ಬಿಜೆಪಿ ಪಕ್ಷ ಅನೇಕ ರಾಜಕೀಯ ನಾಯಕರನ್ನು ಕಂಡಿದೆ. ಘಟಾನುಘಟಿ ನಾಯಕರ ನಿಸ್ವಾರ್ಥ ಸೇವೆ, ರಾಷ್ಟ್ರೀಯತೆಯ ಭಾವನೆ, ವ್ಯಕ್ತಿಯಲ್ಲ ಪಕ್ಷ ಎಂಬ ಧೋರಣೆಯ ಜೊತೆಗೆ ಬಿಜೆಪಿ ಪಕ್ಷ ಬೆಳೆದಿದೆ. ಬೆಳೆಯುತ್ತಲೇ ಇದೆ. ಸುಮಾರು ಆರಕ್ಕೂ ಅಧಿಕ ದಶಕಗಳ ಕಾಲ ದೇಶದಲ್ಲಿ ಆಡಳಿತ ಮಾಡಿ ದೇಶವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಅಭಿವೃದ್ಧಿ ಎಂದರೆ ಮರೀಚಿಕೆ ಎಂಬಂತಾಗಿದ್ದ ಕಾಂಗ್ರೆಸ್ ನ ನಾಲಾಯಕ್ಕು ಆಡಳಿತವನ್ನು 2014 ರಲ್ಲಿ ಮಟ್ಟ ಹಾಕುವ ಕೆಲಸ ಬಿಜೆಪಿಯಿಂದ ನಡೆಯಿತು. ಜನರಿಗೆ ಕಾಂಗ್ರೆಸ್ ಎಂಬ ಕುಟುಂಬ ರಾಜಕಾರಣದ ನೈಜ ಮುಖವನ್ನು ಪರಿಚಯಿಸಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಕೈಗೆ ದೇಶದ ಆಡಳಿತ ಅಧಿಕಾರ ನೀಡುವಲ್ಲಿ ಪ್ರಧಾನಿ ಮೋದಿ ಅವರು ಎಷ್ಟು ಮುಖ್ಯರಾಗುತ್ತಾರೋ, ಅವರಷ್ಟೇ ಮುಖ್ಯವಾದ ಮತ್ತೊಬ್ಬ ವ್ಯಕ್ತಿಯಾಗಿ ಗುರುತಿಸಲ್ಪಡುವವರು ಪ್ರಸ್ತುತ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಅಮಿತ್ ಶಾ.
ಹೌದು, ದೇಶ ಕಟ್ಟುವಲ್ಲಿ, ಪಕ್ಷ ಬಲಪಡಿಸುವಲ್ಲಿ, ಜನರಲ್ಲಿ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ಹುಟ್ಟಿಸಬೇಕಾದಲ್ಲಿ ಅಮಿತ್ ಶಾ ಅವರ ಚಾಣಕ್ಯ ತಂತ್ರವೂ ಪ್ರಮುಖ ಕಾರಣ. ಆ ಕಾರಣದಿಂದಲೇ ಅವರನ್ನು ಬಿಜೆಪಿಯ ಚಾಣಕ್ಯ ಎಂದೇ ಕರೆಯಲಾಗುತ್ತದೆ. ತಮ್ಮ ಚುನಾವಣಾ ತಂತ್ರಗಳು, ದೇಶದ ಅಭಿವೃದ್ಧಿಯ ಚಿಂತನೆಗಳು, ರಾಷ್ಟ್ರಭಕ್ತಿ ಇವುಗಳ ಮೂಲಕವೇ ಮೋದಿ ಅವರಂತೆಯೇ ಅಮಿತ್ ಶಾ ಅವರೂ ಮನೆಮಾತಾಗಿದ್ದಾರೆ ಎಂದರೆ ಅತಿಶಯವಾಗಲಾರದೇನೋ. ಪ್ರಧಾನಿ ಮೋದಿ ಅವರ ಜೊತೆಗೆಯೇ ಗುಜರಾತ್ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಬಂದು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಧನಾತ್ಮಕ ಬದಲಾವಣೆ ತಂದ ಕೀರ್ತಿಯಲ್ಲಿ ಅಮಿತ್ ಶಾ ಅವರ ಪಾಲು ದೊಡ್ಡದು.
1964 ರ ಅಕ್ಟೋಬರ್ 22 ರಂದು ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದ ಅಮಿತ್ ಶಾ ಅವರು ಇಂದು ಕೇಂದ್ರ ಗೃಹ ಸಚಿವರಾಗಿ ಸ್ಥಾನ ಅಲಂಕರಿಸಿದ್ದಾರೆ. ತಳಮಟ್ಟದಿಂದಲೇ ಬಿಜೆಪಿ ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿ, ಚುನಾವಣೆ ನಡೆಯುವುದಕ್ಕೂ ಬಹಳ ಮುಂಚಿತವಾಗಿಯೇ ಪಕ್ಷವನ್ನು, ಪಕ್ಷದ ಸಾಧನೆಗಳನ್ನು ಜನರತ್ತ ತಲುಪಿಸುವಲ್ಲಿ ಅಮಿತ್ ಶಾ ಅವರು ಇಟ್ಟ ಯೋಜನೆಗಳೇ ದೇಶದಲ್ಲಿ ಬಿಜೆಪಿ ಇಂದು ಬಹುದೊಡ್ಡ ಪಕ್ಷವಾಗಿ ನೆಲೆನಿಲ್ಲುವಂತೆ ಮಾಡಿದೆ ಎನ್ನುವುದು ನಿಸ್ಸಂಶಯ. ಮೋದಿ ಅವರು ತೆಗೆದುಕೊಳ್ಳುವ ಎಲ್ಲಾ ಜನಸ್ನೇಹಿ ಯೋಜನೆಗಳ ಹಿಂದೆ ಅಮಿತ್ ಶಾ ಎಂಬ ಬಲಿಷ್ಟ ಶಕ್ತಿಯೊಂದು ಕೆಲಸ ಮಾಡುತ್ತಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಅವರ ನಿಲುವು, ಯೋಜನೆಗಳು ಸಾಮಾನ್ಯವಾದದ್ದಲ್ಲ ಎಂಬುದಕ್ಕೆ ಸಾಕ್ಷಿ 2014 ರ ಸಂದರ್ಭದ ಲೋಕಸಭಾ ಚುನಾವಣೆಯ ಫಲಿತಾಂಶ. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಚುನಾವಣಾ ಸಾರಥ್ಯ ವಹಿಸಿಕೊಂಡ ಅವರು 80 ಸೀಟುಗಳಲ್ಲಿ 71 ಸೀಟುಗಳು ಬಿಜೆಪಿ ಪಕ್ಷದ ಪಾಲಾಗುವಂತೆ ದೊಡ್ಡ ಮಟ್ಟದ, ಹಿಂದೆಂದೂ ನಡೆಯದಂತಹ ಸಾಧನೆಯನ್ನು ಸಾಧಿಸಿ ತೋರಿಸಿದ್ದರು. ಆ ಮೂಲಕ ತಮ್ಮ ಚಾತುರ್ಯ ಮೆರೆದಿದ್ದ ಶಾ ಅವರನ್ನು 2014 ರಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಆ ಬಳಿಕ ಈ ವರೆಗೆ ಬಿಜೆಪಿ ಈ ವರೆಗೆ ಯಾವುದು ಈ ದೇಶದಲ್ಲಿ ಅಸಾಧ್ಯ ಎಂದೇ ನಂಬಲಾಗಿತ್ತೋ ಅಂತಹ ಘಟನೆಗಳು ಘಟಿಸಿವೆ. 2019 ರ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸ್ಪಷ್ಟ ಬಹುಮತ ಪಡೆದ ಮೇಲೆ ರಾಜ್ಯದ ಗೃಹ ಸಚಿವರನ್ನಾಗಿ ಮೋದಿ ಸಂಪುಟದಲ್ಲಿ ‘ಚಾಣಕ್ಯ’ ಅಮಿತ್ ಶಾ ಅವರನ್ನೇ ಆಯ್ಕೆ ಮಾಡಲಾಯಿತು. 2014-19 ರ ವರೆಗಿನ ಬಿಜೆಪಿ ರಾಷ್ಟ್ರಾಧ್ಯಕ್ಷ, 2019 ರಿಂದೀಚೆಗಿನ ಗೃಹ ಸಚಿವ ಎಂಬ ಸ್ಥಾನಗಳಲ್ಲಿ ಕುಳಿತು ಶಾ ಅವರು ಮಾಡಿದ ಪವಾಡ ಅದ್ಭುತ ಎಂದೇ ಹೇಳಬಹುದು.
ಶಾ ಅವರು ಬಿಜೆಪಿಯಲ್ಲಿನ ತಳ ಮಟ್ಟದ ಕಾರ್ಯಕರ್ತರೇ ನಿಜವಾದ ಆಧಾರ ಸ್ಥಂಭಗಳು ಎಂದು ಭಾವಿಸಿದ್ದವರು. ತಳ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಿ, ಮೋದಿ ಅವರ ಕೀರ್ತಿ, ಬಿಜೆಪಿ ಪಕ್ಷದ ಕೀರ್ತಿಯನ್ನು ಮನೆ ಮನೆಗೆ ತಲುಪಿಸಿದವರು ಶಾ. ಅಮಿತ್ ಶಾ ವಿರುದ್ಧ ವಿರೋಧಿಗಳು ಸಾವಿರಾರು ಷಡ್ಯಂತ್ರಗಳನ್ನು ರಚಿಸಿದರೂ, ಆರೋಪಗಳನ್ನು ಹೊರಿಸುವ ವ್ಯರ್ಥ ಪ್ರಯತ್ನ ಮಾಡಿದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ವಿರೋಧಿಗಳಿಗೆ ಉರಿ ಹೆಚ್ಚಾಗುವಂತೆ ಪಕ್ಷವನ್ನು ಬೆಳೆಸಿದ ಕೀರ್ತಿ, ಆ ಮೂಲಕ ದೇಶದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಅವರ ಪಾತ್ರವನ್ನು ಮರೆಯುವಂತಿಲ್ಲ. ಶಾ ಅವರು ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಬಳಿಕ ಬಿಜೆಪಿಯ ಸದಸ್ಯತ್ವ ಅಭಿಯಾನದ ಮೂಲಕ ಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಿಸಿದರು. ಪ್ರತಿ ಜಿಲ್ಲೆಯಲ್ಲಿಯೂ ಬಿಜೆಪಿ ಕಛೇರಿ ಆರಂಭವಾಗುವಲ್ಲಿಯೂ ಅಮಿತ್ ಶಾ ಅವರ ಶ್ರಮ ಅಪಾರ.
ಇಂದು ದೇಶದಲ್ಲಿ ಬಿಜೆಪಿ ಯಾರ ಸಹಾಯವೂ ಇಲ್ಲದೆ ಪಕ್ಷ ಆಡಳಿತ ನಡೆಸುವಷ್ಟರ ಮಟ್ಟಿಗೆ, ಜನಸ್ನೇಹಿ ಸುಧಾರಣೆಗಳನ್ನು ಕೈಗೊಳ್ಳುವಲ್ಲಿ, ಯಾವುದು ಬದಲಾವಣೆಯಾಗುವುದು ಕನಸು ಎಂದು ತಿಳಿಯಲಾಗಿತ್ತೋ ಅಂತಹವುಗಳ ಬದಲಾವಣೆಯ ವಿಚಾರದಲ್ಲಿಯೂ ಅಮಿತ್ ಶಾ ಅವರ ತಂತ್ರಗಾರಿಕೆ, ಅಭಿವೃದ್ಧಿಯ ಮುನ್ನೋಟವನ್ನು ನಾವು ಅಲ್ಲಗಳೆಯುವಂತಿಲ್ಲ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಹೆಚ್ಚಿನ ಅಭಿವೃದ್ಧಿ ಯೋಜನೆಗಳ ಹಿಂದೆ ಅಮಿತ್ ಶಾ ಎಂಬ ಚಾಣಕ್ಯನ ಬುದ್ಧಿಶಕ್ತಿ ಕೆಲಸ ಮಾಡುತ್ತದೆ ಎಂಬುದು ಸುಳ್ಳಲ್ಲ.
ಇಂದು ದೇಶದ ಸಶಕ್ತ ಪಕ್ಷ ಬಿಜೆಪಿಯ ಚಾಣಕ್ಯನ ಜನ್ಮದಿನ. ಅವರಿಗೆ ಇನ್ನಷ್ಟು ಜನಸ್ನೇಹಿ ಯೋಜನೆಗಳನ್ನು, ದೇಶದ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ದೇವರು ನೀಡಲಿ ಎಂಬ ಆಶಯ ಎಲ್ಲರದ್ದೂ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.