ಅಕ್ಟೋಬರ್ 31, 1837 ರಂದು ಭಾರತದ ಸ್ವಾತಂತ್ರ್ಯ ಹೋರಾಟಗಾರ – ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿ ಕೋಟೆಯ ಆವರಣದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿಯು ಸಾರ್ವಜನಿಕವಾಗಿ ಗಲ್ಲಿಗೇರಿಸಿಬಿಟ್ಟರು. ಇದರಿಂದಾಗಿ ಭಾರತದ ನಾಗರೀಕತೆ ಒಂದು ವೇಳೆ ತಮ್ಮ ಕುಂದುಕೊರತೆಗಳನ್ನು ಬಹಿರಂಗವಾಗಿ ಧ್ವನಿಸಿದರೆ ಅದರ ಪರಿಣಾಮವನ್ನು ನೆನಪಿಸಿಕೊಳ್ಳುವ ಹಾಗೆ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿದರು.
ಹೆಚ್ಚಾಗಿ ನೋಡುವ ಶಾಂತಿ, ಸೌಹಾರ್ದತೆಯಿಂದ ಕೂಡಿದ ಪುಟಗಳಲ್ಲಿ ನಮ್ಮ ನಮ್ಮ ಊರಿನಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಿಗೆ ನೀಡಲಾದ ಇಂತಹ ಕ್ರೂರ ಶಿಕ್ಷೆಗಳನ್ನು ವೈಟ್ವಾಶ್ ಮಾಡಲಾಗಿದೆ ಎಂಬುದು ಇನ್ನೂ ಬೇಸರದ ಸಂಗತಿ.
ಯಾವ ಫ್ರೀಡಂ ಅನ್ನು ನಾವು ಇಂದು ಇಷ್ಟು ಫ್ರೀ ಆಗಿ ಅನುಭವಿಸುತ್ತಿದ್ದೆವೋ, ಅದು ಅಷ್ಟು ಫ್ರೀ ಆಗಿ ಬರಲಿಲ್ಲ ಎಂಬುವುದನ್ನು ಸ್ವಲ್ಪ ಹಿಂತಿರುಗಿ ನೋಡಬೇಕಾಗಿದೆ ನಾವು ಇವತ್ತು.
ಯಾವುದನ್ನು ಮೊದಲ ಸ್ವಾತಂತ್ರ್ಯದ ಸಂಗ್ರಾಮವೆಂದು ನೆನಪಿಸಿಕೊಳ್ಳುತ್ತೇವೋ, ಅದಕ್ಕಿಂತ 20 ವರ್ಷಗಳ ಹಿಂದೆಯೇ ಕರ್ನಾಟಕದ ಸುಳ್ಯದಿಂದ ಪ್ರಾರಂಭವಾದ ಚಳುವಳಿ, ಅದುವೇ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ. ಸುಳ್ಯದಲ್ಲಿ ಯೋಧ ಪರಂಪರೆಯ ಕೊನೆಯ ಯುದ್ಧವೆಂದು ಹೇಳಬಹುದು.
ಹಾಗಾದರೆ ಅದು ಮೊದಲನೆಯ ಹೋರಾಟ/ಚಳುವಳಿಯೋ ಅಲ್ಲವೋ ಎಂಬ ಅನಗತ್ಯ ಗೊಂದಲ ಸೃಷ್ಟಿಸುವುದು ಈ ಲೇಖನದ ‘ಉದ್ದೇಶವಲ್ಲ.’
ಅದು ಯಾವುದೇ ಮೂಲೆಯ ಉದಾಹರಣೆ ನೋಡಿ, ಭಾರತದ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಧ್ಯೇಯದಲ್ಲಿ ಒಗ್ಗಟ್ಟಾಗಿದ್ದರು. ಅವನು ಮೊದಲು ಇವನು ದ್ವಿತೀಯ ಎಂಬ ಭಾವನೆ ಸ್ವಾತಂತ್ರ್ಯಕ್ಕೆ ಹೋರಾಡುವಾಗ ಇರಲಿಲ್ಲ ಎಂಬ ವಿಷಯದಿಂದ ನಾವು ಒಗ್ಗಟ್ಟು ಎಂದರೆ ಏನು ಎಂಬುದು ಕಲಿಯಬೇಕು. ಏಕತೆಯ ಬಗ್ಗೆ ಕಲಿಯಲು ಅತ್ಯುತ್ತಮ ಪಾಠವೆಂದರೆ ಅದು ಸ್ವಾತಂತ್ರ್ಯ ಹೋರಾಟದ ದಿನಗಳೆಂದೇ ಅರ್ಥಮಾಡಿಕೊಳ್ಳಬೇಕು.
ಬ್ರಿಟಿಷ್ ವಸಾಹತು ಅವಧಿಯಲ್ಲಿ ಯಾವುದೇ ಸ್ವಾತಂತ್ರ್ಯ ಹೋರಾಟಗಾರರ/ಹೋರಾಟದ ಅಧ್ಯಾಯ ಮಾಡಿದರೆ ಅವರೆಲ್ಲರೂ ಆಂಗ್ಲರನ್ನು ಇಲ್ಲಿಂದ ಓಡಿಸುವುದು ಒಂದೇ ತಮ್ಮ ಗುರಿಯಾಗಿರಿಸಿಕೊಂಡು ಎಲ್ಲವನ್ನೂ ತ್ಯಾಗ ಮಾಡಿ ವೀರ ಹೋರಾಟವೇ ನಡೆಸಿದರು ಎಂಬುದನ್ನು ತಿಳಿಯಬಹುದು.
1837 ಇಸವಿಯಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟವನ್ನು ‘ಸ್ವಾತಂತ್ರ್ಯ ಹೋರಾಟ’ ವೆಂದು ಹೇಗೆ ಹೇಳಬಹುದು ಎಂದರೆ-
ಒಂದನೆಯದು, ಕಾಟನ್ ಎಂಬ ಆಂಗ್ಲನೊಬ್ಬ ತಯಾರಿಸಿದ ರಿಪೋರ್ಟ್ನಲ್ಲಿ (Cotton’s Report), ಹಾಗೆಯೇ ಅವನು ತಯಾರಿಸಿದ ರಿಪೋರ್ಟ್ ಬಗ್ಗೆ ಆಗಿನ ಮೈಸೂರಿನ ಲೆಪ್ಟಿನೆಂಟ್ – ಜನರಲ್, ಮಾರ್ಕ್ ಕಬ್ಬನ್ ಅಭಿಪ್ರಾಯ ಹೀಗಿದೆ – “Their design was to overthrow British authority” (Cubbon’s Note on Cotton’s report) Lieutenant-General Sir Mark Cubbon, British commissioner of Mysore State, 1834.
ಹಾಗೆನೇ ಸುಳ್ಯದ ಸ್ಥಳೀಯ ಭಾಷೆಯಾದ ಅರೆಭಾಷೆಯಲ್ಲಿ (ತುಳುನಾಡು ಹಾಗೂ ವಿಶಾಲ ಕೊಡಗು ಸಂಸ್ಥಾನದಿಂದ ಪ್ರಭಾವಿತ ಒಂದು indigenous language) ಹಿರಿಯರು ಆಗಾಗ “ದಂಡಿನ ಬಗ್ಗೆ” ನೆನಪಿಸಿಕೊಳ್ಳುತ್ತಿದ್ದದ್ದು, ದಂಡಿಗೆ ಸಂಬಂಧ ಪಟ್ಟ ಕೆಲವು ಜಾಗಗಳು, ಆಯುಧಗಳು ಇಂದಿಗೂ ನೋಡಲು ಸಿಗುವುದು ಹಾಗೆಯೇ ಅರೆಭಾಷೆಯಲ್ಲಿರುವ ಒಂದು ಹಳೇ ಹೇಳಿಕೆ, ಅದು ಏನೆಂದರೆ “ಅಂದ್ ದಂಡ್ ಗೆ ಹೋದವ್, ಮನೆಗೆ ಬಾತ್ಲೆ.”
“ಅಮ್ಮ ಹೇಳ್ತಿದ್ದೊ ಅವು ಬೇಗ ತೀರ್ಯೊಗೊಳೊ.”
ಇದು ಬ್ರಿಟಿಷರ ಲಿಖಿತ ದಾಖಲೆಗಳು ಮತ್ತು ನಮ್ಮ ಹಿರಿಯರ ಮೌಖಿಕ ದಾಖಲೆಗಳು. ತುಂಬಾ ವಯಸ್ಸಾದವರೊಂದಿಗೆ (ಅಂದರೆ 90+ ವಯಸ್ಸಾದವರು) ಮಾತನಾಡುವಾಗ ಇದಿಷ್ಟೇ ಅಲ್ಲ, ಇನ್ನೂ ಅನೇಕ ವಿಚಾರಗಳು ಬೆಳಕಿಗೆ ಬರುತ್ತದೆ.
1834 ವರೆಗೆ ವಿಶಾಲ ಕೊಡಗು ಸಂಸ್ಥಾನವನ್ನು ಹಾಲೇರಿ ರಾಜ ಮನೆತನದ (ಸುಳ್ಯದ ಕೂಜುಗೊಡು ಕಟ್ಟೆಮನೆಗೆ ಸಂಬಂಧಿತ) ರಾಜವಂಶಸ್ಥರು ಆಳಿದ್ದು ಹಾಗೆಯೇ ಪುತ್ತೂರು, ಸುಳ್ಯದ ಜನರಿಗೂ ಮತ್ತು ಕೊಡಗಿನ ಜನರಿಗೂ ಸಾಮಾಜಿಕ ಮತ್ತು ಸಾಂಪ್ರದಾಯಿಕ ಸಂಬಂಧವಿತ್ತು (ಈಗಲೂ ಹಲವು ಕಡೆಗಳಲ್ಲಿ ಗಮನಿಸಬಹುದು) ಎಂಬುವುದು ದಾಖಲಿತ ಸತ್ಯಗಳು. ಕೊನೇಯ ಚಿಕ್ಕವೀರರಾಜ ಒಡೆಯನನ್ನು ಪದಚ್ಯುತ ಗೊಳಿಸಿ ಮೊದಲು ವಾರಣಾಸಿ ನಂತರ ಇಂಗ್ಲೆಂಡ್ಗೆ ಕಳಿಸುವುದರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸರಕಾರ ಯಶಸ್ವಿಯಾಗುತ್ತದೆ.
ಪಶ್ಚಿಮ ಘಟ್ಟ ಹಾಗೂ ಅದರ ತಪ್ಪಲಿನಲ್ಲಿರುವ ಪ್ರದೇಶದಿಂದ ಆಂಗ್ಲರ ವ್ಯಾಪಾರಕ್ಕೆ ಆಗಬಹುದಾದ ಲಾಭಗಳನ್ನು ಲೆಕ್ಕಹಾಕುವ ಮೂಲಕ ರಾಜ ಪರಂಪರೆ ಹಾಗೆಯೇ ಅದಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ವಿಚಾರಗಳನ್ನು ನಾಶ ಮಾಡಲು ಯತ್ನಿಸುತ್ತಾರೆ.
ಹಲವು ಕಡೆ ಅವರು ಮೂಲ ಸಂಸ್ಕೃತಿಯನ್ನು ನಾಶಮಾಡಿ, ಆಂಗ್ಲ ಭಾಷೆ ಹಾಗೂ ವಿಚಾರಗಳೇ ಶ್ರೇಷ್ಠ ಎಂಬ ನಂಬಿಕೆಯನ್ನು ಬಲಪಡಿಸುವ ಮೂಲಕ ಲಾಭವನ್ನು ಪಡೆದುಕೊಂಡ ಪರಿಣಾಮವನ್ನು ಇಂದು ನಾವೆಲ್ಲರೂ ನೋಡುತ್ತಿದ್ದೇವೆ!
ತುಳು, ಅರೆಭಾಷೆ, ಕೊಡಗು, ಮಳಯಾಲಂ ಹಾಗೂ ಬ್ರಿಟಿಷರ ಒಂದು ಮಿಶ್ರ ಪ್ರಭಾವ ಸುಳ್ಯಕ್ಕೆ ಬೀರಿದೆ. ತೌಳವ ಆಡಳಿತ ಪದ್ದತಿ, ಕೊಡಗಿನ ಅರಸರ ಆಳ್ವಿಕೆ, ಹಾಗೆಯೇ ತುಳುನಾಡಿನ ಬಹುಮುಖ್ಯ ಪರಂಪರೆ – “ದೈವಾರಾಧನೆಯ ಪಾಡ್ದನಗಳನ್ನು” ಕೇಳಿದರೆ ಸುಳ್ಯದಂತಹಾ ಕಾಡಿನ ಪ್ರಾಮುಖ್ಯತೆಯನ್ನು ಅರ್ಥೈಸಿಕೊಳ್ಳಬಹುದು.
ಸಮುದ್ರದಿಂದ ಘಟ್ಟ ಮಾರ್ಗವಾಗಿ ಬಯಲುಸೀಮೆ ಪ್ರದೇಶಗಳಲ್ಲಿ ನಡೆಯುತ್ತಿದ್ದ ವ್ಯಾಪಾರ ಮಾರ್ಗವು ಸುಳ್ಯ ಮುಖಾಂತರ ಹಾದು ಹೋಗುತ್ತಿತ್ತು (ಲೇಖಕರಾದ, ಶ್ರೀ ಪುತ್ತೂರು ಅನಂತರಾಜ ಗೌಡರು ಈ ವಿಷಯದ ಬಗ್ಗೆ ಅಧ್ಯಯನ ನಡೆಸಿರುತ್ತಾರೆ). ಭೌಗೋಳಿಕ ರಾಜಕೀಯ (Geopolitical reasons) ಕಾರಣಗಳಿಂದಾಗಿ ಇದರ ಸ್ವಾಧೀನ ಪಡೆಯಲು ತುಳುನಾಡಿನ ಬಲ್ಲಾಳರು, ಕೆಳದಿ ನಾಯಕರು ಪ್ರಯತ್ನಗಳನ್ನು ಮಾಡಿರುತ್ತಾರೆ. ಕೆಳದಿ ನಾಯಕರು ಕಳುಹಿಸಿದ ತಮ್ಮದೇ ಪರಂಪರೆಯ ಸೇನೆ ಇಲ್ಲೇ ನೆಲೆಸುತ್ತಾರೆ ಹಾಗೆಯೇ ತುಳುನಾಡಿನ ಸ್ಥಳೀಯ ಪದ್ಧತಿಗಳಿಗೆ ಹೊಂದಿಕೊಳ್ಳುತ್ತಾರೆ (ಈಗ ಯಾವುದು ತಮ್ಮದೇ ಒಂದು ಜಾತಿಯೆಂದು ಕರೆಸಿಕೊಳ್ಳುವ ಅರೆಭಾಷೆ ಹಾಗೂ ತುಳು ಭಾಷೆಯನ್ನು ಮಾತಾಡುವ ಗೌಡ ಸಮುದಾಯದವರು. ಗೌಡ ಹಾಗೂ ನಾಯಕ ಎಂಬುದು ಗಂಗರ, ಹೊಯ್ಸಳರ ಹಾಗೂ ಕೆಳದಿ ನಾಯಕರ ಸಮಯದ ಸೇನೆಯಲ್ಲಿ ಇದ್ದಂತ ಹುದ್ದೆಯ ಪದಗಳು, ನಂತರ ಮಾತ್ರ ಅದು ತನ್ನದೇ ಆದ ಒಂದು ಜಾತಿಯಾಗಿ ಬಿಡುತ್ತದೆ).
ಹಾಗೆಯೇ ಇಲ್ಲಿ ನೋಡಲು ಸಿಗುವ ಮಿಶ್ರ ಪದ್ಧತಿಗಳ ನಡುವಿನ ಸಹಬಾಳ್ವೆ (Cultural imbibition yet harmonious co existence) ಉದಾಹರಣೆಗೆ ನೀವು ಗುತ್ತು ಬಾರಿಕೆ/ ಬಾಳಿಕೆ ಎಂಬುದನ್ನು ತುಳುನಾಡಿನ ಆಡಳಿತ ಪರಂಪರೆಯಲ್ಲಿ ನೋಡಬಹುದು. ಕರ್ನಾಟಕದಲ್ಲಿ ಗಂಗ ಕ್ಷತ್ರೀಯ ಸಂಪ್ರದಾಯದಲ್ಲಿ ತೌಳವ ಪ್ರಭಾವ, ವ್ಯವಸ್ಥಿತ ಕೃಷಿ ಹಾಗೆಯೇ ತಮ್ಮದೇ ಆದ ಯೋಧ ಪರಂಪರೆ ಕಡೆಗೆ ಉಳಿದುಕೊಂಡಿದೆ ಎಂದಾದರೆ ಅದು ಸುಳ್ಯ ಮಾಗಣೆ (ಸೀಮೆ), ಪುತ್ತೂರು ಮಾಗಣೆ, ಹಾಗೆಯೇ ಈಗಿನ ಕೊಡಗಿನಲ್ಲಿ.
ವ್ಯಾಪಾರ ಮಾರ್ಗದ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು, ನಾಡಿನ ಆಡಳಿತದಲ್ಲಿ, ತೆರಿಗೆಯ ವಿಚಾರದಲ್ಲಿ 1834 ವರೆಗೆ ತಮ್ಮ ಸಂಸ್ಕೃತಿ ಆಧಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬ್ರಿಟಿಷರು ಬಂದು ಅರಮನೆಯಿಂದ ರಾಜನನ್ನು ತೆಗೆದು (ಅಪ್ಪಣೆ ಇಲ್ಲದೆ) ಸುಳ್ಯ ಹಾಗೂ ಪುತ್ತೂರು ಮಾಗಣೆಯನ್ನು (ಸೀಮೆಗಳು) ಹಾಲೇರಿ ಆಡಳಿತದಿಂದ ಹೊರಗೆಳೆದು ಮಂಗಳೂರಿನ ಕಲೆಕ್ಟರ್ (Mr. Levin) ಗೆ ಹಣದ ಮುಖಾಂತರವೇ ತೆರಿಗೆಯನ್ನು ಕಟ್ಟಬೇಕು ಎನ್ನುವ ಬಲವಂತದ ಕಾನೂನನ್ನು ಜಾರಿಗೆ ತಂದನು. ಅಲ್ಲಿಯವರೆಗೆ ಬತ್ತದ ರೂಪದಲ್ಲಿ ತೆರಿಗೆ ಇದ್ದದ್ದು (ಸಂಸ್ಕೃತಿಯು ಅದರ ಆಧಾರದಲ್ಲೇ ಇದ್ದದ್ದು).
ಸಾಂಸ್ಕೃತಿಕ ವಿಚಾರದಿಂದ ಸ್ಥಳೀಯರನ್ನು ದೂರಮಾಡಿ, ಕೃಷಿಗೆ ಸಂಬಂಧಿಸಿದಂತೆ ಕಷ್ಟಗಳನ್ನು ಸೃಷ್ಟಿಸಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಸರ್ಕಾರವು ಸುಳ್ಯ ಹಾಗೂ ಪುತ್ತೂರು ಮಾಗಣೆ (ಸೀಮೆ) ಯನ್ನು ವಿಶಾಲ ಕೊಡಗು ಸಂಸ್ಥಾನದಿಂದ ಪ್ರತ್ಯೇಕಿಸಿ ಅದನ್ನು Madras ಪ್ರಾಂತ್ಯಕ್ಕೆ ಸೇರಿಸಿದರು!
ಇಷ್ಟೆಲ್ಲಾ ಅನುಭವಿಸಿಕೊಂಡು ಇದರ ವಿರುದ್ಧ ಇಲ್ಲಿನ ಜನರು ಎದ್ದೇಳುತ್ತಾರೆ. ಅಲ್ಲಿಯವರೆಗೆ ಸಾಂಪ್ರದಾಯಿಕವಾಗಿ ಕತ್ತಿ (ಒಡಿ – ಕತ್ತಿ) ಹಾಗೂ ಕೋವಿಯನ್ನು ಹಿಡಿದವರು, ಸುಳ್ಯದ ಬೆಳ್ಳಾರೆಯಲ್ಲಿ ಇದ್ದ ಬ್ರಿಟಿಷರ ಬಂಗ್ಲೆಯ ಎದುರುಗಡೆ ಒಗ್ಗಟ್ಟಿನಿಂದ ಸೇರಿ ಖಜಾನೆಯ ಹಿಡಿತವನ್ನು ತೆಗೆದುಕೊಳ್ಳುತ್ತಾರೆ.
ನಂತರ ಅಲ್ಲಿಂದ ಮಂಗಳೂರಿನ ಬಾವುಟ ಗುಡ್ಡೆಯ ಕಡೆಗೆ ಹೊರಡುತ್ತಾರೆ, ಹಾಗೆಯೇ ಅದರ ಒಂದು ಭಾಗವೂ ಬಿಸಿಲೇ ಘಾಟಿ ಮಾರ್ಗವಾಗಿ ಮಡಿಕೇರಿ ಕೋಟೆಗೆ ಹೊರಡುತ್ತಾರೆ.
ಕೂಜುಗೊಡು ಕಟ್ಟೆಮನೆ ಅಪ್ಪಯ್ಯ ಗೌಡರು, ಕೂಜುಗೊಡು ಮಲ್ಲಪ್ಪ ಗೌಡರು ಹಾಗೂ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಬ್ರಿಟಿಷರಿಂದ ಮಡಿಕೇರಿ ಕೋಟೆಯನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಪಶ್ಚಿಮ ಘಟ್ಟಗಳ ದಟ್ಟವಾದ ಅರಣ್ಯದ ತಪ್ಪಲಿನ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಒಂದು ಭಾಗವನ್ನು ಮುನ್ನಡೆಸುವಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ.
ಈ ಆಂದೋಲನವನ್ನು ತಡೆಯುವಲ್ಲಿ ಸ್ಥಳೀಯರಿಗೆ ಬ್ರಿಟೀಷರ ಕ್ಯಾಪ್ಟನ್ ಲೀ ಹಾರ್ಡಿ ಎಂಬಾತ ಬೆದರಿಕೆ ಹಾಕುತ್ತಾನೆ (ಭಾರತದ ಈ ಭಾಗದಲ್ಲಿ ಒಡೆದಾಳುವ ನೀತಿಯ ಮೊದಲ ಪ್ರಯೋಗ ಎಂದೇ ಹೇಳಬೇಕು ಏಕೆಂದರೆ ಇಂತಹ ಖಳನಾಯಕರ ದುಷ್ಕೃತ್ಯಗಳನ್ನು ಎಲ್ಲಿಯೂ ಬಹಿರಂಗಪಡಿಸದೆ ಭಾರತೀಯರೇ ಪರಸ್ಪರರ ವಿರುದ್ಧ ಹೋರಾಡುವ ಹಾಗೆ ಮಾಡಿಬಿಟ್ಟರು).
ಓಡಿಹೋದ ಬ್ರಿಟಿಷರು ಉನ್ನತ ಶಸ್ತ್ರಾಸ್ತ್ರ ಹಾಗೂ ಬಲವರ್ಧನೆ ಪಡೆ ತರುವ ಸಮಯದಲ್ಲಿ ಜಾತಿ/ಭಾಷೆ/ಹಾಗೆಯೇ ಪ್ರತ್ಯೇಕತೆಯ ಭಾವನೆಗಳನ್ನು ಹುಟ್ಟುಹಾಕಿ ಜನರಲ್ಲಿ ಇದ್ದ ಸಹಬಾಳ್ವೆಯನ್ನು ಕೆಡಿಸಲು ಪ್ರಯತ್ನಿಸುತ್ತಾರೆ.
ಸ್ವಾತಂತ್ರ್ಯ ಹೋರಾಟಗಾರ, ಕೆದಂಬಾಡಿ ರಾಮ ಗೌಡರು ಬ್ರಿಟಿಷರ ಧ್ವಜವನ್ನು (ಯೂನಿಯನ್ ಜಾಕ್) ಏಪ್ರಿಲ್ 5, 1837 ರಂದು ಮಂಗಳೂರಿನ ಬಾವುಟಗುಡ್ಡೆ ಎಂಬ ಪ್ರದೇಶದಲ್ಲಿ ಯಶಸ್ವಿಯಾಗಿ ನೆಲಕ್ಕೆ ಎಳೆಯುತ್ತಾರೆ. ಅದಾದ ನಂತರ ಈ ಸ್ವಾತಂತ್ರ್ಯ ಹೋರಾಟಗಾರರ ದಂಡು 13 ದಿನಗಳ ಕಾಲ ಬ್ರಿಟೀಷರನ್ನು ಓಡಿಸಿ ಇಲ್ಲಿ ಭಾರತೀಯ ಜನಪರ ಆಡಳಿತವನ್ನು ಕೂಡಾ ನಡೆಸಿರುತ್ತಾರೆ.
ಇದಕ್ಕೆ ಸಿಕ್ಕಿದ ಶಿಕ್ಷೆಯೇನೆಂದರೆ ಕೆಡಂಬಾಡಿ ರಾಮ ಗೌಡರನ್ನು ಸಿಂಗಾಪುರಕ್ಕೆ ಗಡಿಪಾರು ಮಾಡಲಾಯಿತು, ಹೋರಾಟದಲ್ಲಿ ಬೀರಣ್ಣ ರೈ ಅವರನ್ನು ಬೆಂಬಲಿಗರ ಸಮೇತ ನೇತ್ರಾವತಿ ನದಿಯಲ್ಲಿಯೇ ಫಿರಂಗಿಯ ಮೂಲಕ ಗುಂಡು ಹಾರಿಸಿ ಮುಳುಗಿಸಿಬಿಟ್ಟರು.
ಸುಳ್ಯದಲ್ಲಿ ಈ ಸ್ವಾತಂತ್ರ್ಯ ಹೋರಾಟದ ನಿಶ್ಚಯವಾದ ಮನೆಯಾದ ಕೂಜುಗೋಡು ಕಟ್ಟೆಮನೆಯ ಅಪ್ಪಯ್ಯ ಗೌಡರು, ಹಾಗೆಯೇ ಕೂಜುಗೋಡು ಮಲ್ಲಪ್ಪ ಗೌಡರು ದಂಡಿಗೆ ಹೋದವರು ವಾಪಸ್ಸು ಬರಲಿಲ್ಲ ಎಂದು ಹೇಳಲಾಗುತ್ತದೆ.
ತಮ್ಮ ಊರಿನ ಸಂಪತ್ತಿನಿಂದ ಅನ್ಯಾಯವಾಗಿ ತುಂಬಿದ ಖಜಾನೆಯ ಹಿಡಿತವನ್ನು ತೆಗೆದುಕೊಂಡವರು, ತಮ್ಮದೇ ಊರಿನಲ್ಲಿ ದರೋಡೆಕೋರರು ಆಗಲು ಸಾಧ್ಯವಿಲ್ಲ, ಆದರೆ ದೊಡ್ಡ ಹೋರಾಟಕ್ಕಾಗಿ ತಮ್ಮ ಚಿಕ್ಕ-ಪುಟ್ಟ ಭಿನ್ನತೆಗಿಂತ ಮೇಲೇರುವ ಸ್ವಾತಂತ್ರ್ಯ ಹೋರಾಟಗಾರರದ್ದೇ ತಪ್ಪಿನಂತೆ ವಸಾಹತುಶಾಹಿಗಳು ಹಾಗೂ ಇಂದು ಅವರ ಹೆಜ್ಜೆಗಳನ್ನು ಅನುಸರಿಸುವವರ ಪ್ರಕಾರ, ಸ್ವಾತಂತ್ರ್ಯ ಹೋರಾಟಗಾರರನ್ನು ಕೇವಲ ಒಂದು ಗೊಂದಲ ಎಂದು ಪರಿಗಣಿಸಿಬಿಡುತ್ತಾರೆ.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಲಾಭ-ಚಾಲಿತ ಕ್ರಿಯೆಗಳ ಪರಿಣಾಮಗಳಿಗೆ ಭಾರತೀಯರನ್ನು ಸಮುದಾಯದ ಹೆಸರಿನಲ್ಲಿ ಭಾಗ ಮಾಡಿ ಒಂದು ಸಮುದಾಯವನ್ನು ಬಲಿಪಶುವಾಗಿ ಮಾಡಿದರೆ ಇನ್ಯಾವುದೋ ಸಮುದಾಯವನ್ನು ಖಳನಾಯಕನಾಗಿ ಬಿಂಬಿಸುತ್ತಿದ್ದರು. ಅಮರ ಸುಳ್ಯದ ವಿಷಯದಲ್ಲಿ, ಈ ಹೋರಾಟದ ನಂತರದಲ್ಲಿ ನಿಶ್ಯಸ್ತ್ರಗೊಳಿಸುವ ಕಾನೂನಿನ (Disarmament Act) ಕ್ರಿಯೆಯಿಂದಾಗಿ ಸುಳ್ಯ ಪ್ರದೇಶದ ಯೋಧ ಪರಂಪರೆಯ ಮೇಲೆ ಅದು ಹಾನಿಕಾರಕ ಪರಿಣಾಮವನ್ನೇ ಬೀರಿತು. ಬ್ರಿಟಿಷ್ ಕ್ರಮಗಳು ಶತಮಾನಗಳಷ್ಟು ಹಳೆಯದಾದ ಅಭ್ಯಾಸಕ್ಕೆ ವಿರಾಮ ನೀಡುವ ದಿಕ್ಕಿನಲ್ಲಿದ್ದವು. ಜನರು ಮತ್ತೆ ಏಳಬಾರದು ಎಂದು ತಮ್ಮ ಮೂಲದಿಂದ ಸಂಪರ್ಕ ಕಡಿತಗೊಳಿಸುವ ಉದ್ದೇಶಪೂರ್ವಕ ಕ್ರಿಯೆಯಾಗಿತ್ತು.
ಬ್ರಿಟಿಷರ ದೀರ್ಘಕಾಲದ ದ್ವೇಷ ಮಾತ್ರವಲ್ಲದೇ ಸ್ವಾತಂತ್ರ್ಯ ಸಿಕ್ಕ ನಂತರದಲ್ಲಿ ಭಾರತದ ಸ್ವಯಂ ಘೋಷಿತ ಇತಿಹಾಸಕಾರರು ಐತಿಹಾಸಿಕ ಘಟನೆಯನ್ನು ಕೇವಲ ಒಂದು ನಿರ್ದಿಷ್ಟ ರಾಜಕೀಯ ಚಿಂತನೆಗೆ ತಕ್ಕಂತೆ ಬರೆದದ್ದು ವಿಶಿಷ್ಟತೆಯ ಹೆಸರಿನಲ್ಲಿ ಮತ್ತಷ್ಟು ತೀವ್ರವಾದ ವಾದಗಳಿಗೆ ಕಾರಣವಾಗಿದೆ. ಅದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸಮರ್ಥಿಸಿದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
ಈ ಘಟನೆ ನಡೆದು 183 ವರ್ಷಗಳು ಕಳೆದರೂ ಸುಳ್ಯ ಪ್ರದೇಶದ ಬಹುತೇಕ ಬಾಗಗಳು ಇನ್ನು ಕೂಡಾ ಹೆಚ್ಚಿನ ಅಭಿವೃದ್ಧಿ ಮತ್ತು ಪ್ರಗತಿಯ ಆವರಣದ ಹೊರಗೆಯೇ ಉಳಿದಿದೆ.
ಇಂತಹ ಐತಿಹಾಸಿಕ ಘಟನೆಯ ನೆನಪಿಗಾಗಿ ಸುಳ್ಯದ ಸಾರ್ವಜನಿಕ ವಲಯದಲ್ಲಿ ಸ್ಮರಣೀಯ ಎಂಬುದು ಏನೂ ಇಲ್ಲದೆ ಇರುವುದು ಗಂಭೀರವಾಗಿ ಉಲ್ಲೇಖವಾಗಬೇಕಾಗದ ವಿಷಯ.
ಏಕೆಂದರೆ ಇದು ಭಾರತೀಯ ಮಣ್ಣನ್ನು ಹೊರಗಿನ ವಿಸ್ತರಣಾವಾದಿ ದುಷ್ಟರಿಂದ ರಕ್ಷಿಸುವ ಮೂಲಕ ಮಾತೃಭೂಮಿಗೆ ಸರ್ವೋಚ್ಛ ಕರ್ತವ್ಯವನ್ನು ಧೈರ್ಯದಿಂದ ಸಲ್ಲಿಸಿದ ಭಾರತದ ಒಂದು ಊರಿನ ಕೆಚ್ಚೆದೆಯ ವೀರರ ಯಶೋಗಾಥೆ.
ದುರಾದೃಷ್ಟವೆಂದರೆ ಇಂತಹ ಅದೆಷ್ಟೋ ಘಟನೆಗಳು ಯಾವ್ಯಾವೋ ಕಾರಣಗಳಿಂದಾಗಿ ಇತಿಹಾಸ ಪುಸ್ತಕದ ಪುಟಗಳಿಂದ ಕಳೆದುಹೋಗಿರುವ ಸಾಧ್ಯತೆಗಳಿವೆ ಎಂಬುದು ಸ್ವಲ್ಪ ತಡವಾಗಿ ಬೆಳಕಿಗೆ ಬಂದಿರುವುದು.
ಇಂತಹ ಸ್ಫೂರ್ತಿದಾಯಕ ಘಟನೆಯನ್ನು ಅಂದಿನ ವಿರೋಧಿಗಳು (ಅಂದರೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಸರಕಾರ) ಇದು ಕೇವಲ ಒಂದು ಲೂಟಿ, ದರೋಡೆ ಎಂದು ಅವರ ಲಾಭಕ್ಕೋಸ್ಕರ ಹೇಳಿಕೊಂಡರು.
ಇತಿಹಾಸದಲ್ಲಿ ಆದ ಅನ್ಯಾಯಗಳು, ಅದರೊಟ್ಟಿಗೆ ತಿರುಚಿ ದಾಖಲಾಗಿದೆ ಎಂದರೆ ಇದು ನ್ಯಾಯವನ್ನು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ವ್ಯಂಗ್ಯ ಮಾಡುವುದಲ್ಲದೆ ಭಾರತೀಯರನ್ನು ತಮ್ಮ ಮೂಲ ಪರಂಪರೆಯ ಸಂಪರ್ಕದಿಂದ ಕಡಿತಗೊಳಿಸುವ ಪ್ರಯತ್ನವೆಂದೇ ತಿಳಿಯಬೇಕಾಗಿದೆ.
ಈಗ ನಾವು ವಸಾಹತುಶಾಹಿಗಳಿಂದ ಸ್ವತಂತ್ರ ಪಡೆದುಕೊಂಡಿರುವುದರಿಂದ ಆತ್ಮನಿರ್ಭರ ಭಾರತದ ಇತಿಹಾಸದ ಬರವಣಿಗೆಯಲ್ಲಿ ಯಾವುದೇ ಭಯವಿಲ್ಲದೆ ಭಾರತದ ದೃಷ್ಟಿಕೋನದಿಂದ ನೋಡಿಕೊಂಡು ಸಮಾಜಕ್ಕೆ ತಿಳಿಸುವ ಸಮಯ ಬಂದಿದೆ.
ಜೈ ಹಿಂದ್, ವಂದೇ ಮಾತರಂ.
1837 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ – ಇದು ಭಾರತೀಯ ಮಣ್ಣನ್ನು ಹೊರಗಿನ ವಿಸ್ತರಣಾವಾದಿ ದುಷ್ಟರಿಂದ ರಕ್ಷಿಸುವ ಮೂಲಕ ಮಾತೃಭೂಮಿಗೆ ಸರ್ವೋಚ್ಛ ಕರ್ತವ್ಯವನ್ನು ಧೈರ್ಯದಿಂದ ಸಲ್ಲಿಸಿದ ಭಾರತದ ಒಂದು ಊರಿನ ಕೆಚ್ಚೆದೆಯ ವೀರರ ಯಶೋಗಾಥೆ.
✍️ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.