ಭರತ ಭೂಮಿ, ಭರತ ವರ್ಷ, ಭಾರತ… ನಮ್ಮ ದೇಶ ವೀರ ಪರಾಕ್ರಮಿ ರಾಜರಾಳಿದ ವೀರ ಭೂಮಿ. ಸಾವಿರಾರು ಬಾರಿ ಪರಕೀಯರು ನಮ್ಮ ದೇಶದ ಮೇಲೆ ಆಕ್ರಮಣ ನಡೆಸಿದರು. ಆಡಳಿತವನ್ನೂ ನಡೆಸಿದರು. ಆದರೆ ಇತಿಹಾಸದುದ್ದಕ್ಕೂ ಗಮನಿಸಬೇಕಾದ ಮುಖ್ಯವಾದ ಅಂಶ ಏನೆಂದರೆ ಭಾರತದ ಯಾವುದೇ ಸಾಮ್ರಾಜ್ಯ ಪರಕೀಯರಿಗೆ ಸುಲಭವಾಗಿ ಕೈಸೇರಲಿಲ್ಲ. ಬೃಹತ್ ಸಾಮ್ರಾಜ್ಯಗಳ ಮಾತು ಬದಿಗಿರಿಸಿ ಚಿಕ್ಕಪುಟ್ಟ ಪಾಳೇಗಾರರ ಆಡಳಿತವಿದ್ದ ರಾಜ್ಯಗಳೂ ತೀವ್ರ ಪ್ರತಿರೋಧ ಒಡ್ಡಿದ್ದವು ಎಂದು ಇತಿಹಾಸ ಸಾರಿ ಹೇಳುತ್ತವೆ. ಹೀಗಿದ್ದರೂ ನಮ್ಮ ದೇಶದಲ್ಲಿ ಪರಕೀಯರು ಹೇಗೆ ಬೇರೂರಿದರು? ಉತ್ತರ ಸ್ಪಷ್ಟವಾಗಿದೆ – ನಮ್ಮ ನ್ಯಾಯ, ನೀತಿ, ನಂಬಿಕೆ ಮತ್ತು ಪ್ರೀತಿ ವಿಶ್ವಾಸಗಳ ಜೀವನ ಶೈಲಿಯನ್ನು ಪರಕೀಯರು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಂಡರು. ವೀರ ಪರಾಕ್ರಮಿ ಪೃಥ್ವಿರಾಜ್ ಚೌಹಾಣ್ ತನ್ನಿಂದ ಸೋತ ಮೊಘಲ ದೊರೆಗೆ ಪ್ರಾಣಭಿಕ್ಷೆ ನೀಡುವ ಮೂಲಕ ತನ್ನ ಮೃತ್ಯುವನ್ನು ತಾನೇ ಆಹ್ವಾನಿಸಿಕೊಂಡರು. ಅಲ್ಲಾ ಉದ್ದೀನ್ ಖಿಲ್ಜಿ ಕೂಡಾ ರಾವತ್ ರತನ್ ಸಿಂಗರನ್ನು ಮೋಸದ ಬಲೆಯಲ್ಲಿ ಕೆಡವಿದ್ದನು. ಉತ್ತರದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದ ಹೊಯ್ಸಳ ಸಾಮ್ರಾಜ್ಯದ ಮೂರನೇ ಬಲ್ಲಾಳ ಅರಸರು, ವಿಜಯ ನಗರ ಸಾಮ್ರಾಜ್ಯ ಇವುಗಳು ಕೊನೆಯಾದದ್ದು ಶೌರ್ಯ ಪರಾಕ್ರಮಗಳ ಕೊರತೆಯಿಂದಲ್ಲ. ಬದಲಾಗಿ ಹಿಂದೂ ಅರಸರ ಅತಿಯಾದ ಮುಗ್ದತೆ ಮತ್ತು ನಂಬಿಕೆಯ ಸ್ವಭಾವದಿಂದ ಎಂದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಯುದ್ಧದಲ್ಲಿ ಗೆಲುವನ್ನು ಕಂಡ ಬಳಿಕವೂ ಶತ್ರುಗಳೊಂದಿಗೆ ಸೌಹಾರ್ದತೆಯನ್ನು ತೋರುವ, ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಹಿಂದೂ ಅರಸರು ಮೋಸಕ್ಕೊಳಗಾದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.
ಇಷ್ಟೊಂದು ವೀರರಾಳಿದ ನಾಡಿನ ಇತಿಹಾಸವು ಪಠ್ಯಪುಸ್ತಕಗಳಲ್ಲಿ ಮಾತ್ರ ಸೋಲಿನ ಇತಿಹಾಸ ಎಂದೇ ದಾಖಲಾಗಿವೆ. ಎಡಪಂಥದ ಲೇಖಕರು ಹಾಗೂ ಇತಿಹಾಸಗಾರರಿಂದ ತುಂಬಿರುವ ವಿಶ್ವವಿದ್ಯಾನಿಲಯದ ಗ್ರಂಥಾಲಯಗಳ ತುಂಬಾ ಹಾಗೂ ಪಠ್ಯಪುಸ್ತಕಗಳ ತುಂಬಾ ನಮ್ಮ ಇತಿಹಾಸದ ಸಾಹಸಗಳನ್ನು ದಾಖಲಿಸದೇ ಇರುವ ಪ್ರಯತ್ನ ಬಹುವಾಗಿ ನಡೆದಿದೆ. ನಾಝಿಗಳ ನರಮೇಧ, ಕಪ್ಪು ವರ್ಣೀಯರ ನರಮೇಧಗಳ ಕುರಿತು ಧಾರಾಳವಾಗಿ ಪುಸ್ತಕ ಲೇಖನಗಳನ್ನು ಬರೆಯುವ ಇತಿಹಾಸಕಾರರು ನಮ್ಮದೇ ಮಣ್ಣಿನಲ್ಲಿ ನಡೆದ ಭೀಕರ ನರಮೇಧ, ಹಾಗೂ ನ್ಯಾಯವಂಚನೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಾರೆ. ಈ ನರಮೇಧ ನಡೆದದ್ದು ಮತ್ತೆಲ್ಲೂ ಅಲ್ಲ, ವೀರ ಯೋಧರ ನಾಡು, ನಮ್ಮದೇ ಕೊಡಗಿನಲ್ಲಿ. ಬಹುಶಃ ನಮ್ಮಲ್ಲಿ 80% ಜನರಿಗೆ “ದೇವಾಟ್ ಪರಂಬು” ನಲ್ಲಿ ಟಿಪ್ಪು ಸುಲ್ತಾನನೆಂಬ ನಯವಂಚಕ ಮತಾಂಧನ ನರಮೇಧದ ಕುರಿತು ಅರಿವಿಲ್ಲ.
“ದೇವಾಟ್ ಪರಂಬು” ಎಂದರೆ ದೇವರು ನೃತ್ಯ ಮಾಡುವ ಸ್ಥಳ ಎಂದರ್ಥ. ಕಾವೇರಿ ತಾಯಿ ಹರಿಯುವ ಸ್ಥಳದ ಬದಿಯಲ್ಲಿನ 300 ಎಕರೆ ವಿಸ್ತಾರದ ಬಯಲು. ದೇವತೆಗಳು ಕಾವೇರಿಯ ನೀರಲ್ಲಿ ಮಿಂದು ನೃತ್ಯ ಮಾಡುವ ಸ್ಥಾನ. ಇಂತಹಾ ಪುಣ್ಯ ಭೂಮಿ ಮುಂದೆ ಭೀಭತ್ಸ್ಯ ನರಮೇಧಕ್ಕೆ ಸಾಕ್ಷಿಯಾಗಿ ಕಾವೇರಿ ರಕ್ತವರ್ಣಕ್ಕೆ ತಿರುಗುತ್ತಾಳೆ ಎಂಬ ಕಲ್ಪನೆ ಯಾವುದೇ ಕೊಡವರಿಗೆ ಇದ್ದಿರಲು ಸಾಧ್ಯವಿಲ್ಲ. ಮೈಸೂರಿನ ಆಡಳಿತ ಕೈಗೆತ್ತಿಕೊಂಡಿದ್ದ ಹೈದರಾಲಿ ತನ್ನ ವ್ಯಾಪಾರವನ್ನು ಮಲಬಾರ ಪ್ರದೇಶಕ್ಕೂ ವಿಸ್ತರಣೆ ಮಾಡಲು ಬಯಸಿದ್ದ, ಶ್ರೀರಂಗಪಟ್ಟಣದಿಂದ ಮಂಗಳೂರಿಗೆ ಹೋಗಬೇಕಾದಲ್ಲಿ ಕೊಡಗನ್ನು ಹಾದುಹೋಗಬೇಕಿತ್ತು. ಇದಕ್ಕೆ ಅಡ್ಡಿಯಾದದ್ದು ಕೊಡಗಿನ ಇಕ್ಕೇರಿ ರಾಜವಂಶದ ದೊರೆ. ಅದಕ್ಕಾಗಿ ಕೊಡಗನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ, ತನ್ನ ಸಾಮರ್ಥ್ಯದ ಅಹಂನೊಂದಿಗೆ ಅನೇಕ ಬಾರಿ ದಾಳಿ ನಡೆಸಿದ ಹೈದರಾಲಿ ಕೊಡಗಿನ ಯೋಧರೊಂದಿಗೆ ಗೆಲ್ಲಲಾರದೇ ಸೋತುಹೋಗುತ್ತಾನೆ.
1782 ರಲ್ಲಿ ಹೈದರಾಲಿ ಅಸುನೀಗಿದ ಬಳಿಕ ಟಿಪ್ಪು ಸುಲ್ತಾನ್ ಎಂಬ ಮತಾಂಧ ಕ್ರೂರಿ ಆಡಳಿತವನ್ನು ವಹಿಸಿಕೊಳ್ಳುತ್ತಾನೆ. ಹೈದರಾಲಿ ರಾಜಕೀಯವಾಗಿ ಮಹತ್ವಕಾಂಕ್ಷೆಯನ್ನು ಹೊಂದಿದ್ದ ದರೋಡೆಕೋರನಾಗಿದ್ದ, ಆದರೆ ಟಿಪ್ಪು ಕ್ರೂರಿ, ನಯವಂಚಕ ಹಾಗೂ ಮತಾಂಧನೂ ಆಗಿದ್ದ. ಅನೇಕ ಬಾರಿ ಮುಖಭಂಗವನ್ನು ಅನುಭವಿಸಿದ್ದ ಟಿಪ್ಪು ಕೊಡವರನ್ನು ಸೋಲಿಸುವ ಉದ್ದೇಶದಿಂದ ಆರು ಏಳು ಅಡಿ ಎತ್ತರದ ಉತ್ತರದ ಪಾಠಣರನ್ನು ಯುದ್ಧಕ್ಕೆ ಕಳುಹಿಸಿದರೆ ವೀರ ಕೊಡವರು ಅವರನ್ನೂ ತರಿದು ಹಾಕಿದರು, ಇಷ್ಟು ಮಾತ್ರವಲ್ಲದೆ ಟಿಪ್ಪು ತನ್ನ ಅತ್ಯಾಪ್ತರನ್ನು ಕಳುಹಿಸಿದರೆ ಕೊಡವರು ಅವರನ್ನೂ ಕೊಂದು ಹಾಕಿದರು. ಈ ಬಾರಿ ಟಿಪ್ಪು ತಾನೇ ತನ್ನೆಲ್ಲ ಸೈನ್ಯ ಬಲದೊಂದಿಗೆ ಕೊಡಗಿನ ಮೇಲೆ ಆಕ್ರಮಣ ನಡೆಸಿ ರಾಜನನ್ನು ಬಂಧಿಸಿ ಪಿರಿಯಾಪಟ್ಟಣದ ಕೋಟೆಯಲ್ಲಿ ಬಂಧಿಸಿಡಲು ಯಶಸ್ವಿಯಾದ. ಆದರೆ ಅನೇಕ ಬಾರಿ ಅನುಭವಿಸಿದ್ದ ಸೋಲು ಅವನ ಅಹಂಕಾರಕ್ಕೆ ಪೆಟ್ಟು ನೀಡಿತ್ತಲ್ಲ, ಅದಕ್ಕಾಗಿ ಅವನ ಸೈನ್ಯ ಹಿಂದೆಂದೂ ಕಾಣದ ರೀತಿಯಲ್ಲಿ ಕೊಡವರನ್ನು ಹಿಂಸಿಸಿತು. ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು, ಅತ್ಯಾಚಾರ, ದರೋಡೆಗಳು ಸಾಮಾನ್ಯವಾಯಿತು. ಇವೆಲ್ಲದರ ಮಧ್ಯದಲ್ಲೂ ವೀರ ಕೊಡವರು ಕೋಟೆಯಲ್ಲಿ ಬಂಧಿಸಿಟ್ಟಿದ್ದ ತಮ್ಮ ರಾಜನನ್ನು ಬಂಧನದಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದರು.
1786 ಭಾರತದ ಇತಿಹಾಸದಲ್ಲಿ ಕರಾಳ ಪುಟವಾಗಿ ದಾಖಲಾಗಬೇಕಾಗಿದ್ದ ಘಟನೆಯೊಂದು ಕೊಡಗಿನಲ್ಲಿ ನಡೆದೇ ಹೋಯಿತು. ಮಾತ್ರವಲ್ಲ ಇತಿಹಾಸದ ಪುಟಗಳಿಂದಲೂ ಕಣ್ಮರೆಯಾಯಿತು. ಕೊಡವರು ಅಪ್ರತಿಮ ವೀರರು, ಆದರೆ ಮುಗ್ಧರು ಹಾಗೂ ಶಾಂತಿ ಪ್ರಿಯರು. ಧೂರ್ತ ಟಿಪ್ಪು ಇದನ್ನು ಅರಿತುಕೊಂಡ “ನನ್ನ ಶತ್ರುಗಳು ಬ್ರಿಟೀಶರೇ ಹೊರತು ಕೊಡವರಲ್ಲ, ನಾವೆಲ್ಲರೂ ಶಾಂತಿಯಿಂದ ಬಾಳಬಹುದು ಅದಕ್ಕಾಗಿ ನಾವೊಂದು ಔತಣ ಕೂಟವನ್ನು ಏರ್ಪಡಿಸಿದ್ದೇವೆ. ದೇವಾಟ್ ಪರಂಬುವಿನಲ್ಲಿ. ಎಲ್ಲಾ ಕೊಡವರು ಕುಟುಂಬ ಸಮೇತರಾಗಿ ಬಂದು ಭಾಗವಹಿಸಿ” ಎಂಬ ಸಂಧಾನ ಮಾತುಕತೆಗೆ ಕರೆಯನ್ನು ಕಳುಹಿಸಿದ. ಹಿಂದಿನ ವರ್ಷ ಹುತ್ತರಿ ಹಬ್ಬವನ್ನೂ ಆಚರಿಸದಿದ್ದ ಸ್ನೇಹ ಜೀವಿ ಕೊಡವರು ಟಿಪ್ಪುವಿನ ಆಹ್ವಾನವನ್ನು ಒಪ್ಪಿಕೊಂಡರು. ಊರಿನ ಕೆಲವು ಹಿರಿಯರು ಟಿಪ್ಪುವಿನ ಕಪಟ ಸ್ವಭಾವದ ಕುರಿತಾಗಿ ಎಚ್ಚರಿಸಿದರೂ ಮುಗ್ಧ ಕೊಡವರು ಔತಣಕ್ಕಾಗಿ ಹೊರಟರು. ಜಾತ್ರೆಯಲ್ಲಿ ಭಾಗವಹಿಸುವ ಅದೇ ಸಂಭ್ರಮದಿಂದ ಹೆಂಗಸರು ಮಕ್ಕಳಾದಿ ಸುಮಾರು ಒಂದು ಲಕ್ಷ ಕೊಡವರು ದೇವಾಟ್ ಪರಂಬು ಮೈದಾನದಲ್ಲಿ ಸೇರಿದರು. ಆದರೆ… ಅಲ್ಲಿ ಬೆಟ್ಟ ಗುಡ್ಡಗಳಲ್ಲಿ ಅಡಗಿ ಕುಳಿತಿದ್ದ ಟಿಪ್ಪುವಿನ ಸೈನಿಕರು ನಿರಾಯುಧರಾಗಿ ಸಂಭ್ರಮದಿಂದ ಸೇರಿದ್ದ ಕೊಡವರ ಮೇಲೆ ದಾಳಿ ನಡೆಸಿದರು. ಅಂದು ನಡೆದ ನರಮೇಧದಲ್ಲಿ ಎಂಬತ್ತು ಸಾವಿರಕ್ಕೂ ಹೆಚ್ಚು ಕೊಡವರು ಬಲಿಯಾದರು. ಪಾವನ ಮಾತೆ ಕಾವೇರಿ ಹರಿದ ರಕ್ತದಿಂದ ಕೆಂಪಾದಳು. ದೇವಭೂಮಿಯಲ್ಲಿ ದಾನವರ ನೃತ್ಯ ನಡೆದಿತ್ತು.
ಬದುಕುಳಿದ ಕೊಡವರನ್ನು ಟಿಪ್ಪು ಪ್ರಾಣಿಗಳಂತೆ ಸರಪಳಿಯಿಂದ ಬಂಧಿಸಿ, ಶ್ರೀರಂಗಪಟ್ಟಣಕ್ಕೆ ಎಳೆದುಕೊಂಡು ಹೋದ. ಅವರನ್ನೆಲ್ಲ ಮತಾಂತರ ಮಾಡಲಾಯಿತು. ಪ್ರತಿರೋಧ ತೋರಿದವರನ್ನು ಹುಲಿಯ ಬೋನಿಗೆ ತಳ್ಳಲಾಯಿತು. ಹಲವರನ್ನು ಮೊಸಳೆಗೆ ಆಹಾರವಾಗಿ ನೀಡಲಾಗಿತ್ತು. ಕೊಡಗಿನ ಅನೇಕ ಕುಟುಂಬಗಳು ನಿರ್ನಾಮವಾಯಿತು. ಊರಿಗೆ ಊರೇ ಖಾಲಿಯಾಗಿತ್ತು. ಅಳಿದುಳಿದ ಊರುಗಳಲ್ಲಿ ದರೋಡೆ ನಡೆಸಿದ ಟಿಪ್ಪುವಿನ ಸೈನ್ಯ ಕೊಳ್ಳೆ ಹೊಡೆಯಿತು. ಯಾವ ವೀರರು ತಮ್ಮ ಇಂಚು ನೆಲವನ್ನೂ ಬಿಟ್ಟುಕೊಡದೆ ತಮ್ಮ ನೆಲಕ್ಕಾಗಿ, ಧರ್ಮಕ್ಕಾಗಿ ಹೋರಾಡಿದ್ದರೋ, ಅದೇ ನೆಲದಲ್ಲಿ ಕಪಟಕ್ಕೊಳಗಾಗಿ ಮಣ್ಣಾದರು. ಒಂದೆರಡು ಬಾರಿಯಲ್ಲಿ ಬರೋಬ್ಬರಿ 32 ಬಾರಿ ಕೊಡವರು ಟಿಪ್ಪುವಿಗೆ ಮಣ್ಣು ಮುಕ್ಕಿಸಿದ್ದರು. ಕೊಡವರ ಸಂಸ್ಕೃತಿಯಲ್ಲಿ ಮರಣವನ್ನಪ್ಪಿದವರ ಆತ್ಮದ ಶಾಂತಿಗಾಗಿ ಪ್ರಾರ್ಥನೆ ನಡೆಸಿ, ಪಿಂಡ ಪ್ರದಾನ ಮಾಡಿ ತಿಥಿ ಮಾಡುವ ಸಂಪ್ರದಾಯವಿದೆ. ಆದರೆ 1785 ರ ಡಿಸೆಂಬರ್ 12ರಂದು ಈ ಘಟನೆ ನಡೆದಾಗ ತಮ್ಮ ಧರ್ಮಕ್ಕಾಗಿ ತಮ್ಮೆಲ್ಲವನ್ನೂ ನೀಡಿ ಹುತಾತ್ಮರಾದ ವೀರ ಯೋಧರು, ಗರ್ಭಿಣಿ ಸ್ತ್ರೀಯರು ಮತ್ತು ಮುಗ್ಧ ಮಕ್ಕಳಿಗೆ ಯಾರು ತಾನೇ ಪಿಂಡ ಪ್ರದಾನ ಮಾಡಿದ್ದಾರೆ?? ಕಳೆದ 50 ವರ್ಷ ಹಿಂದಿನವರೆಗೂ ಕಾವೇರಿ ತೀರ್ಥ ಉದ್ಭವಕ್ಕೆ ದಕ್ಷಿಣ ಕೊಡಗಿನಿಂದ ಕಾಲ್ನಡಿಗೆಯಲ್ಲಿ ತೆರಳುವ ಕೊಡವರು “ದೇವಟ್ ಪರಂಬ್” ನಲ್ಲಿ ಕಾಡಿನ ಸೊಪ್ಪು ಮತ್ತು ಹೂವುಗಳನ್ನು ಸಮರ್ಪಣೆ ಮಾಡಿ ಗೌರವ ಸೂಚಿಸುವ ಪರಿಪಾಠವಿತ್ತು. ಆದರೆ 50 ವರ್ಷಗಳಿಂದೀಚೆಗೆ ಅದು ಕೂಡಾ ಇಲ್ಲದಾಗಿದೆ.
ನಮ್ಮ ಮಣ್ಣಿಗಾಗಿ ನಮ್ಮ ಧರ್ಮಕ್ಕಾಗಿ ಬಲಿದಾನ ನೀಡಿದ ಯೋಧರನ್ನು ನಾವಲ್ಲದೆ ಮತ್ಯಾರು ಸ್ಮರಿಸಬೇಕು?? ಇದಕ್ಕಾಗಿ ಈ ಬಾರಿ ತೀರ್ಥ ಉದ್ಭವದ ಸಂದರ್ಭದಲ್ಲಿ ಕೊಡಗಿನ ಯುವಕರು ದೇವಾಟ್ ಪರಂಬುವಿನಲ್ಲಿ ಗೌರವವನ್ನು ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಈ ಬಾರಿ ಡಿಸೆಂಬರ್ 12 ರಂದು ಬಲಿದಾನ ನೀಡಿದ ವೀರರ ಆತ್ಮಗಳಿಗೆ ಶಾಂತಿ ಲಭಿಸಲು ಮತ್ತು ಗೌರವ ಸಮರ್ಪಿಸಲು ದೀಪ ಬೆಳಗುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ.
ಇಂತಹ ಹಲವು ಘಟನೆಗಳು ಇತಿಹಾಸದಲ್ಲಿ ಘಟಿಸಿವೆ. ಆದರೆ ಈ ಘಟನೆ ಮಾತ್ರ ನಿಜಕ್ಕೂ ಅಮಾನವೀಯ. ಆದರೆ ನಾವು ಈ ಘಟನೆ ಕುರಿತು ಕಂಬನಿ ಮಿಡಿಯುವುದು ಮಾತ್ರವಲ್ಲ. 32 ಬಾರಿ ಟಿಪ್ಪು ಹಾಗೂ ಅವನ ಬಲಶಾಲಿ ಸೈನ್ಯವನ್ನೂ ಹಿಮ್ಮೆಟ್ಟಿಸಿದ ವೀರ ಯೋಧರ ಶೌರ್ಯ ಮತ್ತು ಸಾಹಸದ ಪ್ರತೀಕವನ್ನಾಗಿ ನೆನಪಿಸಿಕೊಳ್ಳಬೇಕು. ಅವರ ತ್ಯಾಗಗಳನ್ನೂ ಸ್ಮರಿಸುತ್ತಾ ನಮ್ಮ ಇತಿಹಾಸದಿಂದ ಬದಿಗಿರಿಸಲಾದ ಇಂತಹ ಅನೇಕ ಪರಾಕ್ರಮಗಳ ಸಾಹಸಗಾಥೆ ಮತ್ತು ನ್ಯಾಯವಂಚಕತನದ ನರಮೇಧಗಳ ಇತಿಹಾಸವನ್ನು ಜನರಿಗೆ ಪರಿಚಯಿಸಬೇಕು. ಎಡಪಂಥದ ಇತಿಹಾಸದ ಬದಲಾಗಿ ನೈಜ ಇತಿಹಾಸವನ್ನು ಸ್ಮರಿಸಲು, ತಿಳಿಸಲು ಈ ಸಣ್ಣ ಆದರೆ ಬಹು ದೊಡ್ಡ ಹೆಜ್ಜೆಯು ಪ್ರೇರಣೆಯನ್ನು ನೀಡಲಿ. ಕಂಬನಿ ಮಿಡಿಯುವಂತಾಗಲು ಕಾರಣವೇನೆಂದು ವಿಮರ್ಶಿಸುತ್ತಾ ಮುಂದಿನ ದಿನಗಳಲ್ಲಿ ಈ ದಿಶೆಯಲ್ಲಿ ಎಚ್ಚರಿಕೆಯನ್ನು ವಹಿಸಲು ಇತಿಹಾಸದ ಪಾಠವನ್ನು ಸ್ಮರಿಸಲು ಇದೊಂದು ದಾರಿಯಾಗಲಿ. ಇದು ನಮ್ಮ ಹಿರಿಯರ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತಾ ಪುಟಿದೇಳುವ ಸಮಯವಿದು.
ಬನ್ನಿ, ನಾವೆಲ್ಲರೂ ಜೊತೆಗೂಡಿ ಧರ್ಮ ರಕ್ಷಣೆಗಾಗಿ ತಮ್ಮನ್ನು ತಾವೇ ಸಮರ್ಪಿಸಿ, ಇತಿಹಾಸದಲ್ಲಿ ಅಜ್ಞಾತವಾಗುಳಿದ ವೀರರನ್ನು ಸ್ಮರಿಸೋಣ. ಅವರ ಆದರ್ಶಗಳನ್ನು ದಾರಿ ದೀಪವಾಗಿಸಿಕೊಂಡು ದೇಶವನ್ನು ಸದೃಢವಾಗಿ, ಸಮರ್ಥ, ಸ್ವಾವಲಂಬಿಯಾಗಿ ನಿರ್ಮಿಸಲು ಹೆಗಲಾಗೋಣ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.