1927ರ ಸಮಯ. ಬ್ರಿಟೀಷ್ ಸರ್ಕಾರವು ಜಾನ್ ಸೈಮನನ್ನು ಭಾರತಕ್ಕೆ ಕಳುಹಿಸಿತು. ಅದೊಂದು ಜಾನ್ ಸೈಮನನ ಅಧ್ಯಕ್ಷತೆಯಲ್ಲಿ ಒಳಗೊಂಡ ಏಳು ಜನರ ಕಮಿಟಿಯಾಗಿತ್ತು. ಆ ಕಮಿಟಿಯ ಉದ್ದೇಶ ಪ್ರಸ್ತುತ ಭಾರತದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ವರದಿಯನ್ನು ರಚಿಸಬೇಕಿತ್ತು. ಇದಾದ ನಂತರ ಭಾರತೀಯರಿಗೆ ಪರಮಾಧಿಕಾರ ನೀಡುವುದೆಂದು ಬ್ರಿಟೀಷರು ಭಾರತೀಯ ಹೊರಟಗಾರರಿಗೆ ನೀಡಿದ ಸಮಾಧಾನಕರ ಉತ್ತರವಾಗಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರೂ ಮತ್ತು ಗಾಂಧೀಜಿಯವರು ಕೂಡ ಇದಕ್ಕೆ ಸಹಮತ ಸೂಚಿಸಿದರು. ಆದರೆ ಆ ಕಮೀಟಿಯಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ.
ಅಲ್ಲಿಯವರೆಗೂ ನೇರವಾಗಿಯೇ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದ ಇಂಗ್ಲೀಷರು ಪರಮಾಧಿಕಾರದ ಆಸೆ ತೋರಿಸಿ ಭಾರತೀಯರಿಂದಲೇ ಪರೋಕ್ಷವಾಗಿ ಕೊಳ್ಳೆ ಹೊಡೆಯುವ ಉದ್ದೇಶ ಮುಂದಿನದಾಗಿತ್ತು. ಭಾರತೀಯರಿಂದಲೇ ಭಾರತದ ಮೇಲೆ ಅನಾಚಾರವೆಸಗುವ ಈ ಕೃತ್ಯವನ್ನು ಬಹು ತೀಕ್ಷ್ಣವಾಗಿ ಗಮನಿಸಿದ ಲಾಲಾ ಲಜಪತರಾಯರು ಹಿಂದಿನಕ್ಕಿಂತಲೂ ತಮ್ಮ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದರು. ಭಾರತೀಯರ ಮೇಲೆ ಅನಾಚಾರವಾಗುವುದನ್ನು ತಡೆಯುವುದಕ್ಕೆ ಸಿದ್ಧತೆ ಮಾಡಿದರು.
ಈ ಜಾನ್ ಸೈಮನ್ನ ಕಾರ್ಯ ಮೊದಲ ಬಾರಿಗೆ 1927 ಅಕ್ಟೋಬರ 30 ರಂದು ಲಾಹೋರಿನಲ್ಲಿ ಅರಂಭವಾಗುವುದರಲ್ಲಿತ್ತು. ಪೂರ್ವ ಸಿದ್ಧತೆಯೊದಿಂಗೆ ಲಾಲಾ ಲಜಪತರಾಯರು ಮತ್ತು ಮದನ ಮೋಹನ ಮಾಳವೀಯವರು ನಾಯಕರಾಗಿ ಅವರೊಂದಿಗೆ ನವ್ ಜವಾನ ತಂಡದ ಯುವ ಜನತೆಯು ಜೊತೆಯಾದರು. ಲಾಲಾ ಲಜಪತರಾಯ ಪೂರ್ಣ ಸ್ವರಾಜವೇ ನಮ್ಮ ಜನ್ಮ ಸಿದ್ಧ ಹಕ್ಕು ಜಾನ್ ಸೈಮನ್ ಬರುವ ಅವಶ್ಯಕತೆಯೇ ಇಲ್ಲವೆಂದು ಕಪ್ಪು ಬಾವುಟ ಹಿಡಿದು ‘ಸೈಮನ್ ಗೋ ಬ್ಯಾಕ್ ‘ ಎಂದು ಮುಷ್ಕರ ಆರಂಬಿಸಿದರು.
ಪೋಲೀಸರಿಗೆ ಯಾವ ರೀತಿಯಿಂದ ಪ್ರಯತ್ನಿಸಿದರೂ ಚಳುವಳಿಯನ್ನು ಹತೋಟಿಯಲ್ಲಿಡಲಾಗದೆ ಒಳ್ಳೆಯ ಪಿಕಲಾಟ ಶುರುವಾಯಿತು. ಜಾನ್ ಸೈಮನ್ ರೈಲಿನಿಂದ ಕೆಳಗೆ ಇಳಿಯುವ ಹೊತ್ತಿಗೆ ಎಲ್ಲಾ ಕ್ರಾಂತಿಕಾರಿಗಳು ತಮ್ಮ ಘೋಷಣೆಯನ್ನು ಕೂಗಲು ಪ್ರಾರಂಭಿಸಿದರು. ಆಗ ಕ್ರಾಂತಿಕಾರಿಗಳ ವಿರೋಧ ಉಗ್ರ ಸ್ವರೂಪದತ್ತ ಸಾಗಿತು. ಪೋಲೀಸರು ಎಷ್ಟೇ ತಿಣಕಾಡಿದರೂ ಈ ಚಳುವಳಿಯನ್ನು ತಡೆಯಲು ಅಗಲೇ ಇಲ್ಲ. ಭಯಂಕರ ಕೋಪಿಷ್ಟನಾದ ಲಾಹೋರಿನ ಮುಖ್ಯ ಪೋಲೀಸ ಅಧಿಕಾರಿ ಸ್ಕಾಟ್, ಚಳುವಳಿಗಾರರ ಮೇಲೆ ಲಾಟಿ ಚಾರ್ಜಿಗೆ ಆಜ್ಞೆ ಹೊರಡಿಸಿದ. ಎಷ್ಟೇ ಪ್ರಯತ್ನಿಸಿದರು ಪರಸ್ಥಿತಿ ಹತೋಟಿಗೆ ಬರದೆ ಹೋಯಿತು. ಸ್ಯಾಂಡರ್ಸ್ ಎಂಬುವವ ಕಿರಿಯ ಅಧಿಕಾರಿ ವಯೋವೃದ್ಧ ಲಾಲಾ ಲಜಪತರಾಯರಿಗೆ ಬಿರುಸಿನಿಂದ ಹೊಡೆದ. ಏಟು ತಲೆಗೆ, ಎದೆಗೆ ಬಿರುಸಾಗಿ ಬಿದ್ದುದ್ದರಿಂದ ಲಾಲಾಜಿ ಆಸ್ಪತ್ರೆಗೆ ಸೇರುವಂತಾಯಿತು. ಲಾಲಾಜಿ ಚೇತರಿಸಿಕೊಳ್ಳದೇ 1928ರ ನವಂಬರ 17 ರಂದು ದಿವಂಗತರಾದರು.
ಪರಿಣಾಮ!!….
ಎಲ್ಲ ಕ್ರಾಂತಿಕಾರಿಗಳು ರೊಚ್ಚಿಗೆದ್ದರು. ರಕ್ತಧಾರೆಗೆ ಪ್ರತಿಯಾಗಿ ರಕ್ತಧಾರೆಯೆಂದು ರಣತಂತ್ರಗಳನ್ನು ರೂಪಿಸಲು ಮುಂದಾದರು. ಯಾವ ಸ್ಕಾಟ್ ಆಜ್ಞೆ ಹೊರಡಿಸಿದನೊ ಆತನನ್ನು ಕೊಂದು ರಕ್ತದ ಕುದಿಯನ್ನು ತಣ್ಣಗಾಗಿಸುವ ಯೋಚನೆ ಮಾಡಿದರು. ಅದಕ್ಕಾಗಿ 10 ಡಿಸೆಂಬರ್ 1928ರಂದು ಕ್ರಾಂತಿಕಾರಿಗಳೆಲ್ಲರೂ ತಮ್ಮ ಮೊದಲ ಸಭೆ ಮಾಡಿ ಒಂದು ಅಂತಿಮ ನಿರ್ಣಯ ಕೈಗೊಂಡರು. ಸ್ಕಾಟನ ಸಂಹಾರಕ್ಕಾಗಿ ಭಗತ್ಸಿಂಗ್, ಸುಖದೇವ, ರಾಜಗುರು, ಜಯಗೋಪಾಲ ಆಯ್ಕೆಯಾದರು.
ಮುಂದೆ ಡಿಸೆಂಬರ 15 ರ ರಾತ್ರಿ ಮತ್ತೊಂದು ಸಭೆ ಮಾಡಿ ಸ್ಕಾಟ್ನನ್ನು ಕೊಲ್ಲುವ ಬಗ್ಗೆ ತಮ್ಮಲ್ಲಿಯೇ ವಿಚಾರ ಹಂಚಿಕೊಂಡರು. ಸುಖದೇವ ಇಡೀ ಕಾರ್ಯದ ಒಂದು ನೀಲ ನಕ್ಷೆ ತಯಾರಿಸಿದ. ಜಯಗೋಪಾಲ ಸ್ಕಾಟ್ನ ಇಡೀ ಚಲನವಲನಗಳ ಮೇಲೆ ನಿಗಾ ಇಡುವುದು: ‘ಭಗತ್ಸಿಂಗ್’ ರಾಜಗುರುರವರಿಗೆ ಸಹಕಾರಿಯಾಗಿ ನಿಲ್ಲುವುದು. ಸ್ಕಾಟ್ನ ಹತ್ಯೆಯಾದ ನಂತರ ಚಂದ್ರಶೇಖರ ಅಜಾದ್ ಇವರನ್ನು ಸುರಕ್ಷಿತವಾಗಿ ಕರೆದೊಯ್ಯುವುದು. ಆವತ್ತು 1928ರ ಡಿಸೆಂಬರ 17 ಕ್ಕೆ ಲಾಲಾಜಿ ದಿವಂಗತರಾಗಿ ಒಂದು ತಿಂಗಳಾಗಿತ್ತು.
ಕ್ರಾಂತಿಕಾರಿಗಳು ಬೇಟೆಗಾಗಿ ಕಾತರಿಸುತ್ತಿದ್ದರು. ಜಯಗೋಪಾಲ ಅವತ್ತು ಮಧ್ಯಾಹ್ನ ಪೋಲೀಸ್ ಸ್ಟೇಷನಿಗೆ ಹೋಗಿ ಅಧಿಕಾರಿ ಇರುವುದನ್ನು ಖಾತ್ರಿ ಮಾಡಿಕೊಂಡು ಬಂದ.
ಪಂಜಾಬ್ ಸಿವಿಲ್ ಸೆಕ್ರೆಟರಿಯೇಟ್ನ ಬಳಿಯಲ್ಲಿ ಸ್ಕಾಟನ ಮನೆಯಿತ್ತು. ಸ್ಕಾಟ್ ಸುಮಾರು ನಾಲ್ಕೂವರೆ ಹೊತ್ತಿಗೆ ಕಚೇರಿಯಿಂದ ಹೊರಬಂದನೆಂದು ತಿಳಿದು ದೂರದಲ್ಲಿ ನಿಂತು ನೋಡುತ್ತಿದ್ದ ಜಯಗೋಪಾಲ ಅಧಿಕಾರಿ ಬಂದನೆಂದು ಸೂಚನೆ ನೀಡಿದ. ಶಿವಾಜಿಯ ಗೆರಿಲ್ಲಾ ತಂತ್ರಗಳ ಮೇಲೆ ಅಪಾರ ಅಭಿಮಾನ ಹೊಂದಿದ ರಾಜಗುರುವಿಗೆ ಅಧಿಕಾರಿಯ ಮೇಲೆ ಯಾವಾಗ ಗುಂಡು ಹೊಡೆದೆನೆಂಬ ಆತುರ ಕಾತುರಗಳಿದ್ದವು. ಅಧಿಕಾರಿ ಇನ್ನೇನು ತನ್ನ ಮೋಟರ್ ಸೈಕಲ್ ಹತ್ತ ಬೇಕೆನ್ನುವಷ್ಟರಲ್ಲಿ ‘ಭಗತ್ಸಿಂಗ್’ ಬೇಟೆಗಾಗಿ ಕಾತರಿಸುತ್ತಿದ್ದ ರಾಜಗುರುವನ್ನು ತಡೆದು ಆತ ಸ್ಕಾಟ್ನಲ್ಲ ಸ್ಯಾಂಡರ್ಸ್ನೆಂದು ಹೇಳಿದ. ಆದರೆ ಅಷ್ಟೊತ್ತಿಗಾಗಲೇ ರಾಜಗುರುವಿಗೆ ತನ್ನಲ್ಲಿದ್ದ ರೋಷವೆಲ್ಲಾ ಉಕ್ಕಿ ರಕ್ತ ಕುದಿದು ಸಹನೆಯ ಕಟ್ಟೆಯೇ ಒಡೆದು ಹೋಗಿತ್ತು.
ಆತ ಸ್ಕಾಟ್ ಆದ್ರೂ ಆಗಿರಲಿ ಸ್ಯಾಂಡರ್ಸ್ನಾದ್ರು ಆಗಿರಲೆಂದು ತನ್ನ ಕೈಯಲ್ಲಿದ್ದ ಪಿಸ್ತೂಲಿನ ಟ್ರಿಗರನ್ನು ಎಳೆದೇ ಬಿಟ್ಟ!!… ಇತ್ತ ಭಗತ್ ಸಿಂಗ್ ಸ್ಟಾಂಡರ್ಸ್ನ ಮೇಲೆ ಗುಂಡು ಹಾರಿಸಲೇ ಬೇಕಾಯಿತು. ತಮ್ಮ ಪಿಸ್ತೂಲಿನ ಐದಾರು ಗುಂಡುಗಳನ್ನೆಲ್ಲ ಖಾಲಿ ಮಾಡಿದರು. ಸ್ಟಾಂಡರ್ಸ್ನ ತಲೆ, ಹೆಗಲು ತೂತಾಗಿ ರಕ್ತದ ಮಡುವಿನಲ್ಲಿ ಉರುಳಾಡಿ ಬೀದಿನಾಯಿಯಂತೆ ಜೀವ ಕಳೆದುಕೊಂಡ. ಬ್ರಿಟೀಷ ಪೋಲಿಸ ಅಧಿಕಾರಿ ಪರ್ನ್ ಮತ್ತು ಇನ್ನಿಬ್ಬರು ಸಿಪಾಯಿಗಳು ಇವರ ಬೆನ್ನ ಹಿಂದೇ ಬಿದ್ದರು. ಭಗತ್ಸಿಂಗ್ ಪಿಸ್ತೂಲ ತೋರಿಸಿ ಹೆದರಿಸಿದ ; ಅವರು ಮರೆಯಾದರು. ಅನಂತರ ಸ್ವಾಮಿ ನಿಷ್ಟ ಭಾರತೀಯ ಅಧಿಕಾರಿ ಚಂದನಸಿಂಹನೆಂಬವ ಇವರ ಬೆನ್ನಟ್ಟಲಾರಂಭಿಸಿದ. ಚಂದ್ರಶೇಖರ ಅಜಾದ್ ಆತನಿಗೂ ಅಂತಿಮ ಎಚ್ಚರಿಕೆ ನೀಡಿದ. ಆತ ಕೇಳಲಿಲ್ಲ.. ಕೊನೆಗೆ ಅಜಾದರ ಗುಂಡಿಗೆ ಆತನು ಬೇಟೆಯ ಪ್ರಾಣಿಯಾದ. ಕೆಲವೇ ಕ್ಷಣಗಳಲ್ಲಿ ಭಾರತದ ಕ್ರಾಂತಿ ಕೇಸರಿಗಳು ಅಲ್ಲಿಂದ ಮರೆಯಾದರು.
ಆ ಸಂದರ್ಭದಲ್ಲಿ ಇವರ ಚಲನವಲನಗಳ ಮೇಲೆ ಯಾವುದೇ ಗುಪ್ತಚರರ ಕಣ್ಣಿರಲಿಲ್ಲ. ಒಟ್ಟಾರೆ ಆಗಿನ ಸಮಯದಲ್ಲಿ ಇಡೀ ಇಂಗ್ಲೀಷ್ ಗುಪ್ತಚರಕ್ಕೆ ಲಕ್ವಾ ಹೊಡದಂತಾಗಿತ್ತು. ಹಗಲಿನಲ್ಲಿಯೇ ಭೀಕರ ಹತ್ಯೆಗಳಾಗಿ ಹೋಗಿದ್ದವು. ಇಡೀ ಇಂಗ್ಲೀಷ್ ಸರ್ಕಾರವೇ ಅಲ್ಲೋಲ ಕಲ್ಲೋಲವಾಯಿತು. ಈ ದೇಶದ ಜನತೆ ನಿದ್ದೆಯಲ್ಲಿದ್ದವರಲ್ಲ, ಗುಲಾಮರೂ ಅಲ್ಲ, ಎಚ್ಚರಗೊಂಡಿದ್ದಾರೆ.
ಅದು ಎಂತಹ ಎಚ್ಚರವೆಂದರೇ!? ಪೋಲೀಸ್ ಠಾಣೆಯ ಎದುರಿಗೆ ಪೋಲೀಸ್ ಅಧಿಕಾರಿಯನ್ನೇ ರಾಜಾರೋಷವಾಗಿ ಗುಂಡು ಹೊಡೆದು ಕೊಲ್ಲುತ್ತಾರೆಂದರೆ; ಇನ್ನು ಇಲ್ಲಿ ನಮ್ಮ ಅಧಿಕಾರ ನಡಿಯೋಲ್ಲ ಎಂಬುದು ಖಾತ್ರಿಯಾಗಿತ್ತು. ಸ್ಯಾಂಡರ್ಸ್ ಹತ್ಯೆಯಾದ ಬಳಿಕ ಅನೇಕ ಆಂಗ್ಲ ಅಧಿಕಾರಿಗಳು ಭಾರತ ಬಿಟ್ಟು ಪಲಾಯನ ಮಾಡಲಾರಂಭಿಸಿದರು. ಈ ಘಟನೆಯಿಂದ ಸ್ವತಃ ಅವರಿಗೆ 1857ರ ಮಹಾಸಂಗ್ರಾಮದ ನೆನಪಾಗಿರಲೂಬಹುದು.
ಮೊದಲು ತಮ್ಮ ವೈಯುಕ್ತಿಕತೆಯನ್ನು ನುಚ್ಚುನೂರು ಮಾಡಿ, ದೃಢ ನಿರ್ಧಾರ, ನಿರಂತರ ಪರಿಶ್ರಮದಲ್ಲಿ ತೊಡಗಿದರೆ ಯಾವ ಕಷ್ಟ ಕಾರ್ಪಣ್ಯಗಳೂ ನಿರಾಶೆಗೊಳಿಸುವುದಿಲ್ಲ. ಯಾವ ವೈಫಲ್ಯಗಳೂ ಕಂಗೆಡಿಸುವುದಿಲ್ಲ. ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು ವಿಜಯಶಾಲಿಗಳಾಗುತ್ತೀರಿ. ಈ ವೈಯುಕ್ತಿಕ ಗೆಲುವುಗಳು ಕ್ರಾಂತಿಯ ಬಹು ದೊಡ್ಡ ಆಸ್ತಿ.
ಸ್ವಾತಂತ್ರ್ಯ ಹೋರಾಟಗಾರರೆಂದರೆ ನಾಲ್ಕಾರು ಹೆಸರುಗಳಷ್ಟೇ ನೆನಪು ಮಾಡಿಕೊಳ್ಳುವ ಯುವಸಮೂಹ, ಈ ಚಿಗುರು ಮಿಸೆಯ ಯುವಕರು ಮಾಡಿದ ಮಹಾನ್ ಕಾರ್ಯದ ಬಗ್ಗೆ ಅವಲೋಕನವಾದರೂ ಈ ದಿನ ನಡೆಸಬೇಕೆಂಬ ಅಪೇಕ್ಷೆಯೊಂದಿಗೆ.
ಜೈ ಹಿಂದ್ !
ಸುರೇಶ ಮಾಗಿ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.