ಅವಶ್ಯಕತೆಯೇ ಆವಿಷ್ಕಾರದ ಮೂಲ ಎಂದು ಹೇಳಲಾಗುತ್ತದೆ. ಈ ಮಾತು ಅಕ್ಷರಶಃ ಸತ್ಯ ಎಂದು ತೋರಿಸಿಕೊಟ್ಟಿದ್ದಾರೆ ಮಹಾರಾಷ್ಟ್ರ ಪುಣೆಯ ನವರೆ ಗ್ರಾಮದ ಮೆಕ್ಯಾನಿಕಲ್ ಎಂಜಿನಿಯರ್ ಗೀತಾರಾಮ್ ಕದಮ್.
ಗೀತಾರಾಮ್ ಅವರ ಗ್ರಾಮ ಒಂದೊಮ್ಮೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಅಭಾವವನ್ನು ಎದುರಿಸುತ್ತಿತ್ತು, ಅನಿಯಮಿತ ಲೋಡ್ ಶೆಡ್ಡಿಂಗ್ ಗ್ರಾಮದ ಜನರನ್ನು ತತ್ತರಗೊಳಿಸಿತ್ತು. ವಿದ್ಯುತ್ ಕಂಪನಿ ರಾತ್ರಿ 11 ರಿಂದ ಬೆಳಿಗ್ಗೆ 7ರವರೆಗೆ ವಿದ್ಯುತ್ ಪೂರೈಸುವ ಭರವಸೆ ನೀಡಿತ್ತು, ಆದರೆ ಈ ಸಮಯದಲ್ಲಿ ಜನರಿಗೆ ಕೃಷಿ ಚಟುವಟಿಕೆಗಳನ್ನು ನಡೆಸುವುದು ಅಸಾಧ್ಯವಾಗಿತ್ತು. ಈ ಗ್ರಾಮದಲ್ಲಿ ಸುಮಾರು 7,500 ಜನರಿದ್ದಾರೆ. ರೈತರಿಗೆ ರಾತ್ರಿ ವೇಳೆ ಎಚ್ಚರವಿದ್ದು ಉಳುಮೆ ಮಾಡುವುದು ಸಾಧ್ಯವಾಗುವ ಮಾತೇ?
ಸಾವಯವ ಕೃಷಿ ಮಾಡುವ ಉದ್ದೇಶದಿಂದ ಗೀತಾರಾಮ್ ಅವರು 2016 ರಲ್ಲಿ 12 ಎಕರೆ ಭೂಮಿಯನ್ನು ಖರೀದಿ ಮಾಡಿದರು. ಆದರೆ ವಿದ್ಯುತ್ ಸಮಸ್ಯೆ ಅವರ ಕನಸನ್ನು ನುಚ್ಚುನೂರು ಮಾಡಿತು. ವಿದ್ಯುತ್ ಪದೇ ಪದೇ ಹೋಗುತ್ತಿದ್ದರಿಂದ ವಿದ್ಯುತ್ ಪರಿಕರಗಳು ಕೂಡ ಹಾನಿಗೀಡಾದವು.
ಹೀಗಾಗಿ ಈ ಗ್ರಾಮದ ರೈತರ ಕಷ್ಟಗಳನ್ನು ದೂರ ಮಾಡಲು ಸ್ವತಃ ಗೀತಾರಾಮ್ ಅವರೇ ಪಣತೊಟ್ಟರು. ಇನ್ನು ಮುಂದೆ ವಿದ್ಯುತ್ ನೀಡಿ ಎಂದು ವಿದ್ಯುತ್ ಕಂಪನಿ ಎದುರು ಅಂಗಲಾಚದಿರಲು ನಿರ್ಧರಿಸಿದರು. ಸಮಸ್ಯೆ ಬಗೆಹರಿಸಲು ತಮ 26 ವರ್ಷಗಳ ಎಂಜಿನಿಯರಿಂಗ್ ಕೌಶಲ್ಯವನ್ನು ಬಳಸಿಕೊಳ್ಳಲು ಅವರು ಮುಂದಾದರು. 49 ವರ್ಷದ ಗೀತಾ ರಾಮ್ ಅವರು ಅಮೆರಿಕ ಮೂಲದ ವಿಂಡ್ಮಿಲ್ ಉತ್ಪಾದನಾ ಕಂಪನಿಯಲ್ಲಿ ಪ್ರಾಜೆಕ್ಟ್ ಮುಖ್ಯಸ್ಥನಾಗಿ ಕೆಲಸ ಮಾಡಿದ್ದರು.
“ನಾನು ವಿಂಡ್ಮಿಲ್ ಅನ್ನು ನಿರ್ಮಾಣ ಮಾಡಲು ಮತ್ತು ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸಲು ನಿರ್ಧರಿಸಿದೆ. ಮೇ ಮತ್ತು ಅಕ್ಟೋಬರ್ ನಡುವೆ ಗಾಳಿ ಉತ್ತಮವಾಗಿರುತ್ತದೆ, ಉಳಿದ ತಿಂಗಳುಗಳಲ್ಲಿ ಸೂರ್ಯನ ಬೆಳಕು ಪ್ರಬಲವಾಗಿರುತ್ತದೆ” ಎಂದು ಅವರು ಹೇಳುತ್ತಾರೆ. ಅವರು ಈ ಎರಡು ನವೀಕರಿಸಬಹುದಾದ ಇಂಧನ ಮೂಲಗಳ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ದೊಡ್ಡ ಲಾಭಕ್ಕಾಗಿ ಅವುಗಳನ್ನು ಸಿಂಕ್ರೊನೈಸ್ ಮಾಡಲು ನಿರ್ಧರಿಸಿದರು.
“ನನಗೆ ಅಮೇರಿಕನ್ ಸ್ನೇಹಿತ ಜಾರ್ಜ್ ಇದ್ದಾರೆ, ಅವರು ತಾಂತ್ರಿಕ ಜ್ಞಾನವನ್ನು ನನ್ನೊಂದಿಗೆ ಹಂಚಿಕೊಂಡರು, ಮತ್ತು ನಾವು ವಿಂಡ್ಮಿಲ್ ನಿರ್ಮಾಣ ಮಾಡಲು ಮತ್ತು ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡಿದೆವು. ನಾವು ಆಯಸ್ಕಾಂತಗಳು, ತಾಮ್ರ ಮತ್ತು ಕೆಲವು ಉಕ್ಕಿನ ಭಾಗಗಳನ್ನು ಖರೀದಿಸಿದೆವು, ಮರ ಮತ್ತು ಇತರ ಭಾಗಗಳನ್ನು ಸ್ಕ್ರ್ಯಾಪ್ ಮಾರುಕಟ್ಟೆಯಿಂದ ಖರೀದಿಸಿದೆವು, ಎಂಜಿನಿಯರಿಂಗ್ ಕಾಲೇಜುಗಳಿಂದ ಪರಿಣತರನ್ನು ಕರೆಸಿದೆವು. ನಾವು 22 ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಟಾಸ್ಕ್ಗೆ ನಿಯೋಜಿಸಿದೆವು. ಔರಂಗಾಬಾದ್, ಪುಣೆ, ಬೀಡ್ ಮತ್ತು ಕೊಲ್ಹಾಪುರದ ವಿದ್ಯಾರ್ಥಿಗಳು ಯೋಜನೆಯಲ್ಲಿ ಕೆಲಸ ಮಾಡುವ ಮೊದಲು 10 ದಿನಗಳ ಕಾಲ ತರಬೇತಿ ಪಡೆದರು. ಸುಮಾರು ಒಂದು ವಾರದ ನಂತರ, 3.5 ಲಕ್ಷ ರೂ.ಗಳ ವೆಚ್ಚದಲ್ಲಿ 3 kW ವಿದ್ಯುತ್ನ ವಿಂಡ್ಮಿಲ್ ಸಿದ್ಧವಾಯಿತು, ”ಎಂದು ಗೀತಾರಾಮ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಒಂದೆರಡು ವಾರಗಳ ನಂತರ 2.5 ಲಕ್ಷ ರೂ. ಖರ್ಚು ಮಾಡುವ ಮೂಲಕ 2 kW.ನ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದರು. ಈ ಸ್ಥಾವರದ ವಿಶಿಷ್ಟ ಅಂಶವೆಂದರೆ ಶಕ್ತಿಯನ್ನು ಸಂಗ್ರಹಿಸಲು ಯಾವುದೇ ಬ್ಯಾಟರಿ ಇಲ್ಲ. ವಿಂಡ್ಮಿಲ್ ಮತ್ತು ಸೌರ ಸ್ಥಾವರವು ನೇರವಾಗಿ ಉಪಕರಣಗಳಿಗೆ ಶಕ್ತಿ ನೀಡುವ ಪರ್ಯಾಯ ಪ್ರವಾಹವನ್ನು ತಲುಪಿಸಲು ಕೆಲಸ ಮಾಡುತ್ತದೆ.
ಎರಡು ತಂತ್ರಜ್ಞಾನಗಳನ್ನು ಪರಿಪೂರ್ಣವಾಗಿ ಸಿಂಕ್ರೊನೈಸ್ ಮಾಡಿದ ನಂತರ, ಗೀತಾರಾಮ್ ಈಗ ಸಂತುಷ್ಟ ಮತ್ತು ಸ್ವತಂತ್ರ ರೈತ. ಅವರು ಈಗ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಸಂಸ್ಕರಿಸಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಎಂಜಿನಿಯರ್-ಕಮ್-ಫಾರ್ಮರ್ ಆಗಿರುವ ಗೀತಾರಾಮ್, “ನೈಸರ್ಗಿಕ ಶಕ್ತಿಯನ್ನು ಬಳಸಿಕೊಳ್ಳುವುದು ಏಕೈಕ ಕಾರ್ಯಸಾಧ್ಯ ಪರಿಹಾರ ಎಂದು ಹೇಳುತ್ತಾರೆ. “ಡೀಸೆಲ್ ಜನರೇಟರ್ಗಳನ್ನು ಚಲಾಯಿಸುವುದರಿಂದ ಭಾರೀ ಮಾಲಿನ್ಯ ಉಂಟಾಗುತ್ತದೆ ಮತ್ತು ಜೇಬಿಗೂ ದುಬಾರಿಯಾಗುತ್ತದೆ. ಹೊಗೆ ಮತ್ತು ಶಬ್ದ ಅಸಹನೀಯವಾಗುತ್ತದೆ. ಭಾರತವು ಹೆಚ್ಚುವರಿ ಗಾಳಿ ಮತ್ತು ಸೌರಶಕ್ತಿಯಿಂದ ಆಶೀರ್ವದಿಸಲ್ಪಟ್ಟಿದೆ. ನಮ್ಮ ಅಗತ್ಯಗಳಿಗೆ ಶಕ್ತಿಯನ್ನು ಏಕೆ ಬಳಸಬಾರದು? ಇಂತಹ ಉಪಕ್ರಮಗಳು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಸಹ ನಮಗೆ ಸಹಾಯ ಮಾಡುತ್ತದೆ. ಪ್ರತಿಯೊಬ್ಬ ರೈತನು ನವೀಕರಿಸಬಹುದಾದ ಶಕ್ತಿಯ ಮೂಲವನ್ನು ಆಶ್ರಯಿಸಬೇಕು” ಎನ್ನುತ್ತಾರೆ.
ಗೀತಾರಾಮ್ ಅವರು ತಮ್ಮ ಗ್ರಾಮದ ರೈತರಿಗಾಗಿ ಆರು ವಿಂಡ್ಮಿಲ್ಗಳನ್ನು ನಿರ್ಮಿಸಿದ್ದಾರೆ. ಇದರಿಂದ ಅವರ ಗ್ರಾಮದ ಇತರ ರೈತರು ಕೂಡ ಸ್ವಾವಲಂಬಿಗಳಾಗಿದ್ದಾರೆ.
ಹೊಸ ಆರಂಭಕ್ಕಾಗಿ 2020 ರ ಡಿಸೆಂಬರ್ನಲ್ಲಿ ಇವರು ತಮ್ಮ ಕೆಲಸವನ್ನು ಕೂಡ ತ್ಯಜಿಸಿದ್ದಾರೆ. “ಗ್ರಾಮೀಣ ಉದ್ಯಮಿಗಳನ್ನು ಸೃಷ್ಟಿಸುವ ಉದ್ದೇಶದಿಂದ ನಾನು ನನ್ನ ಕೆಲಸವನ್ನು ತ್ಯಜಿಸಿದೆ. ನಾನು ಬೆಳ್ಳುಳ್ಳಿ, ಶುಂಠಿ, ಮೆಂತೆ, ಅರಿಶಿನ, ಕೊತ್ತಂಬರಿ ಮುಂತಾದ ಬೆಳೆ ಬೆಳೆಯುತ್ತೇನೆ. ಈ ತರಕಾರಿಗಳನ್ನು ಒಣಗಿಸಿ ಮಾರುಕಟ್ಟೆಯಲ್ಲಿ ಹೆಚ್ಚುವರಿ ಮೌಲ್ಯಕ್ಕೆ ಮಾರಾಟ ಮಾಡುತ್ತೇನೆ ” ಎನ್ನುತ್ತಾರೆ.
ಆದರೆ ಇಡೀ ಹಳ್ಳಿಯನ್ನು ಮರುಬಳಕೆ ಮಾಡಬಹುದಾದ ಶಕ್ತಿಯಿಂದ ಸ್ವಾವಲಂಬಿಯನ್ನಾಗಿ ಮಾಡುವುದರ ಜೊತೆಗೆ, ಹಳ್ಳಿಯ 450 ಮಹಿಳೆಯರಿಗೆ ತನ್ನಂತೆ ತರಕಾರಿಗಳನ್ನು ಬೆಳೆಯಲು ಮತ್ತು ಒಣಗಿಸಲು ಅವಕಾಶ ನೀಡಿದ್ದಾರೆ. “ಅವರು ತರಕಾರಿಗಳನ್ನು ಒಣಗಿಸುವ ಪ್ರಾಥಮಿಕ ಪ್ರಕ್ರಿಯೆಯನ್ನು ನಡೆಸುತ್ತಾರೆ ಮತ್ತು ಅವುಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 40 ರಷ್ಟು ಹೆಚ್ಚಿನ ಲಾಭವನ್ನು ಗಳಿಸುತ್ತಾರೆ” ಎಂದು ಅವರು ಹೇಳುತ್ತಾರೆ.
“ಈ ರೀತಿಯಾಗಿ ನಾನು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದೇನೆ. ರೈತರು ಹೊಸ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ತಮ್ಮ ಉತ್ಪನ್ನಗಳನ್ನು ಸಂಸ್ಕರಿಸುವ ಮತ್ತು ಮೌಲ್ಯವರ್ಧಿಸುವ ಮೂಲಕ ಹೆಚ್ಚು ಸಂಪಾದಿಸಬೇಕು ಎಂದು ನಾನು ಬಯಸುತ್ತೇನೆ. ಅಂತಹ ರೈತರು ಇತರರು ಅನುಸರಿಸಲು ಮತ್ತು ಜೀವನದಲ್ಲಿ ಯಶಸ್ವಿಯಾಗಲು ಒಂದು ಉದಾಹರಣೆಯನ್ನು ಆಗಬಲ್ಲರು” ಎಂದು ಅವರು ಹೇಳುತ್ತಾರೆ.
ಕೃಪೆ: ದಿ ಬೆಟರ್ ಇಂಡಿಯಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.