ಕಳೆದ ಕೆಲವು ವರ್ಷಗಳಲ್ಲಿ ಜಗತ್ತು ಅನೇಕ ಬದಲಾವಣೆಗಳನ್ನು ಕಂಡಿದೆ. ಸಂಪೂರ್ಣ ಜಗತ್ತು ಬೆರಳ ತುದಿಯಲ್ಲಿದೆಯೋ ಎಂಬಂತೆ ಅನೇಕ ಕಾರ್ಯಗಳು, ಕೆಲಸಗಳು ನಮ್ಮ ಕೈಯ್ಯಲ್ಲಿನ ಮೊಬೈಲ್ ಮುಖಾಂತರವೇ ನಡೆಯುವ ಸಮಯವಿದು. ಈ ಮೊಬೈಲ್ ಮಾಯೆಯು ಎಷ್ಟು ಉತ್ತಮವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ನಮ್ಮನ್ನು ಆಲಸಿಗಳನ್ನಾಗಿಸಿದೆ ಎಂಬುದು ಸುಳ್ಳಲ್ಲ. ವಾರದ ಕೊನೆಯಲ್ಲೂ, ತಿಂಗಳ ಕೊನೆಗೂ ಮನೆಯವರೆಲ್ಲರ ಅಗತ್ಯಗಳಿಗೆ ಅನುಗುಣವಾಗಿ ಮನೆ ಸಾಮಾನುಗಳಲ್ಲಿ ಹೊರ ಹೋಗಿ ಕೊಂಡು ತರುತ್ತಿದ್ದ ನಾವು ಇತ್ತೀಚಿಗೆ ಎಲ್ಲವನ್ನೂ ಆನ್ಲೈನ್ ಮುಖಾಂತರ ತರಿಸುವ ಹೊಸ ಕಾಲಘಟ್ಟದಲ್ಲಿದ್ದೇವೆ. “ಅಯ್ಯೋ ಅಲ್ಲಿವರೆಗೆ ಹೋಗುವ ಅಗತ್ಯವೇನಿದೆ, ಆನ್ಲೈನ್ನಲ್ಲಿ ಖರೀದಿಸಿದರೆ ಮನೆ ಬಾಗಿಲಿಗೆ ಸಾಮಾನು ತಲುಪಿಸಿ ಹೋಗುತ್ತಾರೆ” ಎಂಬ ಮಾತುಗಳು ಪ್ರತಿಯೊಂದು ಮನೆಯಲ್ಲೂ ಕೇಳಿ ಬರುತ್ತಿದೆ.
ಒಂದು ಸುಂದರವಾದ ಸಮಯವಿತ್ತು. ಮಾರ್ಗದ ಕೊನೆಯಲ್ಲಿನ ಅಂಗಡಿಯಿಂದ ತಿಂಗಳಿನ ಸಾಮಾನನ್ನು ಕೊಂಡು ತರಲಾಗುತ್ತಿತ್ತು, ವಾರದ ಮಧ್ಯದಲ್ಲೂ ತಿಂಗಳ ಮಧ್ಯದಲ್ಲೋ ಸಾಮಾನು ಬೇಕಾದ ಸಂದರ್ಭದಲ್ಲಿ ಅಲ್ಲಿ ಹೋಗಿ ಸಾಮಾನು ತೆಗೆದುಕೊಂಡರೆ ಮುಗಿಯಿತು, ಆ ರಸ್ತೆಯ ಪ್ರತಿಯೊಂದು ಮನೆಯ ಹೆಸರಿನಲ್ಲೂ ಒಂದೊಂದು ಪುಸ್ತಕವನ್ನು ಅಂಗಡಿಯ ಯಜಮಾನ ತೆಗೆದಿಡುತ್ತಿದ್ದ. ಪ್ರತಿ ಬಾರಿ ಸಾಮಾನು ಕೊಂಡಾಗಲೂ ಸಾಮಾನಿನ ಹೆಸರು ತೂಕ ಮತ್ತು ಕ್ರಯ ಆ ಪುಸ್ತಕದ ಪುಟಗಳಲ್ಲಿ ದಾಖಲಿಸಲ್ಪಡುತ್ತಿತ್ತು. ಮಕ್ಕಳು, ಹೆಂಗಸರು ಹೋಗಿ ಸಾಮಾನು ಪಡೆದುಕೊಂಡರಾಯ್ತು. ತಿಂಗಳ ಕೊನೆಯಲ್ಲಿ ಆ ಲೆಕ್ಕವನ್ನು ಚುಕ್ತಾ ಮಾಡಲಾಗುತ್ತಿತ್ತು. ಪ್ರತಿಯೊಂದು ಮನೆಯ ಸದಸ್ಯರೂ ಅಂಗಡಿಯಾತನಿಗೆ ಪರಿಚಯಸ್ಥರೇ. ಮೋಸ ಇತ್ಯಾದಿಗಳ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಅನೇಕ ಬಾರಿ ಅಳುವ ಮಕ್ಕಳಿಗೆ ಅಂಗಡಿಯ ಯಜಮಾನ ಪ್ರೀತಿಯಿಂದ ಚಾಕಲೇಟು ತಿನ್ನಿಸುತ್ತಿದ್ದ ದಿನಗಳೂ ಇತ್ತು.
ಆದರೆ ಇಂದು ಕಾಲ ಬದಲಾಗಿದೆ, ನಾವೆಲ್ಲರೂ ಆನ್ಲೈನ್ ಎಂಬ ಮೋಹದಲ್ಲಿ ಸಿಲುಕಿದ್ದೇವೆ. ತಿಂಗಳ ಕೊನೆಗೆ ಲೆಕ್ಕ ಮಾಡುವ ಯಾವುದೇ ಅಂಗಡಿಯಾತ ನಮಗೆ ಕಾಣಸಿಗುವುದಿಲ್ಲ ಆದರೆ ಕೋವಿಡ್ ಸಂಕಷ್ಟ ಅನೇಕರ ಕಣ್ಣು ತೆರೆಸಿತು. ಮನೆ ಬಾಗಿಲಿಗೆ ಸಾಮಗ್ರಿಗಳನ್ನು ತಲುಪಿಸುತ್ತಿದ್ದ ದೊಡ್ಡ ದೊಡ್ಡ ಸಂಸ್ಥೆಗಳೇ ಕೊರೋನಾ ಕೆಲಸವನ್ನು ಸ್ಥಗಿತಗೊಳಿಸಿದಾಗ, ಕೊರೋನಾ ಹರಡುವ ಭಯದ ಮಧ್ಯದಲ್ಲೂ ನಮ್ಮ ಸಾಂಪ್ರದಾಯಕ ಶೈಲಿಯ ಸಣ್ಣ ಅಂಗಡಿಗಳು ತೆರೆದಿದ್ದವು. ಹಣದ ವ್ಯವಹಾರಗಳೂ ಆನ್ಲೈನ್ನಲ್ಲಿ ನಡೆಯುತ್ತಿದ್ದ ಕಾರಣ ಬಹಳಷ್ಟು ಜನರ ಕೈಯ್ಯಲ್ಲಿ ಸಾಮಗ್ರಿಗಳಿಗೆ ನೀಡಲು ಹಣವಿರಲಿಲ್ಲ. ಇಂತಹಾ ಸಂದರ್ಭದಲ್ಲಿ ಅನೇಕ ಸಣ್ಣ ಅಂಗಡಿಗಳ ಮಾಲೀಕರು “ಸಾಧ್ಯವಾದಾಗ ಹಣವನ್ನು ನೀಡಿ ತೊಂದರೆಯಿಲ್ಲ” ಎಂದು ನಂಬಿಕೆಯಿಂದ ಸಾಮಾಗ್ರಿಗಳನ್ನೂ ತರಕಾರಿಗಳನ್ನೂ ನೀಡಿದ್ದರು. ಅಂದಿನ ಗಳಿಕೆ ಅಂದಿಗೆ ಎನ್ನುವ ಬಡ ಸಹೋದರರಿಗೂ ಆದಾಗ ಹಿಂದಿರುಗಿಸಿ ಎಂದು ಸಾಮಾಗ್ರಿಗಳನ್ನು ನೀಡಿದ್ದು ಇದೆ ಸಣ್ಣ ಮತ್ತು ಮಾಧ್ಯಮ ಅಂಗಡಿಗಳೇ..
ಕೊರೋನಾದಿಂದಾಗಿ ಬಹುಪಾಲು ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲ, ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿಲ್ಲ, ಇವುಗಳೆಲ್ಲದರ ಹೊಡೆತ ಬಿದ್ದಿರುವುದು ನಮ್ಮ ಸ್ಥಳೀಯ ವ್ಯಾಪಾರಿಗಳಿಗೆ, ವಸ್ತ್ರ ಮಳಿಗೆಗಳಾಗಿರಬಹುದು, ದಿನಸಿ ಅಂಗಡಿ ಅಥವಾ ನಮ್ಮೂರಿನ ತರಕಾರಿ ಅಂಗಡಿಯಾಗಿರಬಹುದು, ಅವರೆಲ್ಲರೂ ನಷ್ಟವನ್ನು ಅನುಭವಿಸುತ್ತಿದ್ದಾರೆ. ನಮಗೆ ಬೇಕಾದದ್ದನ್ನು ಆಯ್ದುಕೊಳ್ಳಬಹುದು ಎಂದು ಸಂತೋಷದಿಂದ ಹೋಗುತ್ತಿದ್ದ ಸೂಪರ್ ಮಾರ್ಕೆಟ್ಗಳಲ್ಲಿ ಇತರರು ಮುಟ್ಟಿ ಬಿಟ್ಟಿರಬಹುದೇನೋ ಎಂಬ ಭಯ ಆವರಿಸುವಾಗಲೂ ನಮ್ಮ ನಂಬಿಕೆಗೆ ಪಾತ್ರರಾಗಿ ಉಳಿದು ಸೇವೆ ನೀಡಿದ್ದು ನಮ್ಮ ನೆರೆಯಲ್ಲಿರುವ ಸ್ಥಳೀಯ ಅಂಗಡಿಗಳೇ ಅಲ್ಲವೇ?
ದೀಪಾವಳಿ ಬೆಳಕಿನ ಹಬ್ಬ, ಸಂತೋಷವನ್ನೂ ನೆಮ್ಮದಿಯನ್ನೂ ತರುವ ಹಬ್ಬ. ಈ ಹಬ್ಬದಲ್ಲಿ ನಾವೇಕೆ ನಮ್ಮವರ ಮುಖದಲ್ಲೂ ನಗುವನ್ನು ತರಬಾರದು? ಈ ಬಾರಿಯ ಖರೀದಿಯನ್ನು ನಾವು ನಮ್ಮ ನೆರೆಯಲ್ಲಿರುವ ಸ್ಥಳೀಯ ವ್ಯಾಪಾರಿಗಳಿಂದ ಮಾಡೋಣ. ಆನ್ಲೈನ್ನಲ್ಲಿ ಕೇಳಿದಷ್ಟು ದುಡ್ಡು ನೀಡಿ ಖರೀದಿಸುವ ನಾವು ಸಣ್ಣ ವ್ಯಾಪಾರಿಗಳ ಬಳಿಯಲ್ಲಿ ಚೌಕಾಸಿಯನ್ನು ಮಾಡುತ್ತೇವೆ. 2 ರೂಪಾಯಿಯಲ್ಲಿ ಅವರು ವಿಮಾನ ಖರೀದಿಸಲು ಸಾಧ್ಯವಿಲ್ಲವಷ್ಟೆ? ಅದು ಅವರ ಜೀವನೋಪಾಯ ಅಷ್ಟೇ. ಈ ಬಾರಿಯ ದೀಪಾವಳಿ ನಮ್ಮ ಮುಖದಲ್ಲಿ ಮಾತ್ರವಲ್ಲ ಕೊರೋನಾ ಸಂದರ್ಭದಲ್ಲಿ ನಮ್ಮೊಂದಿಗಿದ್ದ ಸಣ್ಣ ಸಣ್ಣ ಅಂಗಡಿಗಳನ್ನೇ ನಂಬಿ ಜೀವಿಸುತ್ತಿರುವ ಕುಟುಂಬಗಳ ಮುಖದಲ್ಲೂ ನಗೆಯನ್ನು ಅರಳಿಸಲಿ. ನಮ್ಮ ಸಂಕಷ್ಟಕ್ಕಾದವರನ್ನು ಸಂಕಷ್ಟ ಮುಗಿದ ಬಳಿಕ ಮರೆಯುವುದು ನಾಗರೀಕತೆಯ ಲಕ್ಷಣವಲ್ಲ.
ಈ ಬಾರಿಯ ದೀಪಾವಳಿಯ ಖರೀದಿಯನ್ನು ನಮ್ಮ ನೆರೆಯ ಅಂಗಡಿಗಳಿಗಾಗಿ ಮೀಸಲಿರಿಸೋಣ ಅಲ್ಲವೇ???
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.