ಜಮ್ಮು ಮತ್ತು ಕಾಶ್ಮೀರದ ನಗ್ರೋಟ ಟೋಲ್ ಪ್ಲಾಝಾ ಬಳಿ ಗುರುವಾರ ಬೆಳ್ಳಂಬೆಳಗ್ಗೆ ಭದ್ರತಾಪಡೆಗಳು 4 ಪಾಕಿಸ್ಥಾನ ಮೂಲದ ಜೈಶೇ-ಇ- ಮೊಹಮ್ಮದ್ ಉಗ್ರರನ್ನು ಸಂಹಾರ ಮಾಡಿವೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊತ್ತು ಇವರುಗಳು ಕಾಶ್ಮೀರದ ಒಳಗೆ ನುಸುಳಿದ್ದರು. ದೊಡ್ಡಮಟ್ಟದ ದುಷ್ಕೃತ್ಯವನ್ನು ನಡೆಸುವ ಹೊಂಚು ಹಾಕಿದ್ದರು. ಇವರ ವಧೆ ದೇಶದ ಭದ್ರತೆಗೆ ಸಂಬಂಧಿಸಿದಂತೆ ಸೇನಾಪಡೆಗಳಿಗೆ ಸಿಕ್ಕ ಅತಿ ದೊಡ್ಡ ಯಶಸ್ಸು ಇದಾಗಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಹೊರಹೊಮ್ಮಿದ ಬಳಿಕ ಪಾಕಿಸ್ಥಾನ ಅಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ಇನ್ನಿಲ್ಲದಂತೆ ಪ್ರಯತ್ನ ಮಾಡುತ್ತಿದೆ. ಶತಾಯಗತಾಯ ರಕ್ತಪಾತ ಮಾಡಬೇಕೆನ್ನುವ ಹಪಹಪಿಗೆ ಬಿದ್ದಿರುವ ಉಗ್ರರ ಮೂಲಸ್ಥಾನ ಪಾಕಿಸ್ಥಾನದ ಸೇನಾಪಡೆಯು ಉಗ್ರರನ್ನು ಅಕ್ರಮವಾಗಿ ಒಳನುಸುಳಿ ಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ಆದರೆ ತನ್ನ ದುರುದ್ದೇಶವನ್ನು ಇದುವರೆಗೆ ಯಶಸ್ಸನ್ನು ಪಡೆಯುವಲ್ಲಿ ಅದು ವಿಫಲವಾಗಿದೆ. ಇದಕ್ಕೆ ಕಾರಣ ಭಾರತೀಯ ಭದ್ರತಾ ಪಡೆಗಳ ಸಮನ್ವಯದ ಕಾರ್ಯಾಚರಣೆ, ವೃತ್ತಿಪರತೆ, ಜಾಗರೂಕ ಪ್ರಜ್ಞೆ ಮತ್ತು ಸವಾಲು ಎದುರಿಸುವ ದಿಟ್ಟತನ.
ಭಾರತದೊಳಗೆ ನುಸುಳುವವರನ್ನು ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ ಎಂಬ ಕಠಿಣ ಸಂದೇಶವನ್ನು ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ನರಾವಣೆ ಅವರು ಪಾಕಿಸ್ಥಾನಕ್ಕೆ ರವಾನಿಸಿದ್ದಾರೆ. ನಾಲ್ಕು ಮಂದಿ ಜೈಶ್-ಇ-ಮೊಹಮ್ಮದ್ ಉಗ್ರರ ಹತ್ಯೆ ಪಾಕಿಸ್ಥಾನಕ್ಕೆ ದಿಟ್ಟ ಸಂದೇಶವನ್ನೇ ರವಾನೆ ಮಾಡಿದೆ. ತನ್ನ ಸೇನೆಯ ಮೂಲಕ ಭಾರತವನ್ನು ಎದುರಿಸಲು ಶಕ್ತಿ ಇಲ್ಲದ ಪಾಕಿಸ್ಥಾನ ಉಗ್ರರನ್ನು ಬಿಟ್ಟು ಭಾರತವನ್ನು ಅಲುಗಾಡಿಸುವ ಪ್ರಯತ್ನ ಮಾಡುತ್ತಿದೆ. ಇಂತಹ ಕುತಂತ್ರಗಳಿಂದ ಭಾರತವನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವುದನ್ನು ಆ ರಾಷ್ಟ್ರ ಇನ್ನಾದರೂ ಕಲಿತುಕೊಂಡರೆ ಒಳಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿದೆ. ಶಸ್ತ್ರಾಸ್ತ್ರಗಳನ್ನು ಹಿಡಿದು ಹಿಂಸೆ ಮಾರ್ಗವನ್ನು ಅನುಸರಿಸುತ್ತಿರುವ ಉಗ್ರರ ಮನವೊಲಿಸುವ ಕಾರ್ಯವನ್ನು ಕೂಡ ಸೇನಾಪಡೆ ಮಾಡುತ್ತಿದೆ. ಶರಣಾಗಲು ಬಯಸದವರನ್ನು ಸದೆಬಡಿಯುವ ಕಾರ್ಯ ಮಾಡುತ್ತಿದೆ. ಕಾಶ್ಮೀರಿ ಯುವಕರು ಉಗ್ರವಾದದ ಆಕರ್ಷಿತರಾಗಲು ಕೂಡ ಪಾಕಿಸ್ಥಾನದ ಕುತಂತ್ರವೇ ಕಾರಣ.
ಪಾಕಿಸ್ಥಾನ ಜಮ್ಮು ಮತ್ತು ಕಾಶ್ಮೀರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಾದಿತ ಪ್ರದೇಶ ಎಂದು ಬಿಂಬಿಸಲು ನಾನಾ ಕಸರತ್ತು ಮಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದಬ್ಬಾಳಿಕೆಯನ್ನು ನಡೆಸಲಾಗುತ್ತಿದೆ, ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಸುಳ್ಳುಗಳನ್ನು ಹರಡಲು ಅದು ಪ್ರಯತ್ನಿಸುತ್ತಿದೆ. ಇದಕ್ಕಾಗಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಕಾರ್ಯವನ್ನು ಅದು ಮಾಡುತ್ತಿದೆ. ಅದಕ್ಕಾಗಿ ಅಲ್ಲಿನ ಯುವಕರನ್ನು ದಾರಿ ತಪ್ಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುವ ಪ್ರಯತ್ನ ನಡೆಸುತ್ತಿದೆ. ಅದೃಷ್ಟವಶಾತ್ ಅದರ ಮಾತನ್ನು ಯಾರೂ ಕೂಡ ನಂಬುವ ಸ್ಥಿತಿಯಲ್ಲಿ ಇಲ್ಲ.
ಉಗ್ರರನ್ನು ಒಳನುಸುಳಿಸುವ ಅದರ ಚಾಳಿಯನ್ನು ಅದು ಹೀಗೆಯೇ ಮುಂದುವರಿಸಿದರೆ ಮುಂದೊಂದು ದಿನ ತಕ್ಕ ಬೆಲೆಯನ್ನು ತೆರಬೇಕಾದ ಪರಿಸ್ಥಿತಿ ಖಂಡಿತವಾಗಿಯೂ ಉದ್ಭವವಾಗುತ್ತದೆ. ಬೇರೆ ದೇಶದ ಭೂಪ್ರದೇಶದ ಮೇಲೆ ಕಣ್ಣು ಹಾಕುವ ಬದಲು ಅದು ತನ್ನ ಸಮಸ್ಯೆಗಳತ್ತ ಗಮನ ಹರಿಸಿದರೆ ಉತ್ತಮ ಭವಿಷ್ಯ ಅದಕ್ಕೆ ಪ್ರಾಪ್ತವಾಗುತ್ತದೆ. ಇಲ್ಲವಾದರೆ ಮುಂದೊಂದು ದಿನ ಪಾಕಿಸ್ಥಾನ ಎಂಬ ದೇಶ ಇತ್ತು ಎಂಬುದು ಕೂಡ ಇತಿಹಾಸವಾಗಬಹುದು.
✍️ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.