಗಿ ಭದ್ರಪಡಿಸುವುದು ಇವರ ಗುರಿಯಾಗಿದೆ. ಪಾಕಿಸ್ತಾನದ 220 ಮಿಲಿಯನ್ ಜನರಲ್ಲಿ ಅಲ್ಪಸಂಖ್ಯಾತರು ಕೇವಲ 3.6% ರಷ್ಟಿದ್ದಾರೆ ಮತ್ತು ಅವರು ತಾರತಮ್ಯದ ಜೀವನ ನಡೆಸುತ್ತಿದ್ದಾರೆ. ಬಲವಂತದ ಮತಾಂತರಗಳನ್ನು ವರದಿ ಮಾಡುವವರ ಮೇಲೆ ಧರ್ಮನಿಂದೆಯ ಆರೋಪಗಳನ್ನು ಹೊರಿಸಿ ಮುಗಿಸುವ ಸಂಚು ಹೂಡಲಾಗುತ್ತದೆ.
ದಕ್ಷಿಣ ಸಿಂಧ್ ಪ್ರಾಂತ್ಯದ ಕಾಶ್ಮೋರ್ ಪ್ರದೇಶದಲ್ಲಿ, 13 ವರ್ಷದ ಸೋನಿಯಾ ಕುಮಾರಿ ಎಂಬಾಕೆಯನ್ನು ಅಪಹರಿಸಲಾಯಿತು. ಒಂದು ದಿನದ ನಂತರ ಪೊಲೀಸರು ಆಕೆಯ ಪೋಷಕರಿಗೆ ಅಕೆ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ತಿಳಿಸಿದ್ದಾರೆ. ವೀಡಿಯೊವೊಂದರಲ್ಲಿ ಆಕೆಯ ತಾಯಿ ಅಕೆಗೆ ಮರಳುವಂತೆ ಮಾಡಿರುವ ಮನವಿ ಭಾರೀ ವೈರಲ್ ಅಗಿತ್ತು. ʼದೇವರ ಸಲುವಾಗಿ, ಕುರಾನ್ ಅನ್ನು ನಂಬುವ ನೀವು ದಯವಿಟ್ಟು ನನ್ನ ಮಗಳನ್ನು ಹಿಂತಿರುಗಿಸಿ, ಅವಳನ್ನು ನಮ್ಮ ಮನೆಯಿಂದ ಬಲವಂತವಾಗಿ ಕರೆದೊಯ್ಯಲಾಗಿದೆ” ಎಂದು ಅವರು ಅಂಗಲಾಚಿಕೊಂಡಿದ್ದರು.
ಆದರೆ ನಂತರ ಅಕೆಯ ಕುಟುಂಬಕ್ಕೆ ಬೆದರಿಕೆ ಹಾಕಿ ಬಾಲಕಿಯೇ ತನ್ನ ಇಚ್ಛೆಯಂತೆ ಮತಾಂತರವಾಗಿದ್ದಾಳೆ ಎಂದು ಪತ್ರ ಬರೆಯುವಂತೆ ಮಾಡಲಾಯಿತು. ಬಾಲಕಿಗೆ ಇಬ್ಬರು ಮಕ್ಕಳನ್ನು ಹೊಂದಿದ್ದ ಪುರುಷನೊಂದಿಗೆ ಮದುವೆ ಮಾಡಿಕೊಡಲಾಯಿತು.
ಆಕೆಯ ಪೋಷಕರು ಇಲ್ಲಿ ಹೋರಾಟದ ಹಾದಿಯನ್ನು ಕೈಬಿಡಬೇಕಾಯಿತು.
ಮಧ್ಯ ಕರಾಚಿಯಲ್ಲಿರುವ ತನ್ನ ಮನೆಯಿಂದ ಕಣ್ಮರೆಯಾಗಿದ್ದಳು 13 ವರ್ಷದ ಅರ್ಜೂ ರಾಜಾ. ಕ್ರಿಶ್ಚಿಯನ್ ಹುಡುಗಿ. ಆಕೆಯ ಪೋಷಕರು ಅವಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು, ಅವಳನ್ನು ಹುಡುಕಲು ಪೊಲೀಸರಿಗೆ ಮನವಿ ಮಾಡಿದ್ದರು. ಎರಡು ದಿನಗಳ ನಂತರ, ಅಧಿಕಾರಿಗಳು ಆಕೆ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ ಮತ್ತು ನಿಮ್ಮದೆ 40 ವರ್ಷದ ಮುಸ್ಲಿಂ ನೆರೆಯವನನ್ನು ಮದುವೆಯಾಗಿದ್ದಾಳೆ ಎಂದು ಕುಟುಂಬಕ್ಕೆ ತಿಳಿಸಿದರು.
ಸಿಂಧ್ ಪ್ರಾಂತ್ಯದಲ್ಲಿ, ಮದುವೆಗೆ ಒಪ್ಪಿಗೆಯ ವಯಸ್ಸು 18 ವರ್ಷ. ಅರ್ಜೂ ಮದುವೆ ಪ್ರಮಾಣಪತ್ರವು ಆಕೆಗೆ 19 ವರ್ಷ ಎಂದು ಹೇಳಿದೆ. ಆದರೆ ಆಕೆಯ ನಿಜ ವಯಸ್ಸು 13.
ಅರ್ಜೂ ವಿವಾಹವನ್ನು ನಿರ್ವಹಿಸಿದ ಮುಲ್ಲಾ ಕಾಸಿ ಅಹ್ಮದ್ ಮುಫ್ತಿ ಜಾನ್ ರಹೀಮಿ, ಈತ ಕನಿಷ್ಠ ಮೂರು ಅಪ್ರಾಪ್ತ ವಯಸ್ಸಿನ ವಿವಾಹಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಅರ್ಜೂ ಮದುವೆಯನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಬಂಧನ ವಾರಂಟ್ ಎದುರಿಸುತ್ತಿದ್ದರೂ, ಕರಾಚಿಯ ಡೌನ್ಟೌನ್ನಲ್ಲಿರುವ ಸಗಟು ಅಕ್ಕಿ ಮಾರುಕಟ್ಟೆಯ ಮೇಲಿರುವ ತನ್ನ ರಾಮ್ಶ್ಯಾಕಲ್ ಕಚೇರಿಯಲ್ಲಿ ಅಪ್ರಾಪ್ತರಿಗೆ ಮದುವೆ ಮಾಡುವ ತನ್ನ ಛಾಳಿಯನ್ನು ಮುಂದುವರೆಸಿದ್ದಾನೆ.
ಅರ್ಜೂ ತಾಯಿ, ರೀಟಾ ರಾಜಾ, ಒಂದು ದಿನ ನ್ಯಾಯಾಲಯದ ಹೊರಗೆ ವಿಡಿಯೋ ಮಾಡಿ ಗೋಗರೆಯುವವರೆಗೂ ಕುಟುಂಬದ ಮನವಿಯನ್ನು ಪೊಲೀಸರು ಕಡೆಗಣಿಸಿದ್ದಾರೆ. ಈ ವೀಡಿಯೊ ವೈರಲ್ ಆಗಿದ್ದು, ಪಾಕಿಸ್ತಾನದಲ್ಲಿ ಸೋಷಿಯಲ್ ಮೀಡಿಯಾ ಬಿರುಗಾಳಿಯನ್ನು ಸೃಷ್ಟಿಸಿದೆ ಮತ್ತು ಅಧಿಕಾರಿಗಳನ್ನು ಕಾರ್ಯಪ್ರವೃತ್ತರನ್ನಾಗುವಂತೆ ಮಾಡಿದೆ.
“10 ದಿನಗಳಿಂದ, ಪೋಷಕರು ಪೊಲೀಸ್ ಠಾಣೆ ಮತ್ತು ಸರ್ಕಾರಿ ಅಧಿಕಾರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ನಡುವೆ ಓಡಾಡಿ ಬಸವಳಿದಿದ್ದಾರೆ” ಎಂದು ಕಾರ್ಯಕರ್ತ ನಾಸಿರ್ ಹೇಳುತ್ತಾರೆ. ” ವಿಡಿಯೋ ವೈರಲ್ ಆಗುವವರೆಗೆ ಅವರಿಗೆ ಯಾವುದೇ ಸಮಯವನ್ನು ನೀಡಲಾಗಿಲ್ಲ. ಅದು ಇಲ್ಲಿನ ನಿಜವಾದ ದುರದೃಷ್ಟಕರ ಸಂಗತಿಯಾಗಿದೆ” ಎಂದಿದ್ದಾರೆ.
ಅಧಿಕಾರಿಗಳು ಅರ್ಜೂ ಗಂಡನನ್ನು ಬಂಧಿಸಿದ್ದಾರೆ, ಆದರೆ ಅವರ ಮಗಳು ಇನ್ನೂ ಮನೆಗೆ ಬರಲು ನಿರಾಕರಿಸುತ್ತಿದ್ದಾಳೆ ಎಂದು ತಾಯಿ ಹೇಳಿದ್ದಾರೆ. ತನ್ನ ಗಂಡನ ಕುಟುಂಬದ ಬೆದರಿಕೆಗೆ ಹೆದರುತ್ತಿದ್ದಾಳೆ ಎಂದು ರಾಜಾ ಹೇಳುತ್ತಾರೆ.
ಅಪ್ರಾಪ್ತ ವಯಸ್ಸಿನ ಹಿಂದೂ, ಕ್ರಿಶ್ಚಿಯನ್, ಸಿಖ್ ಬಾಲಕಿಯರನ್ನು ಮತಾಂತರ ಮಾಡಿ ಮಧ್ಯ ವಯಸ್ಸಿನ ಪುರುಷರೊಂದಿಗೆ ಮದುವೆ ಮಾಡಿಸಿ ಅವರ ಜೀವನವನ್ನೇ ಕತ್ತಲೆಯ ಕೂಪಕ್ಕೆ ತಳ್ಳುವ ಇಂತಹ ಅದೆಷ್ಟೋ ಘಟನೆಗಳು ಪಾಕಿಸ್ಥಾನದಲ್ಲಿ ನಡೆದು ಹೋಗಿವೆ, ನಡೆಯುತ್ತಲೇ ಇದೆ. ವರದಿಗಳ ಪ್ರಕಾರ, ಪ್ರತಿ ವರ್ಷ ಅಲ್ಲಿ ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡಲಾಗುತ್ತದೆ. ಅಲ್ಪಸಂಖ್ಯಾತರನ್ನು ನಿಕೃಷ್ಟವಾಗಿ ಕಾಣುವ ಆ ದೇಶದಲ್ಲಿ ಮತಾಂಧತೆ ಎಂಬುದು ಕಣಕಣದಲ್ಲೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.