ಸುಬ್ರಹ್ಮಣ್ಯ : ರಸ್ತೆ ಹದಗೆಟ್ಟರೆ ಪ್ರತಿಭಟನೆ, ಹೋರಾಟ ನಡೆಯುವುದು ನೋಡಿದ್ದೇವೆ.ಆದರೆ ಗುತ್ತಿಗಾರಿನಲ್ಲಿ ಭಾನುವಾರ ವಿಶೇಷವಾದ ಅಭಿಯಾನ ರೂಪದ ಶ್ರಮದಾನ ನಡೆಯಿತು.ನಮ್ಮ ರಸ್ತೆ.. ನಮ್ಮ ಶ್ರಮ .. ನಮ್ಮ ಕಾಳಜಿ ಹೆಸರಿನಲ್ಲಿ ರಸ್ತೆ ಬದಿಯ ಕಾಡು ಸ್ವಚ್ಚ ಮಾಡುವ ಹಾಗೂ ರಸ್ತೆಯ ನೀರಿಗೆ ಚರಂಡಿ ನೀಡುವ ಕೆಲಸ ನಡೆಯಿತು.ಈ ಕಾರ್ಯದಲ್ಲಿ ರಸ್ತೆಯಲ್ಲಿ ಓಡಾಡುವ ಮಂದಿ ಹಾಗೂ ಗುತ್ತಿಗಾರು ಯುವಕ ಮಂಡಲದ ಪದಾಧಿಕಾರಿಗಳು ತೊಡಗಿಸಿಕೊಂಡರು.
ಸುಳ್ಯ ತಾಲೂಕಿನ ಗುತ್ತಿಗಾರು ಬಳ್ಳಕ್ಕ ಪಂಜ ರಸ್ತೆ ಕೆಲವು ವರ್ಷದ ಹಿಂದೆ ಸಾರ್ವಜನಿಕರ ವಿಶೇಷ ಮುತುವರ್ಜಿ ಹಾಗೂ ಹಣ ಅದರ ಜೊತೆಗೆ ಶಾಸಕ ಅಂಗಾರ ಅವರ ಪ್ರಯತ್ನದ ಮೂಲಕ ಸರ್ಕಾರ ಹಾಗೂ ವೈಯಕ್ತಿಕ ಕೊಡುಗೆಯ ಮೂಲಕ ನಿರ್ಮಾಣವಾಗಿತ್ತು.ಈಗ ಅದು ಇಲಾಖೆಯ ರಸ್ತೆ. ಹಾಗೆಂದು ನಿರ್ವಹಣೆ ಮಾತ್ರ ಸರಿಯಾಗಿ ನಡೆಯುತ್ತಿಲ್ಲ.
ಈಗ ಮಳೆಗಾಲ ಮಧ್ಯಭಾಗ ಕಳೆದರೂ ರಸ್ತೆಯ ನೀರಿಗೆ ಚರಂಡಿ ವ್ಯವಸ್ಥೆ ಸೇರಿದಂತೆ ರಸ್ತೆ ಬದಿಯ ಕಾಡು ತೆರವು ಮಾಡುವ ಕೆಲಸ ಆಗಿರಲಿಲ್ಲ. ಇದೀಗ ಸ್ವಚ್ಚ ಭಾರತದ ಕಲ್ಪನೆ ಕೂಡಾ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದೆ.ಇದರ ಜೊತೆಗೆ ಸಾರ್ವಜನಿಕ ಕಾಳಜಿ ಹಾಗೂ ಸಹಕಾರ ಅಗತ್ಯವಾಗಿರುವ ಜೊತೆಗೆ ಊರಿನ ಅಭಿವೃದ್ದಿ ಪ್ರತಿಯೊಬ್ಬನ ಜವಾಬ್ದಾರಿಯೂ ಆಗಿದೆ.ಇದಕ್ಕಾಗಿ ಗುತ್ತಿಗಾರು ಬಳ್ಳಕ್ಕ ರಸ್ತೆಯ ಮೂಲಕ ಸಾಗುವ ಮುತ್ಲಾಜೆ,ಪುಲ್ಲಡ್ಕ, ಚಣಿಲ ಪ್ರದೇಶದ ಸುಮಾರು ೫ ಕಿಮೀ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಗುತ್ತಿಗಾರು ಯುವಕ ಮಂಡಲದ ಸದಸ್ಯರು ಜೊತೆ ಸೇರಿ ನಮ್ಮ ರಸ್ತೆ. . ನಮ್ಮ ಶ್ರಮ. . ನಮ್ಮ ಕಾಳಜಿಯ ಹೆಸರಿನಲ್ಲಿ ಶ್ರಮದಾನದ ಮೂಲಕ ಸ್ವಚ್ಚ ಮಾಡಿದರು.ಈ ಸಂದರ್ಭದಲ್ಲಿ ರಸ್ತೆ ಬದಿಯ ಕಾಡು ತೆರವು ಹಾಗೂ ರಸ್ತೆಯಲ್ಲೇ ಹರಿಯುವ ನೀರಿಗೆ ಚರಂಡಿ ನೀಡಿ ರಸ್ತೆ ಹಾಳಾಗದಂತೆ ಕ್ರಮ ಕೈಗೊಂಡರು.ಗುತ್ತಿಗಾರಿನಿಂದ ಗೊರಗೋಡಿ ಪ್ರದೇಶದವರೆಗೆ ರಸ್ತೆಗೆ ಶ್ರಮವನ್ನು ಹಾಕಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯರಾದ ಶಿವರಾಮ ಕರುವಜೆ,ಮಹೇಶ್ ಮುತ್ಲಾಜೆ, ಲಿಜೋ ಜೋಸ್, ಯುವಕ ಮಂಡಲ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಕೋಶಾಧಿಕಾರಿ ಲೋಕೇಶ್ವರ ಡಿಆರ್, ರವಿಪ್ರಕಾಶ್ ಬಿವಿ, ಜಯರಾಮ ವಳಲಂಬೆ ,ಲಿಂಗಪ್ಪ ಗೌಡ ನೂಜಾಡಿ,ಚಂದ್ರಶೇಖರ, ಧರ್ಮ ಮುತ್ಲಾಜೆ,ಪರಮೇಶ್ವರ, ಎಸ್.ಜಿ.ಮಹಾಲಿಂಗ ಭಟ್, ಕುಮಾರ್ ಮೇಲ್ತೋಟ,ಇಸಾಕ್,ಸಿರಿಯಾಕ್ ಮ್ಯಾಥ್ಯು,ವೆಂಕಟ್ರಮಣ ಮುತ್ಲಾಜೆ,ಜನಾರ್ಧನ ಮುತ್ಲಾಜೆ,ಅಕ್ಷಿತ್ ಮುತ್ಲಾಜೆ ಮೊದಲಾದವರು ಭಾಗವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.