ಕಲಿಯುವುದನ್ನು ನಿಲ್ಲಿಸುವ ಯಾವುದೇ ಮನುಷ್ಯನಾದರೂ ವಯಸ್ಸಾದವನಾಗುತ್ತಾನೆ ಎನ್ನುವ ಮಾತನ್ನು ಎಲ್ಲರೂ ಕೇಳಿರುತ್ತಾರೆ. ಮಾಧವ್ ಗೋವಿಂದ್ ವೈದ್ಯ (ಬಾಬುರಾವ್) ಅವರು ಈ ಮಾತನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ ವ್ಯಕ್ತಿಗಳಲ್ಲಿ ಒಬ್ಬರು. ಸಕ್ರಿಯ ಓದುಗನಾಗಿದ್ದ ಅವರು, 97ರ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲರಾಗಿದ್ದು ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ತೋರಿಸಿಕೊಟ್ಟರು.
ಆರ್ಗನೈಝರ್ನ ಸಂಪಾದಕನಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳುವಾಗ ನಾನು ಅವರ ಮೇಲೆ ಅವಲಂಬಿತನಾಗಿದ್ದೆ, ಆ ಭಾಗ್ಯವನ್ನು ಪಡೆದ ಕೆಲವೇ ವ್ಯಕ್ತಿಗಳಲ್ಲಿ ನಾನು ಒಬ್ಬ. “ನೀವು ಕೆಲಸವನ್ನು ಕಲಿಯಬೇಕಾಗಿದೆ” ಎಂದು ಅವರು ನನಗೆ ಕಿವಿಮಾತು ಹೇಳಿದ್ದರು. “ಆದರೆ ನೆನಪಿಡಿ, ವೈದ್ಯರ ತಪ್ಪುಗಳಿಂದ ಸಮಾಧಿ ನಿರ್ಮಾಣ ಆಗುತ್ತದೆ, ವಕೀಲರ ತಪ್ಪುಗಳಿಂದ ಗಲ್ಲಿಗೇರಿಸಲಾಗುತ್ತದೆ ಆದರೆ ಸಂಪಾದಕರ ತಪ್ಪುಗಳು ಮುದ್ರಣಗೊಳ್ಳುತ್ತವೆ” ಎಂದು ಅವರು ನನಗೆ ಹೇಳಿದ್ದರು.
ಅವರ ತಿಳಿ ಹಾಸ್ಯವು ಅವರ ಸಂಭಾಷಣೆಗಳಲ್ಲಿ ಆಗಾಗ ಬಹಳ ಸ್ಪಷ್ಟವಾಗಿತ್ತು. ನಮ್ಮ ನಡುವಣ ಅನೇಕ ಸಭೆಗಳ ಸಂದರ್ಭ, ನನ್ನ ಸಹೋದ್ಯೋಗಿಯೊಬ್ಬರು ಕೆಲವು ದೂರುಗಳೊಂದಿಗೆ ಪ್ರಸ್ತುತರಾಗುತ್ತಿದ್ದರು. ಬಾಬುರಾವ್ ಜಿ ಅವರನ್ನು ತಾಳ್ಮೆಯಿಂದ ಆಲಿಸುತ್ತಿದ್ದರು ಮತ್ತು “ನಾನು ಉಪನಾಮದಿಂದ ಮಾತ್ರ ವೈದ್ಯ” ಎಂದು ಹೇಳುತ್ತಿದ್ದರು. ನಂತರ ಅವರು ಸಮಸ್ಯೆಗಳನ್ನು ನಿವಾರಿಸಲು ಕ್ಷಿಪ್ರವಾಗಿ ಕೆಲವು ಪ್ರಾಯೋಗಿಕ ಪರಿಹಾರಗಳನ್ನು ಸೂಚಿಸುತ್ತಿದ್ದರು. ಮತ್ತೊಂದು ಸಂದರ್ಭದಲ್ಲಿ ಅವರನ್ನು ಮಧ್ಯಪ್ರದೇಶ ಸರ್ಕಾರವು ಗೌರವಿಸಿದಾಗ, ಒಂದು ಪತ್ರಿಕೆ ಅವರನ್ನು ಆರ್ಎಸ್ಎಸ್ನ ಪ್ರಚಾರಕ (ಪೂರ್ಣ ಸಮಯದ ಕಾರ್ಯಕರ್ತ) ಎಂದು ತಪ್ಪಾಗಿ ವರದಿ ಮಾಡಿತ್ತು. ಆಗ ಅವರು ವರದಿಗಾರನನ್ನು ಕರೆದು, “ನಾನು ಪ್ರಚಾರಕ ಅಲ್ಲ, ನಾನು ಪ್ರಚಾರಕನ ಅಪ್ಪ” ಎಂದು ಹೇಳಿ ಆತನಿಗೆ ತಪ್ಪಿನ ಅರಿವು ಮಾಡಿಸಿದ್ದರು.
ಆರ್ಎಸ್ಎಸ್ನಲ್ಲಿನ ಅವರ ಸುದೀರ್ಘ ವರ್ಷಗಳ ಸೇವೆಯ ಕಾರಣದಿಂದಾಗಿ, ಅವರ ಪರಿಕಲ್ಪನೆಗಳು ಬಹಳ ಸ್ಪಷ್ಟವಾಗಿತ್ತು ಮತ್ತು ಕೆಲವೊಮ್ಮೆ ಸಾಮಾನ್ಯ ಅವಲೋಕನಗಳಿಗಿಂತ ಬಹಳ ಭಿನ್ನವಾಗಿತ್ತು. ಆರ್ಗನೈಝರ್ ಸಂಪಾದಕನಾಗಿ, ಅವರೊಂದಿಗೆ ಸಂವಹನ ನಡೆಸುವ ಮತ್ತು ಹಲವಾರು ವಿಷಯಗಳ ಕುರಿತು ಮಾರ್ಗದರ್ಶನ ಪಡೆಯುವ ಅಸಂಖ್ಯಾತ ಸಂದರ್ಭಗಳು ಬಂದವು. ಅಂತಹ ಒಂದು ಸಂವಾದದಲ್ಲಿ, ಆರ್ಎಸ್ಎಸ್ ಅನ್ನು ಸಂಘಟನೆಯೆಂದು ಉಲ್ಲೇಖಿಸದಿರುವುದು ಉತ್ತಮ ಎಂದು ಅವರು ಹೇಳಿದರು. ಆ ವೇಳೆ ನನ್ನ ದಿಗ್ಭ್ರಮೆಗೊಂಡ ನೋಟವನ್ನು ನೋಡಿದ ಅವರು, ಆರ್ಎಸ್ಎಸ್ ಸಮಾಜದಲ್ಲಿನ ಒಂದು ಸಂಘಟನೆಯಲ್ಲ, ಅದು ಸಮಾಜದ ಸಂಘಟನೆಯಾಗಿದೆ ಎಂದು ಹೇಳಿದರು.
“ಸಂಘ ಪರಿವಾರ್” ಎಂಬ ಪದವನ್ನು ಕೂಡ ಬಳಸದಂತೆ ಅವರು ನನಗೆ ಸಲಹೆ ನೀಡಿದ್ದರು. ಈ ಪದವನ್ನು ಆರ್ಎಸ್ಎಸ್ಗೆ ಸಂಬಂಧಿಸಿದ ಯಾವುದೇ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಕರೆಯಲು ಮುಕ್ತವಾಗಿ ಬಳಸಲಾಗುತ್ತಿದ್ದರೂ, ಆರ್ಎಸ್ಎಸ್ ಅನ್ನು “ಎಡ ಸಂಸ್ಥೆಗಳು” ಅಥವಾ ಪಕ್ಷಗಳೊಂದಿಗೆ ಹೋಲಿಕೆ ಮಾಡುವ ಸಾಧ್ಯತೆಯತ್ತ ಅವರ ಗಮನಹರಿಸಿ ಈ ಮಾತು ಹೇಳಿದ್ದರು. “ಈ ಪದವನ್ನು ಇತರರು ಬಳಸುವುದನ್ನು ನಾವು ತಡೆಯಲು ಸಾಧ್ಯವಿಲ್ಲ ಆದರೆ ಅದನ್ನು ನಾವೇ ಬಳಸುವ ಮೂಲಕ ನಾವು ಅದಕ್ಕೆ ವಿಶ್ವಾಸಾರ್ಹತೆಯನ್ನು ನೀಡಬಾರದು ಎಂದು ಅವರು ವಿವರಿಸಿದರು. ಇದೇ ರೀತಿಯಾಗಿ ಅವರು, ಆರ್ಗನೈಝರ್ ಅನ್ನು ಆರ್ಎಸ್ಎಸ್ನ ‘ಮುಖವಾಣಿ’ ಎಂದು ಬಿಂಬಿಸದಂತೆ ಸಲಹೆ ನೀಡಿದ್ದರು. ನಾವು ಆರ್ಎಸ್ಎಸ್ ಮತ್ತು ಅದರ ಅಧಿಕಾರಿಗಳ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತೇವೆ ಆದರೆ ನಾವು ಯಾವುದೇ ಸಂಸ್ಥೆಯ ಅಧಿಕೃತ ವಕ್ತಾರರಲ್ಲ ಎಂದು ಅವರು ಹೇಳುತ್ತಿದ್ದರು.
ಆರ್ಎಸ್ಎಸ್ನ ವಕ್ತಾರರನ್ನು ಹೊಂದುವ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿದ್ದ ಸಮಯದಲ್ಲಿ, ಭಿನ್ನ ಅಭಿಪ್ರಾಯಗಳು ಇದ್ದವು. ಆರ್ಎಸ್ಎಸ್ಗೆ ಹತ್ತಿರವಾಗಿದ್ದರೂ ಬೇರೆ ಬೇರೆ ಪಬ್ಲಿಕೇಷನ್ಗಳಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರ ಒಂದು ತಂಡವು ಆರ್ಎಸ್ಎಸ್ಗೆ ಅಧಿಕೃತ ವಕ್ತಾರರನ್ನು ಹೊಂದಿರಬೇಕು ಎಂಬ ಅಭಿಪ್ರಾಯ ಹೊಂದಿತ್ತು. ಅವರ ವಾದವು ವಾಸ್ತವಿಕವಾಗಿ ಸುದ್ದಿ ಸಂಗ್ರಹಣೆ ಮತ್ತು ವರದಿ ಮಾಡುವಾಗ ಆಗುತ್ತಿದ್ದ ತೊಂದರೆಗಳನ್ನು ಆಧರಿಸಿತ್ತು ಮತ್ತು ಅಧಿಕೃತ ವಕ್ತಾರರು ಇಲ್ಲದ ಹಿನ್ನೆಲೆಯಲ್ಲಿ ತಪ್ಪು ಮಾಹಿತಿ ಹೊರಬರುತ್ತಿದ್ದನ್ನು ಆಧರಿಸಿತ್ತು. ಈ ವಿಷಯವನ್ನು ಚರ್ಚಿಸಲು ನಡೆದ ಸಭೆಯೊಂದರಲ್ಲಿ ಬಾಬುರಾವ್ ಜಿ ಈ ವಿಚಾರವನ್ನು ವಿರೋಧಿಸಿದವರಲ್ಲಿ ಒಬ್ಬರು. ವಿಪರ್ಯಾಸವೆಂದರೆ, ಕೆಲವು ದಿನಗಳ ನಂತರ ಅವರನ್ನು ಆರ್ಎಸ್ಎಸ್ನ ಮೊದಲ ಅಧಿಕೃತ ವಕ್ತಾರರನ್ನಾಗಿ ಮಾಡಲಾಯಿತು. ಅವರು ಆ ಜವಾಬ್ದಾರಿಯನ್ನು ಚಾಣಾಕ್ಷತೆ ಮತ್ತು ಪರಿಪೂರ್ಣತೆಯೊಂದಿಗೆ ನಿರ್ವಹಿಸಿದರು.
ಆರ್ಎಸ್ಎಸ್ ಅಧಿಕೃತ ವಕ್ತಾರರನ್ನು ಹೊಂದುವ ಕಲ್ಪನೆ ನನಗೆ ಸರಿ ಅನಿಸುತ್ತಿರಲಿಲ್ಲ. ಯಾರಾದರೂ ಆರ್ಎಸ್ಎಸ್ ಅನ್ನು ಅರ್ಥಮಾಡಿಕೊಳ್ಳಲು ಬಯಸಿದರೆ ಅವರು ಶಾಖೆಗೆ ಹಾಜರಾಗಿ ಆರ್ಎಸ್ಎಸ್ನೊಂದಿಗೆ ಕೆಲಸ ಮಾಡಬೇಕು ಎಂದು ನಾನು ಸಲಹೆ ನೀಡಿದ್ದೆ. ಆದರೆ ಬಾಬುರಾವ್ ಜೀ ನನ್ನ ಅನಿಸಿಕೆಯನ್ನು ಸರಿಪಡಿಸಿದರು, ಒಬ್ಬರು ನಂಬಿಕೆಗಳಲ್ಲಿ ದೃಢವಾಗಿರಬೇಕು ಆದರೆ ಕಾಲದೊಂದಿಗೆ ಬದಲಾಗುವ ಆಪತ್ ಧರ್ಮವನ್ನು ಸಹ ಅನುಸರಿಸಬೇಕು ಎಂದು ಅವರು ನನಗೆ ಹೇಳಿದರು. 2014 ರ ಚುನಾವಣೆಯ ಸಮಯದಲ್ಲಿ ಅವರು ಒಬ್ಬ ವ್ಯಕ್ತಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ಸಂದರ್ಭದಲ್ಲೂ ಹೆಚ್ಚು ಕಡಿಮೆ ಇದೇ ರೀತಿಯ ಅನಿಸಿಕೆ ಹೊಂದಿದ್ದರು. ತಾತ್ತ್ವಿಕವಾಗಿ, ಆರ್ಎಸ್ಎಸ್ ಒಬ್ಬ ವ್ಯಕ್ತಿಯನ್ನು ವಿಂಜ್ರಭಿಸುವುದರ ಪರವಾಗಿಲ್ಲ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಒಬ್ಬರು ಹೆಚ್ಚು ಸಂಪ್ರದಾಯವಾದಿ ಆಗಿರಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದರು. ಅಲ್ಲದೆ, ಆರ್ಎಸ್ಎಸ್ ಮತ್ತು ರಾಜಕೀಯ ಪಕ್ಷದ ವಿಧಾನವು ವಿಭಿನ್ನವಾಗಿರಬೇಕು ಎಂಬುದು ಅವರ ವಾದವಾಗಿತ್ತು. ಎರಡೂ ತನ್ನ ಗುರಿಯ ಸ್ಪಷ್ಟತೆ ಕಳೆದುಕೊಳ್ಳದಿರುವವರೆಗೂ ಅದು ಒಳ್ಳೆಯದೇ ಆಗಿರುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಬಾಬುರಾವ್ ಜಿ ಅವರೊಂದಿಗಿನ ಸಂಭಾಷಣೆಯ ಉತ್ತಮ ಅಂಶವೆಂದರೆ ಅವರು ಸ್ಪಷ್ಟತೆ ಮತ್ತು ಪಕ್ಷಪಾತವಿಲ್ಲದ ಅಭಿಪ್ರಾಯಗಳನ್ನು ಹೊಂದಿದ್ದರು. ಅವರು ಯಾವುದೇ ಸಮಸ್ಯೆಯನ್ನು ತಾರ್ಕಿಕ ಮನಸ್ಸಿನಿಂದ ಬೆಸೆಯುತ್ತಿದ್ದರು, ಪೂರ್ವಾಗ್ರಹವಿಲ್ಲದೆ ವಿಶ್ಲೇಷಿಸುತ್ತಿದ್ದರು ಮತ್ತು ಸಲಹೆಗಳ ಆಯ್ಕೆಯೊಂದಿಗೆ ಹೊರಬರುತ್ತಿದ್ದರು. ನಾಗ್ಪುರ ತರುಣ್ ಭಾರತ್ನ ಸಂಪಾದಕರಾಗಿ ಅವರು ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದರು ಮತ್ತು ಪತ್ರಿಕೋದ್ಯಮದಲ್ಲಿ ಅನುಭವದ ಭಂಡಾರ ಹೊಂದಿದ್ದರು. ಪತ್ರಿಕೋದ್ಯಮದಲ್ಲಿ ತರಬೇತಿ ಪಡೆಯದ ಅಥವಾ ಇಂಗ್ಲಿಷ್ನಲ್ಲಿ ಪದವೀಧರನೂ ಅಲ್ಲದ ನನ್ನಂತಹ ವ್ಯಕ್ತಿಗಳು ಅವರ ಬಳಿ ಸಲಹೆಗಾಗಿ ಓಡುವುದು ಸಹಜ. ಅವರು ಎಂದಿಗೂ ನನ್ನನ್ನು ನಿರಾಶೆಗೊಳಿಸಿಲ್ಲ ಮತ್ತು ಯಾವಾಗಲೂ ಪರಿಸ್ಥಿತಿಯಿಂದ ಹೊರಬರಲು ಒಂದು ಮಾರ್ಗವನ್ನು ಸೂಚಿಸುತ್ತಿದ್ದರು ಅಥವಾ ವಿಷಯದ ಬಗ್ಗೆ ಒಂದು ದೃಷ್ಟಿಕೋನವನ್ನು ಸೂಚಿಸುತ್ತಿದ್ದರು. ಆದರೆ ಅವರು ಯಾವಾಗಲೂ ಒಂದು ವಿಷಯವನ್ನು ಪುನರುಚ್ಚರಿಸುತ್ತಿದ್ದರು, ಅದೇನೆಂದರೆ ʼತಪ್ಪುಗಳನ್ನು ಮಾಡಿ ಮತ್ತು ಕಲಿಯಿರಿ. ಆದರೆ ಅದೇ ತಪ್ಪುಗಳನ್ನು ಪುನರಾವರ್ತಿಸಬೇಡಿ, ಹೊಸದನ್ನು ಮಾಡಿ” ಎಂದು ಅವರು ತಮ್ಮ ವಿಶಿಷ್ಟ ಆಕರ್ಷಕ ನಗುವಿನೊಂದಿಗೆ ಹೇಳುತ್ತಿದ್ದರು.
ಬಾಬುರಾವ್ ಜಿ ಅವರ ಮರಣದಿಂದಾಗಿ ನಾವು ಕೇವಲ ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಿಲ್ಲ, ಆರ್ಎಸ್ಎಸ್, ಪತ್ರಿಕೋದ್ಯಮ, ಸಂಸ್ಕೃತದ ಕುರಿತ ವಿಶ್ವಕೋಶ ಮತ್ತು ಒಬ್ಬರು ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಿದ್ದೇವೆ. ಅವರು ಆರ್ಎಸ್ಎಸ್ನಲ್ಲಿನ ಅತ್ಯಂತ ಹಿರಿಯ ಪರಿಣತರಲ್ಲಿ ಒಬ್ಬರಾಗಿದ್ದರು, ಅವರು ಆರ್ಎಸ್ಎಸ್ ಅನ್ನು ಕೇವಲ ನೋಡಲಿಲ್ಲ ಬದಲಾಗಿ ಅದರಲ್ಲಿ ನಿಕಟವಾಗಿ ಕೆಲಸ ಮಾಡಿದ್ದಾರೆ.
ಮೂಲ ಬರಹ: ಶೇಷಾದ್ರಿ ಚಾರಿ
ಆರ್ಗನೈಝರ್ ಸಾಪ್ತಾಹಿಕದ ಮಾಜಿ ಸಂಪಾದಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.