ದಾಸ ಪರಂಪರೆಯ ಶ್ರೇಷ್ಠರಲ್ಲಿ ಕನಕದಾಸರೂ ಒಬ್ಬರು. ಕಾಗಿನೆಲೆಯ ಆದಿಕೇಶವನನ್ನೇ ಆರಾಧ್ಯ ದೈವ ಎಂದು ಬಗೆದು, ಲೋಕದಲ್ಲಿನ ಅಂಕು ಡೊಂಕುಗಳಿಗೆ ತಮ್ಮ ಸಾಹಿತ್ಯದ ಮೂಲಕವೇ ಮದ್ದರೆಯಲು ಹೊರಟವರು ಇವರು. ಮಾನವ ಕುಲವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವತ್ತ ಕನಕದಾಸರ ಕೀರ್ತನೆಗಳು ಹೆಚ್ಚು ಪ್ರಸ್ತುತ ಎನ್ನಬಹುದಾಗಿದೆ.
ಇವರು ಹಾವೇರಿ ಜಿಲ್ಲೆಯ ಬಾಡ ಎಂಬಲ್ಲಿನ ಬೀರಪ್ಪ -ಬಚ್ಚಮ್ಮ ದಂಪತಿಯ ಪುತ್ರ. ಕುರುಬರ ಜಾತಿಯಲ್ಲಿ ಜನನ. ಆರಂಭದಲ್ಲಿ ಇವರು ವಿಜಯನಗರ ಅರಸರ ದಂಡನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು. ಆದರೆ ಯುದ್ಧವೊಂದರಲ್ಲಿ ಉಂಟಾದ ಸೋಲು ಅವರನ್ನು ವಿರಾಗಿಯನ್ನಾಗಿ ಮಾಡುತ್ತದೆ. ಆ ಬಳಿಕ ಅವರು ದಾಸರಾಗುತ್ತಾರೆ. ತಿಮ್ಮಪ್ಪನಾಗಿದ್ದ ಅವರು ಕನಕದಾಸರಾಗಿ ಹೆಸರು ಬದಲಾಗುತ್ತದೆ. ಜೊತೆಗೆ ಬದುಕು ಸಹ. ಬಾಡದಲ್ಲಿ ಆದಿಕೇಶವನ ಮೂರ್ತಿಯನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಠಾಪಿಸಿ ದೇಗುಲವನ್ನು ಇವರು ಕಟ್ಟಿದರೆಂಬುದಾಗಿಯೂ ಇತಿಹಾಸ ಮಾಹಿತಿ ನೀಡುತ್ತದೆ. ಅಂದ ಹಾಗೆ ಇವರಿಗೆ ದಾಸ ದೀಕ್ಷೆ ನೀಡಿದವರು ವ್ಯಾಸರಾಯರು.
ಕನಕದಾಸರು 15-16 ನೇ ಶತಮಾನದ ಪ್ರಸಿದ್ಧ ಹರಿದಾಸರು. ಸಮಾಜದಲ್ಲಿ ಜಾತಿ ವ್ಯವಸ್ಥೆಯೇ ಅವ್ಯವಸ್ಥೆಯ ಸಾಗರವಾಗಿ, ಜನರು ಮೇಲು, ಕೀಳು ಎಂಬುದಾಗಿ ಬಡಿದಾಡುತ್ತಿದ್ದ ಸಮಯ. ಇದರಿಂದ ರೋಸಿ ಹೋದ ಕನಕದಾಸರು, ಜನರಲ್ಲಿನ ಜಾತಿಯ ಅಜ್ಞಾನದ ಕತ್ತಲನ್ನು ಕಳೆಯುವ ದೃಷ್ಟಿಯಿಂದ ತಮ್ಮ ಕೀರ್ತನೆಗಳ ಮೂಲಕವೇ ಜನರನ್ನು ಎಚ್ಚರಿಸಲು ಮುಂದಾದವರು. ‘ಕುಲ ಕುಲ ಕುಲವೆಂದು ಬಡಿದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?’ ಎಂದು ಪ್ರಶ್ನಿಸುವ ಕೆಲಸವನ್ನು ಮಾಡಿದವರು ಕನಕದಾಸರು. ಇವರ ಕೀರ್ತನೆಗಳಲ್ಲಿ ನಾವು ಭಗವಂತನ ಹಂಬಲ, ಅವನೆದುರಿನ ದೀನತೆ ಮತ್ತು ಅವನೊಳಗೆ ಅಧೀನನಾಗುವ ಮನೋಭಿಲಾಶೆಯನ್ನು ನಾವು ಕಾಣಬಹುದಾಗಿದೆ. ಮುಕ್ತಿ ಹೊಂದಬೇಕಾದರೆ ಭಕ್ತಿಯ ಹೊರತು ಅನ್ಯ ಮಾರ್ಗವಿಲ್ಲ ಎಂಬ ಭಾವವನ್ನು ಕನಕದಾಸರ ಕೀರ್ತನೆಗಳಲ್ಲಿ ನಾವು ಗಮನಿಸಬಹುದಾಗಿದೆ.
ಪ್ರಪಂಚದ ಎಲ್ಲಾ ಮನುಷ್ಯ, ಸಕಲ ಚರಾಚರ ವಸ್ತುಗಳ ಹುಟ್ಟಿಗೆ ಕಾರಣ ಆದಿಕೇಶವ. ಹುಟ್ಟಿಸಿದ ದೇವರು ಬದುಕು, ಬದುಕುವ ಬಗೆಯನ್ನು ಸಹ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕರುಣಿಸಿರುತ್ತಾನೆ. ಮತ್ತೆ ಚಿಂತೆ, ತಲ್ಲಣಗಳ ಜೊತೆಗೇಕೆ ಬದುಕುವುದು. ಆದಿಕೇಶವನಡಿಗೆ ದೀನತೆಯ ಜೊತೆಗೆ ಶರಣಾದರೆ ಅವನೇ ಬದುಕುವ ದಾರಿಗಳನ್ನು ತೋರಿಸುತ್ತಾನೆ. ಚಿಂತಿಸದಿರಿ ಎಂದು ತಮ್ಮ ಕೀರ್ತನೆಗಳ ಮೂಲಕವೇ ಹೇಳುತ್ತಾರೆ. ‘ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’ ಎಂಬಂತೆ ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ. ಬೆಟ್ಟದ ಮೇಲೆ ಹುಟ್ಟಿದ ಗಿಡ ಮರಕ್ಕೂ ಕಟ್ಟೆಯನು ಕಟ್ಟಿ ನೀರೆರೆಯುವವರಿಲ್ಲದೇ ಹೋದರೂ, ಹುಟ್ಟಿಸಿದ ದೇವರು ಬೇಕಾದ ವ್ಯವಸ್ಥೆ ಮಾಡಿದ್ದಾನೆ. ಹಾಗೆಯೇ ನಮ್ಮ ಬದುಕು. ಚಿತ್ತ ಪರಮಾತ್ಮನಲ್ಲಿ ಸಂದೇಹ ಮುಕ್ತವಾಗಿ ನೆಟ್ಟರೆ ನಮ್ಮನ್ನು ಕಾಪಾಡುವ ಹೊಣೆ ಅವನು ಹೊತ್ತುಕೊಳ್ಳುತ್ತಾನೆ. ವೃಥಾ ಚಿಂತೆ ಏಕೆ. ಬಂದದ್ದನ್ನು ಬಂದಂತೆ ಎದುರಿಸಿ ಅವನಿಚ್ಛೆಯಂತೆ ಬದುಕಿದರೆ ಮುಕ್ತಿ ಅವನೇ ತೋರುತ್ತಾನೆ ಎಂದು ಕನಕದಾಸರು ಸಮಾಜಕ್ಕೆ ಭರವಸೆ ತುಂಬುವ ಕೆಲಸವನ್ನು ಮಾಡಿದ್ದಾರೆ.
ಕನಕರ ಕೀರ್ತನೆಗಳನ್ನು ಎರಡು ನೋಟಗಳಲ್ಲಿ ನಾವು ಅರ್ಥೈಸಿಕೊಳ್ಳಬಹುದು. ಒಂದು ಭಕ್ತಿ. ಇನ್ನೊಂದು ಸಮಾಜ. ದೇವರು ಕೊಟ್ಟ ಬದುಕನ್ನು ಅರ್ಥಪೂರ್ಣವಾಗಿ ಬದುಕುವುದು ಹೇಗೆ ಮತ್ತು ಸಮಾಜ ಹೇಗಿರಬೇಕು ಅಥವಾ ಸಮಾಜದಲ್ಲಿನ ಸಮತೆ-ಅಸಮತೆಗಳಿಂದ ಮುಕ್ತರಾಗಿ ಬದುಕುವ ಬಗೆ ಹೇಗೆ ಎಂಬುದನ್ನು ಸಹ ಅವರ ಸಾಹಿತ್ಯ ನಮಗೆ ಪರಿಚಯಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಕೀರ್ತನೆಗಳಲ್ಲಿ ಸಾಮಾಜಿಕ ಆಯಾಮದ ನೋಟಗಳು ಹಾದು ಹೋಗಲು ಅವರ ಬದುಕೂ ಕಾರಣ ಎನ್ನಬಹುದು. ಅವರ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ, ಜಾತಿಯ ನೆಲೆಯಲ್ಲಿ ಅವರು ಕುರುಬರು. ಕೆಳವರ್ಗದ ವ್ಯಕ್ತಿ. ಆ ಕಾಲದಲ್ಲಿ ಹೀನ ಕುಲದಲ್ಲಿ ಹುಟ್ಟಿದವರೆಂದರೆ ಸಮಾಜ ಅವರನ್ನು ನೋಡುವ, ಬಳಸಿಕೊಳ್ಳುವ ದೃಷ್ಟಿಕೋನ ಸಹ ಬೇರೆಯೇ ಇತ್ತು ಎಂಬುದನ್ನು ನಾವಿಲ್ಲಿ ಬಿಡಿಸಿ ಹೇಳಬೇಕಾಗಿಲ್ಲ. ಉಡುಪಿಯ ಕನಕನ ಕಿಂಡಿಯ ಐಹಿತ್ಯ ಸಹ ಆ ಕಾಲದಲ್ಲಿನ ಸಾಮಾಜಿಕ ಪರಿಸ್ಥಿತಿಗೆ ಸಾಕ್ಷಿ ಎಂಬಂತಿದೆ. ಮೇಲ್ವರ್ಗದ ಜನರ ಕಾರಣಕ್ಕೆ ದೇಗುಲದೊಳಗೆ ದೇವರನ್ನು(ಕೃಷ್ಣ) ನೋಡಲಾಗದ ಕನಕನಿಗೆ, ಶ್ರೀಕೃಷ್ಣನೇ ಒಲಿದು ತನ್ನ ಸ್ಥಾನವನ್ನೇ ಬದಲಿಸಿ ಕಿಂಡಿಯ ಮೂಲಕ ದರ್ಶನ ನೀಡಿದ್ದು, ದೇವರಿಗೆ ಜಾತಿಯಿಲ್ಲ. ಅವನಿಗೆ ಎಲ್ಲರೂ ಒಂದೇ ಎಂಬುದಕ್ಕೆ ಮತ್ತು ನೈಜ ಭಕ್ತಿಗೆ ದೇವರು ಒಲಿಯುತ್ತಾನೆ. ಅವನಿಗೆ ವರ್ಗ ತಾರತಮ್ಯಗಳ ಹಂಗಿಲ್ಲ. ಪರಿಶುದ್ಧ ಮನಸ್ಸೇ ದೇವರ ಆಲಯ ಎಂಬುದನ್ನು ಸಾಕ್ಷೀಕರಿಸಿದಂತಿದೆ. ಈ ಕಥೆ ಕನಕನ ಪರಿಶುದ್ಧತೆಗೂ ಕೈಗನ್ನಡಿ ಎನ್ನಬಹುದು.
ತಮ್ಮ ಹಲವು ಕೀರ್ತನೆಗಳಲ್ಲಿ ಭಕ್ತಿಯ ದಾರಿ, ಮುಕ್ತಿಯ ಹಾದಿಯನ್ನು ಜನರಿಗೆ ತಿಳಿಸಿದವರು ಕನಕದಾಸರು. ಜೊತೆಗೆ ಅವರ ಸಾಹಿತ್ಯದಲ್ಲಿನ ತರ್ಕ, ಅನ್ನಿಸಿದ್ದನ್ನು ಹೇಳುವ ಗುಣ, ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ಸಿಡಿದೇಳುವ ಧೈರ್ಯ, ಸಮಾಜದ ಪಿಡುಗುಗಳ ಬಗ್ಗೆ ನೋವು, ಅವುಗಳನ್ನು ತಿದ್ದುವ ಹಠ, ಕಾಳಜಿ ಮೊದಲಾದವುಗಳು ಕನಕದಾಸರನ್ನು ಇಂದಿಗೂ ಪ್ರಸ್ತುತರನ್ನಾಗಿರಿಸಿವೆ ಎಂದರೆ ಅತಿಶಯವಲ್ಲ. ಅವರ ಸಾಹಿತ್ಯ ಪರಂಪರೆಯ ಬಗ್ಗೆ ಹೇಳುವುದಾದರೆ ಅದೊಂದು ಅನುಭವ ಮತ್ತು ಅನುಭವಗಳ ಆಧಾರದಲ್ಲಿ ಸೃಷ್ಟಿಯಾದ ಮೌಲ್ಯಯುತ ಸಂಪತ್ತು ಎಂದು ನಿಸ್ಸಂಶಯವಾಗಿ ಹೇಳಬಹುದು.
ಭಕ್ತಿಗೆ ಸಂಬಂಧಿಸಿದಂತೆ ಕನಕದಾಸರು ಅನೇಕ ಕೀರ್ತನೆಗಳನ್ನು ಬರೆದಿದ್ದು, ತನು ನಿನ್ನದು ಜೀವನ ನಿನ್ನದು, ತಲ್ಲಣಿಸದಿರು ಕಂಡ್ಯ ತಾಳು ಮನವೇ, ತೊರೆದು ಜೀವಿಸಬಹುದೆ, ಹರಿ ನಿನ್ನ ಚರಣಗಳ, ನನ್ನಿಂದ ನಾನೇ ಜನಿಸಿ ಬಂದೆನೆ ದೇವ, ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ, ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಮೊದಲಾದವುಗಳು ಮುಖ್ಯವಾಗುತ್ತವೆ. ಅದರಂತೆ ಸಾಮಾಜಿಕ ಎಚ್ಚರವನ್ನು ಮೂಡಿಸುವ ದೃಷ್ಟಿಯಿಂದ ಹೇಳುವುದಾದರೆ, ಕಣಿಯ ಕೇಳ ಬಂದೆ, ಕುಲ ಕುಲ ಕುಲವೆಂದು ಹೊಡೆದಾಡದಿರಿ, ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಪ್ರಾಮುಖ್ಯತೆ ಪಡೆದಿವೆ. ಇವಿಷ್ಟೇ ಅಲ್ಲದೆ ಇವರು ಮೋಹನ ತರಂಗಿಣಿ, ಹರಿಭಕ್ತಿಸಾರ, ನಳಚರಿತ್ರೆ, ರಾಮಧಾನ್ಯ ಚರಿತೆ ಮೊದಲಾದವುಗಳನ್ನು ಸಹ ಬರೆದಿದ್ದು, ಕಾವ್ಯ ಮತ್ತು ಕೀರ್ತನೆಗಳೆರಡನ್ನೂ ರಚಿಸಿರುವ ಶ್ರೇಷ್ಠ ಸಾಹಿತಿಯಾಗಿ ಕಂಡುಬರುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ ಭಕ್ತಿ ಮತ್ತು ಸಾಮಾಜಿಕ ಎಚ್ಚರವನ್ನು ಮೂಡಿಸುವಲ್ಲಿ ಅಂದಿನಿಂದ ಇಂದಿನವರೆಗೂ ಕನಕದಾಸರ ಸಾಹಿತ್ಯ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಸಮಾಜವನ್ನು ಬದಲಾಯಿಸುವ ನಿಟ್ಟಿನಲ್ಲಿ ಜನರ ಕಣ್ಣು ತೆರೆಸುವ ಕೆಲಸವನ್ನು ಕನಕದಾಸರ ಕೀರ್ತನೆಗಳು ಮಾಡುತ್ತಿವೆ. ಹಾಗೆಯೇ ನಿಸ್ವಾರ್ಥ ಭಕ್ತಿಯಿಂದ ಅಸಾಧ್ಯ ಯಾವುದೂ ಇಲ್ಲ ಎಂಬುದಕ್ಕೂ ಜ್ವಲಂತ ಉದಾಹರಣೆಯಾಗಿ ನಿಲ್ಲುತ್ತವೆ ಕನಕದಾಸರ ಸಾಹಿತ್ಯ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.