ನವದೆಹಲಿ: ಕೊರೋನಾ ಸಂಕಷ್ಟ ಮತ್ತು ಲಾಕ್ಡೌನ್ಗಳ ಹೊರತಾಗಿಯೂ ಹೆದ್ದಾರಿಗಳಲ್ಲಿ ಸ್ವಯಂಚಾಲಿತ-ಫಾಸ್ಟ್ಯಾಗ್ ಟೋಲ್ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಾಹಿತಿ ನೀಡಿದೆ.
ಸರ್ಕಾರದ ಹೆದ್ದಾರಿಗಳ ಎಲೆಕ್ಟ್ರಿಕ್ ಟೋಲ್ ಸಂಗ್ರಹ 2 ಕೋಟಿ ರೂ. ಗಳಷ್ಟಾಗಿದೆ. ಹಾಗೆಯೇ ಸ್ವಯಂಚಾಲಿತವಾಗಿ ಪ್ರತಿ ನಿತ್ಯ ಸುಮಾರು 75 ಕೋಟಿ ರೂ. ಗಳನ್ನು ಟೋಲ್ ರೂಪದಲ್ಲಿ ಸಂಗ್ರಹ ಮಾಡಲಾಗುತ್ತಿದೆ ಎಂದು ಎನ್ಎಚ್ಎಐ ಮಾಹಿತಿ ನೀಡಿದೆ. ಇತ್ತೀಚೆಗೆ ಫಾಸ್ಟ್ಯಾಗ್ಗಳ ಬಳಕೆ ಹೆಚ್ಚಳವಾಗುತ್ತಿದೆ. 2021 ರ ಜನವರಿ ಒಂದರಿಂದ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ ಎಂಬ ನಿಯಮವನ್ನು ಕೇಂದ್ರ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಸದ್ಯ ಫಾಸ್ಟ್ಯಾಗ್ ಬಳಕೆ ಹೆಚ್ಚಳದಿಂದಾಗಿ ದಿನಕ್ಕೆ ಸುಮಾರು 92 ಕೋಟಿ ರೂ. ಗಳಷ್ಟು ಟೋಲ್ ಸಂಗ್ರಹ ಸಾಧ್ಯವಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿದೆ. ಕಳೆದ ಬಾರಿ ಇದೇ ವೇಳೆಗೆ ದಿನಕ್ಕೆ 70 ಕೋಟಿ ರೂ. ಗಳಷ್ಟು ಟೋಲ್ ಸಂಗ್ರಹವಾಗುತ್ತಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.
ಮುಂದಿನ ಜನವರಿಯಿಂದ ಫಾಸ್ಟ್ಯಾಗ್ ಬಳಕೆ ಕಡ್ಡಾಯಕ್ಕೆ ಪೂರಕ ಕ್ರಮ ಕೈಗೊಳ್ಳಲಾಗಿದೆ. ಥರ್ಡ್ ಪಾರ್ಟಿ ಲೈಸನ್ಸ್ ಹೊಂದಬೇಕಾದರೆ ಫಾಸ್ಟ್ಯಾಗ್ ಕಡ್ಡಾಯ ಎಂದು ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಇದಕ್ಕೆ ಅನುಕೂಲವಾಗುವಂತೆ ಮತ್ತಷ್ಟು ಬಳಕೆದಾರ ಸ್ನೇಹಿ ಕ್ರಮಗಳನ್ನು ಅಳವಡಿಸಲಾಗುವುದು. ಜೊತೆಗೆ ಫಾಸ್ಟ್ಯಾಗ್ ಉಪಯೋಗಗಳ ವಿಸ್ತರಣೆ, ಉತ್ತೇಜನಕ್ಕೆ ಪೂರಕವಾಗುವಂತೆ ಕ್ರಮ ಕೈಗೊಳ್ಳುವುದಾಗಿಯೂ ಎನ್ಎಚ್ಎಐ ತಿಳಿಸಿದೆ.
ಹೈದರಾಬಾದ್ನಲ್ಲಿ ವಾಹನ ನಿಲುಗಡೆಗೆ ಸಹ ಫಾಸ್ಟ್ಯಾಗ್ ಮೂಲಕವೇ ಶುಲ್ಕ ಪಾವತಿ ಮಾಡಲು ಪೂರಕವಾಗುವಂತೆ ಪ್ರಾಯೋಗಿಕ ಕ್ರಮ ಕೈಗೊಳ್ಳಲಾಗಿದೆ. ಭಾರತದಲ್ಲಿ 50 ಮಿಲಿಯನ್ಗೂ ಅಧಿಕ ವಾಹನಗಳಿವೆ. ಇದರಲ್ಲಿ ಪ್ರತಿನಿತ್ಯ ಎಲ್ಲಾ ವಾಹನಗಳು ಬಳಕೆಯಾಗುವುದಿಲ್ಲವಾದರೂ, ಎಲ್ಲಾ ವಾಹನಗಳಿಗೂ ಟ್ಯಾಗ್ ಕಡ್ಡಾಯ ಮಾಡುವ ಗುರಿ ಸರ್ಕಾರಕ್ಕಿದೆ. ಇದಕ್ಕಾಗಿ ಕ್ಯಾಶ್ ಬ್ಯಾಕ್ ಸೌಲಭ್ಯ ಸಹ ನೀಡಲು ಸರ್ಕಾರ ಯೋಚಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಫಾಸ್ಟ್ಯಾಗ್ನಲ್ಲಿ ಟೋಲ್ ನೀಡಲು ಬೇಕಾದಷ್ಟು ಮೊತ್ತ ಇರದೇ ಹೋದಲ್ಲಿ ದುಪ್ಪಟ್ಟು ಟೋಲ್ ವಿಧಿಸುವ ಕ್ರಮವಿದೆ. ಸದ್ಯ ಈ ಪದ್ಧತಿಯನ್ನು ತೊಡೆದು ಹಾಕುವ ನಿಟ್ಟಿನಲ್ಲಿಯೂ ಸರ್ಕಾರ ಯೋಜನೆ ರೂಪಿಸುತ್ತಿದೆ. ಜೊತೆಗೆ ಸ್ಥಳದಲ್ಲೇ ರಿಚಾರ್ಜ್ ಮಾಡುವ ವ್ಯವಸ್ಥೆ ಅಳವಡಿಕೆಗೂ ಕ್ರಮ ಕೈಗೊಳ್ಳುವ ಭರವಸೆಯನ್ನು ಸರ್ಕಾರ ನೀಡಿದೆ. ಫಾಸ್ಟ್ಯಾಗ್ ವ್ಯವಸ್ಥೆಯಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ಸುಮಾರು 100 ಟೋಲ್ ಪ್ಲಾಜಾಗಳಿವೆ ಎಂದು ಎನ್ಎಚ್ಎಐ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.