ಹೈದರಾಬಾದ್: ಅದೆಷ್ಟೋ ಮಂದಿ ವಯೋವೃದ್ಧರು, ದಿವ್ಯಾಂಗರಿಗೆ ನೆರವಾಗುವಂತೆ ತೆಲಂಗಾಣದ ಹೈದರಾಬಾದ್ನ ಪೆದ್ದಪಲ್ಲಿಯ 14 ವರ್ಷದ ಮೂವರು ಬಾಲಕಿಯರು ಜಿಪಿಎಸ್ ಸೇವೆಯನ್ನು ಒಳಗೊಂಡಿರುವ ‘ಫ್ರೆಂಡ್ಲಿ ಸ್ಟಿಕ್’ ಹೆಸರಿನಲ್ಲಿ ವಾಕಿಂಗ್ ಸ್ಟಿಕ್ ಒಂದನ್ನು ಅಭಿವೃದ್ಧಿ ಮಾಡಿದ್ದಾರೆ.
ಪೆದ್ದಪಲ್ಲಿಯ ಜಿಲ್ಲಾ ಪರಿಷತ್ ಶಾಲೆಯೊಂದರ ವಿದ್ಯಾರ್ಥಿನಿ ಅಂಜಲಿ ಮತ್ತು ಅವರ ಸ್ನೇಹಿತರಾದ ಕೆ. ವ್ಯಶೀಲಿನಿ, ಎ. ಹರ್ಷಿತ ಎಂಬವರ ಜೊತೆಗೂಡಿ ತಮ್ಮ ಶಾಲೆಯ ಶಿಕ್ಷಕರ ಮಾರ್ಗದರ್ಶನದ ಜೊತೆಗೆ ಅತ್ಯಾಧುನಿಕ ಸ್ಟಿಕ್ ತಯಾರಿಸಿ ಸುದ್ದಿಯಾಗಿದ್ದಾರೆ. ಅಂಜಲಿ ತನ್ನ ನೆರೆಮನೆಯ 80 ವರ್ಷದ ವೃದ್ಧರೊಬ್ಬರು ರಸ್ತೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆಯ ನಂತರ ವೃದ್ಧರು, ವಿಕಲಾಂಗರಿಗೆ ಸಹಾಯಕವಾಗುವಂತಹ ಏನಾದರೂ ತಂತ್ರಜ್ಞಾನ ಕಂಡುಹಿಡಿಯಬೇಕು ಎಂದು ಚಿಂತಿಸಿ, ತಮ್ಮ ಸ್ನೇಹಿತರು, ಶಿಕ್ಷಕರ ಜೊತೆಗೂ ಚರ್ಚಿಸಿ ಈ ಜಿಪಿಎಸ್ ಅಳವಡಿಸಲಾದ ಹೊಸ ರೀತಿಯ ಫ್ರೆಂಡ್ಲಿ ಸ್ಟಿಕ್ ಅನ್ನು ಅಭಿವೃದ್ಧಿ ಮಾಡಿದ್ದಾರೆ.
ಅಂಜಲಿಯ ನೆರೆ ಮನೆಯ ವೃದ್ಧರು ರಸ್ತೆಯಲ್ಲಿ ಬಿದ್ದು, ಅರ್ಧ ಗಂಟೆಗೂ ಅಧಿಕ ಕಾಲ ಅಲ್ಲೇ ಪ್ರಜ್ಞಾಹೀನರಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಕೊಂಚ ಮೊದಲೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರೆ ಉಳಿಸಿಕೊಳ್ಳಲು ಸಾಧ್ಯವಿತ್ತು ಎಂಬುದಾಗಿ ವೈದ್ಯರು ತಿಳಿಸುತ್ತಾರೆ. ಈ ಘಟನೆಯನ್ನು ಆಳವಾಗಿ ಹಚ್ಚಿಕೊಂಡ ಅಂಜಲಿ ತನ್ನ ಸ್ನೇಹಿತರ ಜೊತೆಗೂ ಮಾತನಾಡಿ, ಅವರ ಸಹಾಯ ಪಡೆದುಕೊಂಡು ಈ ನೂತನ ವ್ಯವಸ್ಥೆಯೊಂದನ್ನು ಕಂಡು ಹಿಡಿದಿದ್ದಾರೆ.
ಈ ವಾಕಿಂಗ್ ಸ್ಟಿಕ್ ಜಿಪಿಎಸ್ ಮತ್ತು ಸಂವೇದಕಗಳ ವ್ಯವಸ್ಥೆಯನ್ನು ಒಳಗೊಂಡಿದೆ. ನಾಲ್ಕು ತಿಂಗಳಲ್ಲಿ ಶಿಕ್ಷಕರ ಸಹಾಯ ಪಡೆದು ಈ ವಾಕಿಂಗ್ ಸ್ಟಿಕ್ನ ಮೂಲ ಮಾದರಿಯೊಂದನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿ ಮಾಡಿದರು. ಈ ವಾಕಿಂಗ್ ಸ್ಟಿಕ್ ಅನ್ನು ಫೋಲ್ಡಿಂಗ್ ಚಯರ್ ಆಗಿಯೂ ಉಪಯೋಗಿಸಬಹುದಾಗಿದೆ. ಈ ಸ್ಟಿಕ್ ಅನ್ನು ಬಳಸುವವರಿಗೆ ರಾತ್ರಿ ವೇಳೆಯ ಸಂಚಾರಕ್ಕೆ ಅನುಕೂಲವಾಗುವಂತೆ ಸ್ಟಿಕ್ನಲ್ಲಿಯೇ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ಇದನ್ನು ಬಳಕೆ ಮಾಡುವವರು ತೊಂದರೆಗೊಳಗಾದ, ಕುಸಿದು ಬಿದ್ದ ಸಂದರ್ಭದಲ್ಲೆಲ್ಲಾ ಇದರಲ್ಲಿ ಅಳವಡಿಸಲಾಗಿರುವ ಜಿಪಿಎಸ್ ಅವರ ಕುಟುಂಬ ವರ್ಗಕ್ಕೆ ಮಾಹಿತಿ ರವಾನೆ ಮಾಡುತ್ತದೆ. ಅದರೊಂದಿಗೆ ಬಳಕೆದಾರರಿಗೆ ಅಪಾಯವನ್ನು ತಿಳಿಸುವ ಸಂವೇದಕಗಳನ್ನು ಸಹ ಈ ಸ್ಟಿಕ್ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.