ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಎಎಪಿಯ ಬಂಡಾಯ ನಾಯಕ ಪ್ರಶಾಂತ್ ಭೂಷಣ್ ಬಹಿರಂಗ ಪತ್ರ ಬರೆದಿದ್ದಾರೆ. ಕೇಜ್ರಿವಾಲ್ ಅವರು ಲಕ್ಷಾಂತರ ಬೆಂಬಲಿಗರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
‘ನೀವು ಪಕ್ಷಕ್ಕಾಗಿ ಏನು ಮಾಡುತ್ತಿದ್ದೀರೋ ಅದನ್ನು ದೇವರು ಮತ್ತು ಇತಿಹಾಸ ಎಂದಿಗೂ ಕ್ಷಮಿಸಲಾರದು’ ಎನ್ನುವ ಮೂಲಕ ಕೇಜ್ರಿವಾಲ್ ಕಾರ್ಯವೈಖರಿಯನ್ನು ಕಟುವಾಗಿ ಖಂಡಿಸಿದ್ದಾರೆ.
‘ಬಹುಮತದೊಂದಿಗೆ ದೆಹಲಿ ಚುನಾವಣೆ ಗೆದ್ದ ಬಳಿಕ ನಿಮಗೊಂದು ಉತ್ತಮ ಅವಕಾಶವಿತ್ತು, ಅಂತಹ ಅವಕಾಶದಲ್ಲಿ ನೀವು ಈ ದೇಶದ ಜನರಿಗೆ ನಿಮ್ಮ ಸಾಮರ್ಥ್ಯವನ್ನು ತೋರಿಸಿಕೊಡಬಹುದಿತ್ತು. ಆದರೆ ದುರಾದೃಷ್ಟವಶಾತ್ ನಿಮ್ಮ ಕೆಟ್ಟ ಗುಣಗಳು ಈಗ ಹೊರಬರುತ್ತಿವೆ’ ಎಂದು ಭೂಷಣ್ ಪತ್ರದಲ್ಲಿ ಹೇಳಿದ್ದಾರೆ.
‘ಲೋಕಪಾಲರನ್ನು, ನಮ್ಮನ್ನು ಮತ್ತು ನಮ್ಮ ಉಚ್ಛಾಟನೆಯನ್ನು ಪ್ರಶ್ನೆ ಮಾಡಿದ ಇತರ ಸದಸ್ಯರನ್ನು ವಜಾಗೊಳಿಸಿದ ನಿಮ್ಮ ವರ್ತನೆ ಒಂದು ರೀತಿಯಲ್ಲಿ ರಷ್ಯಾದ ಕಮ್ಯೂನಿಸ್ಟ್ ಪಾರ್ಟಿಯ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ದೇವರು ಮತ್ತು ಇತಿಹಾಸ ನೀವು ಪಕ್ಷಕ್ಕೆ ಏನು ಮಾಡುತ್ತಿದ್ದೀರೋ ಅದನ್ನು ಖಂಡಿತ ಕ್ಷಮಿಸೋದಿಲ್ಲ’ ಎಂದಿದ್ದಾರೆ.
ಪಕ್ಷವನ್ನು ಸ್ವಚ್ಛ ಮತ್ತು ಸಿದ್ಧಾಂತದ ರಾಜಕೀಯದ ಕನಸಿನೊಂದಿಗೆ ಕಟ್ಟಲಾಗಿತ್ತು. ಆದರೀಗ ಅದು ದುಃಸ್ವಪ್ನವಾಗಿ ಬದಲಾಗಿದೆ ಎಂದಿರುವ ಭೂಷಣ್, ಕೇಜ್ರಿವಾಲ್ ಉತ್ತಮ ಆಡಳಿತವನ್ನು ನೀಡಿದರೆ ಅವರು ಮಾಡಿದ ನಂಬಿಕೆ ದ್ರೋಹವನ್ನು ಜನ ಮರೆಯಲಿದ್ದಾರೆ ಎಂದು ಹೇಳಿದ್ದಾರೆ.
ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಮೇ.28ರಂದು ಎಎಪಿಯ ಉನ್ನತ ಹುದ್ದೆಯಿಂದ ಉಚ್ಛಾಟನೆಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.